ಸಿಎಂಗೆ ಎರಡನೇ ಬಾರಿ ಕೊರೊನಾ, ನಾವು ಕಲಿಯಬೇಕಾದ ಪಾಠ ಸಾಕಷ್ಟಿದೆ!!
Posted On April 16, 2021
ಕೊರೊನಾ ಎರಡನೇ ಅಲೆಯಲ್ಲಿ ಸಿಎಂ ಯಡ್ಯೂರಪ್ಪನವರು ಪಾಸಿಟಿವ್ ಆಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಎರಡನೇ ಸಲ ಪಾಸಿಟಿವ್ ಬಂದಿದೆ. ಅವರು ಈಗಾಗಲೇ ಮೊದಲ ಡೋಸ್ ಲಸಿಕೆ ತೆಗೆದುಕೊಂಡಿದ್ದರು. ನಿರಂತರವಾಗಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಅವರಿಗೆ ಯಾರೋ ಕೊರೊನಾ ತಗುಲಿಸಿರಬಹುದು. ಅವರೊಂದಿಗಿದ್ದ ಮುಖಂಡರಿಗೂ ಈಗ ಪರೀಕ್ಷೆ ಮಾಡಿದರೆ ಕೆಲವರಿಗಾದರೂ ಸೊಂಕು ತಗಲಿರುವ ಸಾಧ್ಯತೆಗಳಿವೆ. ಇನ್ನು ಕೆಲವು ದಿನ ಮಾಧ್ಯಮಗಳಲ್ಲಿ ಯಡಿಯೂರಪ್ಪನವರದ್ದೇ ಕೊರೊನಾ ಪಾಸಿಟಿವ್ ಸುದ್ದಿ ಬರಲಿದೆ. ಇಲ್ಲಿಯ ತನಕ ಟಿವಿಗಳಲ್ಲಿ ಕೊರೊನಾ ಪೀಡಿತರಿಗೆ ಬೆಡ್ ಇಲ್ಲ, ಸತ್ತರೆ ಸ್ಮಶಾನದಲ್ಲಿ ಕ್ಯೂ, ಇಷ್ಟಿಷ್ಟು ಸಾವಿರ ರೂಪಾಯಿಗಳನ್ನು ಕಟ್ಟಬೇಕು, ಶವದ ಪಕ್ಕದಲ್ಲಿ ಪಾಸಿಟಿವ್ ರೋಗಿಗೆ ಚಿಕಿತ್ಸೆ ಹೀಗೆ ನಿರಂತರವಾಗಿ ಅದೇ ಸುದ್ದಿಗಳು ಬರುತ್ತಿದ್ದವು. ಯಡ್ಡಿ ಪಾಸಿಟಿವ್ ವಿಷಯ ಕೆಲವು ದಿನ ಮುಗಿದ ಬಳಿಕ ಮತ್ತೆ ಮಾಧ್ಯಮಗಳು ಯಥಾಪ್ರಕಾರ ಅದೇ ಕೊರೊನಾ ಪೀಡಿತರ ಕುಟುಂಬದವರ ಆಕ್ರಂದನ, ಹೆಣ ಸುಡುವ ದೃಶ್ಯಗಳು ಕಾಮನ್ ಆಗಿ ಬರಲಿವೆ. ಕೆಲವರು ಈ ಎರಡನೇ ಅಲೆಯ ನಡುವೆ ನಡೆಯುತ್ತಿರುವ ಕುಂಭಮೇಳ ಮತ್ತು ಮೊದಲನೇ ಅಲೆಯ ಸಂದರ್ಭ ನಡೆದ ತಬ್ಲೀಘಿಗಳ ಸಮಾವೇಶದ ಬಗ್ಗೆ ತುಲನೆ ಮಾಡಿ ವಿಶ್ಲೇಷಿಸುತ್ತಿದ್ದಾರೆ. ಅದೀಗ ಹಿಂದೂ-ಮುಸ್ಲಿಂ ಧರ್ಮಗಳ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪವಾಗಿ ಪರಿಣಮಿಸುತ್ತಿದೆ. ಮೀಡಿಯಾದವರು ಕುಂಭಮೇಳದ ಬಗ್ಗೆ ಮಾತನಾಡುವುದಿಲ್ಲ ಎನ್ನುವ ತಬ್ಲಿಘೀಗಳ ಪರವಾಗಿರುವವರ ವಾದವೂ ಇದೆ. ಮಾಧ್ಯಮದವರು ಎಲ್ಲರ ಬಗ್ಗೆನೂ ಮಾತನಾಡುತ್ತಾರೆ. ಆದರೆ ವಿಷಯ ಇರುವುದು ನಾವು ಯಾಕೆ ಕೊರೊನಾದೊಂದಿಗೆ ಜಾತಿ, ಧರ್ಮ, ಪಕ್ಷವನ್ನು ಸೇರಿಸಿ ಮಾತನಾಡುತ್ತಿದ್ದೇವೆ. ಲಸಿಕೆ ತೆಗೆದುಕೊಳ್ಳಿ ಎಂದು ಸರಕಾರ ಹೇಳುವಾಗಲೂ ಕೆಲವರು ನಮಗೆ ರಾಹುಲ್ ಗಾಂಧಿ ಹೇಳುವ ತನಕ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಕೆಲವರು ಇದು ಮೋದಿ ಲಸಿಕೆ ಎಂದುಕೊಂಡು ತೆಗೆದುಕೊಳ್ಳದವರು ಇದ್ದಾರೆ. ಇದು ಯಾಕೆ ರಾಜಕೀಯವಾಗಿ ಬದಲಾಯಿತು ಎನ್ನುವುದೇ ಆಶ್ಚರ್ಯ. ಯಾಕೆಂದರೆ ವೈರಸಿಗೆ ತಾನು ಒಳಗೆ ಪ್ರವೇಶಿಸುತ್ತಿರುವುದು ಕಾಂಗ್ರೆಸ್ಸಿನವನ ದೇಹದ ಒಳಗೋ ಅಥವಾ ಬಿಜೆಪಿಯವನ ದೇಹದ ಒಳಗೋ ಎಂದು ಗೊತ್ತಿರುವುದಿಲ್ಲ. ಕೆಲವೆಡೆ ಚುನಾವಣೆಗೆ ನಿಂತ ಅಭ್ಯರ್ಥಿಗಳೇ ಪಾಸಿಟಿವ್ ಆಗಿ ಸತ್ತು ಹೋಗಿದ್ದಾರೆ. ಇನ್ನು ಬಿಜೆಪಿಯೇತರ ರಾಜ್ಯಗಳಲ್ಲಿ ಲಸಿಕೆ ಕಡಿಮೆ ಪೂರೈಸಲಾಗಿದೆ ಎನ್ನುವ ಮಾತುಗಳನ್ನು ಆಡಿ ಕೆಲವರು ಇದರಲ್ಲಿಯೂ ರಾಜಕೀಯ ಹುಡುಕುತ್ತಿದ್ದಾರೆ. ಇನ್ನು ಭಾರತದಂತಹ ರಾಷ್ಟ್ರದಲ್ಲಿ 130 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಕಾಳ್ಗಿಚ್ಚಿನಂತೆ ಹರಡುತ್ತಿರುವ ಕೊರೊನಾವನ್ನು ನಿಯಂತ್ರಣಕ್ಕೆ ತರುವುದು ಚಿಕ್ಕ ವಿಷಯ ಅಲ್ಲ. ಒಂದೊಂದು ರಾಜ್ಯದ ಭೌಗೋಳಿಕ ಪರಿಸ್ಥಿತಿಯೂ ಬೇರೆ ಬೇರೆ. ಅಲ್ಲಿ ಯಾವ ರೀತಿಯ ಸರಕಾರ ಇದೆ, ಜನಪ್ರತಿನಿಧಿಗಳು, ಅಧಿಕಾರಿಗಳು ಯಾವ ರೀತಿಯ ಆಡಳಿತ ಮಾಡುತ್ತಿದ್ದಾರೆ, ಯಾವ ರೀತಿಯ ಆರೋಗ್ಯ ವ್ಯವಸ್ಥೆ ಇದೆ ಎಂದು ತಿಳಿಯುವಾಗಲೇ ವರ್ಷಗಳು ಕಳೆಯುತ್ತವೆ. ಹಾಗಿರುವಾಗ ಮೋದಿಗೆ ಪ್ರತಿಯೊಂದು ಜಿಲ್ಲೆಯ ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ ಹೋಗಿ ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಲಸಿಕೆ ಹಾಕಲು ಆಗುವುದಿಲ್ಲ. ಇನ್ನು ಎಲ್ಲಿಯ ತನಕ ದುರಂತ ಎಂದರೆ ಲಸಿಕೆ ಸರಿಯಾಗಿ ವಿಲೇವಾರಿ ಆಗದೇ ಹಾಳಾಗಿ ಪೋಲಾಗುತ್ತಿದೆ. ಅದನ್ನು ಸರಿಯಾದ ರೀತಿಯಲ್ಲಿ ತಲುಪಿಸುವ ಕೆಲಸ ಮಾಡಬೇಕಿದ್ದವರ ನಿರ್ಲಕ್ಷ್ಯವೂ ಇದಕ್ಕೆ ಕಾರಣವಾಗಿದೆ. ಇನ್ನು ಚುನಾವಣೆಗಳು ಕೂಡ ಕೊರೊನಾ ಇಲ್ಲದ ಸಮಯದಲ್ಲಿ ಹೇಗೆ ನಡೆಯುತ್ತಿತ್ತೋ ಅಷ್ಟೇ ಭರ್ಜರಿಯಾಗಿ ನಡೆದವು. ಅದನ್ನು ನಿಲ್ಲಿಸಲು ಯಾರಿಗೂ ಸಾಧ್ಯವಾಗಿಲ್ಲ. ಬೃಹತ್ ಸಮಾವೇಶಗಳು ನಿಜಕ್ಕೂ ಅಗತ್ಯ ಇರಲಿಲ್ಲ. ಈಗ ಆಧುನಿಕ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳಿಂದ ಜನರಿಗೆ ತಮ್ಮ ವಿಷಯಗಳನ್ನು ಪಕ್ಷಗಳು ತಲುಪಿಸಬಹುದಿತ್ತು. ಇನ್ನು ಸಮಾವೇಶಗಳಿಗೆ ಸೇರಿದ ಲಕ್ಷೊಪಲಕ್ಷ ಜನರಿಗೆ ನಾಯಕರ ಮಾತುಗಳನ್ನು ಕೇಳಿಸುವ ಆಸಕ್ತಿ ನಿಜಕ್ಕೂ ಇತ್ತಾ? ಆ ಒಣ ಭಾಷಣಗಳು ಯಾರಿಗೆ ಬೇಕು. ಅಷ್ಟಕ್ಕೂ ಹೆಚ್ಚಿನ ಸಭೆಗಳು ಲೈವ್ ಆಗಿ ಟಿವಿಯಲ್ಲಿ ಬಂದಿರುತ್ತಿದ್ದವು. ಅದನ್ನು ಟಿವಿಯಲ್ಲಿಯೇ ನೋಡಬಹುದಿತ್ತಲ್ಲ. ಒಟ್ಟಿನಲ್ಲಿ ಎಲ್ಲಾ ಕಡೆ ಶಕ್ತಿ ಪ್ರದರ್ಶನ ಆಯಿತು. ಈಗ ಪ್ರಕೃತಿ ತನ್ನ ಶಕ್ತಿ ತೋರಿಸಲು ಶುರು ಮಾಡಿದೆ. ಈಗ ನಾವು ಮಾಡಬೇಕಾಗಿರುವ ಪ್ರಧಾನ ಕೆಲಸವೆನೆಂದರೆ ನಮ್ಮ ಸುರಕ್ಷತೆಯನ್ನು ನಾವು ಕಾಪಾಡುವುದು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ಸ್ಯಾನಿಟೈಜರ್ ಮಾಡುವುದು ಎಲ್ಲವನ್ನು ಮಾಡುತ್ತಾ ನಮ್ಮ ಆರೋಗ್ಯ ಕಾಪಾಡುವುದು. ಇನ್ನು ಟಿವಿಗಳು ಕೂಡ ಇಡೀ ದಿನ ಹೆಣಗಳ ವಿಡಿಯೋಗಳನ್ನೇ ತೋರಿಸಿ ಹೆದರಿಸುವುದಕ್ಕಿಂತ ಆತ್ಮಸ್ಥೈರ್ಯ ಹೆಚ್ಚಿಸುವ ಕಾರ್ಯಕ್ರಮ ಮಾಡಬೇಕು. ಯಾಕೆಂದರೆ ಸತ್ತ ಎಲ್ಲರೂ ಕೊರೊನಾದಿಂದಲೇ ಸತ್ತದ್ದಲ್ಲ. ಅನೇಕ ಕಾಯಿಲೆಗಳು ಇದ್ದಾಗ ಈ ಒಂದು ವೈರಸ್ ದೇಹದೊಳಗೆ ಪ್ರವೇಶಿಸಿ ಸಿಸ್ಟಮ್ ಹಾಳು ಮಾಡುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ, ಪಾನೀಯ ಸೇವಿಸುತ್ತಾ ಆರಾಮವಾಗಿರೋಣ. ಬೇಕಾದರೆ ಟಿವಿ ನೋಡದಿದ್ದರೂ ನಡೆಯುತ್ತೆ. ಹೇಗೂ ಸುದ್ದಿಗಳಿಗೆ ಮರುದಿನ ಪೇಪರ್ ಸಾಕಲ್ಲ!
- Advertisement -
Trending Now
ಕೆಆರ್ ಎಸ್ ರಸ್ತೆಗೆ ಸಿದ್ಧರಾಮಯ್ಯ ಹೆಸರು ಇಡಲು ಚಿಂತನೆ, ಪರ -ವಿರೋಧ!
December 25, 2024
ರಾಜ್ಯದಲ್ಲಿ ಪ್ರಪ್ರಥಮ ಮೂಳೆ ದಾನ!
December 25, 2024
Leave A Reply