ಬಾವಿಗಳಿಗೆ ಬೆಳ್ಳಿಯ ರಿಂಗ್ ಹಾಕಿಸಿ ಚಿನ್ನದ ಲೇಪನ ಕೊಡುತ್ತಿರುವ ಪಾಲಿಕೆ!!
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷ ತನ್ನ ಕೊನೆಯ ಅವಧಿಯ ಉತರಾರ್ಧದಲ್ಲಿ “ಕೈ”ಗೆ ಸಿಕ್ಕಷ್ಟು ಬಾಚಿಕೊಳ್ಳುವ ಗಡಿಬಿಡಿಯಲ್ಲಿದೆ. ಪಂಕ್ತಿಯಲ್ಲಿ ಕುಳಿತು ಊಟ ಮಾಡುವಾಗ ಕೊನೆಯಲ್ಲಿ ಪಾಯಸ ಬಡಿಸುವ ವೇಳೆ ಬರುವಾಗ ಎಲೆಯಲ್ಲಿ ಉಳಿದ ಅನ್ನವನ್ನು ಬಾಯಿಗೆ ತುರುಕುವ ವೇಗ ಹೆಚ್ಚಾಗುತ್ತದೆ ಅಲ್ವಾ ಹಾಗೆ ಕಾಂಗ್ರೆಸ್ಸಿಗರು ವರ್ತಿಸುತ್ತಿದ್ದಾರೆ. ಮುಂದಿನ ಚುನಾವಣೆ ನಂತರ ಮತ್ತೆ ಈ ಜಾಗಕ್ಕೆ ಬರಲು ಆಗುತ್ತೋ ಇಲ್ಲವೋ ಎನ್ನುವ ಆತಂಕದಿಂದ ಎರಡು “ಕೈ”ಗಳಿಂದ ತಿನ್ನುವ ಧಾವಂತದಲ್ಲಿದ್ದಾರೆ. ಇಲ್ಲದೆ ಹೋದರೆ ಹದಿನಾಲ್ಕನೇ ಹಣಕಾಸು ಯೋಜನೆಯಲ್ಲಿ ಬಂದಿರುವ ಅನುದಾನದಲ್ಲಿ ಈ ಪರಿ ಲೂಟಿ ಹೊಡೆಯುವ ಐಡಿಯಾ ಮಾಡಿರುವುದು ಶುದ್ಧಾನುಶುದ್ಧ ತಪ್ಪು. ಸಾಮಾನ್ಯ ಜನರಿಗೆ ಇವರು ವೈಟ್ ಕಾಲರ್ ಅಡಿಯಲ್ಲಿ ಮಾಡುವ ಭ್ರಷ್ಟಾಚಾರ ಗೊತ್ತಾಗದೇ ಇರುವುದರಿಂದ ಇವರು ಬಿಳಿ ಶರ್ಟಿನ ಹಿಂದಿನ ಕಪ್ಪು ಬಣ್ಣ ಪ್ರಪಂಚಕ್ಕೆ ಗೊತ್ತಾಗುವುತ್ತಿಲ್ಲ.
ನಿಯಮ ಉಲ್ಲಂಘಿಸಿ ಕಾಮಗಾರಿ ಮಾಡುವ ಅಗತ್ಯ…
ಯಾವುದೇ ಒಂದು ಕಾಮಗಾರಿ ಮಾಡುವಾಗ ಅದನ್ನು ಪಾಲಿಕೆಯ ಪರಿಷತ್ ಸಭೆಯಲ್ಲಿ ಮಂಡಿಸುವುದು ಅತ್ಯಗತ್ಯ. ಅದರ ನಂತರ ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಸಿ ಅದನ್ನು ಜಿಲ್ಲಾಧಿಕಾರಿಗೆ ಕಳುಹಿಸಿ ಅದರ ನಂತರ ಅನುಮೋದನೆ ಎಲ್ಲ ಪಡೆದು ಕಾಮಗಾರಿ ನಡೆಯುತ್ತದೆ. ಇದು ಪ್ರತಿ ಸಲ ನಡೆದುಕೊಂಡು ಬಂದಿರುವ ಸಂಪ್ರದಾಯ ಮತ್ತು ಇದು ಹೀಗೆ ಆಗಬೇಕು. ಆದರೆ ಇತ್ತೀಚೆಗೆ ಪಾಲಿಕೆಯಲ್ಲಿ ಇದು ಆಗುತ್ತಿಲ್ಲ. ಹೆಚ್ಚಿನ ಕಾಮಗಾರಿಗಳಿಗೆ ಇವರು ಎಲ್ಲವೂ ಮುಗಿದು ಕೊನೆಯಲ್ಲಿ ಅನುಮತಿ ಪಡೆಯುವ ಕೆಲಸ ಮಾಡುತ್ತಿದ್ದಾರೆ. ಇದನ್ನು ನೀವು ಸುಲಭವಾಗಿ ಅರ್ಥ ಮಾಡುವುದು ಹೇಗೆ ಎಂದು ವಿವರಿಸುತ್ತೇನೆ. ಒಂದು ಗಂಡು ಮತ್ತು ಒಂದು ಹೆಣ್ಣು ಮೊದಲಿಗೆ ಮಿಲನ ಹೊಂದಿ, ಆಕೆ ಗರ್ಭಿಣಿ ಆಗಿ ಮಗುವನ್ನು ಹೆತ್ತ ಬಳಿಕ ಪೋಷಕರ ಬಳಿ ಬಂದು ನಮಗೆ ಎಂಗೆಜ್ ಮೆಂಟ್ ಮಾಡಿ ಎಂದು ಹೇಳುವ ಹಾಗೆ. ಹೇಗೆ ಮೇಲಿನದ್ದೂ ಈ ಸಭ್ಯ ಸಮಾಜದಲ್ಲಿ ನೈತಿಕ ಅಲ್ಲವೋ ಹಾಗೆ ಮೊದಲಿಗೆ ಕಾಮಗಾರಿ ಮಾಡಿ ನಂತರ ಅನುಮತಿ ಪಡೆಯಲು ಬರುವುದು ಕೂಡ ಅನೈತಿಕ ಮಾರ್ಗ. ಪಾಲಿಕೆಯಲ್ಲಿ ಹೀಗೆ ನಡೆಯುವುದರಿಂದ ಯಾವ ಕಾಮಗಾರಿ ಎಷ್ಟು ಕಡಿಮೆಯಲ್ಲಿ ಆಗಬೇಕಿತ್ತೋ ಅದರ ಎಷ್ಟೋ ಪಾಲು ಹೆಚ್ಚಾಗುತ್ತಿದೆ. ಜನರ ತೆರಿಗೆಯ ಹಣ ಪೋಲಾಗುತ್ತಿದೆ. ಎಲ್ಲಾ ಕಾಮಗಾರಿ ಮುಗಿದ ನಂತರ ಅದಕ್ಕೆ ಎಷ್ಟು ಖರ್ಚಾಗಿದೆಯೋ ಅಷ್ಟಕ್ಕೆ ಬಿಡ್ ಮಾಡಲಾಗುತ್ತಿದೆ. ಅದರಿಂದ ಏನಾಗುತ್ತೆ ಎಂದರೆ ಮೊದಲೇ ಟೆಂಡರ್ ಪ್ರಕ್ರಿಯೆ ಕರೆದಿದ್ದರೆ ಆಗ ಬೇರೆ ಯಾರಾದರೂ ಕಡಿಮೆಗೆ ಬಿಡ್ ಮಾಡುವ ಸಂದರ್ಭ ಇರುತ್ತಿತ್ತು. ಆದರೆ ಇವರು ಯಾರಿಗೋ ತಮ್ಮವರಿಗೆ ಕಾಮಗಾರಿ ಕೊಟ್ಟು ನಂತರ ಅದು ಮುಗಿದ ಬಳಿಕ ಹೀಗೆ ಮಾಡಿದರೆ ಆಗ ಬೇರೆಯವರಿಗೆ ಕಡಿಮೆ ಖರ್ಚಿನಲ್ಲಿ ಕೆಲಸ ಮುಗಿಸುವ ಅವಕಾಶ ಸಿಗುವುದಿಲ್ಲ.
ಬಾವಿ ದುರಸ್ತಿ, ಸ್ವಚ್ಛತೆಗೆ ಎಷ್ಟು ಹಣ?
ಉದಾಹರಣೆಗೆ ಇವರು ಏನು ಮಾಡಿದ್ದಾರೆ ಎಂದರೆ ಬಾವಿಗಳನ್ನು ದುರಸ್ತಿ ಮಾಡಿ ಸ್ವಚ್ಚತೆ ಮಾಡಲು ಐದು ಲಕ್ಷ ಇಟ್ಟಿದ್ದಾರೆ. ಅಂದರೆ ಮಂಗಳೂರು ನಗರದ ಎಲ್ಲಾ ಬಾವಿಗಳನ್ನು ಇವರು ಐದು ಲಕ್ಷ ರೂಪಾಯಿಗಳಲ್ಲಿ ಸ್ವಚ್ಚ ಮಾಡಲು ತೀರ್ಮಾನಿಸಿದ್ದಾರೆ ಎಂದಲ್ಲ. ಒಂದು ವೇಳೆ ಹಾಗಿದ್ದರೆ ಇವರು ಒಳ್ಳೆಯ ಕೆಲಸ ಮಾಡಲು ಹೊರಟಿದ್ದಾರೆ ಎಂದು ಹೊಗಳಬಹುದಿತ್ತು. ಆದರೆ ಇವರು ಒಂದೊಂದು ಬಾವಿಯನ್ನು ದುರಸ್ತಿ ಮಾಡಿ ಸ್ವಚ್ಚ ಮಾಡಲು ಐದು ಲಕ್ಷದಷ್ಟು ಹಣ ವಿನಿಯೋಗಿಸಿದ್ದಾರೆ. ಒಂದು ಬಾವಿಗೆ ಐದು ಲಕ್ಷ ಖರ್ಚು ಮಾಡುವುದೆಂದರೆ ಏನು ಮಾಡಿರಬಹುದು ಎಂದು ನೀವು ಊಹಿಸಬಹುದು. ಹಾಗಂತ ಬಾವಿಗೆ ಬೆಳ್ಳಿಯ ರಿಂಗ್ ಹಾಕಿಸಿ ಚಿನ್ನದ ಲೇಪನ ಕೊಟ್ಟಿದ್ದಾರೆ ಎಂದು ಅಂದುಕೊಳ್ಳಬೇಕಿಲ್ಲ. ನಿಮಗೆ ಗೊತ್ತಿರಲಿ, ಒಂದು ಹೊಸ ಬಾವಿ ನಿರ್ಮಾಣ ಮಾಡುವುದಕ್ಕೂ ಐದು ಲಕ್ಷ ರೂಪಾಯಿ ಬೇಕಾಗುವುದಿಲ್ಲ. ಆದರೆ ಇವರು ಬರೀ ದುರಸ್ತಿ ಮತ್ತು ಸ್ವಚ್ಚತೆಗೆ ಐದು ಲಕ್ಷ ಇಟ್ಟಿದ್ದಾರೆ. ಇತ್ತೀಚೆಗೆ ನಮ್ಮ ವಿಠೋಭ ರುಕುಮಾಯಿ ದೇವಸ್ಥಾನದಲ್ಲಿರುವ ಬಾವಿಯನ್ನು ದುರಸ್ತಿ ಮಾಡಿ ಸ್ವಚ್ಚ ಮಾಡಲು ನಮಗೆ ತಗುಲಿದ್ದು ನಲ್ವತ್ತು ಸಾವಿರ. ಹಾಗಿರುವಾಗ ಇವರು ಐದು ಲಕ್ಷ ಖರ್ಚು ಮಾಡುವ ಅಗತ್ಯ ಇರುತ್ತದಾ ಎನ್ನುವುದು ಪ್ರಶ್ನೆ. ಅದರೊಂದಿಗೆ ಇನ್ನೊಂದು ವಿಷಯ ಗೊತ್ತಾ?
ಇವರು ಐದು ಲಕ್ಷ ಕೊಟ್ಟು ಕ್ಲೀನ್ ಮಾಡಿದ್ದು ಖಾಸಗಿಯವರ ಬಾವಿಯನ್ನು. ಇದಕ್ಕಿಂತ ಕೆಟ್ಟ ಆಡಳಿತ ವ್ಯವಸ್ಥೆ ಬೇಕಾ? ಸ್ವಾಮಿ, ನಾವು ತೆರಿಗೆ ಕಟ್ಟುವುದು ನೀವು ಮಂಗಳೂರನ್ನು ಉದ್ಧಾರ ಮಾಡಿ ಎನ್ನುವ ಕಾರಣಕ್ಕೆ. ಆದರೆ ನೀವು ನಮ್ಮ ತೆರಿಗೆಯ ಹಣವನ್ನು ಹುರಿದು ಮುಕ್ಕುತ್ತಿರುವುದು ಮಾತ್ರವಲ್ಲ, ಖಾಸಗಿಯವರ ಅಭಿವೃದ್ಧಿ ಮಾಡುತ್ತಿದ್ದಿರಿ. ಇದಕ್ಕಿಂತ ಅಸಹ್ಯ ಬೇರೆ ಇಲ್ಲ. ಒಂದು ವೇಳೆ ಜೀವನ ಮಾಡಲು ಕಷ್ಟವಿದೆ ಎಂದಾದರೆ ಪಾಲಿಕೆಯ ಹೊರಗೆ ಟವೆಲ್ ಹಾಕಿ ಕುಳಿತುಕೊಂಡರೆ ಜನ ಐದೋ, ಹತ್ತೋ ಹಾಕಿ ನಿಮ್ಮ ಹೊಟ್ಟೆ ತುಂಬಿಸುತ್ತಾರೆ. ಆದರೆ ಈ ಪರಿ ಒಳಗೆ ಕುಳಿತು ಹಣ ಲೂಟುವುದು ಇದೆಯಲ್ಲ. ಇದನ್ನು ಜನ ಯಾವ ಕಾರಣಕ್ಕೂ ಕ್ಷಮಿಸುವುದಿಲ್ಲ. ಜನ ಇವತ್ತು ಓದಿ ಮರೆತು ಬಿಟ್ಟರೂ ದೇವರು ಮರೆತು ಬಿಡಲ್ಲ!
Leave A Reply