ಹಿಂದೆ ಲಾಬಿ, ಈಗ ಹಣ ಕೊಟ್ಟರೆ ಕುಲಪತಿ ಹುದ್ದೆ ಸಿಗುವ ಕಾಲ!!
ನಮ್ಮ ಶಿಕ್ಷಣ ಕ್ಷೇತ್ರ ಈ ಮಟ್ಟದಲ್ಲಿ ಅಸಹ್ಯಕರ ಮಟ್ಟಕ್ಕೆ ಇಳಿದಿದೆಯಾ ಎನ್ನುವುದು ಮೊನ್ನೆ ಒಂದು ಘಟನೆ ಕೇಳುವಾಗ ನಿಜಕ್ಕೂ ಬೇಸರವಾಯಿತು. ಯಾಕೆಂದರೆ ಕುಲಪತಿಯ ಹುದ್ದೆಗೆ ಯಾವುದೋ ವ್ಯಕ್ತಿಗೆ ಲಕ್ಷಾಂತರ ರೂಪಾಯಿ ಹಣ ನೀಡಿ ಒಬ್ಬ ಪ್ರೋಫೆಸರ್ ಆ ಹುದ್ದೆ ಪಡೆಯಲು ಬಯಸುತ್ತಾರೆ ಎಂದಾದರೆ ಅದು ಎಷ್ಟರ ಮಟ್ಟಿಗೆ ಲಾಭ ಇರುವ ಹುದ್ದೆ ಎಂದು ಜನರಿಗೆ ಗೊತ್ತಾಗದೇ ಇರುವುದಿಲ್ಲ. ಜನಸಾಮಾನ್ಯರಿಗೆ ಬಿಡಿ, ಇದು ಅವರಿಗೆ ಬಿದ್ದು ಹೋದ ವಿಷಯ ಅಲ್ಲ. ಆದರೆ ವಿಶ್ವವಿದ್ಯಾನಿಲಯದಲ್ಲಿ ಕಲಿಯುವ ಮಕ್ಕಳಿಗೆ ಅದರಲ್ಲಿಯೂ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕಲಿಯುತ್ತಿರುವ, ಕಲಿತ ಹಾಗೂ ಅಲ್ಲಿ ಬೇರೆ ಬೇರೆ ಹುದ್ದೆಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಇದು ಹೇಗಾಗಬೇಡಾ? ಅಷ್ಟಕ್ಕೂ ನನ್ನಂತವರಿಗೆ ಇದೇನೂ ಶಾಕಿನ ವಿಷಯ ಅಲ್ಲ. ಮಂಗಳೂರು ವಿಶ್ವವಿದ್ಯಾನಿಲಯದ ಎನ್ನುವುದು ಇತರ ಅನೇಕ ವಿಶ್ವವಿದ್ಯಾನಿಲಯಗಳಂತೆ ಒಳ್ಳೆಯ ಮೇಯುವ ಫಲವತ್ತಾದ ಹುಲ್ಲುಗಾವಲು. ಇಲ್ಲಿನ ಭ್ರಷ್ಟಾಚಾರ ರಾಜ್ಯದ ವಿಧಾನಸಭೆ ಹಾಗೂ ವಿಧಾನಪರಿಷತ್ ನಲ್ಲಿ ಚರ್ಚೆಯಾಗಿದೆ. ವಿಧಾನಸಭೆಯಲ್ಲಿ ವೇದವ್ಯಾಸ ಕಾಮತ್, ವಿಧಾನಪರಿಷತ್ ನಲ್ಲಿ ರವಿಕುಮಾರ್ ಅವರು ಸರಕಾರದ ಗಮನ ಸೆಳೆದಿದ್ದಾರೆ. ಆಗ ಸಂಮಿಶ್ರ ಸರಕಾರ ಇತ್ತು. ಜಿಟಿ ದೇವೆಗೌಡರು ಸಚಿವರಾಗಿದ್ದರು ಮತ್ತು ಈ ಬಗ್ಗೆ ಸೂಕ್ತ ತನಿಖೆ ಮಾಡಿ ಮೂರು ತಿಂಗಳೊಳಗೆ ವರದಿ ಕೊಡುವಂತೆ ಸೂಚಿಸಿದ್ದರು. ಅದರ ನಂತರ ಆ ಸರಕಾರ ಬಿತ್ತು. ಯಾರು ಸದನದಲ್ಲಿ ಧ್ವನಿ ಎತ್ತಿದ್ದರೋ ಅವರದ್ದೇ ಸರಕಾರ ಬಂತು. ಈಗ ಭ್ರಷ್ಟಾಚಾರ ನೇರವಾಗಿ ಕೊಣಾಜೆಯ ರಸ್ತೆಗೆ ಬಂದು ಬಿದ್ದು ನಲಿದಾಡುತ್ತಿದೆ. ಒಬ್ಬ ಪ್ರಸಾದ್ ಅತ್ತಾವರ ಎನ್ನುವ ವ್ಯಕ್ತಿ ಆ ಹುದ್ದೆ ಕೊಡಿಸುತ್ತೇನೆ ಎಂದು ಭರವಸೆ ನೀಡಿ 17 ಲಕ್ಷ ವಸೂಲಿ ಮಾಡಿದ್ದ ಎಂದು ಹಣ ಕೊಟ್ಟ ವ್ಯಕ್ತಿಯಿಂದಲೇ ಪ್ರಕರಣ ದಾಖಲಾಗಿದೆ. ಅಷ್ಟಕ್ಕೂ ಅವರು ಹಣ ಕೊಟ್ಟಿದ್ದು ಯಾಕೆ? ಹಣ ತೆಗೆದುಕೊಂಡವರು ಯಾರ್ಯಾರಿಗೋ ಕೊಡಲು ಇದೆಯಾ? ಈಗಿನ ಸರಕಾರದಲ್ಲಿ ಹೀಗೆ ದಲ್ಲಾಳಿಗಳು ಸಚಿವರ ಹಾಗೂ ಸ್ಥಾನಾಂಕ್ಷಿಗಳ ನಡುವೆ ಕೊಂಡಿಯಾಗಿ ಇದ್ದಾರಾ ಎಂದು ತನಿಖೆ ಮಾಡಬೇಕು. ಹದಿನೇಳು ಲಕ್ಷ ರೂಪಾಯಿ ಹಣ ಕೊಟ್ಟು ಒಂದು ಹುದ್ದೆ ಪಡೆಯಬೇಕಾದರೆ ಆ ವ್ಯಕ್ತಿ ನಂತರ ಎಷ್ಟು ಹಣ ಹೊಡೆಯಬಹುದು ಎಂದು ಸಂಚು ಹಾಕಿರಬಹುದು. ವಿವಿಯಲ್ಲಿ ಕಟ್ಟಡ ನಿರ್ಮಾಣ, ತೋಟ ನಿರ್ವಹಣೆ, ಹಾಸ್ಟೆಲ್ ನಿಂದ ಹಿಡಿದು ಎಲ್ಲೆಂಲ್ಲಿಂದ ಹಣ ಮಾಡಬಹುದು ಎನ್ನುವ ಬಗ್ಗೆ ಈಗಾಗಲೇ ಮಾಧ್ಯಮಗಳಲ್ಲಿ ಸ್ಪೆಶಲ್ ಸ್ಟೋರಿ ಬಂದಿದೆ. ನಾವೇ ನಮ್ಮ ತುಳುನಾಡು ನ್ಯೂಸ್ ನಲ್ಲಿ ಜಾಗೃತ ಅಂಕಣದಲ್ಲಿ ಬರೆದಿದ್ದೇವೆ. ಇಷ್ಟೆಲ್ಲ ಇರುವಾಗ ಭ್ರಷ್ಟಾಚಾರ ಕಡಿಮೆ ಆಗಬೇಕು ಎನ್ನುವ ಕಾರಣಕ್ಕೆ ಹಿಂದಿನ ಪ್ರೋ. ಭೈರಪ್ಪ ಹಾಗೂ ಎಎಂ ಖಾನ್ ಅವರ ಬಗ್ಗೆ ತನಿಖೆ ನಡೆಸಲು ವಿದ್ಯಾರ್ಥಿ ಸಂಘಟನೆಗಳು ಕೂಡ ಮನವಿ ಮಾಡಿದ್ದವು. ಆಗ ಈ ಬಗ್ಗೆ ತನಿಖೆ ಮಾಡುವುದಾಗಿ ಭರವಸೆ ಕೂಡ ಸಿಕ್ಕಿತ್ತು. ಶಿಕ್ಷಣ ಕ್ಷೇತ್ರ ಯಾವಾಗಲೂ ಭ್ರಷ್ಟಾಚಾರದಿಂದ ಮುಕ್ತವಾಗಿ ಇದ್ದರೆ ಮಾತ್ರ ಅದಕ್ಕೊಂದು ಘನತೆ. ಯಾಕೆಂದರೆ ಅವು ವಿದ್ಯಾದೇಗುಲಗಳು. ಅಲ್ಲಿಂದಲೇ ಉನ್ನತ ವಿದ್ಯಾಭ್ಯಾಸ ಮುಗಿಸಿ ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯುತ್ತಾರೆ. ಆದರೆ ಇಲ್ಲಿ ಇದೇ ವಿಶ್ವವಿದ್ಯಾನಿಲಯ ನಿತ್ಯ ಕೆಟ್ಟ ವಿಷಯಗಳಿಗೆ ಸುದ್ದಿಯಾಗುವುದು ನೋಡುವಾಗ ಯುವ ಜನಾಂಗಕ್ಕೆ ಇವರು ಕೊಡುವ ಸಂದೇಶ ಏನು? ಹದಿನೇಳು ಲಕ್ಷ ಕೊಟ್ಟ ಶಿಕ್ಷಕ ಅದನ್ನು ಚಾರಿಟಿ ಎಂದು ಕೊಡಲು ಸಾಧ್ಯವೇ ಇಲ್ಲ. 17 ಲಕ್ಷ ಹಾಕಿ ಲೆಕ್ಕವಿಲ್ಲದಷ್ಟು ಬಾಚುವ ಸ್ಕೆಚ್ ಇದ್ದೇ ಇರುತ್ತದೆ. ಯಾಕೆಂದರೆ ಹಿಂದೆ ಆಗಿ ಹೋಗಿರುವ ಕೆಲವರು ಮಾದರಿಯಾಗಿ ಭ್ರಷ್ಟ ವ್ಯವಸ್ಥೆಗೆ ದಾರಿದೀಪವಾಗಿದ್ದಾರೆ. ಅವರನ್ನು ನೋಡಿಯೇ ಉಳಿದವರು ಕಲಿತಿರುತ್ತಾರೆ. ನೇರವಾಗಿ ಸರಕಾರದಲ್ಲಿ ಯಾರನ್ನು ಹಿಡಿಯಬೇಕು ಎನ್ನುವ ವಿಷಯ ಗೊತ್ತಿಲ್ಲದವರು ಅಡ್ಡಹಾದಿಯಲ್ಲಿ ಹಣ ಮಾಡಲು ಕೆಲವು ಬ್ರೋಕರ್ ಗಳಂತವರ ಮೊರೆ ಹೋಗುತ್ತಾರೆ. ಒಂದು ವೇಳೆ ಅರ್ಹತೆ ಮತ್ತು ಯೋಗ ಇದೆ ಎಂದರೆ ನಿಮ್ಮನ್ನು ಯಾವ ಹುದ್ದೆಗೆ ಏರಲು ಯಾರೂ ಅಡ್ಡಿಪಡಿಸಲು ಸಾಧ್ಯವಿರುವುದಿಲ್ಲ. ಆದರೆ ಅದು ಇಲ್ಲದೆ ಹಿಂದಿನ ಬಾಗಿಲಿನಿಂದ ಒಳಗೆ ಹೋಗಿ ರಾಜಾರೋಷವಾಗಿ ಹಣ ಮಾಡಿ ರಾಜಮಾರ್ಗದಲ್ಲಿ ಹೊರಗೆ ಹೋಗುವ ದುರಾಸೆ ಇದ್ದವರು ಹೀಗೆ ಮಾಡುತ್ತಾರೆ. ಹಿಂದೆ ಭ್ರಷ್ಟಾಚಾರ ಎನ್ನುವುದು ಎಲ್ಲಿ ಎಂದು ಹುಡುಕಲು ಹೋದಾಗ ಮೊದಲು ಸಿಗುತ್ತಿದ್ದ ಕ್ಷೇತ್ರ ಅದು ರಾಜಕೀಯ. ಈಗ ಹಾಗಲ್ಲ. ಪ್ರತಿಯೊಂದರಲ್ಲಿಯೂ ಭ್ರಷ್ಟಚಾರ ಇದ್ದೇ ಇದೆ. ಆದರೆ ಸರಸ್ವತಿಯ ಕಾಲಕೆಳಗೆ ಅದು ಇರಬಾರದು ಎಂದರೆ ಅರ್ಹರಿಗೆ ಹುದ್ದೆಗಳು ಸಿಗಬೇಕು. ಇಲ್ಲಿ ಹುದ್ದೆ ಕೊಡಿಸಲು ಹಣ ತೆಗೆದುಕೊಂಡ ವ್ಯಕ್ತಿ ಮಾತ್ರ ತಪ್ಪಿತಸ್ಥನಲ್ಲ, ಅವನಿಗೆ ಹಣ ಕೊಟ್ಟವರು ಕೂಡ ತಪ್ಪಿತಸ್ಥರು. ಈ ಪ್ರಕರಣವನ್ನು ಹೀಗೆ ಬಿಡಬಾರದು. ಸೂಕ್ತ ತನಿಖೆ ಆದರೆ ಇನ್ನಷ್ಟು ಬ್ರಹ್ಮಾಂಡ ಭ್ರಷ್ಟಾಚಾರ ಹೊರಗೆ ಬೀಳಬಹುದು. ಹಣ ತೆಗೆದುಕೊಂಡವರು ಯಾರಿಗೆ ಕೊಡಲು ಹಣ ವಸೂಲಿ ಮಾಡಿದರು, ಯಾರ ಧೈರ್ಯದಲ್ಲಿ ಇದಕ್ಕೆ ಕೈ ಹಾಕಿದರು ಎನ್ನುವುದು ಕೂಡ ಕುತೂಹಲಕಾರಿ ವಿಷಯ. ದೇಶಭಕ್ತರು ಅಧಿಕಾರದಲ್ಲಿ ಇರುವುದರಿಂದ ತಾಯಿ ಸರಸ್ವತಿಯ ನೆಲದಲ್ಲಿ ಹೀಗೆ ಆಗುವ ಸಾಧ್ಯತೆ ಕಡಿಮೆ ಇರಬೇಕಿತ್ತು!
Leave A Reply