46ನೇ ವಯಸ್ಸಲ್ಲಿ, ಮಗನೊಂದಿಗೆ 10ನೇ ಪರೀಕ್ಷೆ ಬರೆದ ಈ ಮಹಾತಾಯಿ ಸರ್ವರಿಗೂ ಸ್ಫೂರ್ತಿ
ಲುದಿಯಾನಾ: ಜ್ಞಾನ ಹೊಂದಲು ವಯಸ್ಸಿನ ಮಿತಿಯಿಲ್ಲ, ಯಾರು ಬೇಕಾದರೂ, ಯಾವುದೇ ವಯಸ್ಸಿನಲ್ಲಿ ಶಿಕ್ಷಣ ಪಡೆಯಬಹುದು ಎಂಬ ಸಂದೇಶವನ್ನು ಪಂಜಾಬ್ ಲುದಿಯಾನಾದ ಮಹಾತಾಯಿಯೊಬ್ಬರು ಸಾಬೀತು ಮಾಡಿದ್ದಾರೆ. ಮಗನೊಂದಿಗೆ 10ನೇ ತರಗತಿ ಪರೀಕ್ಷೆ ಬರೆಯುವ ಮೂಲಕ ವಯಸ್ಕರೂ ಶಿಕ್ಷಣ ಪಡೆಯಬಹುದು ಎಂಬ ಸಂದೇಶವನ್ನು ಸಾರಿದ್ದಾರೆ.
1989ರಲ್ಲಿ ಒಂಬತನೇ ತರಗತಿ ಪಾಸ್ ಆಗಿದ್ದ ರಜ್ನಿ ಬಲಾ ಅನಿವಾರ್ಯ ಕಾರಣಗಳಿಂದ ಮುಂದಿನ ತರಗತಿಗೆ ಹೋಗಲು ಆಗಿರಲಿಲ್ಲ. ಆದರೆ ಇದೀಗ 10ನೇ ತರಗತಿಗೆ ಪ್ರವೇಶ ಪಡೆದಿದ್ದು, ಮಗನೊಂದಿಗೆ ಬೋರ್ಡ್ ಪರೀಕ್ಷೆ ಬರೆಯುವ ಮೂಲಕ ಮಹತ್ವದ ಸಂದೇಶವನ್ನು ನೀಡಿದ್ದಾರೆ. ಮೂರು ಮಕ್ಕಳನ್ನು ಹೊಂದಿರುವ ರಜ್ನಿ ಬಲಾ ಪತಿಯ ಆಶಯದಂತೆ ಶಾಲೆಗೆ ಪ್ರವೇಶ ಪಡೆದಿದ್ದಾರೆ.
ಮೂರು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದು, ಆಸ್ಪತ್ರೆಯೊಂದರಲ್ಲಿ ವಾರ್ಡ್ ಅಟೆಂಡೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಪತಿ ಒತ್ತಾಯದಂತೆ ಶಾಲೆಗೆ ಪ್ರವೇಶ ಪಡೆದಿದ್ದು, ನಿತ್ಯ ಮಗನೊಂದಿಗೆ ತರಗತಿ ಹಾಜರಾಗಿದ್ದೇನೆ. ಅಲ್ಲದೇ ಇದೀಗ 10ನೇ ತರಗತಿ ಪರೀಕ್ಷೆ ಬರೆಯುತ್ತಿದ್ದೇನೆ. ನಿಜವಾಗಲು ಪರೀಕ್ಷೆ ಪಾಸ್ ಆಗುವುದು ಸವಾಲಿನ ಕೆಲಸ ಎಂಬ ಅರಿವಾಗಿದೆ ಎನ್ನುತ್ತಾರೆ ರಜ್ನಿ ಬಲಾ.
ಪತಿಯ ಪ್ರೋತ್ಸಾಹ, ಮಕ್ಕಳ ಸಹಕಾರ, ಮನೆಯ ಹಿರಿಯರ ಬೆಂಬಲದಿಂದ ಈ ನಿರ್ಧಾರ ಕೈಗೊಂಡೆ. ನನ್ನ ಪತಿ ನಿತ್ಯ ಓದಲು ಪ್ರೋತ್ಸಾಹಿಸುತ್ತಾರೆ. ಅಲ್ಲದೇ ಮಗಳು, ಮಗ ನನ್ನ ಓದಿಗೆ ಸಹಕಾರ ನೀಡಿದ್ದಾರೆ. ಇದೇ ರೀತಿ ಪ್ರೋತ್ಸಾಹ ದೊರೆಯುವುದರಿಂದ ನಾನು ಪದವಿ ಮುಗಿಸುವವರೆಗೆ ವಿಶ್ರಮಿಸುವುದಿಲ್ಲ ಎಂದು ರಜ್ನಿ ಬಲಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನನ್ನ ಪತ್ನಿ ಬೆಳಗ್ಗೆ ಬೇಗ ಎದ್ದು ಮಗನೊಂದಿಗೆ ಟ್ಯೂಷನ್ ಗೆ ಹೋಗುವುದು, ಶಾಲೆಗೆ ಹೋಗುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಅವಳು ಶಾಲೆ ಪೂರ್ಣಗೊಳಿಸುವುದು ನಮ್ಮೆಲ್ಲರ ಆಶಯವಾಗಿತ್ತು. ಅದು ಪೂರ್ಣವಾಗುತ್ತಿದೆ. ನಮಗೆಲ್ಲರಿಗೂ ತೀವ್ರ ಸಂತೋಷವಾಗುತ್ತಿದೆ ಎಂದು ರಜ್ನಿ ಅವರ ಪತಿ ರಾಜಕುಮಾರ ಸಾಥಿ ಬೆಂಬಲಿಸಿದ್ದಾರೆ.
Leave A Reply