ಪಾಲಿಕೆಯಲ್ಲಿ ಮಲೇರಿಯಾ ಸೆಲ್ ಎಲ್ಲಿದೆ ಎಂದು ಯಾರಾದರೂ ಹುಡುಕಬಹುದಾ?
ಕಳೆದ ಕೆಲವು ದಿನಗಳಿಂದ ಬಿಟ್ಟು ಬಿಡದೆ ಮಳೆ ಬೀಳುತ್ತಿದೆ. ಇನ್ನೆರಡು ದಿನಗಳ ನಂತರ ಮಳೆ ನಿಂತು ಕೆಲವು ದಿನ ಮೋಡ ಕವಿದ ವಾತಾವರಣ ಮಾತ್ರ ಇರುತ್ತೆ ಎಂದುಕೊಳ್ಳಿ.ಅಪಾಯದ ಕರೆಗಂಟೆ ಬಾರಿಸಲು ಶುರುವಾಯಿತು ಎಂದೇ ಅರ್ಥ. ಮಲೇರಿಯಾ ಮತ್ತು ಡೆಂಗ್ಯೂ ಕಳ್ಳ ಹೆಜ್ಜೆಗಳನ್ನು ಇಟ್ಟು ಮನೆಯೊಳಗೆ ಬರಲು ಹೊಂಚುಹಾಕುತ್ತಾ ಇರುತ್ತವೆ. ಇವುಗಳನ್ನು ಸದೆಬಡಿಯಲು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಮಲೇರಿಯಾ ಸೆಲ್ ಎನ್ನುವುದೊಂದಿದೆ. ಹೆಸರಿಗೆ ಮಾತ್ರ ಮಲೇರಿಯಾ ಸೆಲ್. ನಿಜವಾಗಿ ಈ ಸೆಲ್ ಕೆಲಸ ಏನೆಂದರೆ ಪಾಲಿಕೆ ವ್ಯಾಪ್ತಿಯ ಮನೆಮನೆಗೆ ಹೋಗಿ ಎಲ್ಲೆಲ್ಲಿ ಮಳೆ ನೀರು ನಿಂತಿದೆ, ಎಲ್ಲೆ ಟೇರೆಸ್ ಮೇಲೆ ನೀರು ನಿಂತಿದೆ, ಎಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಲ್ಲಿ ನೀರು ನಿಲ್ಲಿಸಲಾಗಿದೆ, ಎಲ್ಲಿ ಹಳೆ ಟಯರ್ ಸಹಿತ ಗುಜರಿ ವಸ್ತುಗಳಲ್ಲಿ ನೀರು ನಿಂತು ಅಲ್ಲಿ ಮಲೇರಿಯಾ ಸೊಳ್ಳೆಗಳು ಆರಾಮವಾಗಿ ತಮ್ಮ ಸಂತಾನವನ್ನು ಹೆಚ್ಚಿಸುವಲ್ಲಿ ನಿರತವಾಗಿವೆ ಎಂದು ಪರಿಶೀಲಿಸುವುದೇ ಆಗಿದೆ. ಇನ್ನು ಸಹಜವಾಗಿ ಬಾವಿಗಳಲ್ಲಿ ನೀರು ತುಂಬಿ ನಿಂತಿದ್ದರೆ ಅದು ಕೂಡ ಮಲೇರಿಯಾ ಸೊಳ್ಳೆಗಳಿಗೆ ಅನುಕೂಲ ಮಾಡಿಕೊಟ್ಟಂತೆ ಆಗಬಾರದು ಎನ್ನುವ ಕಾರಣಕ್ಕೆ ಅದರಲ್ಲಿ ಗಪ್ಪಿಮೀನು ಎಂದು ಕರೆಯುವ ಮೀನು ಮರಿಗಳನ್ನು ಹಾಕಿ ಅವುಗಳ ಮೂಲಕವೂ ಮಲೇರಿಯಾ ಸೊಳ್ಳೆಗಳನ್ನು ಮುಗಿಸುವ ಯೋಜನೆಯನ್ನು ಈ ಮಲೇರಿಯಾ ಸೆಲ್ ನವರು ಮಾಡಬೇಕು. ಅದು ಅವರ ಕೆಲಸ. ಅದಕ್ಕಾಗಿ ಪಾಲಿಕೆ ಅನುದಾನ ನೀಡುತ್ತದೆ ಮತ್ತು ಅದರಿಂದ ಸಿಬ್ಬಂದಿಗಳಿಗೆ ಸಂಬಳ ಕೊಡಲಾಗುತ್ತದೆ. ಮಳೆಗಾಲದ ಸಂದರ್ಭದಲ್ಲಿ ಈ ಸೆಲ್ ಅವಶ್ಯಕವಾಗಿರುತ್ತದೆ. ಆದರೆ ನಿಮಗೆ ಆಶ್ಚರ್ಯವಾಗಬಹುದು.
ಪಾಲಿಕೆಯಲ್ಲಿ ಈ ಸೆಲ್ ಕಾರ್ಯವೇ ನಿಲ್ಲಿಸಿದೆ. ಈ ಸೆಲ್ ನ ಸಿಬ್ಬಂದಿಗಳನ್ನು ನೀರಿನ ಬಿಲ್ ಕೊಡುವ ಕಾರ್ಯಕ್ಕೆ ಹಚ್ಚಲಾಗಿದೆ. ನೀರಿನ ಬಿಲ್ ಜೊತೆಗೆ ಮಲೇರಿಯಾ ಜಾಗೃತಿ ಮಾಡುವ ಕೆಲಸವನ್ನು ಕೂಡ ಮಾಡಲು ಹೇಳಲಾಗಿದೆ. ಇದರಿಂದ ಏನಾಗುತ್ತೆ, ಆ ಸಿಬ್ಬಂದಿಗಳು ನೀರಿನ ಬಿಲ್ ಕೊಡುವ ಕೆಲಸ ಮತ್ತು ಮಲೇರಿಯಾ ಸೆಲ್ ಕೆಲಸ ಎರಡನ್ನು ಕೂಡ ಮಾಡಬೇಕಿದೆ. ಇದು ಅಕ್ಷರಶ: ಅವರಿಗೆ ಅಸಾಧ್ಯವಾಗುತ್ತದೆ. ಒಬ್ಬ ಸಿಬ್ಬಂದಿ ಒಂದು ನಿರ್ಮಾಣ ಹಂತದ ಕಟ್ಟಡದ ಮೇಲೆ ನೀರು ನಿಂತಿದೆಯಾ ಎಂದು ಪರೀಕ್ಷಿಸಲು ಹೋದರೆ ನೀರಿನ ಬಿಲ್ ಕೊಡುವುದು ಯಾವಾಗ? ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ನೀರಿನ ಬಿಲ್ ಕೊಡುತ್ತಾ ಹೋದರೆ ಯಾರ ಟೇರೆಸಿನ ಮೇಲೆ ನೀರು ನಿಂತಿರಲಿ ಸಿಬ್ಬಂದಿಗೆ ಬಿದ್ದು ಹೋಗಿಲ್ಲ. ಆದ್ದರಿಂದ ಮಲೇರಿಯಾ ಅಥವಾ ಡೆಂಗ್ಯೂ ಎನ್ನುವ ಕಾಯಿಲೆಗಳನ್ನು ಹತೋಟಿಗೆ ತರಲು ಸ್ಥಾಪಿಸಿದ್ದ ಸೆಲ್ ಒಂದರ ಮೂಲ ಉದ್ದೇಶವೇ ನಿರ್ಮಾಮವಾದಂತೆ ಆಗಿದೆ. ಎಲ್ಲಿಯ ತನಕ ಅಂದರೆ ಮಲೇರಿಯಾ ಸೆಲ್ ಡಾಟಾ ಎಂಟ್ರಿ ಮಾಡುವ ಯುವತಿಯನ್ನು ಉದ್ದಿಮೆ ಪರವಾನಿಗೆ ವಿಭಾಗಕ್ಕೆ ಹಾಕಲಾಗಿದೆ. ಪಾಲಿಕೆ ಕೊರೊನಾದೊಂದಿಗೆ ಮಲೇರಿಯಾ ಹಾಗೂ ಡೆಂಗ್ಯೂವನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ತಕ್ಷಣ ಇದಕ್ಕೆ ಸೂಕ್ತವಾದ ಸಿಬ್ಬಂದಿಯನ್ನು ನೇಮಿಸದಿದ್ದರೆ ನಂತರ ಪಶ್ಚಾತ್ತಾಪಪಟ್ಟು ಪ್ರಯೋಜನವಿಲ್ಲ.
ಇನ್ನು ಪಾಲಿಕೆಯಲ್ಲಿ ಮಧ್ಯಾಹ್ನ ಮೂರುವರೆ ಗಂಟೆಯ ನಂತರ ಇಂಜಿನಿಯರ್ಸ್, ಅಧಿಕಾರಿಗಳು ತಪ್ಪದೆ ತಮ್ಮ ವಿಭಾಗದಲ್ಲಿ ಇರಲೇಬೇಕು. ಬೆಳಿಗ್ಗೆ ಫೀಲ್ಡಿನಲ್ಲಿ ಕೆಲಸ ಮಾಡಬೇಕಾದ ಅಧಿಕಾರಿಗಳು ಮಧ್ಯಾಹ್ನ ಊಟದ ನಂತರ ನೇರ ತಮ್ಮ ವಿಭಾಗಕ್ಕೆ ಹೋಗಿ ಅಲ್ಲಿ ಜನಸಾಮಾನ್ಯರಿಗೆ ಸಿಗುವಂತಿರಬೇಕು. ಅದರಲ್ಲಿಯೂ ಆರೋಗ್ಯ ವಿಭಾಗದ ಅಧಿಕಾರಿಗಳ ಜವಾಬ್ದಾರಿ ಈ ಸಮಯದಲ್ಲಿ ಅತೀ ಹೆಚ್ಚಾಗಿರುತ್ತದೆ. ಯಾರಾದರೂ ನಾಗರಿಕರು ಬಂದು ತಮ್ಮ ಆಸುಪಾಸಿನ ಏರಿಯಾದಲ್ಲಿ ಮಳೆಯ ನೀರು ನಿಂತು ಸೊಳ್ಳೆ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ ಎಂದು ಹೇಳಲು ಆರೋಗ್ಯ ವಿಭಾಗದ ಅಧಿಕಾರಿಗಳು ಎದುರಿಗೆ ಇರಬೇಕಲ್ಲ. ಇನ್ನು ಪಾಲಿಕೆಯ ವ್ಯಾಪ್ತಿಯಲ್ಲಿ ಕಾಂಕ್ರೀಟ್ ರಸ್ತೆಗಳು ಹೆಚ್ಚೆಚ್ಚು ಆದ ಬಳಿಕ ಕೃತಕ ನೆರೆಯ ಸಮಸ್ಯೆಯೂ ಅದರ ಜೊತೆ ಬಂದುಬಿಟ್ಟಿದೆ ಎಂದು ಅನಿಸುತ್ತದೆ. ಯಾಕೆಂದರೆ ಕಾಂಕ್ರೀಟ್ ರಸ್ತೆ ಮಾಡುವಾಗ ಮಳೆಯ ನೀರು ಚರಂಡಿಗೆ ಇಳಿದುಹೋಗಲು ರಸ್ತೆಯ ಇಕ್ಕೆಲಗಳಲ್ಲಿ ಜಾಲಿ ತರಹದ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ಈ ಕಬ್ಬಿನ ಹಾಲು ತಯಾರಿಸುವಾಗ ಮಿಶಿನ್ ನಿಂದ ಪಾತ್ರೆಗೆ ಬಂದು ಅಲ್ಲಿಂದ ಗ್ಲಾಸಿಗೆ ಹಾಕುವಾಗ ಸೋಸುತ್ತಾರಲ್ಲ, ಹಾಗೆ ಮಳೆಯ ನೀರು ಕಾಂಕ್ರೀಟ್ ರಸ್ತೆಯಿಂದ ತೋಡಿಗೆ ಇಳಿಯುವ ಮೊದಲು ಜಾಲಿಯಿಂದಲೇ ಸೋಸಿ ಹೋಗಬೇಕು. ಆದರೆ ದುರಾದೃಷ್ಟವಶಾತ್ ಈ ಜಾಲಿಗಳನ್ನು ಮಳೆ ಶುರು ಆಗುವ ಮೊದಲೇ ಸ್ವಚ್ಚ ಮಾಡದ ಪರಿಣಾಮವಾಗಿ ನೀರು ಇಳಿದು ಹೋಗಲು ಸಾಧ್ಯವಾಗುತ್ತಿಲ್ಲ. ಜಾಲಿಯ ಮೇಲೆ ಮಣ್ಣು, ಪ್ಲಾಸ್ಟಿಕ್, ಎಲೆ, ಹುಲ್ಲು, ಕಡ್ಡಿಗಳು ಇದ್ದು ನೀರು ಇಳಿಯಲು ಜಾಗ ಎಲ್ಲಿರುತ್ತದೆ. ನೀರು ರಸ್ತೆಯ ಮೇಲೆ ನಿಲ್ಲುವುದರಿಂದ ವಾಹನಗಳು ವೇಗವಾಗಿ ಹೋಗುವಾಗ ಮಳೆಯ ನೀರು ಹಾರಿ ಪಾದಚಾರಿಗಳ ಮೇಲೆ ಸಿಂಪಡಣೆಯಾಗಿಬಿಡುತ್ತದೆ. ಅವರು ಜನಪ್ರತಿನಿಧಿಗಳಿಗೆ ಶಾಪ ಹಾಕುತ್ತಾರೆ. ಸರಿಯಾಗಿ ನೋಡಿದರೆ ಪಾಲಿಕೆಯ ಸ್ಪೆಶಲ್ ಗ್ಯಾಂಗಿನವರು ಇದರ ಕೆಲಸವನ್ನು ಮಾಡಬೇಕು. ಅವರು ಮಾಡುತ್ತಾರೆ ಎಂದು ಕಾದು ಕುಳಿತರೆ ಪ್ರಯೋಜನವಿಲ್ಲ ಎಂದು ಯುವ ಬ್ರಿಗೇಡ್ ಸಂಘಟನೆಯವರು ಈ ಸಾಮಾಜಿಕ ಕಾರ್ಯವನ್ನು ಮಾಡಿ ಜನಮೆಚ್ಚುಗೆ ಪಡೆದಿದ್ದಾರೆ. ಇದೆಲ್ಲವನ್ನು ಹೇಳಿದರೆ ಪಾಲಿಕೆಯಲ್ಲಿ ಕೆಲವರು ಬೇಸರ ಮಾಡಿಕೊಳ್ಳುತ್ತಾರೆ. ತಮ್ಮ ವಿರುದ್ಧ ಮಾತನಾಡುತ್ತಾರೆ ಎಂದು ಯಾರದ್ದೋ ಕಿವಿ ಕಚ್ಚುತ್ತಾರೆ. ಜನರಿಗೆ ಅನುಕೂಲ ಮಾಡಿಕೊಡಿ ಎಂದು ಕೇಳಿದರೆ ಹೇಗೆ ತಪ್ಪಾಗುತ್ತದೆ. ಅತೀ ಬುದ್ಧಿವಂತರು ಯೋಚಿಸಬೇಕು!!
Leave A Reply