ಬಡವರಿಗೆ ಅನ್ನ ಭಾಗ್ಯ ನೀಡಿದ ಸಿಎಂ ಸಿದ್ದರಾಮಯ್ಯ ವಿಚೇತನ ಮಕ್ಕಳ ಅನ್ನ ಕಸಿದರೇ ?
ಅದು ವಿಚೇತನ ಮಕ್ಕಳ ಶಾಲೆ. ಮುದ್ದು ಮಕ್ಕಳಿಗೆ ನಿತ್ಯವೂ ಮಧ್ಯಾಹ್ನ ಒಳ್ಳೆಯ ಬಿಸಿ ಬಿಸಿ ಊಟ ಇರುತ್ತಿತ್ತು. ಆದರೆ ಗುರುವಾರ ಮಾತ್ರ ಕೆಲವರು ಮನೆಯಿಂದ ತಂದ ಬುತ್ತಿ ತೆರೆದು ಊಟಕ್ಕೆ ಅಣಿಯಾಗುತ್ತಿದ್ದರೆ ಕೆಲವು ಮಕ್ಕಳು ಮುಖ ಮುಖ ನೋಡುತ್ತಿದ್ದವು. ಇದನ್ನು ನೋಡಿದ ಶಿಕ್ಷಕರು ಮಕ್ಕಳಿಗೆ ಹೋಟೆಲಿಂದ ಬನ್ ತಂದು ಕೊಟ್ಟರು, ಪಾಪ ಮಕ್ಕಳು ಅದರಲ್ಲಿಯೇ ಹೊಟ್ಟೆ ತುಂಬಿಸಿಕೊಂಡರು. ಬೇಸರಗೊಂಡ ಕೆಲ ಶಿಕ್ಷಕರು ಮಧ್ಯಾಾಹ್ನ ಊಟವನ್ನೇ ಮಾಡಲಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂಥ 6 ವಿಚೇತನ ಮಕ್ಕಳ ಶಾಲೆಗಳ ಊಟದ ನೆರವು ರದ್ದಾಗಿದೆ. ಇದಕ್ಕೆ ಕಾರಣ ಸರಕಾರ ದೇವಸ್ಥಾನಗಳಿಂದ ಶಾಲೆ ಮಕ್ಕಳ ಊಟಕ್ಕೆ ನೆರವು ನಿಲ್ಲಿಸಿದ್ದು.
ಬಡ ದಲಿತರಿಗೆ ಅನ್ನಭಾಗ್ಯ ಕರುಣಿಸಿದ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ರೂಪಿಸಿದ ನಿಯಮ ತಿದ್ದು ಪಡಿಯ ಎಡವಟ್ಟಿನ ಪರಿಣಾಮವಿದು.
ಮುಜರಾಯಿ ಇಲಾಖೆಯ ದೇವಸ್ಥಾನಗಳಿಂದ ಖಾಸಗಿ, ಅನುದಾನಿತ, ಸರಕಾರಿ ಶಾಲೆಗಳಿಗೆ ನೀಡಲಾಗುತ್ತಿದ್ದ ಬಿಸಿಯೂಟದ ನೆರವನ್ನು ರದ್ದು ಪಡಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯೋತ್ಸವದಂದೇ ರಾಜ್ಯದ 75ಕ್ಕೂ ಹೆಚ್ಚು ಕನ್ನಡ ಶಾಲೆಗಳ ಬಡ ಮಕ್ಕಳ ಬಿಸಿಯೂಟ ಸ್ಥಗಿತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟೀಲು ದೇವಸ್ಥಾಾನದಿಂದ ನೀಡಲಾಗುತ್ತಿದ್ದ 6 ವಿಶಿಷ್ಟ ಚೇತನ ಶಾಲೆಗಳ ಬಿಸಿಯೂಟದ ನೆರವು ಗುರುವಾರದಿಂದ ನಿಂತು ಹೋಗಿದೆ. ಇದರಲ್ಲಿ 5 ಕ್ರೈಸ್ತ ಸಂಸ್ಥೆೆ ಶಾಲೆಗಳು ಸೇರಿವೆ !
ವಿಶಿಷ್ಟ ಚೇತನ ಶಾಲೆಯ ಮಕ್ಕಳೆಂದರೆ ಇವರು ನಿಜವಾದ ದೇವರ ಮಕ್ಕಳು. ದೇವಸ್ಥಾನದಲ್ಲಿ ದೇವರ ಮೂರ್ತಿ ಮಾತನಾಡುವುದಿಲ್ಲ. ಆದರೆ ಈ ಮುಗ್ಧ ಮಕ್ಕಳು ಮಾತನಾಡುತ್ತವೆ ಅಷ್ಟೇ ವ್ಯತ್ಯಾಸ.
ಇವರು ಸಾವಿರಕ್ಕೆ ಒಬ್ಬರಂತೆ ಹುಟ್ಟುತ್ತಾಾರೆ. 18 ವರ್ಷ ಕಳೆದರೂ ಮಕ್ಕಳ ಐಕ್ಯೂ 2, 3, 5 ವರ್ಷದ ಮಕ್ಕಳಂತೆಯೇ ಇರುತ್ತದೆ. ಈ ದಿವ್ಯಾಂಗರಿಗೆ ಬಿಸಿ ಊಟ ಕೊಡಬೇಡವೇ ? ಕಾನೂನು ಇಲ್ಲವಾದರೆ ಇದಕ್ಕಾಗಿ ಕಾನೂನು ರೂಪಿಸಬಹುದಲ್ಲವೇ ?
ವಿಚೇತನ ಶಾಲೆಯ ಶಿಕ್ಷಕರಿಗೆ ವೇತನ ಸರಕಾರ ನೀಡುತ್ತದೆ. ಆದರೆ ಶಿಕ್ಷಣ ಇಲಾಖೆಯಿಂದ ಬಿಸಿಯೂಟ ನೀಡಲು ಅವಕಾಶ ಇಲ್ಲವಂತೆ. ಏಕೆಂದರೆ ವಿಚೇತನ ಶಾಲೆಗಳು ಮಹಿಳಾ ಮಕ್ಕಳ ಕಲ್ಯಾಾಣ ಇಲಾಖೆ ವ್ಯಾಾಪ್ತಿಯಲ್ಲಿದೆ !
ಬಿಸಿಯೂಟ ರದ್ದಾದ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಧಿಕಾರಿಗಳಿಗೆ ಕೇಳಿದರೆ, ಅವರು ಸರಕಾರಕ್ಕೆ ಹೇಳುತ್ತೇವೆ, ಮಾಡುತ್ತೇವೆ ಎನ್ನುತ್ತಿದ್ದಾರೆ. ಆದರೆ ಊಟ ಬಂದಿಲ್ಲ.
ಖಾಸಗಿ ಸಂಸ್ಥೆಗಳಿಗೇಕೆ ವಿಚೇತನರ ಸಲಹುವ, ಶಿಕ್ಷಣ ನೀಡುವ ಉಸಾಬರಿ?, ಅವರಿಗೆ ವಿದೇಶದಿಂದ ನೆರವು ಬರುವುದಿಲ್ಲವೇ ? ಸರಕಾರವೇ ಮಾಡಬಹುದಲ್ಲವೇ ? ಇತ್ಯಾದಿ ಪ್ರಶ್ನೆ ಮಾಡಬಹುದು. ಆದರೆ ಸರಕಾರವೇ ಶಿಕ್ಷಣ ನೀಡುತ್ತಿರುವ ವಿಚೇತನ ಶಾಲೆಗಳು ರಾಜ್ಯದಲ್ಲಿ ಬೆರಳೆಣೆಕೆಯಷ್ಟು. ಅಲ್ಲಿನ ಸ್ಥಿತಿ ನೋಡಿದರೆ ದೇವರಿಗೇ ಪ್ರೀತಿ.
ದಕ್ಷಿಣ ಕನ್ನಡ ಜಿಲ್ಲೆಯ ವಿಚೇತನ ಮಕ್ಕಳು ಅಂತಾರಾಷ್ಟ್ರೀಯ ಆಟೋಟ ಸ್ಪರ್ಧೆಯಲ್ಲಿ ಅನೇಕ ಪ್ರಶಸ್ತಿ ಗೆದ್ದಿದ್ದಾರೆ. *ಅದರಲ್ಲಿಯೂ ಆಗ್ನೆಸ್ ಶಾಲೆಯಲ್ಲಿಯೇ ನಾರಾಯಣ ಮಾಸ್ಟರ್ ಅವರ ತರಬೇತಿಯಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಐವರು ವಿಚೇತನ ಮಕ್ಕಳಿದ್ದಾರೆ. ಇಷ್ಟು ಚೆನ್ನಾಗಿ ನೋಡಿಕೊಳ್ಳುವಾಗ ಸರಕಾರಕ್ಕೆ ಬಿಸಿಯೂಟ ನೀಡಲು ನಿಯಮ ಅಡ್ಡಿಯಾಗುತ್ತಿರುವುದೇಕೆ ?
ದೇವಸ್ಥಾನಕ್ಕೆ ಭಕ್ತರು ಹಾಕಿದ ಹರಕೆ ಹಣ ಹಿಂದೂಗಳಿಗೆ, ದೇವಸ್ಥಾನ ಜೀರ್ಣೋದ್ಧಾರಕ್ಕೇ ಸೇರಲಿ ಎನ್ನುವ ಮುಜರಾಯಿ ಇಲಾಖೆಯ, ಸರಕಾರದ ಆಶಯ ಮೆಚ್ಚತಕ್ಕದ್ದೇ. ಆದರೆ ಇದರಿಂದಾಗಿ ಊಟ ಕಳೆದುಕೊಳ್ಳುವ ಬಡ ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕಲ್ಲವೇ ?
ಆಕ್ಸಿಜನ್ ನೀಡುವ ಸಂಸ್ಥೆ ನಿಯಮ ಮೀರಿದೆ ಎಂದು ರೋಗಿಗಳಿಗೆ ಆಕ್ಸಿಜನ್ ಸರಬರಾಜು ಕೊಳವೆ ತಕ್ಷಣ ತೆಗೆದು ನಿಲ್ಲಿಸುವುದು ಸರಿಯೇ ? ಪರ್ಯಾಯ ವ್ಯವಸ್ಥೆ ಮಾಡಬೇಕಲ್ಲವೇ ?
ಗರ್ಭಿಣಿಯರಿಗೆ ಅಂಗನವಾಡಿಯಲ್ಲಿಯೇ ಊಟ ವ್ಯವಸ್ಥೆ ಮಾಡಿದರು ಆಶಯ ಒಳ್ಳೆಯದೇ. ಆದರೆ *ಉಡುಪಿ, ದಕ್ಷಿಣ ಕನ್ನಡ, ಉತ್ತರಕನ್ನಡ, ಮಲೆನಾಡು ಜಿಲ್ಲೆಗಳಲ್ಲಿ ಜನರು ಒಂದೇ ಕಡೆ ಕ್ಯಾಂಪ್ ಗಳಂತೆ ಒಟ್ಟಾಗಿ ವಾಸಿಸುವುದಿಲ್ಲ. ಇಲ್ಲಿ ಕೃಷಿ ಭೂಮಿ ಬೇರೆ, ಕಂದಾಯ ಗ್ರಾಮ ಬೇರೆ ಎಂದಿಲ್ಲ. ಕರಾವಳಿಯಲ್ಲಿ ನಾಲ್ಕು ಎಕರೆಯಲ್ಲಿ ಜಾಗದಲ್ಲಿ ಒಬ್ಬರೇ ಮನೆ ಕಟ್ಟಿಕೊಂಡು ಇರುತ್ತಾರೆ.
ಆ ಮನೆಯಿಂದ ಅಂಗನವಾಡಿ 2-3 ಕಿ.ಮೀ. ಕೆಲವೊಮ್ಮೆ 12 ಕಿ.ಮೀ. ದೂರ ಇರುತ್ತದೆ. ನಡು ಮಧ್ಯಾಹ್ನ ಗರ್ಭಿಣಿ ನಡೆದುಕೊಂಡು ಊಟಕ್ಕೆ ಹೋದರೆ ತಲೆ ತಿರುಗಿ ಬೀಳುವುದಿಲ್ಲವೇ ?ಇನ್ನು ಬಾಣಂತಿಯಂತೂ ಮನೆಯಿಂದ ಹೊರಗೇ ಹೋಗುವುದಿಲ್ಲ. ಹೀಗಿರುವಾಗ ಯೋಜನೆ ನಿಜವಾದ ಫಲಾನುಭವಿಗಳಿಗೆ ತಲುಪಲು ಸಾಧ್ಯವೇ ?
ಇದೇ ಗರ್ಭಿಣಿ ಮುಂದೆ ಯಾವ ರೀತಿಯ ಮಗು ಹೆರುತ್ತಾಳೆ ಎಂದು ತಾಯಿಗೆ ಗೊತ್ತಿದೆಯೇ ? ಸರಿಯಾದ ಮಗು ಹುಟ್ಟಿದರೆ ಶಾಲೆಯಲ್ಲಿ ಊಟ ಕೊಡುತ್ತೇವೆ, ಬುದ್ಧಿಮಾಂದ್ಯ ಮಗು ಹೆತ್ತರೆ ಅವರಿಗೆ ಊಟ ನೀಡುವುದಿಲ್ಲ. ಮಹಿಳಾ ಮಕ್ಕಳ ಕಲ್ಯಾಾಣ ಇಲಾಖೆಯಿಂದ ಬಿಸಿಯೂಟ ನೀಡಲು ಕಾನೂನಿನ ಅಡಿ ಆಗುವುದಿಲ್ಲ ಎಂದು ಸರಕಾರ ಹೇಳಿ ಕೈ ತೊಳೆದುಕೊಳ್ಳಬಹುದೇ ?
ನೆರವು ನೀಡುವುದು ಬಿಟ್ಟು ದೇವಸ್ಥಾನದಿಂದ ನೀಡಲಾಗುತ್ತಿದ್ದ ನೆರವನ್ನು ಕಸಿದುಕೊಂಡರೆ ? ಇದು ಸರಿಯೇ ಸಿದ್ದರಾಮಯ್ಯ ಅವರೇ ?
ನಿಮ್ಮ ಬಡಜನರ ಕುರಿತಾದ ಆಶಯದ ಕುರಿತು ಆಕ್ಷೇಪಗಳಿಲ್ಲ. ಆದರೆ ಅಧಿಕಾರಿಗಳು, ಜನಪ್ರತಿನಿಧಿಗಳು ಸಮಸ್ಯೆಯನ್ನು ನಿಮ್ಮ ಮುಂದೆ ಇಡಬೇಕಲ್ಲವೇ ?ಇಟ್ಟಾಗ ನೀವು ಕೇಳಬೇಕಲ್ಲವೇ ?
ಕಲ್ಲಡ್ಕ ಶಾಲೆಯ 2,500 ಮಕ್ಕಳ ಬಿಸಿಯೂಟ ನಿಲ್ಲಿಸಿದಿರಿ. ಬಿಸಿಯೂಟಕ್ಕೆ ಅರ್ಜಿ ಹಾಕಿದರೆ ನೀಡುವುದಾಗಿ ಹೇಳಿದಿರಿ. “ಅವರಿಗೆ ರಾಜಕೀಯ ಬೆಂಬಲ ಇದೆ, ದಾನಿಗಳು ಯಥೇಚ್ಛ ದೇಣಿಗೆ ನೀಡಿದ್ದಾರೆ. ಮಕ್ಕಳೇ ಬೆಳೆ ಬೆಳೆದು ಊಟ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ನೆರವು ನಿಲ್ಲಿಸಿದ ಬಳಿಕ ಮೊದಲಿಗಿಂತ ಹೆಚ್ಚೇ ನೆರವು ಲಭಿಸಿದೆ.
ಆದರೆ ಈ ವಿಚೇತನ ಮಕ್ಕಳಿಗೆ ರಾಜಕೀಯ ಬೆಂಬಲ ಇಲ್ಲ. ಜಾತಿ, ಮತ, ಧರ್ಮದ ಗೊಡವೇ ಇಲ್ಲ. ಅಲ್ಲಿ ಎಲ್ಲ ಧರ್ಮದ ಮಕ್ಕಳು ಬರುತ್ತಾರೆ. ಅವರು ಏನು ಮಾಡಬೇಕು ? ಅವರೂ ರಾಜಕಾರಣಿಗಳಂತೆ ಭಿಕ್ಷೆ ಬೇಡಬೇಕೆ ?
ರಾಜ್ಯ ಸರಕಾರ 48,000ಕ್ಕೂ ಮಿಕ್ಕಿ ಶಾಲೆಗಳಲ್ಲಿರುವ ಹತ್ತಿರ ಹತ್ತಿರ 1 ಕೋಟಿಗೂ ಮಿಕ್ಕಿ ಮಕ್ಕಳಿಗೆ ಮಧ್ಯಾಹ್ನ ಊಟ ಹಾಕುತ್ತಿದೆ. ಇದಕ್ಕೆ ಪ್ರೇರಣೆಯಾಗಿರುವುದು ಎರಡು ದಶಕದ ಹಿಂದೆ ಪಲಿಮಾರು ಸ್ವಾಾಮಿ ಪರ್ಯಾಯದಲ್ಲಿ ಉಡುಪಿ ಶ್ರೀಕೃಷ್ಣ ಮಠದ ವತಿಯಿಂದ ಚಿಣ್ಣರ ಸಂತರ್ಪಣೆ ಎಂದು ಶಾಲೆ ಮಕ್ಕಳಿಗೆ ಬಿಸಿಯೂಟ ಆರಂಭಿಸಿದ ಬಳಿಕ.
ಖಾಸಗಿಯಾಗಿ ಮಠದವರು ನೀಡಲು ಯಾವುದೇ ಅಡ್ಡಿ ಇಲ್ಲವಾದರೆ ಮುಜರಾಯಿ ಇಲಾಖೆಗೆ ಒಳಪಟ್ಟ ಕಟೀಲು ದೇವಸ್ಥಾನದ ವತಿಯಿಂದ ದೀನ, ದುರ್ಬಲರಿಗೆ ಅನ್ನದಾಸೋಹ ಮಾಡಿದರೆ ಯಾವ ಕಾನೂನಿನ ತೊಂದರೆ ಬಾಧಿಸುತ್ತದೆ. ಬಂದರೂ ಅದನ್ನು ನಿವಾರಣೆ ಮಾಡಬೇಕು. ಇಂತಹ ಒಳ್ಳೆಯ ಕೆಲಸ ಆದಾಗ ಕಾನೂನನ್ನು ಇದಕ್ಕೆ ಅನ್ವಯ ಮಾಡಿಕೊಳ್ಳಬೇಕಲ್ಲವೇ ?
Leave A Reply