ಕೇಜ್ರಿವಾಲ್ ಸರ್ಕಾರಕ್ಕೆ ವರ್ಷ ಮೂರು, ವೈಫಲ್ಯಗಳವು ನೂರಾರು!
ಅದು 2015. ದೆಹಲಿಯಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಬೇಸತ್ತಿದ್ದ ಜನ ಹಾಗೂ ಜನಲೋಕಪಾಲ್ ಬಿಲ್ ಜಾರಿಗಾಗಿ ಹೋರಾಟ ನಡೆಸುತ್ತಿದ್ದ ಅಣ್ಣಾ ಹಜಾರೆ ಪಕ್ಕ ಕುಳಿತಿದ್ದ ಅರವಿಂದ್ ಕೇಜ್ರಿವಾಲ್ ಅವರನ್ನು ನೋಡಿದ್ದ ಜನ, ಆಮ್ ಆದ್ಮಿ ಪಕ್ಷಕ್ಕೆ ಮತ ನೀಡಿ ಗೆಲ್ಲಿಸಿದ್ದರು. ಅದಾವುದೋ ವಿಶ್ವಾಸ ಇಟ್ಟು ಮತ ನೀಡಿದ್ದರು.
ಆದರೆ ಈ ಮೂರು ವರ್ಷಗಳಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ಹೇಗೆ ಆಡಳಿತ ನಡೆಸಿದ, ನೀಡಿದ ಭರವಸೆಗಳೆಲ್ಲವನ್ನೂ ಈಡೇರಿಸಿದೆಯಾ? ದೆಹಲಿಯನ್ನು ಅಭಿವೃದ್ಧಿಗೊಳಿಸಿದೆಯಾ? ಯಾವಾಗಲೂ ಕೇಂದ್ರ ಸರ್ಕಾರವನ್ನೇ ಟೀಕಿಸುವ ಅರವಿಂದ್ ಕೇಜ್ರಿವಾಲ್ ದೆಹಲಿಯಲ್ಲಿ ಯಾವ ರೀತಿ ಆಡಳಿತ ನಡೆಸಿದ್ದಾರೆ?
ಇಲ್ಲ, ದೆಹಲಿ ಸರ್ಕಾರ ನೀಡಿದ ಭರವಸೆ ಈಡೇರಿಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಹೌದು, ಈ ಮೂರು ವರ್ಷಗಳ ಅವಧಿಯ ಆಪ್ ಸರ್ಕಾರದ ಮಾರ್ಕ್ಸ್ ಕಾರ್ಡ್ ನೋಡಿದರೆ, ಅರವಿಂದ್ ಕೇಜ್ರಿವಾಲ್ ಮೂರು ವರ್ಷದಲ್ಲಿ ಬರೀ ವೈಫಲ್ಯ, ಭರವಸೆ ಈಡೇರಿಸದಿರುವಿಕೆಯೇ ಕಾಣುತ್ತದೆ. ಹಾಗಾದರೆ ಆಪ್ ಸರ್ಕಾರ ಜನರಿಗೆ ನೀಡಿದ ಭರವಸೆ ಏನಾಗಿದ್ದವು, ಯಾವ ಯೋಜನೆ ಘೋಷಿಸಿದ್ದರು? ಅವುಗಳ ಸ್ಥಿತಿ ಏನು? ಹೇಗೆ ಸರ್ಕಾರ ವೈಫಲ್ಯವಾಗಿದೆ ಎಂಬುದಕ್ಕೆ ಇಲ್ಲೊಂದಿಷ್ಟು ಅಂಶಗಳಿವೆ ನೋಡಿ.
- ಮೊದಲಿಗೆ ಸಾರಿಗೆ ವಿಚಾರಕ್ಕೆ ಬರುವುದಾದರೆ ದೆಹಲಿಯಲ್ಲಿ 2000 ಹವಾನಿಯಂತ್ರಣ ರಹಿತ (ಎಸಿ), 1000 ಹವಾ ನಿಯಂತ್ರಿತ (ಎಸಿ) ನೂತನ ಬಸ್ ಸೌಲಭ್ಯ ನೀಡುವುದಾಗಿ ಭರವಸೆ ನೀಡಿದ್ದರು ಕೇಜ್ರಿವಾಲ್, ಅದಾವುದೂ ಈಡೇರಿಲ್ಲ.
- ರಾಜ್ಯಾದ್ಯಂತ ಐದು ಕಿಲೋ ಮೀಟರ್ ಗೆ ಒಂದರಂತೆ ಸುಮಾರು 1000 ಕ್ಲಿನಿಕ್ ತೆರೆಯುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಇದುವರೆಗೆ ಕೇಂದ್ರಾಡಳಿತ ಪ್ರದೇಶದಲ್ಲಿ 160 ಕ್ಲಿನಿಕ್ ಮಾತ್ರ ತೆರೆಯಲಾಗಿದೆ.
- ಅಧಿಕಾರಕ್ಕೆ ಬಂದರೆ ಎಲ್ಲರಿಗೂ ಉಚಿತ ವೈಫೈ ನೀಡುತ್ತೇವೆ ಎಂದು ಆಪ್ ಪ್ರಣಾಳಿಕೆಯಲ್ಲಿ ಘೋಷಿಸಲಾಗಿತ್ತು. ಇದುವರೆಗೆ ಉಚಿತ ವೈಫೈ ನೀಡುವುದು ಬಿಡಿ, ಯೋಜನೆ ಜಾರಿಗೆ ಟೆಂಡರ್ ಸಹ ಕರೆದಿಲ್ಲ.
- ಜನರಿಗೆ ಕಡಿಮೆ ಹಣದಲ್ಲಿ ಊಟ ನೀಡಲು ಒಂದು ನೂರು “ಆಮ್ ಆದ್ಮಿ ಕ್ಯಾಂಟೀನ್’’ ತೆರೆಯುತ್ತೇವೆ ಎಂದು ಕೇಜ್ರಿವಾಲ್ ಅವರು ಬಡಾಯಿ ಕೊಚ್ಚಿಕೊಂಡಿದ್ದರು. ಆದರೆ ಒಂದೇ ಒಂದು ತೆರೆಯಲಾಗಿತ್ತು ಹಾಗೂ ಎರಡೇ ತಿಂಗಳಲ್ಲಿ ಅದನ್ನು ಮುಚ್ಚಲಾಯಿತು.
- ದೆಹಲಿಯಾದ್ಯಂತ ಸುಮಾರು 1.5 ಲಕ್ಷ ಸಮುದಾಯ ಶೌಚಾಲಯ ನಿರ್ಮಿಸಿ ಜನರಿಗೆ ಅನುಕೂಲ ಮಾಡುತ್ತೇವೆ ಎಂದು ನೀಡಿದ್ದ ಭರವಸೆ ಸುಳ್ಳಾಗಿದ್ದು, ಇದುವರೆಗೆ ಕೇವಲ 21 ಸಾವಿರ ಶೌಚಾಲಯ ನಿರ್ಮಿಸಲಾಗಿದೆ.
- 5 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಿ ದೆಹಲಿಯ ಸುಮಾರು 10 ಪ್ರಮುಖ ರಸ್ತೆಗಳನ್ನು ಮರು ಡಾಂಬರೀಕರಣ ಮಾಡಿ ಸಂಚಾರಕ್ಕೆ ಅನುಕೂಲ ಮಾಡುತ್ತೇವೆ ಎಂಬ ಭರವಸೆ ಇನ್ನೂ ಭರವಸೆಯಾಗಿಯೇ ಉಳಿದಿದೆ.
- ಅಕ್ರಮವಾಗಿ ನಿರ್ಮಿಸಿದ ಬಡಾವಣೆ ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲವಾಗುವ ಯೋಜನೆ ಜಾರಿಗೊಳಿಸುತ್ತೇವೆ ಎಂದಿತ್ತು ಸರ್ಕಾರ. ಮೂರು ವರ್ಷದಿಂದ ಇನ್ನೂ ಸರ್ವೇಯಲ್ಲೇ ಕಾಲಕಳೆಯುತ್ತಿದೆ.
ಇಷ್ಟೇ ಅಲ್ಲ, ಮನೆ ಬಾಗಿಲಿಗೆ ಸರ್ಕಾರದ ಯೋಜನೆ ತಲುಪಿಸುವುದು, ಆರೋಗ್ಯ ಕಾರ್ಡ್ ವಿತರಣೆ, ವಿದ್ಯುತ್ ಚಾಲಿತ ಬಸ್ ಸೇರಿ ಹಲವು ಯೋಜನೆಗಳು ಸರ್ಕಾರದ ಮುಂದಿವೆ. ಆದರೆ ಯಾವ ಯೋಜನೆಯನ್ನೂ ಸಮರ್ಪಕವಾಗಿ ಮಾಡದೆ ಜನರಿಗೆ ಬರೀ ಭರವಸೆಯಲ್ಲೇ ಸರ್ಕಾರ ಕಾಲ ಕಳೆಯುತ್ತಿದೆ. ಇದರ ನಡುವೆಯ ಪಕ್ಷದ ಆಂತರಿಕ ಭಿನ್ನಮತ, 21 ಶಾಸಕರ ಅಮಾನತು ಸೇರಿ ಹಲವು ಹಗರಣಗಳು ಕೇಜ್ರಿವಾಲ್ ಸರ್ಕಾರದ ಮೇಲಿವೆ. ಒಟ್ಟಿನಲ್ಲಿ ಜನರಿಗೆ ನೀಡಿದ ಭರವಸೆ ಈಡೇರಿಸುವಲ್ಲಿ ಮಾತ್ರ ಆಫ್ ವಿಫಲವಾಗಿದೆ ಎಂಬುದು ಅಂಕಿ-ಅಂಶಗಳಿಂದ ಸಾಬೀತಾಗಿದೆ.
Leave A Reply