ಖಾದರ್ ಜ್ಞಾನೋದಯವಾಗಲು ಶ್ರೀಮಂತನೊಬ್ಬ ನೇತ್ರಾವತಿಗೆ ಹಾರಬೇಕಾಯಿತು!!
ಯುಟಿ ಖಾದರ್. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದವರು. ಮಂಗಳೂರು ಅಂದರೆ ಉಳ್ಳಾಲ ವಿಧಾನಸಭಾ ಕ್ಷೇತ್ರದ ಶಾಸಕರು. ಅವರು ನೇತ್ರಾವತಿ ಸೇತುವೆಯನ್ನು ಹುಟ್ಟಿನಿಂದ ನೋಡಿಕೊಂಡು ಬಂದವರು. ಬಹುಶ: ಅಂಬೆಗಾಲಿಡುವಾಗಿನಿಂದ ಹಿಡಿದು ಒಂದು ಸರಕಾರದಲ್ಲಿ ಪ್ರಭಾವಿ ವ್ಯಕ್ತಿಯಾಗುವ ತನಕ ಅಸಂಖ್ಯಾತ ಬಾರಿ ಖಾದರ್ ನೇತ್ರಾವತಿ ಸೇತುವೆಯ ಮೇಲೆ ಹೋಗಿರಬಹುದು. ನೇತ್ರಾವತಿ ಸೇತುವೆಯ ಇಂಚಿಂಚಿನ ಪರಿಚಯ ಅವರಿಗೆ ಇರಬಹುದು. ಅವರ ವಿಧಾನಸಭಾ ಕ್ಷೇತ್ರದಿಂದ ಮಂಗಳೂರಿನ ಸರ್ಕೂಟ್ ಹೌಸ್ ಅಥವಾ ವಿಮಾನ ನಿಲ್ದಾಣಕ್ಕೆ ಬರಬೇಕಾದರೆ ಈ ಸೇತುವೆಯೊಂದೇ ಅವರಿಗೆ ಸುಲಭದ ದಾರಿ. ಅಂತಹ ಸೇತುವೆಯಿಂದ ಖಾದರ್ ಅವರಿಗೆ ಗೊತ್ತಿರುವ ಹಾಗೆ ನೂರಾರು ಜನ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು. ಅಂತವರ ಹೆಣವನ್ನು ನೋಡಲು ಖಾದರ್ ಅವರೇ ಹೋಗಿರಬಹುದು. ತಮ್ಮ ಕ್ಷೇತ್ರದ ವ್ಯಕ್ತಿಯಾಗಿದ್ದರೆ ಆತ್ಮಹತ್ಯೆ ಮಾಡಿಕೊಂಡವರ ಮನೆಗೆ ಹೋಗಿ ಸಮಾಧಾನ ಹೇಳಿರಬಹುದು. ಆದ್ದರಿಂದ ಇಲ್ಲಿಯವರೆಗೆ ನೇತ್ರಾವತಿ ಸೇತುವೆ ಖಾದರ್ ಮನಸ್ಸಿನಲ್ಲಿ ಗೌಣವಾಗಿತ್ತು.
ಈಗ ಸಿದ್ಧಾರ್ಥ ಅವರು ಆತ್ಮಹತ್ಯೆ ಮಾಡಿಕೊಂಡ ಬಳಿಕ ಖಾದರ್ ಸಾಹೇಬ್ರಿಗೆ ಜ್ಞಾನೋದಯವಾಗಿದೆ. ನೇತ್ರಾವತಿ ಸೇತುವೆಯನ್ನು ಮತ್ತೊಮ್ಮೆ ಕಣ್ಣಿಟ್ಟು ನೋಡಿದ್ದಾರೆ. ಸಿದ್ಧಾರ್ಥ ಆತ್ಮಹತ್ಯೆ ಮಾಡಿಕೊಳ್ಳಲು ಸೇತುವೆಯ ಮೇಲಿನಿಂದ ಹಾರಲು ಸಾಕಷ್ಟು ಅವಕಾಶ ಇರುವುದೇ ಕಾರಣ ಎನ್ನುವುದು ಖಾದರ್ ಅವರಿಗೆ ಗೊತ್ತಾಗಿದೆ. ಅದಕ್ಕೆ ಅವರು ಒಂದು ಐಡಿಯಾ ನೀಡಿದ್ದಾರೆ. ಸೇತುವೆಯ ಎರಡೂ ಬದಿಗಳಲ್ಲಿ ಕನಿಷ್ಟ ಏಳು ಅಡಿ ಉದ್ದದ ಫೈಬರ್ ವಾಲ್ ಅಳವಡಿಸಿದರೆ ಒಳ್ಳೆಯದು ಎಂದು ಹೇಳಿದ್ದಾರೆ. ಈ ಮೂಲಕ ಯಾರು ಕೂಡ ಸೇತುವೆಯ ಮೇಲಿನಿಂದ ಹಾರದಂತೆ ಫೈಬರ್ ವಾಲ್ ಅಡ್ಡವಾಗಲಿದೆ. ಆದರೆ ಸೇತುವೆಯಿಂದ ನದಿಯ ಸೌಂದರ್ಯವನ್ನು ನೋಡಲು ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಒಬ್ಬ ಶ್ರೀಮಂತ ಉದ್ಯಮಿಯ ಆತ್ಮಹತ್ಯೆಯಿಂದ ಯುಟಿ ಖಾದರ್ ಅವರ ಕಣ್ಣು ತೆರೆದಿದೆ.
ನಾನು ಸಿದ್ಧಾರ್ಥ ಅವರು ನೀರಿಗೆ ಹಾರಿದಾಗ ಜಿಲ್ಲಾಡಳಿತ ಹುಡುಕಲು ಖರ್ಚು ಮಾಡಿದ ಹಣದ ಬಗ್ಗೆ ಮಾತನಾಡುವುದಿಲ್ಲ. ಏಕೆಂದರೆ ಶ್ರೀಮಂತರು ಸತ್ತಾಗ ಮಾತ್ರ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಅಷ್ಟು ಶ್ರಮ ಹಾಕುತ್ತದೆ. ಪಾಪದವರು ಸತ್ತರೆ ಫೋಟೋ ಕೊಟ್ಟು ಹೋಗಿ ನಾಳೆ ಹೆಣ ಮೇಲೆ ಬಂದರೆ ಹೇಳಿ ಕಳುಹಿಸುತ್ತೇವೆ ಎನ್ನಲಾಗುತ್ತದೆ. ಅದು ಬೇರೆ ವಿಷಯ. ಆದರೆ ಫೈಬರ್ ಬೇಲಿ ಹಾಕುವ ಇವರಿಗೆ ಹೊಳೆಯಲು ಉದ್ಯಮಿಗಳು ಸಾಯಬೇಕಾಯಿತು. ಇನ್ನು ನೇತ್ರಾವತಿ ಸೇತುವೆಗೆ ಬೇಲಿ ಹಾಕಿದರೆ ಸಾಕಾ? ಉಳಿದ ನದಿಗಳ ಕಥೆ ಏನು? ಹೇಗೂ ತಮ್ಮ ಸರಕಾರ ಇಲ್ಲ. ಮುಂದಿನ ಉಸ್ತುವಾರಿ ಸಚಿವರಿಗೆ ಈಗಲೇ ಖಾದರ್ ಒಂದು ಯೋಜನೆ ಕೊಟ್ಟ ಹಾಗೆ ಇದೆ. ಫೈಬರ್ ಬೇಲಿ ಆದರೆ ನನ್ನ ಯೋಜನೆ ಎನ್ನುವುದು, ಇಲ್ಲದಿದ್ದರೆ ನಾನು ಹೇಳಿದ ಸಾಮಾಜಿಕ ಕಳಕಳಿಗೆ ಬಿಜೆಪಿ ಸರಕಾರ ಸ್ಪಂದಿಸಿಲ್ಲ ಎನ್ನುವ ಹೇಳುವ ಐಡಿಯಾ ಖಾದರ್ ಅವರದ್ದು ಇರಬಹುದು. ಒಟ್ಟಿನಲ್ಲಿ ಶ್ರೀಮಂತರ, ಪ್ರಭಾವಿಗಳ ಆತ್ಮಹತ್ಯೆಯಿಂದ ಜನಸಾಮಾನ್ಯರ ಜೀವದ ಬೆಲೆ ನಮ್ಮ ರಾಜಕಾರಣಿಗಳಿಗೆ ಗೊತ್ತಾಗಿದೆ!!
Leave A Reply