• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಯಕ್ಷಗಾನದ ಕೊಂಡಿ ಕಳಚಿದ ಹುಡಗೋಡು ಚಂದ್ರಹಾಸ!

Tulunadu News Posted On March 12, 2019


  • Share On Facebook
  • Tweet It

” ಥೂ , ನಿಮ್ಮ ಮುಖಕ್ಕೆ ಬೆಂಕಿ ಹಾಕಲಿಕ್ಕೆ . ನರ ಸತ್ತವರೇ , ಇದು ನಿಮ್ಮ ಮುಖವಾ ? ಮುಸುಡು ಇದು ಮುಸುಡು . ಮೀಸೆ ಬಿಟ್ಟದ್ದೋ , ಇಟ್ಟದ್ದೋ ? ಇಟ್ಟದ್ದಾದರೆ ಇಲ್ಲೇ ಬಿಸಾಕು . ಹುಟ್ಟಿದ್ದಾದರೆ ಒಳಗೆ ಹೋಗಿ ವ್ಯವಸ್ಥೆ ಮಾಡು .ನರಮನುಷ್ಯರೋ ನೀವು ? ನಿಮ್ಮ ಜನ್ಮದಲ್ಲಿ ನೀವು ಉದ್ಧಾರವಾಗುವುದಿಲ್ಲ . ಭೀಷ್ಮಾ …”

ಇದು ನಿನ್ನೆ ರಂಗಸ್ಥಳದಲ್ಲೇ ಕುಸಿದು ನಿಧನರಾದ ಹುಡಗೋಡು ಚಂದ್ರಹಾಸರ ಸಾಲ್ವ ಪಾತ್ರದ ಕೊನೆಯ ಮಾತು . ” ಅಭಿನವ ಸಾಲ್ವ ” ಎಂದೇ ಹೆಸರಾಗಿದ್ದ ಹುಡಗೋಡುರವರ ಜೀವಮಾನದ ಕೊನೆಯ ಪಾತ್ರ ಸಾಲ್ವನೇ ಆಗಿದ್ದುದು ವಿಪರ್ಯಾಸ .ಸ್ಪಷ್ಟ ಮಾತುಗಾರಿಕೆ , ತನ್ನದೇ ಶೈಲಿಯ ನಾಟ್ಯ , ರಸಗಳನ್ನು ಲಕ್ಷಿಸಿ ನೀಡುವ ಭಾವಪೂರ್ಣ ಅಭಿನಯ – ಈ ಎಲ್ಲಾ ಮೇಳೈಸಿದ ಹುಡಗೋಡುರವರು ಬಡಗು ತಿಟ್ಟಿನಲ್ಲಿ ತನ್ನದೇ ಆದ ಅಭಿಮಾನಿ ಬಳಗ ಹೊಂದಿದ್ದ ಶ್ರೇಷ್ಠ ಕಲಾವಿದರಾಗಿದ್ದರು . ಕಾಲನ ಕರೆಗೆ ಓಗೊಟ್ಟು ನಿನ್ನೆ ರಂಗಸ್ಥಳದಲ್ಲೇ ತನ್ನ ಜೀವನ ಯಾತ್ರೆ ಮುಗಿಸಿದಾಗ ಹುಡುಗೋಡುರವರಿಗೆ ಪ್ರಾಯ ಕೇವಲ 52 ವರ್ಷ ಮಾತ್ರವಾಗಿತ್ತು . ರಂಗಸ್ಥಳದಲ್ಲೇ ನಿಧನರಾಗುವುದು ಕಲಾವಿದರ ಪಾಲಿಗೆ ಮಹಾನವಮಿ , ಯುದ್ಧರಂಗದಲ್ಲಿ ಹುತಾತ್ಮರಾದ ಯೋಧರಿಗೆ ಸಿಗುವ ಸ್ವರ್ಗಪ್ರಾಪ್ತಿ , ಕಲಾಜೀವನದ ಸಾರ್ಥಕತೆ – ಇವೆಲ್ಲವೂ ಹೌದಾದರೂ ಹುಡುಗೋಡರದ್ದು ಸಾಯುವ ವಯಸ್ಸಲ್ಲ . ಇದೊಂದು ಯಕ್ಷರಂಗಕ್ಕೆ ದೊಡ್ಡ ನಷ್ಟ .

ರಂಗಸ್ಥಳದಲ್ಲೇ ನಿಧನರಾದವರು ಅನೇಕ ಕಲಾವಿದರಿದ್ದಾರೆ . ಶಿರಿಯಾರ ಮಂಜು ನಾಯ್ಕ , ದಾಮೋದರ ಮಂಡೆಚ್ಚ , ಅರುವ ನಾರಾಯಣ ಶೆಟ್ಟಿ , ಕೆರಮನೆ ಶಂಭು ಹೆಗ್ಡೆ ಹಾಗೂ ಇತ್ತೀಚೆಗೆ ಗೇರುಕಟ್ಟೆ ಗಂಗಯ್ಯ ಶೆಟ್ಟರೂ ರಂಗಸ್ಥಳದಲ್ಲೇ ನಿಧನರಾದವರು .( ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ಚೌಕಿ ಪೂಜೆಯ ಸ್ವಲ್ಪ ಮೊದಲು ನಿಧನರಾಗಿದ್ದರು . ) ಆದರೆ , ಇವರೆಲ್ಲರೂ 60 ಮೇಲಿನ ವಯಸ್ಸಿನವರು .ಆದರೆ , ಹುಡುಗೋಡುರವರು ಇವರನ್ನು ಹೋಲಿಸಿದಾಗ ತುಂಬಾ ಕಿರಿಯರು .ತಮ್ಮ 18 ನೇ ವಯಸ್ಸಿನಲ್ಲಿ ಯಕ್ಷರಂಗ ಪ್ರವೇಶಿಸಿದ ಹುಡಗೋಡು ಬಚ್ಚಗಾರು , ಮೂಲ್ಕಿ , ಸಾಲಿಗ್ರಾಮ ಮುಂತಾದ ಮೇಳಗಳಲ್ಲಿ ಸುಮಾರು 28 ವರ್ಷಗಳ ತಿರುಗಾಟ ಮಾಡಿದ್ದಾರೆ . ಹುಡುಗೋಡುರವರು ಕೊನೆಯ ಪೂರ್ಣ ಪ್ರಮಾಣದ ಕಲಾವಿದರಾಗಿ ಸಾಲಿಗ್ರಾಮ ಮೇಳದಲ್ಲಿ ತಿರುಗಾಟ ಮಾಡಿದ್ದರು.
2013 ರಲ್ಲಿ ನಾನೊಮ್ಮೆ ಸಾಲಿಗ್ರಾಮ ಮೇಳದ ಚೌಕಿಯಲ್ಲಿ ಭೇಟಿಯಾದಾಗ ” ಕುಡ್ವರೇ ,ನಾನು ಮೇಳದ ತಿರುಗಾಟಕ್ಕೆ ವಿದಾಯ ಹೇಳಲಿದ್ದೇನೆ , ನಾನು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇನೆ ” ಎಂದಾಗ ” ನಿಮ್ಮಂಥಹ ಕಲಾವಿದರು ಯಕ್ಷಗಾನಕ್ಕೆ ಬೇಕು ಚಂದ್ರಹಾಸರೇ . ನಿಮ್ಮ ನಿರ್ಧಾರ ಪುನರ್ ಪರಿಶೀಲಿಸಿ ” ಎಂದಾಗ ನಸುನಕ್ಕು ” ಯಕ್ಷಗಾನ ಮೇಳದ ತಿರುಗಾಟ ಮಾತ್ರ ನಿಲ್ಲಿಸುವುದು ಕುಡ್ವರೇ . ಯಕ್ಷಗಾನ ಖಂಡಿತಾ ಬಿಡುವುದಿಲ್ಲ . ಅದು ನನ್ನ ಆರನೇ ಪ್ರಾಣ . ಅತಿಥಿಯಾಗಿ ಭಾಗವಹಿಸುತ್ತೇನೆ .” ಎಂದಿದ್ದರು .ನಂತರ ಅವರು ಗ್ರಾಮಪಂಚಾಯತಿ ಚುನಾವಣೆಯಲ್ಲಿ ಗೆದ್ದು , ಪ್ರಸ್ತುತ ಹೊನ್ನಾವರ ತಾಲೂಕಿನ ಹಡಿನಬಾಳ ಗ್ರಾಮ ಪಂಚಾಯತ್ ನ ಅಧ್ಯಕ್ಷರಾಗಿ , ರಾಜಕೀಯ ಕ್ಷೇತ್ರದಲ್ಲಿ ಜನಾನುರಾಗಿಯಾಗಿ ಬೆಳೆದಿದ್ದರು .

ನಿನ್ನೆ ಜಲವಳ್ಳಿ ಮೇಳದವರ ಪ್ರದರ್ಶನ ಬೈಂದೂರು ಸಮೀಪದ ಜೋಗಿಬೆಟ್ಟು ಎಂಬಲ್ಲಿ . ಅತಿಥಿಯಾಗಿ ಹುಡಗೋಡುರವರಿದ್ದರು ‌. ” ಭಿಷ್ಮ ವಿಜಯ ” ಪ್ರಸಂಗದಲ್ಲಿ ಸಾಲ್ವನ ಪಾತ್ರ ಮಾಡಿದ್ದರು .ಬಳ್ಕೂರು ಕೃಷ್ಣಯಾಜಿಯವರು ಭೀಷ್ಮ , ನೀಲ್ಕೋಡುರವರು ಅಂಬೆಯ ಪಾತ್ರದಲ್ಲಿದ್ದರು ‌. ಹುಡಗೋಡುರವರಿಗೆ ಸಾಲ್ವ ಅಪಾರ ಹೆಸರು ತಂದ ಪಾತ್ರ . ಸಾಲ್ವನ ಮಾನಸಿಕ ತುಮುಲ , ಭೀಷ್ಮನ ಮೇಲಿನ ದ್ವೇಷವು ಅಂಬೆಯ ಮೇಲೆ ಕಾರಣೀಭೂತವಾಗುವುದನ್ನು ಚೆನ್ನಾಗಿ ಪ್ರಸ್ತುತಿ ಪಡಿಸುತ್ತಿದ್ದರು . ಈ ಕಾರಣಕ್ಕಾಗಿಯೇ ಅಭಿಮಾನಿ ವಲಯದಲ್ಲಿ ” ಅಭಿನವ ಸಾಲ್ವ ” ಎಂಬ ಹೆಸರನ್ನೂ ಪಡೆದಿದ್ದರು ‌.ರಾತ್ರಿ ಸುಮಾರು 11.30 ರ ಸಮಯ . ಭೀಷ್ಮಾಚಾರ್ಯ ” ಏರಿರಿ ಎನ್ನಯ ರಥವ ” ಎಂದು ಹೇಳಿದಾಗ ಕಾಶೀ ರಾಜಕುಮಾರಿಯರಾದ ಅಂಬೆ , ಅಂಬಿಕೆ ,ಅಂಬಾಲಿಕೆಯರು ರಥವೇರಿಯಾಗಿತ್ತು . ಆಗ ಸಾಲ್ವನು ಸೆಟೆದು ನಿಂತು ಪ್ರತಿಭಟಿಸುವ ಸಂದರ್ಭ . ನೆರೆದ ಅರಸುಮಕ್ಕಳನ್ನು ಹೀಗಳೆಯುವ ಸಂದರ್ಭದಲ್ಲಿ ಮೇಲಿನ ಸಂಭಾಷಣೆ ಮಾಡಿದ್ದರು . ” ಭೀಷ್ಮಾ ” ಎಂದು ತಮ್ಮ ಜೀವನದ ಕೊನೆಯ ಶಬ್ದ ಉಚ್ಛರಿಸಿದಾಗ , ಭಾಗವತಿಕೆಯಲ್ಲಿದ್ದ ಹೊಸಂಗಡಿ ರವೀಂದ್ರ ಶೆಟ್ಟರು ಮುಂದಿನ ಪದ್ಯ ” ಧುರದಿ ಮಾರಾಂತು ನೀವ್ ” ಪದ್ಯ ಎತ್ತುತ್ತಿದ್ದಂತೆ ಹುಡಗೋಡುರವರು ರಂಗಸ್ಥಳದಲ್ಲೇ ಕುಸಿದು ಬಿದ್ದರು . ಕೂಡಲೇ ಸಹ ಕಲಾವಿದರು , ಪ್ರೇಕ್ಷಕರು ಹಾಗೂ ಕಾರ್ಯಕ್ರಮಕ್ಕೆ ಬಂದಿದ್ದ ಅವರ ಪುತ್ರ ಪ್ರದೀಪ್ ಹುಡಗೋಡು ಧಾವಿಸಿ ಬಂದು ಬೈಂದೂರಿನ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ನಿಧನ ಹೊಂದಿದರು . ಬಹುಷಃ ಹೃದಯಾಘಾತದಿಂದ ನಿಧನರಾಗಿದ್ದಿರಬೇಕು ‌.

ಹುಡಗೋಡುರವರಿಗೆ ಈ ಮೊದಲು ಹೃದಯೀ ಸಂಬಂಧೀ ಕಾಯಿಲೆ ಇರಲಿಲ್ಲದ ಕಾರಣ ತೀವ್ರತಮವಾದ ಹೃದಯಾಘಾತವಾಗಿರಬೇಕೆಂದು ಊಹಿಸಲಾಗಿದೆ . ಸರಳ , ಸಜ್ಜನಿಕೆ ಸ್ವಭಾವದ ಹುಡುಗೋಡುರವರು ಎದುರು ಪಾತ್ರಗಳಲ್ಲೇ , ಅಂದರೆ ಖಳ ಪಾತ್ರಗಳಲ್ಲೇ ಮಿಂಚಿದವರು . ಸಾಲ್ವ ,ದುಷ್ಟಬುದ್ದಿ , ಕೌರವ , ಕಾರ್ತ್ಯವೀರ್ಯ , ಶನೀಶ್ವರ , ಕೀಚಕ , ರಾವಣ , ಮಾಗಧ ಮುಂತಾದ ಪಾತ್ರಗಳ ಪ್ರಸ್ತುತಿಯಲ್ಲಿ ಪ್ರಸಿದ್ಧರಾಗಿದ್ದಂತೆ , ಶ್ರೀರಾಮ , ಶ್ರೀಕೃಷ್ಣ ಮುಂತಾದ ಸಾತ್ವಿಕ ಪಾತ್ರಗಳಲ್ಲೂ ಅದೇ ಪ್ರಕಾರವಾಗಿ ಮಿಂಚಿದ್ದರು . ಗೋಡೆ ನಾರಾಯಣ ಹೆಗ್ಡೆಯವರ ಶೈಲಿಯಂತೆಯೇ , ಚಿಟ್ಟಾಣಿ , ಜಲವಳ್ಳಿ ಶೈಲಿಯನ್ನೂ ಹೊಂದಿದ ಅಪೂರ್ವ ಕಲಾವಿದರಾಗಿದ್ದರು . ಹಲವಾರು ಕಾಲ್ಪನಿಕ ಪ್ರಸಂಗಗಳ ಖಳ ಪಾತ್ರಗಳಿಗೆ ತನ್ನದೇ ಆದ ಚಿತ್ರಣ ನೀಡಿದ್ದರು . ದುರಂತ ನಾಯಕನ ಪಾತ್ರಗಳಲ್ಲಿಯೂ ಹುಡಗೋಡುರವರ ನಿರ್ವಹಣೆ ಅತ್ಯುತ್ತಮವಾಗಿತ್ತು .

ಫೇಸ್‌ಬುಕ್‌ ಲೈವ್ : ನಿನ್ನೆಯ ಜಲವಳ್ಳಿ ಮೇಳದ ಯಕ್ಷಗಾನ ಪ್ರದರ್ಶನವನ್ನು ಫೇಸ್‌ಬುಕ್‌ ನಲ್ಲಿ ಲೈವ್ ನಲ್ಲಿ ಪ್ರಸಾರ ಮಾಡಿದ್ದು , ಅದರಲ್ಲಿ ಹುಡಗೋಡು ರವರ ಕೊನೆಯ ಪಾತ್ರ ಹಾಗೂ ಕುಸಿದು ಬೀಳುವ ಸನ್ನಿವೇಶ ಇದೀಗ ವೈರಲ್ ಆಗಿದ್ದು , ಸಾವಿರಾರು ಪ್ರೇಕ್ಷಕರು ದುಖಿತರಾಗಿದ್ದಾರೆ . ( ಈ ಹಿಂದೆ ಗೇರುಕಟ್ಟೆ ಗಂಗಯ್ಯ ಶೆಟ್ಟರು ಅರುಣಾಸುರನ ಪಾತ್ರದಲ್ಲಿ ರಂಗಸ್ಥಳದಲ್ಲಿ ಕುಸಿದು ಬಿದ್ದ ಸನ್ನಿವೇಶವೂ ಇದೇ ರೀತಿ ವೈರಲ್ ಆಗಿತ್ತು .)

ಹುಡಗೋಡು ಚಂದ್ರಹಾಸರ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಶ್ರೀ ವೆಂಕಟರಮಣ , ಶ್ರೀ ಹನುಮಂತ ದೇವರು ಹಾಗೂ ಕಲಾಮಾತೆಯಲ್ಲಿ ಪ್ರಾರ್ಥಿಸುತ್ತೇನೆ .

ಚಿತ್ರಕೃಪೆ : ಫೇಸ್‌ಬುಕ್‌

ಎಂ.ಶಾಂತರಾಮ ಕುಡ್ವ

ಮೂಡಬಿದಿರೆ

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search