ಕರ್ನಾಟಕದಲ್ಲೂ ಫಲಿಸಿದರೇ ಶಾ ತಂತ್ರ, ವಂಶಾಡಳಿತದ ಕಾಂಗ್ರೆಸ್ ರಾಜಕೀಯವೇ ಅತಂತ್ರ
ಒಂದು ಕಾಲದಲ್ಲಿ ಇಡೀ ರಾಷ್ಟ್ರವನ್ನೇ ತನ್ನ ಅಧಿಕಾರದ ಕಪಿಮುಷ್ಠಿಯಲ್ಲಿಟ್ಟುಕೊಂಡು ಆಡಳಿತ ನಡೆಸಿದ ಕಾಂಗ್ರೆಸ್ ಗೆ ಇದೀಗ ಅಸ್ತ್ವಿತ್ವ ಉಳಿಸಿಕೊಳ್ಳುವ ಪ್ರಶ್ನೆ ಎದುರಾಗಿದೆ. ಒಂದು ವೇಳೆ ಪ್ರಸ್ತುತ ಅಧಿಕಾರದಲ್ಲಿರುವ ಕರ್ನಾಟಕದಲ್ಲೂ ಅಧಿಕಾರವೇನಾದರೂ ಕಾಂಗ್ರೆಸ್ ಕಳೆದುಕೊಂಡಿದ್ದೇ ಆದರೆ, ಭವಿಷ್ಯದಲ್ಲಿ ಭದ್ರ ನೆಲೆಯಿರುವ ಯಾವುದೇ ರಾಜ್ಯಗಳು ಕೈ ವಶದಲ್ಲಿ ಉಳಿಯುವುದೇ ಇಲ್ಲ.
ಕಾಂಗ್ರೆಸ್ ಗೆ ಎದುರಾಗಿರುವ ಅಸ್ತಿತ್ವದ ಪ್ರಶ್ನೆ ಗುಜರಾತ್, ಹಿಮಾಚಲ ಪ್ರದೇಶದ ಚುನಾವಣೆ ನಂತರ ರಕ್ಕಸ ಅಲೆಯಾಗಿ ಪರಿಣಮಿಸಿದೆ. ಅದಕ್ಕೆ ಕಾರಣ ಬಿಡಿಸಿ ಹೇಳಬೇಕಿಲ್ಲ, ರಾಜಕೀಯ ಚಾಣಕ್ಯ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ. ಏಳು ದಶಕಗಳ ರಾಷ್ಟ್ರ ರಾಜಕಾರಣದಲ್ಲಿ ಹೊಸ ಅಲೆಯೊಂದು ಸೃಷ್ಟಿಸಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಜೋಡಿಯ ಅಶ್ವಮೇದ ಕುದುರೆಯನ್ನು ಕಟ್ಟಿಹಾಕಲು ಹಲವು ಪಕ್ಷಗಳು ಹೆಣಗಾಡುತ್ತಿವೆ.
ಸತತ 70 ವರ್ಷಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಇದೀಗ ರಾಷ್ಟ್ರದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಇದೀಗ ಭಾರತದ 19 ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಕಾಂಗ್ರೆಸ್ ಮುಕ್ತ ಭಾರತ ಮಾಡುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಇದಕ್ಕೆ ಸಾಕ್ಷಿಯೆಂಬಂತೆ ಕಾಂಗ್ರೆಸ್ ನಿರಂತರವಾಗಿ ಹಲವು ರಾಜ್ಯಗಳಲ್ಲಿ ತನ್ನ ಅಧಿಕಾರವನ್ನು ಕಳೆದುಕೊಳ್ಳುತ್ತಿದೆ. ಪ್ರಸ್ತುತ ಕಾಂಗ್ರೆಸ್ ಕೇವಲ ನಾಲ್ಕು ರಾಜ್ಯಗಳಲ್ಲಿ ಅಧಿಕಾರದಲ್ಲಿರುವುದು ಒಂದು ರಾಷ್ಟ್ರೀಯ ಪಕ್ಷಕ್ಕೆ ಎದುರಾದ ಅತಿ ದೊಡ್ಡ ದುರಂತ.
ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ವಿಜಯದುಂಧುಬಿ ಭಾರಿಸಿರುವ ಬಿಜೆಪಿ ಇದೀಗ ದಕ್ಷಿಣ ಭಾರತದಲ್ಲೇ ಬಿಜೆಪಿಗೆ ಬಲಿಷ್ಟ ನೆಲೆ ಉಳ್ಳ ಕರ್ನಾಟಕದತ್ತ ಕಣ್ಣಿಟ್ಟಿದೆ. ಕಾಂಗ್ರೆಸ್ ಅಧಿಕಾರದಲ್ಲಿರುವ ದೊಡ್ಡ ಮತ್ತು ಮಹತ್ವದ ರಾಜ್ಯ ಕರ್ನಾಟಕ. ರಾಜ್ಯದಲ್ಲೇನಾದರೂ ಕಾಂಗ್ರೆಸ್ ಅಧಿಕಾರ ಕಳೆದುಕೊಂಡರೇ ಕೈ ಪಾಳಯಕ್ಕೆ ಅಸ್ತಿತ್ವದ ಪ್ರಶ್ನೆ ಎದುರಾಗುವುದು ನಿಶ್ಚಿತ.
ಅತ್ತ ಸಾಲು ಸಾಲು ಕಂಗೆಟ್ಟಿರುವ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ತಮ್ಮ ಪುತ್ರ ರಾಹುಲ್ ಗಾಂಧಿಗೆ ಎಐಸಿಸಿ ಅಧ್ಯಕ್ಷ ಪಟ್ಟ ನೀಡಿದ್ದು, ಕೈ ಹಿರಿಯ ಮುಖಂಡರಿಗೆ ಹೊಸ ಸವಾಲೊಂದು ಎದುರಾಗಿದೆ. ಹೋದಲೆಲ್ಲ ನಗೆಪಾಟಲಿಗೀಡಾಗುತ್ತ, ಸೋಲಿನ ಕಹಿಯನ್ನೇ ಉಂಡ ಕಾಂಗ್ರೆಸ್ ಯುವರಾಜ್ ರಾಹುಲ್ ಗಾಂಧಿ ಎದುರು ಅಧ್ಯಕ್ಷರಾದ ಮೇಲೆ ಸವಾಲು ಎನ್ನುವಂತೆ ಕರ್ನಾಟಕ ವಿಧಾನಸಭೆ ಎದುರಾಗಲಿದೆ. ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ 2018ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಭಾರಿ ಸವಾಲನ್ನು ಒಡ್ಡಿದೆ. ಕಾಂಗ್ರೆಸ್ ನ ಆಡಳಿತ ವಿರೋಧಿ ಅಲೆಯ ಮಧ್ಯೆ ಗೆಲುವು ಸಾಧಿಸುವುದು ಅಷ್ಟು ಸುಲಭವಲ್ಲ. ಇಂಹತ ಸ್ಥಿತಿಯಲ್ಲಿ ಕಾಂಗ್ರೆಸ್ ಕರ್ನಾಟಕದಲ್ಲಿ ಗೆಲ್ಲಲೇಬೇಕು. ಇಲ್ಲದಿದ್ದರೇ ಕಾಂಗ್ರೆಸ್ ಭವಿಷ್ಯ ಮೇಲೆಳದಷ್ಟು ಕರಾಳವಾದರೂ ಅಚ್ಚರಿ ಇಲ್ಲ.
ಗುಜರಾತ್ ನಲ್ಲಿ ಪಾಟೀದಾರ ಮೀಸಲು ಹೋರಾಟ ಸಮಿತಿ ಮುಖಂಡ ಹಾರ್ದಿಕ್ ಪಟೇಲ್, ಹಿಂದುಳಿದ ವರ್ಗಗಳ ಮುಖಂಡ ಅಲ್ಪೇಶ್ ಠಾಕೂರ್ ಮತ್ತು ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ ಅವರ ಬೆಂಬಲವಿದ್ದರೂ ಕಾಂಗ್ರೆಸ್ ಕೇವಲ 80 ಸ್ಥಾನಗಳನ್ನು ಪಡೆಯುವಲ್ಲಿ ತೃಪ್ತಿಪಡಬೇಕಾಯಿತು. ಆದರೆ ಕರ್ನಾಟಕದಲ್ಲಿ ಗುಜರಾತ್ ನಲ್ಲಿ ನಡೆಸಿದ ಒಡೆದು ಆಳುವ ನೀತಿ ಯಶಸ್ಸು ಕಾಣುವುದು ಕಷ್ಟ. ಒಂದು ಕರ್ನಾಟಕದಲ್ಲಿ ಅಮಿತ್ ಶಾ ಮತ್ತು ಮೋದಿ ಜೋಡಿ ತನ್ನ ಮೋಡಿ ಮುಂದುವರಿಸಿದ್ದೇ ಆದಲ್ಲಿ ದೇಶದಲ್ಲಿ ಕಾಂಗ್ರೆಸ್ ಗೆ ಯಾವುದೇ ರಾಜ್ಯದಲ್ಲೂ ಬಲಿಷ್ಟವಾಗಿ ಅಧಿಕಾರ ಹೊಂದುವುದು ಅಸಾಧ್ಯ ಎಂಬಂತ ಸ್ಥಿತಿ ಇದೆ.
ಪಂಜಾಬ್ ಕರ್ನಾಟಕ ಹೊರತುಪಡಿಸಿ ಕೈ ಬಲಿಷ್ಟವಾಗಿರುವ ರಾಜ್ಯಗಳೆಲ್ಲವೂ ಬಿಜೆಪಿ ಪಾಲಾಗಿವೆ. ಇನ್ನುಳಿದಂತೆ, ತಮಿಳುನಾಡು, ಆಂಧ್ರ ಪ್ರದೇಶ, ಕೇರಳ ಸೇರಿ ಹಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಬಲಿಷ್ಟವಾಗಿವೆ. ಬಿಜೆಪಿ ನಾಗಾಲೋಟಕ್ಕೆ ಕಾಂಗ್ರೆಸ್ ಲಗಾಮು ಕರ್ನಾಟಕದಲ್ಲೂ ಹಾಕದೇ ಇದ್ದಲ್ಲಿ, ಇಡೀ ರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಅದರ ಅಧಿನಾಯಕ ರಾಹುಲ್ ಗಾಂಧಿ ಮೇಲಿನ ವಿಶ್ವಾಸವನ್ನೇ ಜನರು ಕಳೆದುಕೊಳ್ಳುವ ಭೀತಿಯೂ ಕೈ ಮುಖಂಡರಲ್ಲಿ ಮನೆ ಮಾಡಿದೆ.
ಕರ್ನಾಟಕದಲ್ಲಿ ರಾಹುಲ್ ಗಾಂಧಿ ಆಟ ಏನು ನಡೆಯದು, ಇಲ್ಲಿ ಗೆಲ್ಲಲು ಕಾಂಗ್ರೆಸ್ ಹಲವು ಷಡ್ಯಂತ್ರಗಳನ್ನು ನಡೆಸುತ್ತಿದೆ. ಗುಜರಾತ್ ನಲ್ಲಿ ಜಾತಿ ನಾಯಕರನ್ನು ಎತ್ತಿಕಟ್ಟಿ ಅಖಾಡಕ್ಕಿಳಿದ ಕಾಂಗ್ರೆಸ್ ಗೆ ತಕ್ಕ ಮಟ್ಟಿಗೆ ಯಶಸ್ಸು ಗಳಿಸಿದರೂ, ಅದರ ಮೂಲ ಫಲ ಜಿಗ್ನೇಶ್, ಮೇವಾನಿ ಮತ್ತು ಹಾರ್ದಿಕ್ ಪಾಲಾಯಿತು. ಕರ್ನಾಟಕದಲ್ಲಿ ಅಂತ ಅವಕಾಶವಿಲ್ಲ. ರಾಹುಲ್ ಪ್ರಚಾರ ಮತಗಳಿಕೆಗಿಂತ ಕಳೆದಿದೆ ಹೆಚ್ಚು. ಸಿದ್ದರಾಮಯ್ಯ ಹಲ ಷಡ್ಯಂತ್ರ್ಯ ನಡೆಸಿ ಅಧಿಕಾರಕ್ಕೇರಲು ನಡೆಸುತ್ತಿರುವ ಹುನ್ನಾರವು ಫಲಿಸುವುದು ಭಾರಿ ಕಷ್ಟ.
ಕಾಂಗ್ರೆಸ್ 70 ವರ್ಷ ಆಡಳಿತ ನಡೆಸಿಯೂ ಹೀನಾಯ ಸ್ಥಿತಿಗೆ ಇಳಿದಿರುವುದು ಜನರಲ್ಲಿ ಕಾಂಗ್ರೆಸ್ ಮೇಲಿನ ನಂಬಿಕೆಯನ್ನು ಇನ್ನಷ್ಟು ಕುಸಿದಿದೆ, ಅದಕ್ಕೆ ಪೂಕರವೆಂಬಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ವರ್ತನೆ. ಕರ್ನಾಟಕದಲ್ಲೂ ಬಿಜೆಪಿ ಗೆಲುವು ಸಾಧಿಸಿದರೇ ನಿಶ್ಚಿತವಾಗಿ, ಕಾಂಗ್ರೆಸ್ ನಲ್ಲಿ ಬಂಡಾಯ ವೇಳುವ ಲಕ್ಷಣಗಳು ಇವೆ. ಹಲವು ಹಿರಿಯ ಅನುಭವಿ ನಾಯಕರಿದ್ದರೂ, ರಾಹುಲ್ ಗಾಂಧಿಗೆ ಪಟ್ಟಕೇರಿಸಿದ್ದನ್ನು ಹಲವರು ಒಳಗೊಳಗೆ ವಿರೋಧಿಸುತ್ತಿದ್ದಾರೆ. ಅದು ಸತತ ಸೋಲಿನಿಂದ ಕಂಗೆಟ್ಟು ಸ್ಫೋಟಿಸಬಹುದು. ಆಗ ಕಾಂಗ್ರೆಸ್ ಒಡೆದ ಮನೆಯಾಗಿ ಇನ್ನಷ್ಟು ಜಾಳಾಗುವ ಎಲ್ಲ ಕರಾಳ ದಿನಗಳು ಕರ್ನಾಟಕದ ಚುನಾವಣೆ ಫಲಿತಾಂಶದ ಮೇಲೆ ಅವಲಂಭಿತವಾಗಿವೆ ಎಂದರೇ ಅತಿಶಯೋಕ್ತಿ ಅಲ್ಲ. ಆ ದಿನಗಳು ದೂರವಿಲ್ಲ…
Leave A Reply