ಡ್ರಗ್ಸ್ ನಿರ್ಮೂಲನ ಮಾಡುವುದಾ, ಪೆಟ್ಟು ತಿನ್ನುತ್ತಲೇ ಇರುವುದಾ, ನಿರ್ಧಾರ ನಿಮ್ಮದು!!
ನಾನು ಮೊನ್ನೆಯಷ್ಟೇ ಒಂದು ಟಿವಿ ವಾಹಿನಿಯಲ್ಲಿ ಕುಳಿತು ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆಗಳು, ಕೊಲೆಯತ್ನಗಳು ಆಗುತ್ತಿರುವುದರ ಬಗ್ಗೆ ಖಡಕ್ ಶಬ್ದಗಳಲ್ಲಿ ಮಾತನಾಡಿ ಬಂದಿದ್ದೆ. ಆ ಕಾರ್ಯಕ್ರಮ ಶುಕ್ರವಾರ ರಾತ್ರಿ ಮುಗಿಸಿ ಶನಿವಾರ ಬೆಳಿಗ್ಗೆ ಮೊಬೈಲ್ ತೆರೆಯುವಷ್ಟರಲ್ಲಿ ಇನ್ನೊಂದು ಸುದ್ದಿ ಬಂದಿದೆ. ಮಂಗಳೂರಿನ ಕಾವೂರು ಬಳಿ ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿಗಳ ರೈಫಲ್ ಎಳೆದು ಅದನ್ನು ನೆಲಕ್ಕೆ ಬಡಿದು ಪೊಲೀಸರ ಮೇಲೆ ನಾಲ್ಕು ಜನ ಯುವಕರು ಹಲ್ಲೆ ಮಾಡಿದ್ದಾರೆ. ಆ ಯುವಕರು ಡ್ರಗ್ಸ್ ನಶೆಯಲ್ಲಿ ಇದ್ದರು ಎನ್ನುವುದು ತಿಳಿದು ಬಂದಿದೆ. ಅಲ್ಲಿಗೆ ಒಂದು ವಿಷಯ ಗ್ಯಾರಂಟಿಯಾಗಿದೆ. ಅದೇನೆಂದರೆ ಒಂದೋ ಡ್ರಗ್ಸ್ ಜಾಲವನ್ನು ಪೊಲೀಸರು ಬುಡ ಸಮೇತ ಕಿತ್ತೊಗೆಯಲು ಸನ್ನದ್ಧರಾಗಿರಬೇಕು ಅಥವಾ ತಾವು ಆಗಾಗ ಅಲ್ಲಲ್ಲಿ ಹೀಗೆ ಪೆಟ್ಟು ತಿನ್ನುತ್ತಾ, ಅದು ಮಾಧ್ಯಮಗಳಲ್ಲಿ ಸುದ್ದಿಯಾಗಿ ಅವಮಾನ ಅನುಭವಿಸಬೇಕು. ಪೊಲೀಸರು ಯಾವುದಕ್ಕೆ ಸಿದ್ಧರಿದ್ದೀವಿ ಎನ್ನುವುದನ್ನು ಅವರೇ ತೀರ್ಮಾನಿಸಬೇಕು. ಒಂದಂತೂ ನಿಜ. ಕಟ್ಟಕಡೆಯ ಒಬ್ಬ ಪೊಲೀಸ್ ಸಿಬ್ಬಂದಿ ಪೆಟ್ಟು ತಿಂದರೂ ಅದು ಇಡೀ ಪೊಲೀಸ್ ಇಲಾಖೆಗೆ ಹೊಡೆದಂತೆ. ಇಲ್ಲಿ ಪೆಟ್ಟು ತಿಂದವನು ಪೊಲೀಸ್ ಕಾನ್ಸಟೇಬಲ್ ಅಲ್ವಾ ಎಂದು ಉನ್ನತ ಅಧಿಕಾರಿಗಳು ತಳ್ಳಿ ಹಾಕುವಂತಿಲ್ಲ. ಇದು ಇಡೀ ಪೊಲೀಸ್ ಇಲಾಖೆಯೇ ಆತ್ಮಾವಲೋಕನ ಮಾಡಿಕೊಳ್ಳುವ ಸಮಯ. ಹಿಂದೆ ಈಗಿರಲಿಲ್ಲ. ರಾಜ್ಯದ ಬೇರೆ ಕಡೆಗಳ ಬಗ್ಗೆ ಮಾತನಾಡುವುದು ಬೇಡಾ. ಆದರೆ ನಮ್ಮ ಕರಾವಳಿಯಲ್ಲಿ ಪೊಲೀಸರ ಬಗ್ಗೆ ತುಂಬಾ ಗೌರವ ಮಿಶ್ರಿತ ಅಭಿಮಾನವಿತ್ತು. ಅವರು ನಮ್ಮ ರಕ್ಷಕರು ಎನ್ನುವ ಮರ್ಯಾದೆ ಇತ್ತು. ಆದರೆ ಕಾಲಕ್ರಮೇಣ ಡಬಲ್ ಗೇಮ್ ನಲ್ಲಿರುವವರು ಪೊಲೀಸರೊಂದಿಗೆ ‘ಹೊಂದಾಣಿಕೆ’ ಮಾಡಿಕೊಂಡು ಆ ಲೆವೆಲ್ಲಿನ ಜನರಲ್ಲಿ ಪೊಲೀಸರ ಬಗ್ಗೆ ಗೌರವ ಕಡಿಮೆ ಆಗುತ್ತಾ ಹೋಯಿತು. ನಂತರ ಮಧ್ಯಮ ವರ್ಗದವರು ಮತ್ತು ಆರ್ಥಿಕವಾಗಿ ಕೆಳ ವರ್ಗದವರು ಒಂದಿಷ್ಟು ಗೌರವ ಇಟ್ಟುಕೊಂಡಿದ್ದರು. ಆದರೆ ಇದೇ ಸ್ತರದ ಜನರ ಮಕ್ಕಳನ್ನು ಬಳಸಿ ಶ್ರೀಮಂತರು ದುಷ್ಟ ಕೆಲಸಗಳನ್ನು ಮಾಡುತ್ತಾ ಬಂದರೋ ಅದರ ನಂತರ ಕೆಳಸ್ತರದ ಪೋಷಕರು ಕೂಡ ಪೊಲೀಸರ ಬಗ್ಗೆ ಜಿಗುಪ್ಸೆ ಪಟ್ಟುಕೊಂಡರು. ಆ ನಂತರ ಯಾವಾಗ ಜುಗಾರಿ, ಸ್ಕಿಲ್ ಗೇಮ್ಸ್, ಇಸ್ಪೀಟ್ ನಂತಹ ಅಡ್ಡೆಗಳಲ್ಲಿ ತಮ್ಮ ಗಂಡಂದಿರು ಹಣವನ್ನು ಕಳೆದುಕೊಂಡು ಬರುವುದಕ್ಕೆ ಮೌನವಾಗಿರುವ ಪೊಲೀಸ್ ಇಲಾಖೆಯ ಅಧಿಕಾರಿಗಳೇ ಕಾರಣ ಎಂದು ಮಹಿಳೆಯರಿಗೆ ಧೃಡವಾಯಿತೋ ನಂತರ ಪೊಲೀಸರ ಬಗ್ಗೆ ಇದ್ದ ಅಳಿದುಳಿದ ಗೌರವ ಕೂಡ ಕಳೆದು ಹೋಯಿತು. ಈಗ ಏನಿದ್ದರೂ ಒಂದಿಷ್ಟು ಭಯ ಇದೆ ಆದರೆ ಡ್ರಗ್ಸ್ ತೆಗೆದುಕೊಳ್ಳುವ ಯುವಕರಿಗೆ ತಾವು ಗಾಂಜಾ ಸೇವನೆ ಮಾಡಿದ ನಂತರ ಎದುರಿಗೆ ಇರುವವರು ಪೊಲೀಸರೋ, ಒಡಹುಟ್ಟಿದ ಸಹೋದರನೋ ಎಂದು ಗೊತ್ತಾಗದಷ್ಟು ನಶೆ ಇರುವಾಗ ಅವರಿಗೆ ಏನು ಹೇಳುವುದು.
ಈಗ ಪೊಲೀಸರು ತಮ್ಮ ಮೇಲೆ ಹಲ್ಲೆ ಮಾಡಿದ ಆ ಯುವಕರನ್ನು ಬಂಧಿಸಿರಬಹುದು. ಮೊನ್ನೆ ಹಳೆ ನ್ಯೂಚಿತ್ರಾ ಥಿಯೇಟರ್ ಬಳಿ ಹಲ್ಲೆ ಮಾಡಿದ ಯುವಕರನ್ನು ಕೂಡ ಬಂಧಿಸಿರಬಹುದು. ಆದರೆ ಅವರಿಗೆ ಯಾವ ರೀತಿಯಲ್ಲಿ “ಪಾಠ” ಮಾಡಬೇಕೊ ಆ ರೀತಿಯಲ್ಲಿ ಮಾಡಿಬಿಡಬೇಕು. ಅದು ಬಿಟ್ಟು ನಾಳೆ ಆ ಹುಡುಗ ಹೊರಗೆ ಬಂದರೆ ಆತ ತನ್ನ ಸಮುದಾಯದಲ್ಲಿ ಹೀರೋ ಆಗುತ್ತಾನೆ. ಯಾಕೆಂದರೆ ಪೊಲೀಸರನ್ನೇ ಹೊಡೆದುಬಂದವರು ಎನ್ನುವ ಸ್ಟಾರ್ ಅವರ ಹೆಗಲ ಮೇಲೆ ಏರಿರುತ್ತದೆ. ಪೊಲೀಸರು ಅಂತಹ ಹುಡುಗರನ್ನು ಹೇಗೆ ವಿಚಾರಿಸಬೇಕು ಎಂದರೆ ಮುಂದೆ ಯಾರಾದರೂ ಡ್ರಗ್ಸ್ ತೆಗೆದುಕೊಂಡು ರಸ್ತೆಗೆ ಇಳಿದರೆ ಅವನಿಗೆ ಕತ್ತಲೆಯಲ್ಲಿಯೂ ಪೊಲೀಸರ ಸಮವಸ್ತ್ರ ಎದ್ದು ಕಾಣಬೇಕು. ಇನ್ನು ಹೀಗೆ ಬಂಧನವಾಗುವ ಯುವಕರ ಮೇಲೆ ಕನಿಷ್ಟ ಸೆಕ್ಷನ್ ಹಾಕುವಂತೆ ಮೇಲಿನಿಂದ ಒತ್ತಡ ಬರುತ್ತದೆ. ಆದರೆ ಯಾವ ಕಾರಣಕ್ಕೂ ಪೊಲೀಸ್ ಅಂತಹ ಕರೆಗಳಿಗೆ ರೆಸ್ಪಾನ್ ಮಾಡಲೇಬಾರದು. ಇನ್ನೊಂದು ಮುಖ್ಯ ವಿಷಯ ಎಂದರೆ ಪೊಲೀಸರ ರೈಫಲ್ ಗಳನ್ನು ಕಿತ್ತು ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದರೆ ಅವರ್ಯಾರೋ ಒವೈಸಿ ಸಂತಾನದವರೇ ಇರಬಹುದು. ಅವರನ್ನು ಜಾತಿ, ಧರ್ಮ, ಪ್ರಭಾವ ಬಳಸಿ ಬಿಡಿಸುವ ಕೆಲಸ ಯಾರೇ ಮಾಡಿದರೂ ಅವರ ವಿರುದ್ಧವೂ ಅಂತಹುದೇ ಕಠಿಣ ಕ್ರಮಗಳನ್ನು ಪೊಲೀಸರು ತೆಗೆದುಕೊಳ್ಳಬೇಕು. ಈಗ ಅಣ್ಣಾಮಲೈಯಂತಹ ಮಾಜಿ ಪೊಲೀಸ್ ಅಧಿಕಾರಿಗಳು ಹೇಗೆ ಇಡೀ ತಮಿಳು ರಾಜಕಾರಣದಲ್ಲಿ ತಮ್ಮ ಪ್ರಭಾವ ಬೀರುತ್ತಿದ್ದಾರೆ ಎಂದರೆ ಅವರು ತಮ್ಮ ಸೇವಾವಧಿಯಲ್ಲಿ ಬಹಳ ಕಡಿಮೆ ಅವಧಿಯಲ್ಲಿ ಜವಾಬ್ದಾರಿ ನಿರ್ವಹಿಸಿದ್ದರೂ ಇದಷ್ಟು ಸಮಯ ಜನರ ಉಪಕಾರಿಯಾಗಿಯೇ ಇದ್ದರು. ಅವರು ಅಧಿಕಾರ ತ್ಯಜಿಸಿ ಕೆಳಗೆ ಇಳಿದ ನಂತರವೂ ಅವರನ್ನು ಜನ ಗೌರವಿಸುತ್ತಾರೆ. ಆದರೆ ಕೆಲವು ಅಧಿಕಾರಿಗಳು ಮರಳಿನವರೊಂದಿಗೆ, ಅಡ್ಡೆಗಳೊಂದಿಗೆ ಚೆನ್ನಾಗಿ ಹೊಂದಿಕೊಂಡು ಹೋಗುವುದರಿಂದ ಅವರ ಬಗ್ಗೆ ಗೌರವ ಕಡಿಮೆಯಾಗುತ್ತಾ ಹೋಗುತ್ತದೆ. ಇದು ಎಲ್ಲಾ ಕ್ಷೇತ್ರಗಳಲ್ಲಿಯೂ ಇದೆ. ಕೆಲವರು ಬೇರೆಯವರ ಎಂಜಿಲಿಗೆ ನಾಲಿಗೆ ತಾಗಿಸಿ ಗೌರವ ಕಳೆದುಕೊಂಡು ಹೋಗುತ್ತಾರೆ. ಕೆಲವರು ಸಮಾಜದ ಒಳಿತಿಗೆ ಕಠಿಣ ನಿಲುವುಗಳನ್ನು ತಳೆಯುತ್ತಾರೆ. ಅಂತಹ ಕಠಿಣ ನಿಲುವುಗಳನ್ನು ಈಗ ಪೊಲೀಸ್ ವರಿಷ್ಠಾಧಿಕಾರಿಗಳು, ಪೊಲೀಸ್ ಕಮೀಷನರ್ ತಳೆಯಬೇಕು. ಇಲ್ಲದಿದ್ದರೆ ಪೊಲೀಸ್ ಕಾನ್ಸಟೇಬಲ್ಸ್ ಪೆಟ್ಟು ತಿನ್ನುತ್ತಲೇ ಇರುತ್ತಾರೆ. ನೀವು ಅದು ಪ್ರಚಾರಕ್ಕಾಗಿ ಹೊಡೆದಿದ್ದರು ಎಂದು ಹೇಳುತ್ತಲೇ ಇರುತ್ತೀರಿ..
Leave A Reply