1 ಲಕ್ಷ ಉದ್ಯೋಗ ಸೃಷ್ಟಿಗೆ ಚಿಂತನೆ, ಹೊಸ ಭಾಷ್ಯ ಬರೆದ ಮಧ್ಯಪ್ರದೇಶ ಬಿಜೆಪಿ ಸರ್ಕಾರ
ಭೋಪಾಲ್: ಯಾವುದೇ ರಾಜ್ಯ ಸರ್ಕಾರವಿರಲಿ, ತಾನು ಆಡಳಿತ ನಡೆಸಿದ ಅವಧಿಯಲ್ಲಿ ಇಷ್ಟು ಉದ್ಯೋಗ ಸೃಷ್ಟಿಸಿದ್ದೇವೆ ಎಂದು ಹೇಳುತ್ತದೆಯೇ ಹೊರತು, ಒಂದೇ ದಿನ ಒಂದು ಲಕ್ಷ ಉದ್ಯೋಗ ಸೃಷ್ಟಿಸುತ್ತೇನೆ ಎಂದು ಘೋಷಿಸುವುದು ಕಷ್ಟಸಾಧ್ಯ. ಆದರೆ ಈ ಕಷ್ಟಸಾಧ್ಯವನ್ನೂ ಮಧ್ಯಪ್ರದೇಶ ಬಿಜೆಪಿ ಸರ್ಕಾರ ಸರಳಗೊಳಿಸಿದ್ದು, ಒಂದು ಲಕ್ಷ ಉದ್ಯೋಗ ಸೃಷ್ಟಿಸುವುದಾಗಿ ಘೋಷಿಸಿದೆ.
ಹೌದು, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇಂತಹ ಮಹತ್ತರ ನಿರ್ಧಾರ ಘೋಷಿಸಿದ್ದು, ರಾಜ್ಯದ 51 ಜಿಲ್ಲೆಗಳಲ್ಲಿ ಮಹಾಪಂಚಾಯಿತಿ ಸೃಷ್ಟಿಸಿ, ಸುಮಾರು 1 ಲಕ್ಷ ಯುವಕರಿಗೆ ಉದ್ಯೋಗ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಕುರಿತು ಮಧ್ಯಪ್ರದೇಶ ಕೌಶಲ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿ ಮಂಡಳಿಯು ಪುಣೆ ಮೂಲದ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಖಾಸಗಿ ಮತ್ತು ಸರ್ಕಾರಿ ಸಹಭಾಗಿತ್ವದಲ್ಲಿ ಮಹಾ ಪಂಚಾಯಿತಿ ಸ್ಥಾಪನೆ ಮಾಡಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈನಲ್ಲಿ ರಾಜ್ಯದ 51 ಜಿಲ್ಲೆಗಳಲ್ಲಿ ಮಹಾಪಂಚಾಯಿತಿ ಸ್ಥಾಪನೆ ಮಾಡಲಿದ್ದು, ಖಾಸಗಿ ಸಹಭಾಗಿತ್ವಕ್ಕಾಗಿ ಸುಮಾರು ಒಂದು ಸಾವಿರ ಖಾಸಗಿ ಕಂಪನಿಗಳಿಗೆ ಮಂಡಳಿ ಆಹ್ವಾನ ನೀಡಿದೆ. ಸ್ಥಾಪನೆ ಮಾಡುವ ಕುರಿತು ಇದುವರೆಗೂ ದಿನಾಂಕ ನಿಗದಿಯಾಗಿಲ್ಲ ಎಂದು ತಿಳಿದುಬಂದಿದೆ.
ಮಧ್ಯಪ್ರದೇಶದಲ್ಲಿ ಸುಮಾರು 11.24 ಲಕ್ಷ ಪದವೀಧರ ಯುವಕರು ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು 2018ರ ಎಕನಾಮಿಕ್ ಸಮೀಕ್ಷೆಯಿಂದ ಬಹಿರಂಗವಾಗಿದ್ದು, ಈ ಸಮಸ್ಯೆ ನಿವಾರಣೆಗಾಗಿ ರಾಜ್ಯ ಸರ್ಕಾರ ಒಂದು ಲಕ್ಷ ಉದ್ಯೋಗ ಸೃಷ್ಟಿಗೆ ಮುಂದಾಗಿದೆ. ಅಲ್ಲದೆ 51 ಜಿಲ್ಲೆಗಳಲ್ಲಿ ಮಹಾಪಂಚಾಯಿತಿ ನಿರ್ಮಾಣ ಮಾಡುವುದರಿಂದ ಅಧಿಕಾರದ ವಿಕೇಂದ್ರೀಕರಣ ಹಾಗೂ ಸ್ಥಳೀಯ ಆಡಳಿತ ಬಲವಾಗಲಿದೆ ಎಂದೇ ಹೇಳಲಾಗುತ್ತಿದೆ.
Leave A Reply