ಇಸ್ಲಾಂ ಧರ್ಮಬೋಧಕರಿಂದ ಕಾಂಗ್ರೆಸ್ಸಿಗೆ ಮತ ನೀಡುವಂತೆ ಬಹಿರಂಗ ಪತ್ರ!!
ಕಾಂಗ್ರೆಸ್ಸಿಗರು ಯಾಕೆ ವಿಪರೀತವಾಗಿ ಅಲ್ಪಸಂಖ್ಯಾತರ ಒಲೈಕೆ ಮಾಡುತ್ತಾರೆ ಎನ್ನುವುದಕ್ಕೆ ಕಾರಣ ಮುಸ್ಲಿಮರು ಮತ್ತು ಕ್ರೈಸ್ತರು ಬಹಿರಂಗವಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವುದು. ಅವರು ಕೇವಲ ಮೌಖಿಕವಾಗಿ ಬೆಂಬಲಿಸುವುದು ಮಾತ್ರವಲ್ಲ, ಆ ಬಗ್ಗೆ ಲಿಖಿತವಾಗಿ ಕೂಡ ಬರೆದು ತಮ್ಮ ಸಮುದಾಯದ ಜನರಿಗೆ ಹಂಚುತ್ತಾರೆ. ನನಗೆ ಸಿಕ್ಕಿರುವ ದಾಖಲೆಯನ್ನು ಇವತ್ತು ಪೋಸ್ಟ್ ಮಾಡುತ್ತಿದ್ದೇನೆ.
ಅದರಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ವಲಯದ ಜಿಲ್ಲಾ ಸಂಚಾಲಕರು ಮತ್ತು ಸಂಚಾಲಕರು ಈ ಬಾರಿ ತಮ್ಮ ಸಮುದಾಯದ ಜನರು ತಮ್ಮ ಸಂಪೂರ್ಣ ಬೆಂಬಲವನ್ನು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಿಥುನ್ ರೈ ಅವರಿಗೆ ನೀಡುವಂತೆ ತೀರ್ಮಾನವನ್ನು ಕೈಗೊಂಡಿರುತ್ತಾರೆ. ಈ ನಿಟ್ಟಿನಲ್ಲಿ ಜಮಾಅತ್ ಬಂಧುಗಳು ತಮ್ಮ ವ್ಯಾಪ್ತಿಯಲ್ಲಿ ಫ್ಯಾಸಿಸ್ಟ್ ಶಕ್ತಿಯನ್ನು ದಯನೀಯವಾಗಿ ಸೋಲಿಸಲು ಗರಿಷ್ಟ ಪ್ರಯತ್ನ ನಡೆಸಬೇಕು ಎಂದು ತಿಳಿಸಲಾಗಿದೆ. ಅದರೊಂದಿಗೆ ಪತ್ರದ ಕೊನೆಯಲ್ಲಿ ಅಲ್ಲಾಹನು ನಮ್ಮ ಸದುದ್ದೇಶಗಳನ್ನು ಸಫಲಗೊಳಿಸಿ ಅನುಗ್ರಹಿಸಲಿ ಎಂದು ಕೂಡ ಬರೆಯಲಾಗಿದೆ. ಇದು ಏನನ್ನು ಸೂಚಿಸುತ್ತದೆ. ಮುಸ್ಲಿಮರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರವಾಗಿ ಮತ ಚಲಾಯಿಸುವಂತೆ ಹೇಳಲಾಗಿದೆ. ಹಾಗಂತ ಇದು ಹೊಸತೇನಲ್ಲ.
ಚುನಾವಣೆಯ ಹಿಂದಿನ ಶುಕ್ರವಾರ ಮಸೀದಿಗಳಲ್ಲಿ ಇಸ್ಲಾಂ ಧರ್ಮಗುರುಗಳು, ಮೌಲ್ವಿಗಳು ಬಹಿರಂಗವಾಗಿ ಕಾಂಗ್ರೆಸ್ಸಿಗೆ ಮತ ಹಾಕಲು ಹೇಳುತ್ತಾರೆ. ಅದೇ ರೀತಿಯಲ್ಲಿ ಚುನಾವಣೆಯ ಹಿಂದಿನ ಭಾನುವಾರ ಚರ್ಚ್ ಗಳಲ್ಲಿ ಪಾದ್ರಿಗಳು ಕಾಂಗ್ರೆಸ್ಸಿಗೆ ಬೆಂಬಲ ಕೊಡುವಂತೆ ತಮ್ಮ ಸಮುದಾಯದವರಿಗೆ ಸೂಚಿಸುತ್ತಾರೆ. ಆದರೆ ನಮ್ಮ ಹಿಂದೂ ಧರ್ಮದಲ್ಲಿ ಜಾತಿಗೊಂದು, ಉಪಜಾತಿಗಳೊಂದು ಮಠಗಳಿವೆ. ಅಲ್ಲಿ ಪೀಠಾಧೀಶರೂ ಇರುತ್ತಾರೆ. ಕೆಲವು ದೊಡ್ಡ ದೇವಾಲಯಗಳಲ್ಲಿ ಧರ್ಮಾಧಿಕಾರಿಗಳು ಎಂದು ಇರುತ್ತಾರೆ. ಆದರೆ ಯಾವುದೇ ದೇವಾಲಯಗಳಲ್ಲಿ, ಮಠಗಳಲ್ಲಿ ಇಲ್ಲಿಯ ತನಕ ಭಾರತೀಯ ಜನತಾ ಪಾರ್ಟಿಗೆ ಮತ ನೀಡಿ ಎಂದು ಯಾವುದೇ ಧರ್ಮಗುರುಗಳು ಹೇಳಿದ್ದಾರಾ? ಲಿಖಿತವಾಗಿ ಬರೆದು ಹಂಚಿದ್ದಾರಾ? ಇಲ್ಲ. ಬೇರೆಯವರು ಯಾಕೆ, ಪರಮಪೂಜ್ಯ ಪೇಜಾವರ ಹಿರಿಯ ಶ್ರೀಗಳು ವಿಶ್ವ ಹಿಂದೂ ಪರಿಷತ್ ನ ಮುಂಚೂಣಿಯಲ್ಲಿ ಇರುವವರು, ರಾಮ ಮಂದಿರದ ಹೋರಾಟದಲ್ಲಿ ಇರುವವರು ಅವರೇ ಯಾವತ್ತಾದರೂ ಬಿಜೆಪಿಗೆ ಮತ ನೀಡಿ ಎಂದು ಹೇಳಿದ್ದು ಕೇಳಿದ ಯಾವುದಾದರೂ ಮಹಾನುಭಾವ ಇದ್ದಾರಾ? ಇಲ್ಲ. ಅವರು ಅನೇಕ ಬಾರಿ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ ವಿನ: ಮುಕ್ತವಾಗಿ ಬಿಜೆಪಿಗೆ ಬೆಂಬಲಿಸುವಂತೆ ಸೂಚಿಸಿಲ್ಲ. ಯಾಕೆಂದರೆ ನಾವ್ಯಾರೂ ಧರ್ಮವನ್ನು ಅಥವಾ ನಮ್ಮ ಸಂಖ್ಯಾಬಲವನ್ನು ರಾಜಕೀಯ ಶಕ್ತಿ ತೋರಿಸಲು ಉಪಯೋಗಿಸಿಲ್ಲ. ಇದನ್ನು ನಾವು ನಮ್ಮ ದೊಡ್ಡ ಮನಸ್ಸು ಎಂದು ಅಂದುಕೊಂಡಿದ್ದೇವೆ. ಆದರೆ ಇದರಿಂದಲೇ ಯಾರ್ಯಾರೋ ಗೆಲ್ಲುವಂತೆ ಆಗಿದೆ.
ನನ್ನ ವಿನಂತಿ ಇಷ್ಟೆ. ಮುಸ್ಲಿಮ್ ಅಥವಾ ಕ್ರೈಸ್ತ ಧರ್ಮಗುರುಗಳು ತಮ್ಮ ಆರಾಧನಾ ಸ್ಥಳಗಳಲ್ಲಿ ರಾಜಕೀಯ ಪ್ರಭಾವ ಬೀರಬಾರದು. ಕಾಂಗ್ರೆಸ್ಸಿಗೆ ಮತ ನೀಡುವಂತೆ ಪರೋಕ್ಷ ಅಥವಾ ಪ್ರತ್ಯಕ್ಷವಾಗಿ ಸೂಚಿಸಬಾರದು. ನಿಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ನೀವೆ ಚಲಾಯಿಸಿ ಎಂದು ಹೇಳಿ ಕೈತೊಳೆಯಬೇಕು. ಒಂದು ವೇಳೆ ಇಲ್ಲ, ನಮಗೆ ಕಾಂಗ್ರೆಸ್ಸಿಗೆ ಮತ ಕೊಡಲು ಸೂಚಿಸಲೇಬೇಕೆಂಬ ಒತ್ತಡ ಮೇಲಿನವರಿಂದ ಇದೆ ಎಂದು ಆಯಾಯ ಚರ್ಚ್, ಮಸೀದಿಗಳ ಧರ್ಮಗುರುಗಳು ಹೇಳುವುದಾದರೆ ಹಿಂದೂ ದೇವಾಲಯಗಳ, ಮಠಗಳ ಮಠಾಧೀಶರು ಕೂಡ ಆಖಾಡಕ್ಕೆ ಇಳಿಯಬೇಕು. ನಮ್ಮ ಬಲ ಪ್ರದರ್ಶನ ನಡೆದುಹೋಗಲಿ. ಯಾರು ಗೆಲ್ಲುತ್ತಾರೆ ಎನ್ನುವುದನ್ನು ನೋಡಿಯೇ ಬಿಡೋಣ!!
Leave A Reply