ಅಕ್ರಮವಾಗಿ ಮಸೀದಿ, ಮದರಸಾ ನಿರ್ವಹಣೆ, ಉತ್ತರ ಪ್ರದೇಶದಲ್ಲಿ ಕಟ್ಟಡ ಜಪ್ತಿ ಮಾಡಿದ ಜಿಲ್ಲಾಡಳಿತ!
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಯಾದ ಬಳಿಕ ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಮಸೀದಿಗಳು ಹಾಗೂ ಅಕ್ರಮ ಕಸಾಯಿಗಳಿಗೆ ಬೀಗ ಹಾಕಿಸುವ ಮೂಲಕ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದರು, ಅಲ್ಲದೆ ಮಸೀದಿಗಳಲ್ಲಿ ಬರೀ ಧರ್ಮಬೋಧನೆ ಬದಲಿಗೆ ಎನ್ಸಿಇಆರ್ಟಿ ಪಠ್ಯ ಬೋಧಿಸುವಂತೆ ಆದೇಶಿಸಿ ಮುಸ್ಲಿಮರ ಶೈಕ್ಷಣಿಕ ಏಳಿಗೆಗೆ ಕಾರಣರಾಗಿದ್ದರು.
ಆದರೂ ಕೆಲವೆಡೆ ಅಕ್ರಮವಾಗಿ ಮದರಸಾಗಳನ್ನು ನಿರ್ವಹಣೆ ಮಾಡಲಾಗುತ್ತಿದೆ ಎಂಬ ಆರೋಪಗಳು ಇತ್ತೀಚೆಗೆ ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಜಿಲ್ಲಾಡಳಿತ ಸಿದ್ಧಾರ್ಥ ನಗರದ ಕಟ್ಟಡವೊಂದರಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದೆ ಎನ್ನಲಾದ ಮದರಸಾ/ಮಸೀದಿಗೆ ಬೀಗ ಜಡಿದಿದ್ದಾರೆ.
ಸಿದ್ಧಾರ್ಥ ನಗರದ ಕಟ್ಟಡವೊಂದರಲ್ಲಿ ವಸತಿಗಾಗಿ ಸರ್ಕಾರದಿಂದ ಅನುಮತಿ ಪಡೆದು ಈಗ ಅಕ್ರಮವಾಗಿ ಮಸೀದಿ ಹಾಗೂ ಮದರಸಾ ನಡೆಸಲಾಗುತ್ತಿದೆ. ನೆಲಮಹಡಿಯಲ್ಲಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ಕಪಿಲವಸ್ತು ಬಿಜೆಪಿ ಶಾಸಕ ಶ್ಯಾಮ್ ಧಣಿ ಆರೋಪಿಸಿದ್ದರು.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಟ್ಟಡ ಪರಿಶೀಲಿಸಿದ್ದು, ಈಗ ಬೀಗ ಜಡಿದಿದ್ದಾರೆ. ಅಲ್ಲದೆ ಈ ಕುರಿತು ಪ್ರಕರಣ ಸಹ ದಾಖಲಾದ ಹಿನ್ನೆಲೆಯಲ್ಲಿ ಕಟ್ಟಡದ ಮಾಲೀಕ ಹಸ್ಮುಲ್ಲಾ ಹಾಗೂ ಆತನ ಮೊಮ್ಮಕ್ಕಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಮಾಲೀಕ ಹಸ್ಮುಲ್ಲಾ, ಆತನ ಮೊಮ್ಮಕ್ಕಳಾದ ಸೈಫುದ್ದೀನ್ ಹಾಗೂ ಕಮ್ರುದ್ದೀನ್ ಎಂಬುವವರ ವಿರುದ್ಧ ಭಾರತೀಯ ದಂಡ ಸಂಹಿತೆ ಕಾಯಿದೆಯ ಸೆಕ್ಷನ್ 295 ಹಾಗೂ 295 ಎ ಅನ್ವಯ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಆದಾಗ್ಯೂ ಕಟ್ಟಡದ ಮಾಲೀಕ ಈ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಸಾರ್ವಜನಿಕರಿಗಾಗಿ ಮಸೀದಿ ನಡೆಸಲಾಗುತ್ತಿದೆ. ಮದರಸಾ ನಡೆಸುವ ಕುರಿತು ಉತ್ತರ ಪ್ರದೇಶ ಮದರಸಾ ಬೊರ್ಡ್ ನಿಂದ ಅನುಮತಿ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ಸರಿಯಾದ ದಾಖಲೆ ಸಿಗದ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಚಿತ್ರಕೃಪೆ-ಅಂತರ್ಜಾಲ
Leave A Reply