11.6.1963 ರಲ್ಲಿಯೇ ರಬೀಂದ್ರನಾಥ ಠಾಗೋರ್ ರಸ್ತೆ ಎಂದು ಅದಕ್ಕೆ ನಾಮಕರಣವಾಗಿತ್ತು, ದಾಖಲೆ ಇದೆ!
ಮಂಗಳೂರಿನ ಲೈಟ್ ಹೌಸ್ ಹಿಲ್ ರಸ್ತೆ ದಿನ ಹೋದ ಹಾಗೆ ತನ್ನ ಒಳಗೆ ಅಡಗಿದ್ದ ರಹಸ್ಯಗಳನ್ನು ಹಾಗೆ ಬಿಚ್ಚಿಡುತ್ತಾ ಹೋಗುತ್ತಿದೆ. ಒಂದು ಕಡೆ ಮೂಲ್ಕಿ ಸುಂದರರಾಮ ಶೆಟ್ಟಿಯವರ ಹೆಸರು ಇಡಬೇಕು ಎನ್ನುವ ಕಾನೂನಾತ್ಮಕ ಒಪ್ಪಿಗೆ, ಮತ್ತೊಂದೆಡೆ ಎಲೋಶಿಯಸ್ ಕಾಲೇಜು ರಸ್ತೆ ಎನ್ನುವ ಹೆಸರು ಮೊದಲೇ ಇದೆ ಎನ್ನುವ ತರ್ಕ. ವಾಸ್ತವ ಹೇಳಬೇಕೆಂದರೆ ಈ ರಸ್ತೆಯ ನಿಜವಾದ ಹೆಸರು ರಬೀಂದ್ರನಾಥ ಟಾಗೋರ್ ರಸ್ತೆ. ನನ್ನ ಕೈಯಲ್ಲಿ ಇವತ್ತು ಸಿಕ್ಕಿರುವ ಅಧಿಕೃತ ದಾಖಲೆಗಳು ಅದನ್ನು ಸ್ಪಷ್ಟಪಡಿಸುತ್ತಿವೆ. 11.6.1963 ಆಗ ಇದದ್ದು ಮಂಗಳೂರು ಮುನಿಸಿಪಾಲಿಟಿ. ಇದನ್ನು ಮಂಗಳೂರು ಮಹಾನಗರ ಪಾಲಿಕೆ ಎಂದು ಆಗ ಕರೆಯಲಾಗುತ್ತಿರಲಿಲ್ಲ. ಆವತ್ತು ಅಂದರೆ 11.6.1963 ಸಂಜೆ 5.30ಕ್ಕೆ ಮುನಿಸಿಪಾಲಿಟಿಯಲ್ಲಿ ಮೀಟಿಂಗ್ ನಡೆಯುತ್ತದೆ. ಅದರ ಏಜೆಂಡಾ ಸಂಖ್ಯೆ 2 ರಲ್ಲಿ ಸಿಆರ್\406\16.4.1963 ಲೀಗಲ್ ಕಮಿಟಿ ಯಂತೆ ಕ್ಯಾಥೋಲಿಕ್ ಕ್ಲಬ್ ನಿಂದ ಟಾಗೋರ್ ಪಾರ್ಕ ಆಗಿ ಜ್ಯೋತಿ ಥಿಯೇಟರ್ ಎದುರಿನ ಜಂಕ್ಷನ್ ತನಕದ ರಸ್ತೆಯನ್ನು ರಬೀಂದ್ರನಾಥ ಠಾಗೋರ್ ರಸ್ತೆ ಎಂದು ನಾಮಕರಣ ಮಾಡೋಣ ಎಂದು ತೀಮರ್ಾನವಾಗುತ್ತದೆ. ಈ ಬಗ್ಗೆ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಬರೆದು ಜನರಿಗೆ ಮಾಹಿತಿ ಕೊಡಲು ನಿರ್ಧಾರ ಕೂಡ ಆಗುತ್ತದೆ ಮತ್ತು ಮುಖ್ಯ ಪೋಸ್ಟ್ ಆಫೀಸಿಗೆ ಮಾಹಿತಿ ಕೊಟ್ಟು ಇನ್ನು ಮುಂದೆ ರಬೀಂದ್ರನಾಥ ಠಾಗೋರ್ ಅವರ ಹೆಸರಿನಲ್ಲಿ ಆ ರಸ್ತೆಯನ್ನು ಕರೆಯಲಾಗುತ್ತದೆ ಎಂದು ಕೂಡ ಹೇಳಲಾಗುತ್ತದೆ.
ಆ ಸಭೆಯಲ್ಲಿ ಇದ್ದವರು ಏನೂ ಸಾಮಾನ್ಯರಲ್ಲ. ಆ ಸಮಯದಲ್ಲಿ ಮುನಿಸಿಪಾಲಿಟಿ ಎಂದು ಕರೆಯಲಾಗುತ್ತಿದ್ದ ಆಡಳಿತ ವ್ಯವಸ್ಥೆಗೆ ಮೇಯರ್ ಅವರನ್ನು ಚೇರ್ ಮೆನ್ ಎಂದು ಕರೆಯಲಾಗುತ್ತಿತ್ತು. ಆವತ್ತು ಚೇರ್ ಮೆನ್ ಆಗಿದ್ದವರು ಶ್ರೀಮತಿ ಆಕ್ಟೋವಿಯಾ ಅಲ್ಬುಕರ್ಕ. ಆ ದಿನ ಸಭೆಯಲ್ಲಿ ಇದ್ದವರು ಫಿ ಎಫ್ ರೊಡ್ರಿಗಸ್, ಬ್ಲೇಸಿಯಸ್ ಡಿಸೋಜಾ, ಸಿರಿಲ್ ಗ್ಲೋನ್ಸಾವಿಸ್, ಎಸ್ ಆರ್ ಲೋಬೊ, ಡಾ|ಎಂ ಎಸ್ ಶಾಸ್ತ್ರಿ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಮೋಕ್ತೇಸರ ಎಚ್ ಸಿ ಸೋಮಶೇಖರ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಸಿ ಜಿ ಕಾಮತ್, ಕಮ್ಯೂನಿಸ್ಟ್ ಮುಖಂಡ ಎ ಶಾಂತಾರಾಮ್ ಪೈ. ಬಹುಶ: ಕಾಂಗ್ರೆಸ್, ಬಿಜೆಪಿ, ಕಮ್ಯೂನಿಸ್ಟ್ ಪಕ್ಷದ ಹಿಂದಿನ ತಲೆಗಳನ್ನು ಕೇಳಿದರೆ ಈ ಮೇಲಿನ ಹೆಸರುಗಳ ಪರಿಚಯ ಖಂಡಿತ ಇರುತ್ತದೆ.
ಈಗ ಬಿಡಿ, ಛೇರ್ ಬಿಸಿ ಮಾಡಲು ಪಾಲಿಕೆಯ ಸಭೆಗಳಲ್ಲಿ ಬಂದು ಕುಳಿತುಕೊಳ್ಳುವವರಿಗೆ ಅಂತಹ ದೂರದೃಷ್ಟಿ ಕೂಡ ಇಲ್ಲ, ಆವಾಗಿನ ನಾಯಕರಿಗೆ ಇದ್ದಂತಹ ಅಭಿವೃದ್ಧಿಯ ಉತ್ಸಾಹ ಕೂಡ ಇಲ್ಲ. ಈಗ ಏನಿದ್ದರೂ ಯಾವ ಯೋಜನೆಯಲ್ಲಿ ಎಷ್ಟು ಹೊಡೆಯಲು ಆಗುತ್ತೆ ಎನ್ನುವ ಐಡಿಯಾ ಮಾತ್ರ. ಆದರೆ 1963 ರ ಜೂನ್ 11 ರಂದು ಸಭೆಯಲ್ಲಿ ಕುಳಿತಿದ್ದ ಆ ಘಟಾನುಘಟಿಗಳಿಗೆ ಮಂಗಳೂರಿನ ಸ್ಪಷ್ಟ ಕಲ್ಪನೆ ಇತ್ತು. ಬೇಕಾದರೆ ಆ ಹೆಸರುಗಳನ್ನು ಇನ್ನೊಮ್ಮೆ ನೋಡಿ. ಜಾತಿ, ಧರ್ಮದ ಬಗ್ಗೆ ಮಾತನಾಡಬಾರದು ಎಂದು ಅಂದುಕೊಳ್ಳುತ್ತೇನೆ. ಆದರೆ ಒಂದಿಬ್ಬರು ವ್ಯಕ್ತಿಗಳು ತಮ್ಮ ವಾದವನ್ನು ಡಿಫೆಂಡ್ಸ್ ಮಾಡುವ ಭರದಲ್ಲಿ ಬಂಟ ಮತ್ತು ಕ್ರಿಶ್ಚಿಯನ್ ನಡುವೆ ಸಾಮರಸ್ಯ ಕದಡುವ ಕೆಲಸವನ್ನು ನಾನು ಮಾಡಿದ್ದೇನೆ ಎಂದು ಬರೆದಿದ್ದಾರೆ. ಆ ಬಗ್ಗೆ ಪ್ರತ್ಯೇಕವಾಗಿ ಹೇಳುತ್ತೇನೆ. ಆದರೆ ಹಾಗೆ ಬರೆದ ವ್ಯಕ್ತಿಗಳು ಹುಟ್ಟುವ ಮೊದಲೇ ನಡೆದ ಸಭೆಯಲ್ಲಿಯೇ ರಬೀಂದ್ರನಾಥ ಠಾಗೋರ್ ರಸ್ತೆ ಎಂದೇ ಹೆಸರಿಡಬೇಕು ಎಂದು ಆಗಿತ್ತಲ್ಲ. ಇದಕ್ಕೆ ಅವರು ಏನು ಹೇಳುತ್ತಾರೋ. ಬೇಕಾದರೆ ಆ ಸಭೆಯಲ್ಲಿದ್ದ ಮಹಾನುಭಾವರ ಹೆಸರನ್ನು ಮತ್ತೊಮ್ಮೆ ಓದಿ. ಚೇರ್ ಮೆನ್ ಕ್ರೈಸ್ತ ಮಹಿಳೆ. ಮೊದಲ ನಾಲ್ಕು ಹೆಸರು ಕ್ರಿಶ್ಚಿಯನ್ ಸಮುದಾಯದ್ದು. ಅವರೆಲ್ಲ ಮನಸ್ಸು ಮಾಡಿದ್ದರೆ ಎಲೋಶಿಯಸ್ ಕಾಲೇಜು ರಸ್ತೆ ಎಂದು ಹೆಸರಿಡಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ದೇಶ ಕಂಡ ಮಹಾನ್ ಚೈತನ್ಯವೊಂದರ ನೆನಪಿನಲ್ಲಿ ಇರುವ ಉದ್ಯಾನವೊಂದರ ರಸ್ತೆಯನ್ನು ಕೂಡ ಅವರದ್ದೇ ಹೆಸರಿನಲ್ಲಿ ಕರೆಯೋಣ ಎಂದು ನಿರ್ಧರಿಸಿಬಿಟ್ಟರು. ಅದ್ಯಾವುದೂ ಗೊತ್ತಿಲ್ಲದೆ ಎಲೋಶಿಯಸ್ ಕಾಲೇಜಿನವರು ತಮ್ಮ ಒಂದು ಬೋಡರ್್ ಹಾಕಿ ಇದು ನಮ್ಮ ರಸ್ತೆ ಎಂದು ಮೊದಲೇ ಬರೆದಿದ್ದೇವು ಎಂದರೆ ಆಗುತ್ತಾ? ನಾಳೆ ನಾನು ನನ್ನ ಮನೆಗೆ ಹೋಗುವ ರಸ್ತೆಗೆ ನನ್ನ ಹೆಸರಿನ ಬೋರ್ಡ ಹಾಕಿದರೆ ರಸ್ತೆ ನನ್ನ ಹೆಸರಿನಲ್ಲಿ ಆಗುತ್ತಾ!
ನಾನು ಈಗ ಪಾಲಿಕೆಗೆ ವಿನಂತಿ ಮಾಡುವುದು ಏನೆಂದರೆ ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆ ಅಥವಾ ಎಲೋಶಿಯಸ್ ಕಾಲೇಜು ರಸ್ತೆ ಎಂದು ಆಗಿರುವ ವಿವಾದವನ್ನು ಒಂದೋ ಕಾನೂನಿನ ಪ್ರಕ್ರಿಯೆಯಲ್ಲಿ ಮುಗಿಸಿ ಅಥವಾ ಮೊದಲೇ ದಾಖಲೆಗಳಲ್ಲಿ ಇರುವಂತೆ ರಬೀಂದ್ರನಾಥ ಟಾಗೋರ್ ರಸ್ತೆ ಎನ್ನುವುದನ್ನೇ ಮುಂದುವರೆಸಲು ಆದೇಶ ಹೊರಡಿಸಿ. ರಬೀಂದ್ರನಾಥ ಠಾಗೋರ್ ರಸ್ತೆ ಮಂಗಳೂರಿನಲ್ಲಿ ಚಿರಸ್ಥಾಯಿಯಾಗಲಿ, ಏನಂತೀರಾ?
Leave A Reply