ಕೃತಕ ನೆರೆಗೆ ಪರಿಹಾರ ಮಾಡಲು ಮನವಿ ಮಾಡಿ ಮೂರು ವಾರವಾಯಿತು, ಸುದ್ದಿ ಇಲ್ಲ!!
ಇವತ್ತು ಕೆಲವು ಏಕ್ಸಕ್ಲೂಸಿವ್ ಫೋಟೋಗಳನ್ನು ನಾನು ಪೋಸ್ಟ್ ಮಾಡಿದ್ದೇನೆ. ಮಂಗಳೂರಿನ ನಾಗರಿಕರು ಕೃತಕ ನೆರೆಗೆ ಪಡಬಾರದ ಕಷ್ಟಪಡುತ್ತಿದ್ದಾರಲ್ಲ, ಅದಕ್ಕೆ ಏನು ಕಾರಣ ಎನ್ನುವುದನ್ನು ಈ ಫೋಟೋಗಳು ಹೇಳುತ್ತವೆ. ನಾನು ಈ ಬಗ್ಗೆ ಅನೇಕ ಬಾರಿ ಬರೆದಿದ್ದೇನೆ. ಆದರೆ ಈ ಸಮಸ್ಯೆ ಪ್ರತಿ ಮಳೆಗಾಲಕ್ಕೆ ಬಂದೇ ಬರುತ್ತದೆ. ಆದರೆ ಮಂಗಳೂರು ಮಹಾನಗರ ಪಾಲಿಕೆಯ ಅತೀ ಬುದ್ಧಿವಂತ ಅಧಿಕಾರಿಗಳಿಗೆ ಮಾತ್ರ ಈ ಬಗ್ಗೆ ಗೊತ್ತೆ ಆಗುವುದಿಲ್ಲ. ಮಂಗಳೂರಿನ ಅನೇಕ ರಸ್ತೆಗಳು ಅರ್ಧ ಘಂಟೆ ಜೋರು ಮಳೆ ಬಂದರೆ ತಾತ್ಕಾಲಿಕ ಸರಕಾರಿ ಈಜು ಕೊಳಗಳಾಗಿ ಪರಿವರ್ತನೆಗೊಳ್ಳುತ್ತದೆ. ಒಂದು ಸಣ್ಣ ಮಗು ಆರಾಮವಾಗಿ ಈಜಬಹುದಾಗಿರುವಷ್ಟು ನೀರು ನಿಲ್ಲುತ್ತದೆ. ಮಂಗಳೂರಿನ ಹೆಚ್ಚಿನ ರಸ್ತೆಗಳು ರೋಡ್ ಕಮ್ ಸ್ವಿಮ್ಮಿಂಗ್ ಫೂಲ್ ಆಗಲು ಕಾರಣಗಳೇನು ಎಂದರೆ ನಮ್ಮ ಪಾಲಿಕೆಯಲ್ಲಿ ಇರುವವರಿಗೆ ಸಾಮಾನ್ಯ ಜ್ಞಾನದ ಕೊರತೆ. ಇವರು ಕಣ್ಣು ತೆರೆದು ಮಲಗಿರುವುದರಿಂದ ಎಲ್ಲರೂ ಇವರು ಕೆಲಸ ಮಾಡುತ್ತಿದ್ದಾರೆಂದೆ ಅಂದುಕೊಂಡಿರುತ್ತಾರೆ. ಆದರೆ ಇವರು ಒಳಗೆ ನಿದ್ರೆ ಹೋಗಿದ್ದಾರೆ. ಇವರನ್ನು ಎಬ್ಬಿಸಲು ಸಾಧ್ಯವೇ ಇಲ್ಲ.
ಈ ಫೋಟೋಗಳನ್ನು ಇನ್ನೊಮ್ಮೆ ನೋಡಿ. ಈ ಫೋಟೋ ಯಾವ ರಸ್ತೆಯದ್ದು ಎನ್ನುವ ಅಗತ್ಯವೇ ಇಲ್ಲ. ಯಾಕೆಂದರೆ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಹೆಚ್ಚಿನ ರಸ್ತೆಗಳ ಪರಿಸ್ಥಿತಿ ಹೀಗೆ ಇದೆ. ಮಳೆಯ ನೀರು ರಸ್ತೆಯ ಮೇಲೆ ಬಿದ್ದರೆ ಅದು ಎಲ್ಲಿಗೆ ಹೋಗಬೇಕು ಎಂದು ಒಬ್ಬ ಕುರುಡನಿಗೆ ನೀವು ಕೇಳಿದ್ರೂ ಅದು ರಸ್ತೆಯ ಇಕ್ಕೆಲಗಳಲ್ಲಿರುವ ಚರಂಡಿಗೆ ಹೋಗಬೇಕು ಎಂದು ಆತ ಹೇಳುತ್ತಾನೆ. ಚರಂಡಿ ಇಲ್ಲದೇ ಅಲ್ಲಿ ಫುಟ್ ಪಾತ್ ಇದ್ದರೆ ಎಲ್ಲಿಗೆ ಹೋಗಬೇಕು ಎಂದು ಹೆಬ್ಬೆಟ್ಟು ಹಾಕುವ, ವಿದ್ಯಾಭ್ಯಾಸ ಇಲ್ಲದ ವ್ಯಕ್ತಿಗೆ ಕೇಳಿ ನೋಡಿ. ಆತ ಫುಟ್ ಪಾತ್ ಕೆಳಗಿರುವ ಚರಂಡಿಗೆ ಎನ್ನುತ್ತಾನೆ. ನೀರು ಇಳಿದು ಹೋಗಲು ಫುಟ್ ಪಾತ್ ಮತ್ತು ರಸ್ತೆಯ ನಡುವೆ ಫೋಟೋದಲ್ಲಿ ಇರುವಂತೆ ನೀರು ಸರಿಯಾಗಿ ಇಳಿದು ಹೋಗುವಷ್ಟು ದೊಡ್ಡ ತೂತು ಬೇಕೆ ಬೇಕು ಎನ್ನುವುದು ಸಾಮಾನ್ಯ ಜ್ಞಾನ. ನಮ್ಮ ಅಧಿಕಾರಿಗಳು ತೂತು ಇಟ್ಟಿದ್ದಾರೆ ಮತ್ತು ಪಾಲಿಕೆಗೆ ಹೋಗಿ ಮಲಗಿಕೊಂಡಿದ್ದಾರೆ. ಆದ್ದರಿಂದ ಸಮಸ್ಯೆ ಉದ್ಭವವಾಗಿದೆ.
ನೀರು ಹೋಗಲು ನೋ ಎಂಟ್ರಿ..
ಮಳೆಗಾಲ ಶುರುವಾಗುವ ಮೊದಲು ಪಾಲಿಕೆಯ ಅಧಿಕಾರಿಗಳು ಸಿಬ್ಬಂದಿಗಳನ್ನು ಕಳಿಸಿ ನೀರು ಚರಂಡಿಗೆ ಇಳಿದು ಹೋಗಲು ಫುಟ್ ಪಾತ್ ಗೆ ಇಟ್ಟಿರುವ ತೂತುಗಳಿಗೆ ಏನಾದರೂ ಅಡ್ಡ ಇದೆಯಾ ಎಂದು ನೋಡಬೇಕು. ಸಾಮಾನ್ಯವಾಗಿ ಇಂತಹ ತೂತುಗಳಲ್ಲಿ ಗಿಡಗಂಟಿಗಳು ಬೆಳೆದು ಅವು ನೀರಿನ ಸಂಚಾರಕ್ಕೆ ಅಡ್ಡಿಯಾಗಿರುತ್ತವೆ. ಇನ್ನು ಹಲವು ಬಾರಿ ಗುಟ್ಕಾ ಪ್ಯಾಕೇಟುಗಳು, ಪಾನ್ ಬೀಡಾ ಪ್ಯಾಕೇಟುಗಳು, ಸಿಗರೇಟು ಪ್ಯಾಕೇಟುಗಳು ಆ ತೂತುಗಳಿಗೆ ಅಡ್ಡವಾಗಿ ನಿಂತು ನೀರಿಗೆ ನೋ ಎಂಟ್ರಿ ಕೊಟ್ಟಿರುತ್ತವೆ. ಇನ್ನು ಕೆಲವು ಬಾರಿ ಮರಳು, ಮಣ್ಣು ತೂತಿಗೆ ತಡೆಗೋಡೆಯಂತೆ ನಿಂತಿರುತ್ತವೆ. ಇದರಿಂದ ನೀರು ದಾರಿ ಕಾಣದೇ ಅಲ್ಲಿಯೇ ನಿಂತು ಬಿಡುತ್ತದೆ. ಒಂದು ರಸ್ತೆಯ ಅನೇಕ ಕಡೆ ಹೀಗೆ ತೂತುಗಳು ನಿಂತರೆ ಆಗ ನೀರು ಅಲ್ಲಿಂದ ಹಾರಿ ಹೋಗಿ ಪಕ್ಕದ ಚರಂಡಿಗೆ ಹೋಗಿ ಬೀಳಲು ಆಗುತ್ತಾ? ಆದ್ದರಿಂದ ನೀರು ಗೊಂದಲಕ್ಕೆ ಬಿದ್ದಿರುತ್ತದೆ. ಅರ್ಧ ಗಂಟೆ ಮಳೆ ಬಂದಾಗ ಹೀಗೆ ನಾವು ಹಲವು ಕಡೆ ಕೃತಕ ನೆರೆ ಕಾಣುತ್ತೇವೆ.
ಹೇಳುವವರಿಗೆ ಹೇಳಿಯಾಗಿದೆ, ಮರೆತಿದ್ದಾರಾ ಏನೋ….
ಈ ಬಗ್ಗೆ ನಾನು ನಾಗರಿಕ ಹಿತರಕ್ಷಣಾ ಸಮಿತಿಯ ವತಿಯಿಂದ ಇಪ್ಪತ್ತು ದಿನಗಳ ಹಿಂದೆನೆ ಮೌಖಿಕವಾಗಿ ಸಂಬಂಧಪಟ್ಟವರಿಗೆ ತಿಳಿಸಿದ್ದೇನೆ. ಅದರ ನಂತರ ಏನೂ ಆಗಿಲ್ಲ. ಎಮ್ಮೆ ಮೈಮೇಲೆ ಒಂದು ಬಕೆಟ್ ನೀರು ತಂದು ಸುರಿದರೂ ಅದಕ್ಕೆ ಗೊತ್ತಾಗುವುದಿಲ್ಲ. ಅದು ಎಲ್ಲಿಯೋ ಮಳೆ ಆಗುತ್ತಿದೆ ಎಂದೇ ಅಂದುಕೊಳ್ಳುತ್ತದೆ. ಹಾಗೆ ನಾನು ಮೌಖಿಕವಾಗಿ ಹೇಳಿದ್ದು ಯಾರಿಗೂ ಕಿವಿಗೆ ಹೋಗಿಲ್ಲ. ಬಹುಶ: ಅವರ ಕಿವಿಗಳ ತೂತುಗಳು ಕೂಡ ಯಾವುದೋ ಮರಳು, ಮಣ್ಣು ತುಂಬಿ ಮುಚ್ಚಿ ಹೋಗಿರಬೇಕು. ಅದರ ನಂತರ ನಾನು ಲಿಖಿತವಾಗಿ ಬರೆದು ಪಾಲಿಕೆಯ ಆಯುಕ್ತರಿಗೆ ತಿಳಿಸಿದೆ. ಒಂದು ವಾರದ ಮೇಲೆ ಆಯಿತು. ಏನೂ ಆಗಿಲ್ಲ.
ಮಾತನಾಡಿದರೆ ಇವರು ಸ್ಪೆಶಲ್ ಗ್ಯಾಂಗ್ ಬಗ್ಗೆ ಹೇಳುತ್ತಾರೆ. ಒಂದೊಂದು ಸ್ಪೆಶಲ್ ಗ್ಯಾಂಗಿಗೂ ತಿಂಗಳಿಗೆ ಒಂದು ಲಕ್ಷ ಹದಿನೆಂಟು ಸಾವಿರ ರೂಪಾಯಿ ಖರ್ಚಾಗುತ್ತದೆ. ಹಗಲಿಗೆ ಆರ್ವತ್ತು ಗ್ಯಾಂಗ್ ರಾತ್ರಿ ಮೂರು ಗ್ಯಾಂಗ್ ಕೆಲಸ ಮಾಡುತ್ತವೆ. ಗ್ಯಾಂಗುಗಳ ಬಿಲ್ ಆರಾಮವಾಗಿ ಪಾಲಿಕೆಯಲ್ಲಿ ಪಾಸ್ ಆಗುತ್ತಾ ಇರುತ್ತವೆ. ನೀರು ಹೋಗುವ ತೂತುಗಳನ್ನೇ ಕ್ಲೀನ್ ಮಾಡದ ಇಂತಹ ಗ್ಯಾಂಗ್ ಗಳು ಇನ್ನೇನೂ ಇಡೀ ದಿನ ಕುಳಿತುಕೊಂಡು ಏನು ಇಸ್ಪೀಟ್ ಆಡುತ್ತಾ ಇರುತ್ತಾರಾ? ಇವರನ್ನು ಸರಿಯಾಗಿ ಕೆಲಸ ಮಾಡಿಸಬೇಕಾದ ಪಾಲಿಕೆ, ಕಾರ್ಪೋರೇಟರ್ ಗಳು ಗ್ಯಾಂಗಿನ ಹಣದ ಲೆಕ್ಕಚಾರದಲ್ಲಿಯೇ ಬಿಝಿ ಇರುವುದರಿಂದ ನೀರು ರಸ್ತೆಯ ಮೇಲೆಯೇ ನಿಂತಿರುತ್ತದೆ. ಎಲ್ಲರೂ ಪಾಲಿಕೆಯಲ್ಲಿ ಕುಳಿತು ಪಟ್ಟಾಂಗ ಹಾಕುತ್ತಾ ಇರುತ್ತಾರೆ. ಜನರು ಮೊಣಕಾಲಿನ ತನಕ ನೀರು ನಿಂತಿರುವಾಗ ಕಷ್ಟಪಟ್ಟು ನಡೆಯುತ್ತಾ ಇರುತ್ತಾರೆ. ದ್ವಿಚಕ್ರ ವಾಹನ ಸವಾರರು, ರಿಕ್ಷಾ ಚಾಲಕರು, ಸಣ್ಣ ಕಾರಿನ ಮಾಲೀಕರು ಗಾಡಿಯೊಳಗೆ ನೀರು ಹೋಗಿ ಮತ್ತೆ ರಿಪೇರಿಗೆ ಹಣ ಹೊಂದಿಸುವುದು ಹೇಗೆ ಎನ್ನುವ ಟೆನ್ಷನ್ ನಲ್ಲಿ ಇರ್ತಾರೆ!
Leave A Reply