ಹಾರ, ತುರಾಯಿಯ ಸಮಯ ಮುಗಿಯಿತು, ಇನ್ನು ಡೆಡ್ ಲೈನ್ ಸ್ಟಾರ್ಟ್!!
ಮಂಗಳೂರು ನಗರ ದಕ್ಷಿಣದ ಶಾಸಕ ವೇದವ್ಯಾಸ ಕಾಮತ್ ಅವರು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರನ್ನು ಮತ್ತು ಇಂಜಿನಿಯರಿಂಗ್ ಹಾಗೂ ಆರೋಗ್ಯ ವಿಭಾಗದ ಅಧಿಕಾರಿಗಳನ್ನು ಕೂರಿಸಿ ಸಭೆ ನಡೆಸಿದ್ದಾರೆ. ತಮ್ಮ ಹಿಂದಿನ ಶಾಸಕರ ಸಮಯದಲ್ಲಿ ಯಾವ ಕೆಲಸಗಳು ಆಗಿರಲಿಲ್ಲವೋ ಮತ್ತು ಯಾವುದರಿಂದ ಜನ ರೊಚ್ಚಿಗೆದ್ದಿದ್ದರೋ ಅದೇ ವಿಷಯವನ್ನು ಮೊದಲು ತೆಗೆದುಕೊಂಡಿದ್ದಾರೆ. ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಡ್ರೈನೇಜ್ ಗೆ ಸಂಬಂಧಪಟ್ಟ ಯಾವ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಮತ್ತು ಯಾವುದು ಅರ್ಧಕ್ಕೆ ನಿಂತಿವೆ ಮತ್ತು ಯಾವ ವಾರ್ಡಿನಲ್ಲಿ ಡ್ರೈನೇಜ್ ನೀರು ತೆರೆದ ಚರಂಡಿಗಳಲ್ಲಿ ಹೋಗುತ್ತಿವೆ ಎನ್ನುವುದರ ಕುರಿತು ಮಾಹಿತಿಯನ್ನು 7 ದಿನಗಳೊಳಗೆ ತನಗೆ ನೀಡಬೇಕು. ಒಳಚರಂಡಿ ವ್ಯವಸ್ಥೆಯಿಂದ ಅಧಿಕಾರಿಗಳು ತೆರೆದ ಚರಂಡಿಗೆ ಕನೆಕ್ಷನ್ ಕೊಟ್ಟಿರುವುದರಿಂದ ವಾತಾವರಣ ಗಬ್ಬುವಾಸನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಇದನ್ನು ಪತ್ತೆ ಹಚ್ಚಿ ಚರಂಡಿಗೆ ಬರುವುದನ್ನು ತಡೆಗಟ್ಟಲು ಕೂಡಲೇ ಕ್ರಮಕೈಗೊಳ್ಳಬೇಕು, ಕಲುಷಿತಗೊಂಡಿರುವ ಬಾವಿಗಳನ್ನು ದುರಸ್ತಿಗೊಳಿಸುವುದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಸೂಚಿಸಿದ್ದಾರೆ. ಒಳ್ಳೆಯ ವಿಷಯ.
ಫಾಲೋ ಅಪ್ ಆಗಬೇಕು….
ಹಾಗೆ ಎಸ್ ಎಫ್ ಸಿ ಫಂಡ್, ಮುಖ್ಯಮಂತ್ರಿ 100 ಕೋಟಿ ಅನುದಾನ, 13/14ನೇ ಹಣಕಾಸು ಯೋಜನೆ, ಅಮೃತ ಯೋಜನೆ, 2ನೇ ಎಡಿಬಿ ಯೋಜನೆಯ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಈ ಅನುದಾನದಡಿಯಲ್ಲಿ ಕಾಮಗಾರಿ ಮುಗಿಸಿರುವ ಮತ್ತು ಚಾಲನೆಯಲ್ಲಿ ಇರುವ ಬಗ್ಗೆ ಮಾಹಿತಿ ಕೊಡಬೇಕು ಮತ್ತು ಪ್ರಾರಂಭವೇ ಆಗಿಲ್ಲ ಎಂದಾದರೆ ಅದರ ಕಾರಣಗಳನ್ನು ತಿಳಿಸಿ ಒಂದು ವಾರದ ಒಳಗೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು. ಆಗಬೇಕಾಗಿರುವ ಕಾಮಗಾರಿಗಳನ್ನು ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲಿಸಿ ಶೀಘ್ರದಲ್ಲಿ ಆಗುವ ಹಾಗೆ ನೋಡಿಕೊಳ್ಳಬೇಕು ಎಂದು ಆದೇಶ ನೀಡಿದ್ದಾರೆ. ಯಾವೆಲ್ಲ ವಾರ್ಡುಗಳಲ್ಲಿ ಒಳಚರಂಡಿ ಸಮಸ್ಯೆಗಳು ಇವೆಯೋ ಅದನ್ನು ಸಮರೋಪಾದಿಯಲ್ಲಿ ನಡೆಸಿ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಲಾಗಿದೆ. ಮಂಗಳೂರು ನಗರ ದಕ್ಷಿಣದ 38 ವಾರ್ಡುಗಳಲ್ಲಿ 24*7 ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಯಾವ ವಾರ್ಡುಗಳಿಗೆ ಕುಡಿಯುವ ನೀರಿನ ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ, ಅಂತಹ ವಾರ್ಡುಗಳಲ್ಲಿ ಇರುವ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ ಹಂತ ಹಂತವಾಗಿ ಅದನ್ನು ಪರಿಹರಿಸಲು ನೀರು ಸರಬರಾಜು ವಿಭಾಗದ ಇಂಜಿನಿಯರ್ ಗಳಿಗೆ ಆದೇಶ ನೀಡಿದ್ದಾರೆ.
ಡೆಡ್ ಲೈನ್ ಇಟ್ಟು ಈ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ತೆಗೆದುಕೊಳ್ಳಿ ಯಾವುದಾದರೂ ಒಂದು ವಾರ್ಡಿನಲ್ಲಿ 24*7 ನೀರು ಬರುವ ವ್ಯವಸ್ಥೆಯನ್ನು ಮಾಡಿ ಮಾದರಿ ವಾರ್ಡ್ ಆಗಿ ರೂಪಿಸಬೇಕು ನಂತರ ಹಂತಹಂತವಾಗಿ ಒಂದೊಂದೇ ವಾರ್ಡುಗಳಿಗೆ 24*7 ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು. ಇದಕ್ಕೆ ಒಂದು ವರ್ಷದ ಒಳಗೆ ಸಮರ್ಪಕವಾಗಿ ಯೋಜನೆ ಕಾರ್ಯಗತಗೊಳಿಸಬೇಕು. ಹೀಗೆ ಮಾಡಲು ನಿಮಗೆ ಏನಾದರೂ ತೊಂದರೆ ಇದ್ದರೆ ಸರಕಾರದ ವತಿಯಿಂದ ಬೇಕಾದ ಕೆಲಸಗಳನ್ನು ಮಾಡಿಕೊಡುತ್ತೇನೆ, ಜನರಿಗೆ ಕುಡಿಯುವ ನೀರಿನ ಸಮಸ್ಯೆ ಇನ್ನು ಮುಂದೆ ಬರಬಾರದು, ಅದಕ್ಕೆ ಬೇಕಾದ ಕಾರ್ಯಯೋಜನೆ ಬೇಗ ರೂಪಿಸಬೇಕು ಎಂದು ಸೂಚನೆ ನೀಡಿದ್ದಾರೆ. ಪಾಲಿಕೆಗೆ ಸೇರಿದಂತಹ ಒವರ್ ಹೆಡ್ ಟ್ಯಾಂಕ್ ಗಳು, ಸಂಪುಗಳ ಕ್ಲೀನಿಂಗ್ ಎಷ್ಟೋ ವರ್ಷಗಳಿಂದ ಆಗಿಲ್ಲ ಎಂದು ಗಮನಕ್ಕೆ ಬಂದಿದೆ. ಆದ್ದರಿಂದ ಕೂಡಲೇ, ತುಂಬೆಯಿಂದ ನೀರು ಪೂರೈಕೆಯಾಗುವ ರೂಟ್ ಗಳ ಪ್ರಕಾರ ಒವರ್ ಹೆಡ್ ಟ್ಯಾಂಕ್ ಗಳು, ಸಂಪುಗಳ ಕ್ಲೀನಿಂಗ್ ಮಾಡಲು ವ್ಯವಸ್ಥೆ ಮಾಡಬೇಕು.
ಸರಕಾರ ಬರುವಷ್ಟು ದಿನ ಬರಲಿ, ಕೆಲಸ ಆಗುತ್ತಿರಲಿ…
ಇದೆಲ್ಲವೂ ಒಕೆ. ಆದರೆ ಇವೆಲ್ಲವೂ ಕೇವಲ ಸಭೆಗಳಿಗೆ ಸೀಮಿತವಾಗಬಾರದು. ಯಾಕೆಂದರೆ ಶಾಸಕ ವೇದವ್ಯಾಸ ಕಾಮತ್ ಅವರಿಗೆ ಗೊತ್ತಿರಬಹುದು. ನಮ್ಮ ಪಾಲಿಕೆಯ ಅಧಿಕಾರಿಗಳು ದಪ್ಪ ಚರ್ಮದವರು. ಇವರ ಹಿಂದೆ ಚಾಟಿ ಹಿಡಿದು ನಿಲ್ಲದಿದ್ದರೆ ಇವರು ಓಡುವುದಿಲ್ಲ. ಆಗಾಗ ಫಾಲೋ ಅಪ್ ಆಗುವ ಕೆಲಸ ನಡೆಯಬೇಕು. ಒಂದೊಂದೇ ವಾರ್ಡುಗಳನ್ನು ನೀರು, ಡ್ರೈನೇಜ್, ದಾರಿದೀಪದೊಂದಿಗೆ ಮಾದರಿ ವಾರ್ಡುಗಳನ್ನಾಗಿ ಮಾಡುವ ಗುರಿಯನ್ನು ಈ ಸಭೆಯಲ್ಲಿ ಇಟ್ಟುಕೊಳ್ಳಲಾಗಿದೆ. ಇನ್ನು ಶಾಸಕರು ಸರಕಾರಿ ಕಚೇರಿ, ಪಾಲಿಕೆಯ ಆರೋಗ್ಯ ವಿಭಾಗ, ತಾಲೂಕು ಆಫೀಸ್, ಆರ್ ಟಿಒ, ಜಿಲ್ಲಾಧಿಕಾರಿ ಕಚೇರಿಗಳಿಗೆ ಧೀಡೀರ್ ಭೇಟಿ ಕೊಟ್ಟು ಅಲ್ಲಿ ಜಡ್ಡುಗಟ್ಟಿರುವ ವ್ಯವಸ್ಥೆಯನ್ನು ಪರಿಶೀಲಿಸಬೇಕು. ಅಲ್ಲಿ ಬಂದಿರುವ ಅರ್ಜಿಗಳನ್ನು ಗಮನಿಸಬೇಕು. ಕಳಪೆ ಕಾಮಗಾರಿ ಆಗಿರುವ ಕಡೆ ದೂರು ಬಂದರೆ ಅಲ್ಲಿಯೇ ಅಧಿಕಾರಿಗಳನ್ನು ಲೆಫ್ಟ್ ರೈಟ್ ಮಾಡಬೇಕು. ನೀವು ಅನಿಲ್ ಕಪೂರ್ ಅಭಿನಯದ “Nayak” ಸಿನೆಮಾ ನೋಡಿರಬೇಕು. ವಾಸ್ತವತೆಗೂ ಸಿನೆಮಾಗೂ ಸಂಬಂಧವಿಲ್ಲ ಎನ್ನುವುದನ್ನು ನಾನು ಒಪ್ಪುತ್ತೇನೆ. ಆದರೆ ಜನ ಎಲ್ಲೆಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ ಎನ್ನುವುದು ಶಾಸಕರಾದವರಿಗೆ ಗೊತ್ತಿರಬೇಕು. ಕೆಲಸ ಮಾಡದ ಅಧಿಕಾರಿಗಳ ಮೇಲೆ ದಾಕ್ಷ್ಮಿಣ್ಯ ಪಡುವ ಅಗತ್ಯವೇ ಇಲ್ಲ. ಅವರು ಸಂಬಳ ಪಡೆಯುತ್ತಿರುವುದು ನಮ್ಮ ತೆರಿಗೆಯ ಹಣದಿಂದ. ಕೆಲಸ ಮಾಡುವುದಕ್ಕೆನೆ ಅವರು ಇರುವುದು.
ಶಾಸಕರೇ, ಹಾರ, ತುರಾಯಿ ಹಾಕಿಕೊಂಡು ಸನ್ಮಾನ, ಅಭಿನಂದನೆಯ ಅವಧಿ ಮುಗಿದಿದೆ. ಅದಕ್ಕೆ ಒಂದು ತಿಂಗಳು ಕೊಟ್ಟಿದ್ದೇವೆ. ಇನ್ನೇನಿದ್ದರೂ ಡೆಡ್ ಲೈನ್ ಕೊಡುವುದು, ಕೆಲಸ ಮಾಡಿಸುವುದು ಅಷ್ಟೇ ಉಳಿದಿರುವುದು. ಆಗದಿದ್ದರೆ ಯಾಕೆ ಆಗಲಿಲ್ಲ ಎನ್ನುವುದಷ್ಟೇ ಅಧಿಕಾರಿಗಳು ಹೇಳಬೇಕು. ಅಧಿಕಾರಿಗಳಿಗೆ, ಪಾಲಿಕೆಯ ಸಿಬ್ಬಂದಿಗಳಿಗೆ ಯಾವುದಾದರೂ ಕೆಲಸ ಮಾಡಲು ಸರಕಾರದಿಂದ ಏನಾದರೂ ಬೇಕಾದರೆ ಹೇಳಿ, ಮಾಡಿಸಿ ತರುತ್ತೇನೆ ಎಂದು ತಾವು ಹೇಳಿದ್ದಿರಿ. ಆದ್ದರಿಂದ ಪ್ರತಿಯೊಂದು ದಿನವೂ ಮುಖ್ಯವಾಗಿದೆ. ಸರಕಾರ ಎಷ್ಟು ದಿನ ಬರುತ್ತೋ ಬರಲಿ. ಬಂದಷ್ಟು ದಿನ ಸರಿಯಾಗಿ ಜನರಿಗಾಗಿ ಕೆಲಸ ಮಾಡಿದ್ದೇನೆ ಎನ್ನುವ ತೃಪ್ತಿ ನಿಮಗೆ ಇರಲಿ!
Leave A Reply