ಶ್ರೀಮಂತರು ಹೋಗುವ ಒಪನ್ ಟೇರೆಸ್ ಬಾರ್ ಅಂಡ್ ರೆಸ್ಟೋರೆಂಟ್ ಗಳ ಮೇಲೆ ಪ್ರೀತಿ ಯಾಕೆ?
ಪಾಲಿಕೆಯವರಿಗೆ ಶ್ರೀಮಂತ ಹೋಟೇಲಿನ ಮೇಲೆ ಅದೇನು ವಿಶೇಷ ಪ್ರೀತಿ ಇದೆಯೋ ಅವರಿಗೆ ಗೊತ್ತು. ನಾನು ಈ ವಿಷಯದ ಬಗ್ಗೆ ಹಿಂದೆ ಒಮ್ಮೆ ಬರೆದಿದ್ದೆ. ಅದನ್ನು ಮೊನ್ನೆ ನಡೆದ ಬಜೆಟ್ ಪೂರ್ವ ಕಾಟಾಚಾರಿಕ ಸಭೆಯಲ್ಲಿ ಹೇಳಿದೆ. ಅದನ್ನು ನಮ್ಮ ಆಡಳಿತ ಪಕ್ಷದವರು ಎಷ್ಟು ಪಾಲಿಸುತ್ತಾರೋ ಅವರಿಗೆ ಗೊತ್ತು. ಆದರೆ ಪಾಲಿಕೆಗೆ ಒಂದಿಷ್ಟು ಆದಾಯ ಆಗಲಿ ಎನ್ನುವ ಉದ್ದೇಶ ನನ್ನದು. ಅದಕ್ಕೆ ಹೇಳಿಬಿಟ್ಟೆ. ಯಾವ ವಿಷಯ ಎಂದರೆ ಮಂಗಳೂರಿನಲ್ಲಿ ಟೇರೆಸ್ ಸೌಲಭ್ಯ ಇರುವ ಅನೇಕ ಹೋಟೆಲುಗಳಿವೆ. ಅವು ಒಂದೆರಡಲ್ಲ. ಕನಿಷ್ಟ ಹತ್ತಾದರೂ ಇವೆ. ಅಂತಹ ಹೋಟೇಲ್ ಗಳ ಟೇರೆಸ್ ಗಳಲ್ಲಿ ನೀವು ಕೂಡ ಯಾವತ್ತಾದರೂ ಊಟೋಪಚಾರ ಮಾಡಿರಬಹುದು. ಅವು ವಿಶಾಲವಾಗಿರುವುದರಿಂದ ಅಂತಹ ಜಾಗದಲ್ಲಿ ಆ ಹೋಟೇಲಿನವರು ಒಪನ್ ಬಾರ್ ಅಂಡ್ ರೆಸ್ಟೋರೆಂಟ್ ಎಂದು ಮಾಡುತ್ತಾರೆ. ಅಲ್ಲಿ ಸುಮಾರು ಚೇರ್ ಅಂಡ್ ಟೇಬಲ್ ಹಾಕಿ ಚೆನ್ನಾಗಿ ವ್ಯಾಪಾರ ಮಾಡುತ್ತಾರೆ. ನಿಯಮ ಪ್ರಕಾರ ಇಂತಹ ಸ್ಥಳಗಳನ್ನು ವ್ಯಾಪಾರಕ್ಕೆ ಇವರು ಬಳಸುವುದನ್ನು ಪಾಲಿಕೆಯವರಿಗೆ ಅವರ ಜನ್ಮದಲ್ಲಿ ನಿಲ್ಲಿಸಲು ಸಾಧ್ಯವಿಲ್ಲ. ಆದರೆ ನಿಯಮಬಾಹಿರವಾಗಿ ಹಾಗೆ ವ್ಯಾಪಾರ ಮಾಡುವವರಿಗೆ ಕನಿಷ್ಟ ಇಂತಿಷ್ಟು ಎಂದು ತೆರಿಗೆ ಎಂದು ಹಾಕಬಹುದಲ್ಲವೇ. ಇನ್ನು ಹಾಗೆ ಒಪನ್ ಟೆರೆಸ್ ನಲ್ಲಿ ಮದ್ಯದ ವ್ಯಾಪಾರ ಮಾಡುವ ಹೋಟೇಲಿನವರಿಗೆ ಅಬಕಾರಿ ಲೈಸೆನ್ಸ್ ಇರುತ್ತದಾ ಎಂದು ನೋಡಬೇಕು. ಟೇರೆಸ್ ನಲ್ಲಿ ವ್ಯಾಪಾರ ಮಾಡುವ ಹೋಟೇಲಿನವರು ಒಂದೊಂದು ಶನಿವಾರ, ಭಾನುವಾರಕ್ಕೆ ದುಡಿಯುವ ಆದಾಯ ಸಣ್ಣ ಮಟ್ಟದೇನಲ್ಲ. ಉಳಿದ ದಿನಗಳ ವ್ಯಾಪಾರ ಸೇರಿಸಿದರೆ ಅವರಿಂದ ಒಂದಿಷ್ಟು ತೆರಿಗೆ ಸಂಗ್ರಹಿಸುವುದು ತಪ್ಪಲ್ಲ. ಅದೇ ಒಬ್ಬ ಗೂಡಂಗಡಿಯವನು ಹಣ ಬಾಕಿ ಇಟ್ಟರೆ, ರಸ್ತೆ ಬದಿ ವ್ಯಾಪಾರಿಗಳು ನಿಗದಿಪಡಿಸಿದ ಜಾಗಕ್ಕೆ ಹೋಗದೆ ರಸ್ತೆ ಬದಿಯಲ್ಲಿಯೇ ವ್ಯಾಪಾರ ಮಾಡುತ್ತಿದ್ದರೆ ಟೈಗರ್ ಅದು ಇದು ಅಂತ ಪಾಲಿಕೆ ಕಡೆಯಿಂದ ರೈಡ್ ಮಣ್ಣು ಮಸಿ ಎಂದು ಮಾಡುತ್ತಾರೆ. ಅದೇ ಶ್ರೀಮಂತ ಕುಳಗಳು ಟೆರೇಸಿನ ಮೇಲೆ ತಮ್ಮ ಅಂಗಡಿ ಹರಡಿ ಕುಳಿತರೆ ಯಾಕೆ ಕೇಳೊಲ್ಲ. ನಿಮಗೆನಾದರೂ ಮಾಮೂಲಿ ಕೊಡುತ್ತಿರುವುದರಿಂದ ಪಾಪ ಅಂತವರಿಗೆ ಪ್ರತ್ಯೇಕ ತೆರಿಗೆ ಹಾಕುವುದು ಬೇಡಾ ಎಂದು ನಿಮಗೆ ಅನಿಸುತ್ತಿದೆಯಾ ಎನ್ನುವ ಪ್ರಶ್ನೆ ನನ್ನದು.
ಆರ್ ಟಿಒದಲ್ಲಿ ವಸೂಲಿಯಾಗುವ ಪಾಲಿಕೆ ಸೆಸ್ ಬಗ್ಗೆ ಇವರಿಗೆ ಗೊತ್ತೇ ಇಲ್ಲ..
ಇನ್ನೊಂದು ಕುತೂಹಲಕಾರಿ ವಿಷಯ ನಿಮಗೆ ಹೇಳುತ್ತೇನೆ. ನಾವು ಆರ್ ಟಿಒದಲ್ಲಿ ವಾಹನಗಳನ್ನು ನೊಂದಾವಣೆ ಮಾಡುವಾಗ ಅಲ್ಲಿ ಪಾಲಿಕೆ ಸೆಸ್ ಎಂದು ಒಂದಿಷ್ಟು ಹಣವನ್ನು ನಮ್ಮಿಂದ ಸಂಗ್ರಹಣೆ ಮಾಡುತ್ತಾರೆ. ಅದು ಯಾಕೆಂದರೆ ನಾವು ಪಾಲಿಕೆ ನಿರ್ವಹಿಸುವ ಈ ರಸ್ತೆಗಳಲ್ಲಿ ವಾಹನವನ್ನು ಓಡಿಸುತ್ತೇವಲ್ಲ, ಅದಕ್ಕೆ. ಆದರೆ ತಮಾಷೆ ಎಂದರೆ ಇಂತಹ ಒಂದು ತೆರಿಗೆ ತಮ್ಮ ಪಾಲಿಕೆ ಹೆಸರಿನಲ್ಲಿ ಆರ್ ಟಿಒದಲ್ಲಿ ವಸೂಲಿಯಾಗುತ್ತಿದೆ ಎನ್ನುವುದೇ ಪಾಲಿಕೆ ಗೊತ್ತಿಲ್ಲ ಎಂದು ಅನಿಸುತ್ತದೆ. ಯಾಕೆಂದರೆ ಇಲ್ಲಿಯ ತನಕ ಒಂದೇ ಒಂದು ಸಲವೂ ನಮ್ಮ ಪಾಲಿಕೆ ಆರ್ ಟಿಒದಿಂದ ಸಂಗ್ರಹಿಸಲ್ಪಟ್ಟ ಹಣವನ್ನು ಕೇಳಿಯೇ ಇಲ್ಲ. ದಿನಕ್ಕೆ ನಮ್ಮ ಮಂಗಳೂರು ಆರ್ ಟಿಒದಲ್ಲಿ ಕನಿಷ್ಟ 200 ವಾಹನಗಳು ನೊಂದಾವಣೆ ಆಗುತ್ತದೆ. ಅದರಲ್ಲಿ ಸಂಗ್ರಹಿಸುವ ಪಾಲಿಕೆ ಸೆಸ್ ಮೊತ್ತ ಇಲ್ಲಿಯ ತನಕ ಎಷ್ಟು ಆಗಿದೆ ಎನ್ನುವುದೇ ನಮ್ಮ ಪಾಲಿಕೆಯವರಿಗೆ ಗೊತ್ತಿಲ್ಲ ಎಂದರೆ ಇವರು ಇನ್ನೆಂತಹ ಬಜೆಟ್ ತಯಾರಿಸಿಯಾರು?
ನ್ಯಾಯಾಲಯದ ಬಾಡಿಗೆ ಬಾಕಿ…
ಇನ್ನೊಂದು ವಿಷಯ ಕೂಡ ನಿಮ್ಮ ಗಮನದಲ್ಲಿ ಇರಲಿ. ಅದೇನೆಂದರೆ ಪಾಲಿಕೆಯ ಒಡೆತನದ ಅನೇಕ ಕಟ್ಟಡಗಳಲ್ಲಿ ಇರುವ ಬಾಡಿಗೆದಾರರು ಸರಿಯಾಗಿ ಬಾಡಿಗೆ ಕಟ್ಟುವುದೇ ಇಲ್ಲ. ಇನ್ನು ಅವರು ತಮಗೆ ಬೇಕಾದಾಗ ಬಾಡಿಗೆ ಕಟ್ಟುವುದರಿಂದ ಅವರಿಗೆ ಅದಕ್ಕೆ ಬಡ್ಡಿ ಕೂಡ ಇವರು ಹಾಕುವುದಿಲ್ಲ. ನಿಮಗೆ ನೆನಪಿರಬಹುದು. ಕೆಲವು ಕಾಲ ಪಾಲಿಕೆಯ ಲಾಲ್ ಬಾಗ್ ನಲ್ಲಿರುವ ಕಟ್ಟಡದ ಮೂರನೇ ಮಹಡಿಯಲ್ಲಿ ನ್ಯಾಯಾಲಯ ನಡೆಯುತ್ತಿತ್ತು. ಅಲ್ಲಿ ಜಿಲ್ಲಾ ನ್ಯಾಯಾಲಯಕ್ಕೆ ಬಾಡಿಗೆ ರೂಪದಲ್ಲಿ ಅಂತಸ್ತು ಕೊಡಲಾಗಿತ್ತು. ನಂತರ ನ್ಯಾಯಾಲಯದ ಹೊಸ ಕಟ್ಟಡ ಆದ ನಂತರ ಅದನ್ನು ಬಿಟ್ಟುಕೊಟ್ಟು ಅವರು ಹೊರಟು ಹೋಗಿದ್ದಾರೆ. ಆದರೆ ಬಾಡಿಗೆ ಕೂಡ ಹಾಗೆ ಬಾಕಿ ಇರಿಸಿ ಹೋಗಿದ್ದಾರೆ. ಅವರು ಬಾಡಿಗೆ ಕೊಡದಿದ್ದರೂ ಪಾಲಿಕೆ ಅದನ್ನು ಕೇಳದೇ ಸುಮ್ಮನೆ ಕುಳಿತುಕೊಂಡಿದೆ. ಅಷ್ಟಕ್ಕೂ ಅವರು ಬಾಕಿ ಇಟ್ಟಿರುವ ಬಾಡಿಗೆ ಎಷ್ಟು ಗೊತ್ತಾ? 9 ಲಕ್ಷದ ಅರವತ್ತು ಸಾವಿರ!
Leave A Reply