ಇದು ಮಲೇರಿಯಾ ಮಾಸಾಚರಣೆ, ಲೇಡಿಗೋಶನ್ ತೋಡುಗಳನ್ನು ನೋಡಿ!!
ಮಂಗಳೂರು ನಗರದ ಹೃದಯಭಾಗದಲ್ಲಿ ಲೇಡಿಗೋಶನ್ ಆಸ್ಪತ್ರೆ ಇದೆ. ಇದು ಸರಕಾರಿ ಆಸ್ಪತ್ರೆ. ಅದರಲ್ಲಿಯೂ ಹೆರಿಗೆ ಆಸ್ಪತ್ರೆ. ಅಂತಹ ಆಸ್ಪತ್ರೆಗಳು ಹೇಗಿರಬೇಕು ಎಂದರೆ ಒಳಗೆ ಮಾತ್ರ ಕ್ಲೀನ್ ಅಲ್ಲ, ಆಸ್ಪತ್ರೆಯ ಹೊರಗೂ ಕ್ಲೀನ್ ಇರಬೇಕು. ನಾನು ಇವತ್ತು ಕೆಲವು ಫೋಟೋಗಳನ್ನು ಇದರಲ್ಲಿ ಪೋಸ್ಟ್ ಮಾಡುತ್ತಿದ್ದೇನೆ. ಈ ಫೋಟೋಗಳನ್ನು ನೋಡುತ್ತಿದ್ದರೆ ಅಸಹ್ಯ ಬರುತ್ತದೆ. ಅಸಹ್ಯ ಮಾತ್ರವಲ್ಲ ಗಾಬರಿ ಹುಟ್ಟುತ್ತದೆ. ಯಾಕೆಂದರೆ ಇದನ್ನು ನೋಡಿದರೆ ಯಾವ ಗರ್ಭಿಣಿ ತಾನೇ ಈ ತೋಡು ಇರುವ ಆಸ್ಪತ್ರೆಯಲ್ಲಿ ಡೆಲಿವರಿ ಹೊಂದಲು ಬಯಸುತ್ತಾಳೆ. ಅಷ್ಟಕ್ಕೂ ಇದನ್ನು ಯಾಕೆ ಹೀಗೆ ಬಿಡಲಾಗಿದೆ. ಯಾಕೆಂದರೆ ಇಚ್ಚಾಶಕ್ತಿಯ ಕೊರತೆ ಇದೆ. ಆಸ್ಪತ್ರೆಗೆ ತಾಗಿಕೊಂಡಿರುವ ಈ ತೋಡುಗಳು ನತದೃಷ್ಟ ಹೆಣ್ಣುಮಕ್ಕಳನ್ನು ಕಂಡು ಅಯ್ಯೋ ಎನ್ನುತ್ತಿರಬಹುದು. ಆದರೆ ಆಸ್ಪತ್ರೆಯ ಆರ್ ಎಂಒ ಅವರಿಗೆ ಅಂತಹ ಕರುಣೆ ಬರುವುದಿಲ್ಲವೇ? ಸರಿಯಾಗಿ ನೋಡಿದರೆ ಅವರಿಗೆ ಈ ತೋಡುಗಳನ್ನು ಸ್ವಚ್ಚ ಮಾಡಿಸುವುದು ಕಷ್ಟದ ಕೆಲಸವಲ್ಲ. ಯಾಕೆಂದರೆ ಇಂತಹ ಸ್ಪಚ್ಚತೆ ಮಾಡಲಿಕ್ಕೆಂದೆ ಲೇಡಿಗೋಶನ್ ಆಸ್ಪತ್ರೆಯಲ್ಲಿ ಸ್ವಚ್ಚತೆಯನ್ನು ಹೊರಗುತ್ತಿಗೆಯ ಮೇಲೆ ನೀಡಲಾಗಿದೆ. ಹೌಸ್ ಕೀಪಿಂಗ್ ನವರಿಗೆ ಕರೆದು ಸೂಚನೆ ಕೊಟ್ಟು ಆ ಬಗ್ಗೆ ಯಾರಿಗಾದರೂ ಫಾಲೋ ಅಪ್ ಮಾಡಲು ಹೇಳಿದರೆ ಮುಗಿಯಿತು. ಮರುದಿನ ಆರ್ ಎಂಒ ಬರುವುದರೊಳಗೆ ಸ್ವಚ್ಚವಾಗುತ್ತದೆ. ಆದರೂ ಇವರು ಹೇಳಿ ಮಾಡಿಸುವುದಿಲ್ಲ. ಅದರಿಂದ ತ್ಯಾಜ್ಯದಲ್ಲಿಯೇ ಆ ತೋಡುಗಳು ಸಮೃದ್ಧಿಯಾಗಿ ಬೆಳೆದಿವೆ. ಗಿಡಗಳು ತೋಡಿನಲ್ಲಿ ಯಥೇಚ್ಚವಾಗಿ ಸಿಗುವ ಪೌಷ್ಟಿಕಾಂಶಗಳನ್ನು ಸೇವಿಸಿ ಫಸಲಾಗಿ ಬೆಳೆಯುತ್ತಿವೆ. ಇನ್ನೊಂದೆರಡು ಮಳೆ ಬಂದರೆ ತೋಡು ಗಿಡಗಂಟಿಗಳಿಂದ ಮುಚ್ಚಿ ಹೋಗುತ್ತದೆ. ಇನ್ನು ಈ ತೋಡುಗಳಲ್ಲಿ ಎಲ್ಲಿಂದಲೋ ಕಸದ ಡಬ್ಬಿಗೆ ಬಿಸಾಡಬೇಕಾದ ವೇಸ್ಟ್ ಗಳು ಬಂದು ಬಿದ್ದಿವೆ. ಲೆಕ್ಕಪ್ರಕಾರ ತೋಡಿನಲ್ಲಿ ಸಿಲುಕಿರುವ ಕಬ್ಬಿಣದ ರಾಡಿನ ಬಗ್ಗೆ ಗಮನಹರಿಸಿ ಅದನ್ನು ತೆಗೆದುಹಾಕಿದರೆ ಸ್ಪಚ್ಚತೆಗೆ ತುಂಬಾ ಅನುಕೂಲವಾಗುತ್ತೆ. ಈಗ ಮಳೆಯ ನೀರು ಬಂದು ಇಲ್ಲಿ ಬ್ಲಾಕ್ ಆಗುವುದರಿಂದ ಅದು ಮಲೇರಿಯಾ ಮತ್ತು ಡೆಂಗ್ಯೂ ವೈರಾಣುಗಳಿಗೆ ಫ್ಯಾಂಟಸಿ ಪಾರ್ಕ್ ತರಹ ಆಗಿರಬಹುದು.
ಇದು ಮಲೇರಿಯಾ ಮಾಸಾಚರಣೆಯ ಸಮಯ. ಮಳೆಗಾಲ ಬರುವ ಮೊದಲು ನಾವು ಎಚ್ಚರಿಕೆ ವಹಿಸಬೇಕಾಗಿರುವ ಕಾಲಾವಧಿ. ಕಳೆದ ಋತುವಿನಲ್ಲಿ ಮಲೇರಿಯಾ ನಮ್ಮ ಜಿಲ್ಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಅದಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಮತ್ತು ವೈದ್ಯರು ಸಾಕಷ್ಟು ಜಾಗೃತಿ ಮೂಡಿಸಿದ್ದೇ ಕಾರಣವಾಗಿತ್ತು. ಅಲ್ಲಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರು ಹೋಗಿ ತಿಳಿ ಹೇಳಿದ್ದರು. ಹಳ್ಳಿಮಟ್ಟದಲ್ಲಿಯೂ ಪ್ರಜ್ಞೆ ಬೆಳೆದಿತ್ತು. ನೀರು ನಿಲ್ಲದಂತೆ ಕ್ರಮ ವಹಿಸಲಾಗಿತ್ತು. ನೀರು ನಿಲ್ಲಬಹುದಾದ ಜಾಗಗಳಲ್ಲಿ ನಾಗರಿಕರು ಪೂರ್ವಭಾವಿಯಾಗಿ ಸ್ವಚ್ಚ ಮಾಡಿ ನೀರು ಹರಿದುಹೋಗುವಂತೆ ಮಾಡಿದ್ದರು. ಆದ್ದರಿಂದ ಮಲೇರಿಯಾ ಮತ್ತು ಡೆಂಗ್ಯೂ ಕರೋನಾ ಕಾಟದಲ್ಲಿ ಅಡಗಿಕುಳಿತುಕೊಂಡಿದ್ದವು. ಈ ಬಾರಿಯೂ ಜಾಗೃತಿ ಜನರಲ್ಲಿದೆ. ಆ ಬಗ್ಗೆ ಇಲಾಖೆ, ವೈದ್ಯರು ತಮ್ಮ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ದೀಪದ ಕೆಳಗೆ ಕತ್ತಲು ಎನ್ನುವಂತೆ ಊರೆಲ್ಲ ಸ್ವಚ್ಚವಾಗಿದ್ದು, ಊರಿನ ಆಸ್ಪತ್ರೆಯ ತೋಡಿನಲ್ಲಿಯೇ ತ್ಯಾಜ್ಯ ಕೊಳೆತು ನಾರುತ್ತಿದ್ದರೆ ಅದೇ ಮಲೇರಿಯಾ ಉತ್ಪಾದನಾ ತಾಣವಾಗಿ ಬಿಟ್ಟರೆ ಏನೂ ಮಾಡಲು ಸಾಧ್ಯವಿಲ್ಲ. ಇದು ಜನರಿಗೆ ಗೊತ್ತಾದರೆ ಮೊದಲು ಲೇಡಿಗೋಶನ್ ಆಸ್ಪತ್ರೆಯ ತೋಡು ಸರಿ ಮಾಡಿ, ಮತ್ತೆ ನಮಗೆ ಬುದ್ಧಿ ಹೇಳಿ ಎಂದು ಹೇಳಿಯಾರು. ಸೊಳ್ಳೆ ಉತ್ಪತ್ತಿಯಾಗುವಂತಹ ವಿಡಿಯೋ ಮಾಡುವವರಿಗೆ ಈ ಜಾಗ ಪ್ರಶಸ್ತ್ಯವಾಗಿದೆ. ಬೇರೆ ಎಲ್ಲಿಯೂ ಹೋಗಬೇಕಾಗಿಲ್ಲ. ಸೀದಾ ಲೇಡಿಗೋಶನ್ ಆಸ್ಪತ್ರೆಯ ಬಳಿ ಬಂದರೆ ಆಯಿತು.
ಇನ್ನು ಈ ಬಗ್ಗೆ ಆಸ್ಪತ್ರೆಯವರು ಕೇರ್ ತೆಗೆದುಕೊಳ್ಳದೇ ಹೋದರೆ ಇದು ಮುಂದಿನ ದಿನಗಳಲ್ಲಿ ತುಂಬಾ ರಿಸ್ಕ್ ಉಂಟು ಮಾಡಲಿದೆ. ಮೊದಲೇ ಕೊರೊನಾ ಸಮಯ. ಅದರಲ್ಲಿಯೂ ಮಲೇರಿಯಾ ಬಂದ ರೋಗಿ ಆಸ್ಪತ್ರೆಗೆ ಬಂದರೆ ಒಂದಕ್ಕೆ ಹೋಗಿ ಇನ್ನೊಂದು ಆಗಬಹುದು. ಅದಲ್ಲದೆ ಲೇಡಿಗೋಶನ್ ಹೆರಿಗೆಯ ಆಸ್ಪತ್ರೆ. ಇಲ್ಲಿ ಒಬ್ಬರ ಅಲ್ಲ ಇಬ್ಬರ ಜೀವ ಮುಖ್ಯ. ನೇರವಾಗಿ ಗುತ್ತಿಗೆದಾರರನ್ನು ಕರೆದು ತಕ್ಷಣ ಸ್ವಚ್ಚ ಮಾಡಬೇಕು ಎಂದು ಖಡಕ್ ಸೂಚನೆ ಕೊಟ್ಟರೆ ಕೆಲಸದವರಿಗೆ ಎರಡೇ ಗಂಟೆ ಕೆಲಸ. ಆ ಎರಡು ಗಂಟೆಯನ್ನು ಅವರು ಮನಸ್ಸು ಕೊಟ್ಟು ವ್ಯಯಿಸಿದರೆ ಅನೇಕ ಜೀವಗಳು ಅಪಾಯಕ್ಕೆ ಬೀಳುವುದನ್ನು ತಪ್ಪಿಸಬಹುದು. ಅದು ಬಿಟ್ಟು ಈ ತೋಡುಗಳು ಹೀಗೆ ಇನ್ನೆರಡು ತಿಂಗಳು ಇದ್ದರೆ ಎಷ್ಟೋ ತಾಯಿ ಮತ್ತು ಮಗು ಇಬ್ಬರೂ ಡೇಂಜರ್ ಝೋನ್ ನಲ್ಲಿ ಬೀಳಲಿದ್ದಾರೆ. ವೈದ್ಯರಿಗೆ ಯಾಕೆ ಸಮಸ್ಯೆ ಆಗುತ್ತಿದೆ ಎಂದು ಗೊತ್ತಾಗುವ ಮೊದಲೇ ಕೆಲವರ ಪ್ರಾಣಕ್ಕೆ ಅಪಾಯ ಬರಬಹುದು. ಆದರೆ ಒಂದು ತೋಡು ಇಷ್ಟೆಲ್ಲ ವಿಷವನ್ನು ತನ್ನ ಒಡಲಲ್ಲಿ ಇಟ್ಟು ಅಪಾಯವನ್ನು ಕರೆಯುತ್ತಿದೆ ಎಂದರೂ ಯಾರಿಗೂ ಗೊತ್ತಾಗುತ್ತಿಲ್ಲ!
Leave A Reply