ಮಂಗಳೂರು ಕರ್ನಾಟಕದಲ್ಲಿ ಇಲ್ವಾ ಯಡಿಯೂರಪ್ಪನವರೇ?
ಒಂದು ವಾರದ ಒಳಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಮಂಗಳೂರನ್ನು ಕಡ್ಡಾಯ ಪ್ರಾಪರ್ಟಿ ಕಾರ್ಡ್ ಪರಿಧಿಯಿಂದ ಹೊರಗೆ ಇಟ್ಟರೆ ಅವರಿಗೆ ಎರಡು ಸೀಟ್ ಹೆಚ್ಚಿಗೆ ಗೆಲ್ಲಿಸಿಕೊಟ್ಟ ಮಂಗಳೂರು ನಗರ ದಕ್ಷಿಣ ಮತ್ತು ಉತ್ತರದ ಬಗ್ಗೆ ಅವರಿಗೆ ಕಾಳಜಿ ಇದೆ ಎಂದು ಅಂದುಕೊಳ್ಳುತ್ತೇನೆ. ಒಂದು ವೇಳೆ ಏನೂ ಮಾಡದೇ ಸುಮ್ಮನೆ ಕುಳಿತರೆ ಯಡ್ಯೂರಪ್ಪನವರದ್ದು ಟೈಂಪಾಸ್ ಆಡಳಿತ ಎನ್ನುವುದು ಗ್ಯಾರಂಟಿಯಾಗುತ್ತದೆ. ಅಷ್ಟಕ್ಕೂ ಪ್ರಾಪರ್ಟಿ ಕಾರ್ಡ್ ಕಡ್ಡಾಯ ಎನ್ನುವುದು ಏಕಾಏಕಿ ಸಡಿಲಿಕೆ ಮಾಡಲಾಗುತ್ತದೆಯಾ ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡುವುದಕ್ಕೆ ಸಾಕು. ಶಿವಮೊಗ್ಗದಲ್ಲಿ ಇದನ್ನು ಇದೇ ಸಿಎಂ ಮಾಡಿ ತೋರಿಸಿದ್ದಾರೆ. ಅಲ್ಲಿ ಆಗುವುದಾದರೆ ಇಲ್ಯಾಕೆ ಆಗಬಾರದು ಎನ್ನುವುದು ನನ್ನ ಪ್ರಶ್ನೆ. ಶಿವಮೊಗ್ಗ ಯಡಿಯೂರಪ್ಪನವರದ್ದು ಕರ್ಮಭೂಮಿ ಇರಬಹುದು, ಅದಕ್ಕೆ ಅಲ್ಲಿ ಪ್ರೀತಿ ಹೆಚ್ಚು ಇದ್ದಿರಲಿಕ್ಕೂ ಸಾಕು. ಹಾಗಂತ ಮಂಗಳೂರಿನವರು ಏನೂ ಅಪಘಾನಿಸ್ತಾನದಿಂದ ಬಂದದ್ದಲ್ಲ.
ಇವತ್ತು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ಇರುವ ಜನರಿಗೆ ಪ್ರಾಪರ್ಟಿ ಕಾರ್ಡ್ ಎನ್ನುವುದು ಅಮ್ರತಾಂಜನ್ ಆಗಿ ಹೋಗಿದೆ. ಹಚ್ಚಿದರೆ ಉರಿ, ಹಚ್ಚದಿದ್ದರೆ ತಲೆನೋವು ಹೋಗುವುದಿಲ್ಲ. ಆದ್ದರಿಂದ ಜನ ನೋವು ನುಂಗಿ ಪ್ರಾಪರ್ಟಿ ಕಾರ್ಡ್ ಕಚೇರಿಗೆ ಅಲೆಯುತ್ತಿದ್ದಾರೆ. ಹಾಗಂತ ಎಲ್ಲರೂ ಅಲ್ಲಿ ಹೋಗಿ ಕಷ್ಟಪಡಬೇಕಾಗಿಲ್ಲ. ಹೇಗೆ ಸುಖ ಪ್ರಯಾಣಕ್ಕೆ ವಿಮಾನ ಮತ್ತು ಪಾಪದವರಿಗೆ ರೈಲು ಇದೆಯೋ ಹಾಗೆ ನೀವು ಹಣ ಬಿಚ್ಚಿದರೆ 48 ಗಂಟೆಯೊಳಗೆ ನಿಮಗೆ ಕಾರ್ಡ್ ರೆಡಿ. ಅದೇ ನೀವು ನ್ಯಾಯ ಮಾರ್ಗದಲ್ಲಿ ಹೋಗುತ್ತೀರಿ ಎಂದಾದರೆ ರೈಲಿನ ಜನರಲ್ ಕಂಪಾರ್ಟ್ ಮೆಂಟ್ ನಲ್ಲಿ ಪ್ರಯಾಣಿಸಿದ ರೀತಿಯಲ್ಲಿ ಹೋಗಿ ಮಾಡಿಸಿಕೊಂಡು ಬರಬೇಕು.
ಈಗಾಗಲೇ ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ಶಾಸಕರು ಪ್ರತಿಭಟನೆ ಮಾಡಿ ಆಗಿದೆ. ಆಗ ಬಿಜೆಪಿ ಸರಕಾರ ಇರಲಿಲ್ಲ. ಬಿಜೆಪಿ ಸರಕಾರ ಬಂದ ಬಳಿಕ ಒಮ್ಮೆ ಶಾಸಕ ವೇದವ್ಯಾಸ ಕಾಮತ್ ಅವರು ಧೀಡಿರ್ ಭೇಟಿ ಎಂದು ಹೋಗಿ ಬಂದರು. ಹೊರಗೆ ಬಂದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ನಮ್ಮ ಸರಕಾರ ಬಂದಿದೆಯಷ್ಟೇ, ಇನ್ನು ಕಂದಾಯ ಸಚಿವರು, ಉಸ್ತುವಾರಿ ಸಚಿವರು ಎಲ್ಲಾ ಆಗಬೇಕು. ಆದ್ದರಿಂದ ಅದೆಲ್ಲಾ ಆದ ನಂತರ ಇದನ್ನು ಪರಿಹರಿಸುತ್ತೇವೆ ಎಂದು ಹೇಳಿ ಹೋದರು. ಈಗ ಎಲ್ಲ ಆಗಿದೆ. ರಾಜ್ಯ ಸರಕಾರ ನಿಧಾನವಾಗಿ ರನ್ ವೇ ಬಿಟ್ಟು ಮೇಲಕ್ಕೆ ಹಾರುವ ಸಮಯ. ಈಗ ನಮ್ಮ ಶಾಸಕರು ಮುಖ್ಯಮಂತ್ರಿಯವರ ಕೈ ಕಾಲು ಹಿಡಿದು ಪ್ರಾಪರ್ಟಿ ಕಾರ್ಡ್ ಕಡ್ಡಾಯ ಮುಂದೂಡಿದರೆ ಜನರಿಗೂ ನೆಮ್ಮದಿಯಾದಿತು. ಇಲ್ಲದಿದ್ದರೆ ಇನ್ನೆರಡೂ ಧೀಡಿರ್ ಭೇಟಿ, ಪರಿಹಾರಕ್ಕೆ ಪ್ರಯತ್ನದ ಡೈಲಾಗ್ ಜನರಿಗೆ ಬೋರ್ ಆಗುತ್ತದೆ.
ಅಷ್ಟಕ್ಕೂ ಶಿವಮೊಗ್ಗದಲ್ಲಿ ಕಡ್ಡಾಯದಿಂದ ವಿನಾಯಿತಿ ಕೊಡುವ ಅವಶ್ಯಕತೆ ಇರಲಿಲ್ಲ. ಏಕೆಂದರೆ ಅಲ್ಲಿ 80% ಜನ ಪ್ರಾಪರ್ಟಿ ಕಾರ್ಡ್ ಮಾಡಿಸಿಯಾಗಿದೆ. ಅಲ್ಲಿನ ಭೌಗೋಳಿಕ ಹಿನ್ನಲೆ ಇಲ್ಲಿಯಷ್ಟು ಸಂಕೀರ್ಣವಾಗಿಲ್ಲ. ಆದರೆ ಮಂಗಳೂರಿನಲ್ಲಿ 70% ಜನರದ್ದು ಪ್ರಾಪರ್ಟಿ ಕಾರ್ಡ್ ಇನ್ನೂ ಆಗಿಲ್ಲ. ಆದರೆ ಅಲ್ಲಿ ಕಡ್ಡಾಯ ವಿನಾಯಿತಿ ಆಗಿದೆ. ಇಲ್ಲಿ ನಾವು ಆಕಾಶ ನೋಡುತ್ತಿದ್ದೇವೆ!
Leave A Reply