ಫುಟ್ಬಾತ್ ನುಂಗಿದ ಶಾಸಕ ಲೋಬೋ
ಪಾದಚಾರಿ ಮಾರ್ಗದಲ್ಲಿ ಬೈಕ್ ಪಾರ್ಕಿಂಗ್ ಮಾಡಿ ಹೋದವರನ್ನು ಹಿಡಿದು ದಂಡ ಕಟ್ಟಿಸಿಕೊಳ್ಳುವವರು ಇಲ್ಲೊಬ್ಬರು ಪಾದಚಾರಿ ಮಾರ್ಗವನ್ನು ನುಂಗಿ ನೀರು ಕುಡಿದರೂ ಸುಮ್ಮನೆ ಬಿಟ್ಟಿದ್ದಾರೆ. ಯಾಕೆಂದರೆ ಅವರು ಮಂಗಳೂರು ನಗರದ ಶಾಸಕರು ಅಲ್ಲವೋ!
ಹಾಗಾಗಿ ಮಾನ್ಯ ಶಾಸಕರು ಯಾವ ಕಾನೂನನ್ನು ಬೇಕಾದರೂ ಮುರಿದು ಅಟ್ಟಕ್ಕೆಸೆಯಬಹುದು. ಅದನ್ನು ಸಾರ್ವಜನಿಕರು ಬಾಯಿ ಮುಚ್ಚಿಕೊಂಡು ನೋಡಬೇಕೇ ಹೊರತು ಬಾಯಿ ಬಿಟ್ಟು ಕೇಳುವಂತಿಲ್ಲ. ಇದು ಸದ್ಯದ ಮಂಗಳೂರಿನ ನತದೃಷ್ಟ ನಾಗರಿಕರ ಪರಿಸ್ಥಿತಿ!
ಈ ಫ್ಲೆಕ್ಸ್ ಕಂಡು ಬಂದಿರುವುದು ಮಂಗಳೂರಿನ ಬಲ್ಮಠ ರಸ್ತೆಯ ಫುಟ್ಬಾತ್ ನಲ್ಲಿ. ಮೊದಲೇ ಇಲ್ಲಿನ ಫುಟ್ಬಾತ್ ಹೇಳಿಕೊಳ್ಳುವ ಮಟ್ಟಕ್ಕಿಲ್ಲ. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದರೂ ತಪ್ಪಿಲ್ಲ. ಹೋಗಲಿ, ಇದೇ ನಮ್ಮ ಪಾಲಿನ ಪುಣ್ಯ ಅಂದುಕೊಂಡು ಸಾರ್ವಜನಿಕರು ಈ ಫುಟ್ಬಾತ್ ಬಳಸುತ್ತಿರುವಾಗಲೇ ಇದರ ಮೇಲೆ ಶಾಸಕರ ಕಣ್ಣು ಬಿದ್ದಿದೆ. ತಡ ಮಾಡದೇ ಆ ಜಾಗದಲ್ಲಿ ರಾಹುಲ್ ಗಾಂಧಿಗೆ ಶುಭ ಕೋರುವ ಫ್ಲೆಕ್ಸ್ ತಲೆ ಎತ್ತಿ ನಿಂತಿದೆ. ಮುಂದೇನು? ಪಾದಚಾರಿಗಳು ಅನಿವಾರ್ಯವಾಗಿ ರಸ್ತೆಗೆ ಇಳಿಯುತ್ತಾರೆ. ಹಾಗಾದರೆ ವಾಹನಗಳು?
ಶಾಸಕರ ಮನೆಯಂಗಳದಲ್ಲಿ ಚಲಿಸಬೇಕಾ? ಗೊತ್ತಿಲ್ಲ!
ಪಾದಚಾರಿ ಮಾರ್ಗಕ್ಕೆ ಅಡ್ಡವಾಗಿ ತಮ್ಮ ಫ್ಲೆಕ್ಸ್ ಹಾಕಿಸಿಕೊಂಡು ಶಾಸಕ ಲೋಬೋ ಅವರು ಪಾದಚಾರಿಗಳಿಗೆ ಕಿರಿಕಿರಿಯುಂಟು ಮಾಡಿದ್ದರೆ, ಸ್ವಲ್ಪ ದೂರದಲ್ಲಿರುವ ಜ್ಯೋತಿ ಅಂಬೇಡ್ಕರ್ ವೃತ್ತದ ಸಿಗ್ನಲ್ ಮೇಲೆ-ಕೆಳಗೆ, ಹಿಂದೆ-ಮುಂದೆ, ಆಚೆ-ಈಚೆ, ರಾಹುಲ್ ಗಾಂಧಿಯನ್ನು ಸ್ವಾಗತಿಸಲು ಬಂಟಿಂಗ್ಸ್ ಹಾಕಲಾಗಿದೆ. ಇಲ್ಲೂ ಕೂಡಾ ಕಾನೂನು ಉಲ್ಲಂಘನೆಯಾಗಿ ವಾಹನ ಸವಾರರು ತೀವ್ರ ಪರದಾಡುವಂತಾಗಿದೆ.
ಸಾರ್ವಜನಿಕರಿಗೆ ತೊಂದರೆ ಕೊಟ್ಟು ರಾಹುಲ್ ಗಾಂಧಿಯವರನ್ನು ಸ್ವಾಗತಿಸಿದರೆ ಮಾತ್ರ ಅವರು ಸಂತುಷ್ಟರಾಗುತ್ತಾರೆಯೇ? ಇಲ್ಲವಾದರೆ ಯಾಕೆ ತೊಂದರೆ ಕೊಟ್ಟಿಲ್ಲ ಅಂತ ಕಿವಿ ಹಿಂಡುತ್ತಾರೆಯೇ? ಸ್ವಾಮಿ ಶಾಸಕರೇ, ನಿಮ್ಮಂತಹ ಶ್ರೀಮಂತರಿಗೆ ಫುಟ್ಬಾತ್ ಫ್ಲೆಕ್ಸ್ ಹಾಕಿಸಿಕೊಳ್ಳಲು ಇರುವ ಜಾಗವಾಗಿರಬಹುದು. ಆದರೆ ಬಡಪಾಯಿಗಳಿಗೆ ಫುಟ್ಬಾತ್ ಅನಿವಾರ್ಯ ಪಾದಚಾರಿ ಮಾರ್ಗ ಎನ್ನುವುದನ್ನು ಮರೆಯದಿರಿ.
ಮಂಗಳೂರು ಮಹಾನಗರ ಪಾಲಿಕೆ ಇದನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಇದು ಬೇಜವಾಬ್ದಾರಿಯೋ? ಜಾಣ ಕುರುಡೋ?
ಒಂದು ವೇಳೆ ದುರದೃಷ್ಟವಶಾತ್ ಪಾದಚಾರಿಯೊಬ್ಬ ಅನಿವಾರ್ಯವಾಗಿ ರಸ್ತೆಯ ಮೇಲೆಯೇ ನಡೆದುಕೊಂಡು ಹೋಗಿ ವಾಹನ ಸವಾರರಿಂದ ಅವಘಡ ಸಂಭವಿಸಿ ಬಿಟ್ಟರೆ ಏನು ಗತಿ? ಬಡಪಾಯಿಗಳ ಪ್ರಾಣ ಹೋದರೆ ಇವರ್ಯಾರೂ ತಲೆ ಕೆಡಿಸಿಕೊಳ್ಳಲ್ಲ ಬಿಡಿ. ಹಾಗಂತ ಸಣ್ಣಪುಟ್ಟ ಗಾಯಗಳಾದರೆ ಯಾರ ಮೇಲೆ ಪ್ರಕರಣ ದಾಖಲಿಸುವುದು? ಪಾದಚಾರಿಯ ಮೇಲೋ? ವಾಹನ ಸವಾರನ ಮೇಲೋ? ಅಥವಾ ಇದಕ್ಕೆಲ್ಲಾ ಮೂಲ ಕಾರಣಕರ್ತರಾದ ಶಾಸಕರ ಮೇಲೋ? ಅಥವಾ ಬೇಜವಾಬ್ದಾರಿ ತೋರಿದ ಮಂಗಳೂರು ಮಹಾನಗರ ಪಾಲಿಕೆಯ ಮೇಲೋ? ಪ್ರಶ್ನೆಗಳು ನೂರಾರು. ಉತ್ತರ ಮಾತ್ರ ಶೂನ್ಯ.
ಒಟ್ಟಿನಲ್ಲಿ “ರಾಹುಲ್ ಗಾಂಧಿ ಮಂಗಳೂರಿಗೆ ಬಂದರೆ ಪಾದಚಾರಿಗಳಿಗೆ ಕಿರಿಕಿರಿ, ಸಿಗ್ನಲ್ ಸರಿಯಾಗಿ ಕಾಣಿಸದೇ ವಾಹನ ಸವಾರರಿಗೆ ಗಲಿಬಿಲಿ” ಎಂದು ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.
Leave A Reply