ವಿವಿಯಲ್ಲಿ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ದೂರು!
ಒಬ್ಬ ವ್ಯಕ್ತಿ ಸೆಕ್ಯೂರಿಟಿ ಕೆಲಸಕ್ಕೆ ಸೇರಿದರೆ ಆತನಿಗೆ ಏನು ಕೆಲಸ ಇರುತ್ತದೆ. ಕಾವಲು ಕಾಯುವುದು, ಏನಾದರೂ ತೊಂದರೆಯಾದರೆ ತನ್ನ ಮಾಲೀಕನಿಗೆ ರಕ್ಷಣೆ ಕೊಡುವುದು ಇತ್ಯಾದಿ. ಆದರೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡುವ ಸೆಕ್ಯೂರಿಟಿ ಸಿಬ್ಬಂದಿಗಳಿಗೆ ಇದಕ್ಕಿಂತಲೂ ಹೆಚ್ಚು ಮತ್ತು ಬೇರೆ ಕೆಲಸಗಳೂ ಕೂಡ ಇದೆ. ಅದು ಯಾವುದೆಂದರೆ ವಿಶ್ವವಿದ್ಯಾನಿಲಯಕ್ಕೆ ಬರುವ ಸಾಮಾನು ಸರಂಜಾಮುಗಳನ್ನು ಲಾರಿಯಿಂದ ಇಳಿಸಿ ಅದನ್ನು ಕೂಲಿಯಾಳುಗಳಂತೆ ಹೊತ್ತು ಸಂಬಂಧಪಟ್ಟ ಕಡೆ ಸಾಗಿಸಿ ಬರುವುದು. ಇದು ಕೂಡ ಮಾಡಬೇಕಾಗುತ್ತದೆ. ಆದರೆ ಹೆಚ್ಚುವರಿ ಕೆಲಸ ಮಾಡಿದರೆ ಏನಾದರೂ ಹೆಚ್ಚು ಹಣ ಸಿಗುತ್ತಾ ಎಂದು ನೋಡಿದರೆ ಅದು ಇಲ್ಲ. ಹಾಗಂತ ವಿವಿಯವರು ಕೂಲಿಯವರಿಗೆ ಕೊಡುವ ಹಣವನ್ನು ಉಳಿಸಿ ಸಂಸ್ಥೆಯನ್ನು ಉದ್ಧಾರ ಮಾಡುತ್ತಾರೆ ಎಂದಲ್ಲ. ಇವರು ಅದಕ್ಕೆ ಪ್ರತ್ಯೇಕ ಬಿಲ್ ಮಾಡಿ ಹಣವನ್ನು ಮಾತ್ರ ಡ್ರಾ ಮಾಡುತ್ತಾರೆ. ಆ ಹಣವನ್ನು ತಮ್ಮ ಕಿಸೆಗೆ ಹಾಕಿಕೊಳ್ಳುತ್ತಾರೆ. ಹೊತ್ತು ಸಾಗಿಸಿದ ಗಾರ್ಡ್ ಗಳಿಗೆ ಏನೂ ಇಲ್ಲ.
ಒಂದು ಕಡೆ ತಿಂಗಳಿಗೆ ಮೂವತ್ತು ದಿನ ಕೂಡ ಬರಬೇಕು. ಒಂದು ದಿನ ರೆಸ್ಟ್ ಮಾಡಿದರೆ ಸಂಬಳ ಕಟ್. ಸಂಬಳ ನಿಗದಿ ಪಡಿಸಿದ್ದಕ್ಕಿಂತ ಎಷ್ಟು ಕಡಿಮೆ ಕೊಡುತ್ತಾರೆ ಎನ್ನುವುದನ್ನು ಹಿಂದಿನ ಭಾಗ (ಭಾಗ-6) ರಲ್ಲಿ ಹೇಳಲಾಗಿದೆ. ಅಷ್ಟಾಗಿಯೂ ಇವರಿಗೆ ಪೇ-ಸ್ಲಿಪ್ ಇಲ್ಲ. ಅದಕ್ಕಿಂತಲೂ ಹೆಚ್ಚಾಗಿ ದಿನಕ್ಕೆ 12 ಗಂಟೆ ದುಡಿದರೂ ಇವರಿಗೆ ಉದ್ಯೋಗದ ಭದ್ರತೆ ಇಲ್ಲ. ಯಾವುದೇ ಸೆಕ್ಯೂರಿಟಿ ಸಿಬ್ಬಂದಿಗಳಿಗೆ ನೇಮಕಾತಿಯ ಆದೇಶ ಪತ್ರ ಇಲ್ಲ.
ಸೆಕ್ಯೂರಿಟಿ ಸಿಬ್ಬಂದಿಗಳನ್ನು ಇವರು ಮನಸ್ಸು ಬಂದಾಗ ತೆಗೆಯುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಇಎಸ್ ಐ ಸೌಲಭ್ಯ ಇಲ್ಲ, ಪಿಎಫ್ ಸೌಲಭ್ಯವೂ ಅದಕ್ಕಿಂತ ಮೊದಲೇ ಇಲ್ಲ. ಸೆಕ್ಯೂರಿಟಿ ಸಿಬ್ಬಂದಿಗಳನ್ನು ಇವರು ಕೆಲಸಕ್ಕೆ ತೆಗೆದುಕೊಳ್ಳುವಾಗ ಕನಿಷ್ಟ ಅರ್ಹತೆಯನ್ನು ಕೂಡ ನೋಡುವುದಿಲ್ಲ. 25 ರಿಂದ 45 ವರ್ಷದ ಒಳಗಿನ ವ್ಯಕ್ತಿಗಳನ್ನು ಮಾತ್ರ ಆ ಪೋಸ್ಟಿಗೆ ತೆಗೆದುಕೊಳ್ಳಬೇಕು ಎಂದು ನಿಯಮ ಇದ್ದರೂ ಇವರು ನಿವೃತ್ತಿ ಆದವರನ್ನು ಕೂಡ ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೆ. ಕನಿಷ್ಟ ವಿದ್ಯಾಭ್ಯಾಸ ಹತ್ತನೇ ತರಗತಿಯಾದರೂ ಆಗಿರಬೇಕು ಎನ್ನುವ ನಿಯಮವನ್ನು ಕೂಡ ಉಲ್ಲಂಘಿಸಿ ಹೆಬ್ಬೆಟ್ಟು ಹಾಕುವವರನ್ನು ಕೂಡ ಇವರು ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ. ಸೆಕ್ಯೂರಿಟಿ ಸಿಬ್ಬಂದಿಗಳು ಹೇಗಿದ್ದರೂ ನಡೆಯುತ್ತೆ ತಮ್ಮ ತಾಳಕ್ಕೆ ತಕ್ಕಂತೆ ಕುಣಿದರೆ ಸಾಕು ಎಂದು ವಿವಿಯವರು ಅಂದುಕೊಂಡಿರುವುದರಿಂದ ಎಷ್ಟೋ ಬೇರೆ ಬೇರೆ ಉದ್ಯೋಗದಲ್ಲಿದ್ದು ನಿವೃತ್ತಿ ಆದವರನ್ನು, ತುಂಬಾ ವಯಸ್ಸಾದವರನ್ನು, ನಿಶಕ್ತಿ ಹೊಂದಿರುವವರನ್ನು ಕೂಡ ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆ ತೆಗೆದುಕೊಳ್ಳುತ್ತಿರುವ ಗುತ್ತಿಗೆ ಸಂಸ್ಥೆಗಳಿಗೆ ಏನೂ ಹೇಳದೆ ಮೌನವಾಗಿರುವುದು ವಿವಿ ಕೂಡ ಅದರಲ್ಲಿ ಭಾಗಿಯಾಗಿರುವುದರ ಬಗ್ಗೆ ಅನುಮಾನಗಳು ಕೂಡ ಮೂಡುತ್ತಿದೆ. ಒಂದು ವೇಳೆ ವಿವಿ ಕುಲಪತಿ ಭೈರಪ್ಪನವರಿಗೆ ಏನೂ ಲಾಭ ಇಲ್ಲದಿದ್ದರೆ ಈ ಸೆಕ್ಯೂರಿಟಿ ಸಂಸ್ಥೆ ಬೇಕಾಬಿಟ್ಟಿ ಎಲ್ಲ ನಿಯಮಗಳನ್ನು ಉಲ್ಲಂಘಿಸುತ್ತಿದ್ದರೂ ಯಾಕೆ ಮೌನವಾಗಿದ್ದಾರೆ. ಗಾರ್ಡ್ ಗಳನ್ನು ಮೂವತ್ತು ದಿನ ತಿಂಗಳಲ್ಲಿ ಕೆಲಸ ಮಾಡಿಸಲು ಅವರ ಒಪ್ಪಿಗೆ ಇದೆಯಾ? ದಿನಕ್ಕೆ 12 ಗಂಟೆ ಕೆಲಸ ಮಾಡುವುದು ಮಾನವ ಹಕ್ಕು ಉಲ್ಲಂಘನೆ ಅಲ್ವಾ? ಸಂಬಳ ಕಡಿಮೆ ಕೊಟ್ಟು ಉಳಿದ ಹಣವನ್ನು ನುಂಗುತ್ತಿರುವವರು ಯಾರು? ಹೆಚ್ಚುವರಿ ಕೆಲಸ ಮಾಡಿದರೂ ಅವರಿಗೆ ಏನೂ ಕೊಡದೆ ಅದಕ್ಕೆ ಬೇರೆ ಬಿಲ್ ಮಾಡಿ ಹಣ ಕಿಸೆಗೆ ತುಂಬುವವರು ಯಾರು?
ಕೊನೆಗೆ ವಿವಿಯ ದಬ್ಬಾಳಿಕೆ ಸಹಿಸಲಾಗದೆ ಸೆಕ್ಯೂರಿಟಿ ಸಿಬ್ಬಂದಿಗಳು ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ದೂರು ಕೊಟ್ಟಿದ್ದಾರೆ. ಅವರಿಗೆ ರಜೆನೆ ಕೊಡದೆ ದುಡಿಸಿದ ದಾಖಲೆಯನ್ನು ಕೂಡ ಇವತ್ತು ನಾವು ಪೋಸ್ಟ್ ಮಾಡುತ್ತಿದ್ದೇವೆ.
ಒಬ್ಬ ವ್ಯಕ್ತಿಯ ಮಾನವ ಹಕ್ಕನ್ನು ರಕ್ಷಣೆ ಮಾಡಲಾಗದವರು ಇನ್ನೇನೂ ತಾನೆ ಮಾಡಲು ಸಾಧ್ಯವಿಲ್ಲ. ಹೇಳಲಿಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮಾನವ ಹಕ್ಕಿಗೆ ಸಂಬಂಧಪಟ್ಟಂತೆ ದೊಡ್ಡ ದೊಡ್ಡ ಗ್ರಂಥಗಳಿವೆ. ಅದನ್ನು ರಕ್ಷಣೆ ಮಾಡುವ ಬಗ್ಗೆ ಬೋಧನೆ ಮಾಡಲಾಗುತ್ತದೆ. ಅದೇ ವಿವಿಯ ಹೊರಗೆ ಸೆಕ್ಯೂರಿಟಿ ಸಿಬ್ಬಂದಿಗಳ ಮಾನವ ಹಕ್ಕು ಹಾಡುಹಗಲೇ ಉಲ್ಲಂಘನೆಯಾಗುತ್ತಿದೆ. ಇದನ್ನು ನೋಡಿ ಸೂಚನೆ ಕೊಟ್ಟು ಕ್ರಮ ಕೈಗೊಳ್ಳಬೇಕಿದ್ದ ಕುಲಪತಿ ಭೈರಪ್ಪನವರು ಕಣ್ಣಿಗೆ ಬಟ್ಟೆ ಕಟ್ಟಿ ಮಾನವ ಹಕ್ಕು ಉಲ್ಲಂಘನೆಯಾಗುವುದನ್ನು ಬೆಂಬಲಿಸುತ್ತಿದ್ದಾರೆ.
ಸಿಬ್ಬಂದಿಗಳ ದೂರಿಗೆ ರಾಜ್ಯ ಮಾನವ ಹಕ್ಕು ಆಯೋಗ ಸ್ಪಂದಿಸಿ ಆ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದೆ. ಅದರ ಪ್ರತಿಯನ್ನು ಕೂಡ ಪೋಸ್ಟ್ ಮಾಡುತ್ತಿದ್ದೇವೆ. ಇನ್ನಾದರೂ ವಿವಿಯಲ್ಲಿ ದುಡಿಯುವ ಸೆಕ್ಯೂರಿಟಿ ಸಿಬ್ಬಂದಿಗಳು ಕೂಡ ಮಾನವರೆಂದೇ ಪರಿಗಣಿಸಿ ಅವರ ಹಕ್ಕುಗಳನ್ನು ಭೈರಪ್ಪನವರು ರಕ್ಷಣೆ ಮಾಡಲಿ ಎನ್ನುವುದು ಮಂಗಳೂರಿನ ಪ್ರಜ್ಞಾವಂತ ನಾಗರಿಕರ ಸದ್ಯದ ಕಳಕಳಿ!
Leave A Reply