ಗಡ್ಡ ಬೋಳಿಸದ 10 ಮುಸ್ಲಿಮರನ್ನು ಎನ್ ಸಿಸಿ ಶಿಬಿರದಿಂದ ಹೊರಹಾಕಿದ ಆಡಳಿತ ಮಂಡಳಿ!
ದೆಹಲಿ: ನ್ಯಾಷನಲ್ ಕೆಡೆಟ್ ಕಾರ್ಪ್ಸ್ (ಎನ್ ಸಿಸಿ) ಶಿಬಿರ ಅಥವಾ ತರಬೇತಿ ಎಂದರೇನೇ ಶಿಸ್ತಿಗೆ ಹೆಸರಾಗಿದೆ. ಆದರೆ ಈ ಶಿಬಿರದಲ್ಲೂ ಗಡ್ಡ ಬೋಳಿಸದೆ ಅಶಿಸ್ತಿನಿಂದ ಭಾಗಿಯಾದ ಆರೋಪದಲ್ಲಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಎನ್ ಸಿಸಿ ವಿಭಾಗದ 10 ಮುಸ್ಲಿಂ ವಿದ್ಯಾರ್ಥಿಗಳನನ್ನು ಶಿಬಿರದಿಂದಲೇ ಹೊರಹಾಕಲಾಗಿದೆ.
ರೋಹಿಣಿ ಎಂಬ ಪ್ರದೇಶದಲ್ಲಿ ಶಿಬಿರ ನಡೆಯುತ್ತಿದ್ದು, ಆಡಳಿತ ಮಂಡಳಿ ಶಿಸ್ತಿನ ಕಾರಣದಿಂದ ವಿದ್ಯಾರ್ಥಿಗಳಿಗೆ ಗಡ್ಡ ಬೋಳಿಸುವಂತೆ ಸೂಚನೆ ನೀಡಿದೆ. ಆದರೆ ವಿದ್ಯಾರ್ಥಿಗಳು ನಿರಾಕರಿಸಿದ ಕಾರಣ ಶಿಬಿರದಿಂದ ಹೊರಹಾಕಿ ನೋಟಿಸ್ ನೀಡಿದೆ ಎಂದು ತಿಳಿದುಬಂದಿದೆ.
ಆದರೆ ನಮ್ಮನ್ನು ಶಿಬಿರದಿಂದ ಹೊರಹಾಕಲು ಸೂಕ್ತ ಕಾರಣ ನೀಡದೆ, “ಅಶಿಸ್ತು” ಎಂದು ಮಾತ್ರ ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ ಎಂದು ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದು, ವಿಶ್ವವಿದ್ಯಾಲಯದ ಕ್ಯಾಂಪಸ್ ಗೆ ಆಗಮಿಸಿ ಪ್ರತಿಭಟನೆ ಸಹ ನಡೆಸಿದ್ದಾರೆ.
ನಾವು ಎನ್ ಸಿಸಿ ಶಿಬಿರದಲ್ಲಿ ಪಾಲ್ಗೊಳ್ಳುವ ಆಸಕ್ತಿ ಹೊಂದಿದ್ದರೂ ಬರೀ ಗಡ್ಡ ಬೋಳಿಸಿಲ್ಲ ಎಂಬ ಕಾರಣಕ್ಕಾಗಿಯೇ ಶಿಬಿರದಿಂದ ಹೊರಹಾಕಲಾಗಿದೆ. ಆದರೆ ನಮ್ಮ ಗಡ್ಡದಿಂದ ಅವರಿಗೆ ಯಾವ ತೊಂದರೆಯೂ ಆಗುವುದಿಲ್ಲ ಎಂದು ಶಿಬಿರಾರ್ಥಿ ದಿಲ್ಶಾದ್ ಅಹ್ಮದ್ ಹೇಳಿದ್ದಾರೆ.
ಶಿಬಿರದ ನೇತೃತ್ವ ವಹಿಸಿಕೊಂಡಿದ್ದ ಲೆಫ್ಟಿನೆಂಟ್ ಕರ್ನಲ್ ಬಿ.ಎಸ್.ಯಾದವ್ ಈ ಕುರಿತು ಸ್ಪಷ್ಟನೆ ನೀಡಿದ್ದು, ನಾನು 26 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಎನ್ ಸಿಸಿಯಲ್ಲಿ ಎಲ್ಲರೂ ಗಡ್ಡ ಬೋಳಿಸಿಕೊಂಡು ಶಿಸ್ತಿನಿಂದ ಇರಬೇಕು ಎಂಬುದು ನಿಯಮ. ನಾವು ಸಹ ಆ ವಿದ್ಯಾರ್ಥಿಗಳಿಗೆ ಶಿಷ್ಟಾಚಾರ ಪಾಲಿಸುವಂತೆ ತಿಳಿಸಿದ್ದೆವು. ಆದರೆ ಧರ್ಮದ ಕಾರಣವೊಡ್ಡಿ ಅವರು ಶಿಬಿರ ಬಿಟ್ಟು ತೊರೆದಿದ್ದಾರೆ ಎಂದು ತಿಳಿಸಿದ್ದಾರೆ.
Leave A Reply