ಕಾವೂರು: ದೋಷ ಕಳೆಯಲು ಪೂಜೆಗೆ ಮಾಂಗಲ್ಯ ಬೇಕೆಂದು ಪಡೆದ ಜ್ಯೋತಿಷಿ ಪರಾರಿ!
ಜ್ಯೋತಿಷಿಗಳು ಏನು ಹೇಳಿದರೂ ಅಮಾಯಕ ಜನರು ನಂಬುತ್ತಾರೆ. ಜನರ ಮೌಢ್ಯತೆ, ಮುಗ್ದತೆಯನ್ನು ಬಳಸಿಕೊಂಡು ವಂಚಿಸುವ ಜ್ಯೋತಿಷಿಗಳ ವಂಚನೆ ಪ್ರಕರಣಗಳ ಬಗ್ಗೆ ದಿನನಿತ್ಯ ಸುದ್ದಿಗಳು ಬರುತ್ತಿದ್ದರೂ ಜನರು ಜಾಗೃತರಾಗುತ್ತಿಲ್ಲ. ಮಂಗಳೂರಿನಲ್ಲಿ ಜ್ಯೋತಿಷಿಯೊಬ್ಬ ಮಹಿಳೆಯೊಬ್ಬರ ಮಾಂಗಲ್ಯ ಸರವನ್ನೇ ಎಗರಿಸಿದ ಘಟನೆ ನಡೆದಿದೆ
ಮನೆಯಲ್ಲಿ ಕಷ್ಟವಿದೆ ಏನಾದರೂ ಪರಿಹಾರ ಹೇಳಿ ಎಂದು ಮಹಿಳೆಯೊಬ್ಬರು ಅ.13ರಂದು ಕುಂಜತ್ ಬೈಲಿನಲ್ಲಿರುವ ಜ್ಯೋತಿಷಿ ವಿನೋದ್ ಪೂಜಾರಿ ಬಳಿಗೆ ಹೋಗಿದ್ದರು. ಈ ವೇಳೆ ಆರೋಪಿ ವಿನೋದ್ ಆ ದೋಷ, ಈ ದೋಷ ಎಂದು ಲೆಕ್ಕ ಹಾಕಿ, ದೋಷ ಕಳೆಯಲು ಚಿನ್ನಾಭರಣ ಬೇಕು ಎಂದು ಕೇಳಿದ್ದಾನೆನ್ನಲಾಗಿದೆ.
ಪೂಜೆಗಾಗಿ ಮಹಿಳೆ ಐದೂವರೆ ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ಜ್ಯೋತಿಷಿಯ ಕೈಗೆ ನೀಡಿದ್ದರು. 15 ದಿನ ಪೂಜೆ ಮಾಡಿ ಮಾಂಗಲ್ಯವನ್ನು ವಾಪಸ್ ಕೊಡುವುದಾಗಿ ಹೇಳಿದ್ದ ಜ್ಯೋತಿಷಿ, ಆನಂತರವೂ ನೀಡದೇ ವಂಚಿಸಿದ್ದು, ಇದೀಗ ತಲೆಮರೆಸಿಕೊಂಡಿದ್ದಾನೆ ಎಂದು ವಂಚನೆಗೊಳಗಾದ ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.ಘಟನೆ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ವರದಿಯಾಗಿದೆ.
Leave A Reply