ಭವ್ಯ ಮಂದಿರಕ್ಕೆ ಜಾಗ ಸಾಲದಿದ್ದರೆ ಪಕ್ಕದಲ್ಲಿಯೇ 67 ಏಕರೆ ಜಾಗ ಇದೆ!!
ಕೊನೆಗೂ ಶತಮಾನದ ಹಿಂದಿನ ಪ್ರಕರಣವೊಂದು ಇವತ್ತು ಬಗೆಹರಿಯುವುದರೊಂದಿಗೆ ಎಲ್ಲಾ ಆಸ್ತಿಕರ ಕಂಗಳಲ್ಲಿ ಕನಸು ಮತ್ತೆ ಗರಿಗೆದರಿದೆ. ಅಯೋಧ್ಯೆಯ ರಾಮಜನ್ಮಭೂಮಿಯ 2.77 ಏಕರೆ ಜಾಗದ ಮೇಲೆ ರಾಮಲಲ್ಲಾ ಸಂಘಟನೆಗೆ ಹಕ್ಕಿದೆ ಎಂದು ಸುಪ್ರೀಂಕೋರ್ಟ್ ಹೇಳುವುದರೊಂದಿಗೆ ಪ್ರಕರಣಕ್ಕೆ ಕೊನೆ ಹಾಡಿದೆ. ಅದರೊಂದಿಗೆ ಅಯೋಧ್ಯೆಯ ಬೇರೆ ಯಾವುದಾದರೂ ಭಾಗದಲ್ಲಿ ಐದು ಏಕರೆ ಜಾಗವನ್ನು ಮಸೀದಿ ಕಟ್ಟಲು ಸುನ್ನಿ ವಕ್ಫ್ ಬೋರ್ಡಿಗೆ ನೀಡಬೇಕು ಎಂದು ಸೂಚಿಸುವುದರೊಂದಿಗೆ ಪ್ರಕರಣ ಸೌಹಾರ್ದ ಅಂತ್ಯ ಕಂಡಿದೆ. ಇನ್ನು ರಾಮ ಮಂದಿರ ಕಟ್ಟುವ ಜವಾಬ್ದಾರಿ ಕೇಂದ್ರ ಸರಕಾರಕ್ಕೆ ನೀಡಲಾಗಿದೆ. ಅದಕ್ಕಾಗಿ ಒಂದು ಟ್ರಸ್ಟ್ ಮಾಡಲು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಆ ಟ್ರಸ್ಟ್ ಮುಂದಿನ ಮೂರು ತಿಂಗಳೊಳಗೆ ರಚನೆಯಾಗಿದೆ. ಅದರ ಬೈಲಾ ಸಹಿತ ನೀತಿ ನಿಯಮಾವಳಿಗಳು ಕೂಡ ಬರುವ ದಿನಗಳಲ್ಲಿ ಫಿಕ್ಸ್ ಆಗಲಿದೆ. ಆ ಟ್ರಸ್ಟ್ ನಲ್ಲಿ ನಿರ್ಮೋಹಿ ಆಖಾಡದ ಒಬ್ಬರನ್ನು ಸದಸ್ಯರನ್ನಾಗಿ ಮಾಡಲು ಕೂಡ ಸುಪ್ರೀಂ ಹೇಳಿದೆ.
ಇಲ್ಲಿ ಅನೇಕರಿಗೆ ಒಂದು ವಿಷಯ ಅನಿಸಬಹುದು. ಅದೇನೆಂದರೆ 2.77 ಏಕರೆ ಜಾಗದಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಜಾಗ ಸಾಲುವುದೇ ಎನ್ನುವುದು. ಇಲ್ಲಿ ಇನ್ನೊಂದು ವಿಷಯ ಇದೆ. ಅದೇನೆಂದರೆ ಇಲ್ಲಿ ತನಕ ನ್ಯಾಯಾಲಯದಲ್ಲಿದ್ದ 2.77 ಏಕರೆ ಜಾಗಕ್ಕೆ ತಾಗಿಕೊಂಡೇ 67 ಏಕರೆ ಬೇರೆ ಜಾಗ ಇದೆ. ಅದನ್ನು ಉತ್ತರ ಪ್ರದೇಶ ಸರಕಾರ ಬಹಳ ಸಮಯದ ಹಿಂದೆನೆ ಸ್ವಾಧೀನಪಡಿಸಿಕೊಂಡಿದೆ. ಈಗ ಆ ಜಾಗವನ್ನು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಸೇರಿಕೊಂಡು ರಾಮಲಲ್ಲಾ ಟ್ರಸ್ಟ್ ಗೆ ನೀಡಬೇಕು. ಅದರ ನಂತರ ಒಟ್ಟು ಜಾಗದಲ್ಲಿ ಕೇಂದ್ರ ಸರಕಾರ ಭವ್ಯ ರಾಮನ ದೇವಾಲಯವನ್ನು ಕಟ್ಟುವ ಮೂಲಕ ಕೋಟ್ಯಾಂತರ ಭಕ್ತರ ಪಾಲಿಗೆ ಪುಣ್ಯಕ್ಷೇತ್ರವಾಗಿ ಮಾರ್ಪಡಿಸಬಹುದು. ಇನ್ನು ಸುಪ್ರೀಂ ಕೋರ್ಟ್ ಹೇಳಿದ ಪ್ರಕಾರ 1857 ರಿಂದಲೇ ಹಿಂದೂಗಳು ಅಲ್ಲಿ ಒಳಾಂಗಣದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. 1949 ರ ನಂತರ ಆ ಪ್ರಾರ್ಥನೆ ಹೊರಾಂಗಣದಲ್ಲಿ ಮಾತ್ರ ಮಾಡಬೇಕಾದ ಪರಿಸ್ಥಿತಿ ಬಂತು. ಮುಸ್ಲಿಮರು 1949 ರಿಂದ ಹೊರಗೆ ನಮಾಜ್ ಮಾಡುತ್ತಿದ್ದರು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಬಹಳ ಸಮಾಧಾನದ ವಿಷಯ ಎಂದರೆ ಅಲ್ಲೊಬ್ಬರು, ಇಲ್ಲೊಬ್ಬರು ಬಿಟ್ಟರೆ ಮುಸ್ಲಿಮರಿಂದ ಸುಪ್ರೀಂ ಕೋರ್ಟ್ ತೀರ್ಪಿಗೆ ಯಾವುದೇ ವಿರೋಧ ಬಂದಿಲ್ಲ. ತೀರ್ಪನ್ನು ಪ್ರಶ್ನೆ ಮಾಡಲು ಹೋಗಲ್ಲ ಎಂದು ಆಲ್ ಇಂಡಿಯಾ ಸುನ್ನಿ ಸೆಂಟ್ರಲ್ ಬೋರ್ಡ್ ಹೇಳಿದೆ. ಒಟ್ಟಿನಲ್ಲಿ ಈ ತೀರ್ಪು ಯಾರ ಪರ ಅಥವಾ ವಿರೋಧ ಅಲ್ಲ. ಇದು ದೇಶದ ಭವ್ಯ ಪರಂಪರೆಗೆ ನೀಡಿದ ತೀರ್ಪು ಎಂದು ಎಲ್ಲರೂ ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ. ಭಾರತದ ಅಖಂಡತೆಗೆ ಇದು ಸಾಕ್ಷಿಯಾಗಿದೆ !!
Leave A Reply