ಕರಾವಳಿ ನದಿಗಳು ಬತ್ತುತ್ತಿರುವುದಕ್ಕೆ ತಜ್ಞರು ಕೊಟ್ಟ ಉತ್ತರ ನೋಡಿ
ಮಂಗಳೂರು: ಕರಾವಳಿ ಭಾಗದ ನದಿಗಳಲ್ಲಿ ನೀರಿನ ಹರಿವು ದಿಢೀರ್ ಕುಸಿತವಾಗಿರುವುದಕ್ಕೆ ಕರಾವಳಿಯ ಜನರಲ್ಲಿ ಆತಂಕ ಮನೆಮಾಡಿದೆ. ದಕ್ಷಿಣ ಕನ್ನಡ ಮಾತ್ರವಲ್ಲದೇ ಉಡುಪಿ ಜಿಲ್ಲೆಯ ನದಿಗಳಲ್ಲೂ ನೀರಿನ ಹರಿವು ದಿಢೀರ್ ಕುಸಿದಿದೆ. ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ , ಕುಮಾರಧಾರಾ, ಪಯಸ್ವಿನಿ, ಗುಂಡ್ಯ ಸೇರಿದಂತೆ ಇನ್ನಿತರ ಉಪನದಿಗಳಲ್ಲಿ ನೀರಿನ ಹರಿವು ಉಹಿಸಲು ಸಾಧ್ಯವಾಗದ ಮಟ್ಟದಲ್ಲಿ ಕುಸಿದಿದೆ. ಉಡುಪಿಗೆ ನೀರುಣಿಸುವ ಸ್ವರ್ಣ ನದಿ ಬತ್ತಲಾರಂಭಿಸಿದೆ. ಹೆಬ್ರಿ ಭಾಗದಲ್ಲಿ ಜನವರಿ ಹಾಗು ಫೆಬ್ರವರಿವರೆಗೂ ಭರ್ತಿಯಾಗಿ ಹರಿಯುತ್ತಿದ್ದ ಸೀತಾ ನದಿಯಲ್ಲೂ ಕಲ್ಲು ಬಂಡೆ, ತಳ ಗೋಚರಿಸತೊಡಗಿದೆ.
ಮಳೆಗಾಲ ಮುಗಿಯುವ ಮೊದಲೇ ನದಿಗಳು ಹೀಗೆ ಬತ್ತುತ್ತಾ ಹೋದರೆ ಬೇಸಿಗೆಯಲ್ಲಿ ಪರಿಸ್ಥಿತಿ ಹೇಗಿರಬಹುದೆಂದು ಕರಾವಳಿಯ ಜನರಿಗೆ ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಉಭಯ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಕೂಡ ಕುಸಿದಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ ಆಕಾರಣ ಈಬಾರಿ ಬೇಸಿಗೆಯಲ್ಲಿ ನೀರಿನ ಸಮಸ್ಯೆಯ ಅಗಲಾರದು ಎಂದೇ ಭಾವಿಸಲಾಗಿತ್ತು. ಆದರೆ ಈಗ ನದಿಗಳು ಬತ್ತುತ್ತಿರುವುದು ಕರಾವಳಿಗರಲ್ಲಿ ಆತಂಕ ಮೂಡಿಸಿದೆ.
ಪ್ರಕೃತಿಯ ಮೇಲೆ ನಡೆದ ದೌರ್ಜನ್ಯದ ಫಲವೇನೋ ಎಂಬಂತೆ ಈ ಬಾರಿ ಧಾರಾಕಾರ ಮಳೆ ಸುರಿದಿತು. ಭಾರೀ ಮಳೆಗೆ ಗುಡ್ಡಗಳೇ ಕುಸಿದವು. ಕೆಲವೆಡೆ ಜಲಸ್ಫೋಟದಿಂದ ಆಸ್ತಿಪಾಸ್ತಿ ಸೇರಿದಂತೆ ಪ್ರಾಣಹಾನಿಗೂ ಈ ಬಾರಿಯ ಮಳೆ ಕಾರಣವಾಗಿತ್ತು. ಈಗ ಮಳೆ ನಿಂತಿದೆ ಆದರೆ ನದಿಯಲ್ಲಿ ಪ್ರವಾಹವಾಗಿ ಹರಿದ ಮಳೆ ನೀರು ಎಲ್ಲಿ ಹೋಯಿತು? ಎಂಬುದೇ ಜನರಿಗೆ ಯಕ್ಷ ಪ್ರಶ್ನೆಯಾಗಿ ಕಾಡತೊಡಗಿದ್ದು, ಈ ಕುರಿತು ತಜ್ಞರನ್ನು ಒನ್ ಇಂಡಿಯಾ ಮಾತನಾಡಿಸಿದಾಗ ಅವರಿಂದ ಬಂದ ಉತ್ತರ ಹೀಗಿತ್ತು.
ಕೃಷಿಗೆ ನೀರಿಲ್ಲದಿದ್ದರೆ ಗತಿ ಏನು?; ಸುಳ್ಯ, ಬೆಳ್ತಂಗಡಿ ಭಾಗದ ತೋಟಗಳ ಬದಿಯ ತೋಡಿನಲ್ಲಿ ನೀರಿಲ್ಲದೇ ಭಯಾನಕ ದೃಶ್ಯ ಎದುರಾಗಿದೆ. ಪರಿಸರದ ಚಿಕ್ಕ ಹೊಳೆಗಳಾದ ಗೌರಿ, ಮಡಾವು ಹೊಳೆಯಲ್ಲೂ ನೀರು ಬತ್ತತೊಡಗಿದೆ. ಮುಂದಿನ ದಿನಗಳಲ್ಲಿ ಕೃಷಿಗೆ ನೀರಿಲ್ಲದಿದ್ದರೆ ಗತಿ ಏನು ಎಂದು ಕೃಷಿಕರು ಈಗಲೇ ತಲೆ ಮೇಲೆ ಕೈಹೊತ್ತಿ ಕೂತಿದ್ದಾರೆ. ಪಶ್ಚಿಮ ಘಟ್ಟದ ತಪ್ಪಲು ಪ್ರದೇಶವಾದ ಸುಳ್ಯ, ಬೆಳ್ತಂಗಡಿ, ಸಂಪಾಜೆ, ಜಾಲ್ಸೂರು, ಗುತ್ತಿಗಾರು ಸೇರಿದಂತೆ ಇತರೆ ಕಡೆಗಳಲ್ಲಿ ಅಂತರ್ಜಲ ಇಲಾಖೆ ಅಂಕಿಅಂಶಗಳ ಅಧ್ಯಯ ನಡೆಸಿದ್ದು ಅಂತರ್ಜಲ ಮಟ್ಟ ಕುಸಿಯುತ್ತಿರುವುದು ಧೃಡ ಪಟ್ಟಿದೆ. ಕೆಲವೆಡೆ ಅಂತರ್ಜಲ ಮಟ್ಟ 2.45 ಮೀಟರ್ ಗಳಷ್ಟು ಕೆಳಗೆ ಹೋಗಿದೆ.
Leave A Reply