ಮೋದಿ ಸಾಲ ಸಿಕ್ಕಿದವರೆಲ್ಲ ಬೀದಿಬದಿ ವ್ಯಾಪಾರಿಗಳಲ್ಲ!!
ಮಂಗಳೂರು ನಗರದಲ್ಲಿ ನಿಜವಾಗಿಯೂ ಇರುವ ಒಟ್ಟು ಬೀದಿ ಬದಿ ವ್ಯಾಪಾರಿಗಳು ಎಷ್ಟು? ಹೆಚ್ಚೆಂದರೆ ಮುನ್ನೂರು ಚಿಲ್ಲರೆ. ಅದರಲ್ಲಿ ಅಧಿಕೃತವಾಗಿ ಕಾರ್ಡ್ ಸಿಕ್ಕಿರುವುದು ನೂರು ಚಿಲ್ಲರೆಯಷ್ಟು. ಆದರೆ ರಾಷ್ಟ್ರಕ್ಕೆ ಕೊರೊನಾ ಮಹಾಮಾರಿ ಬಂದಾಗ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬೀದಿ ಬದಿ ವ್ಯಾಪಾರಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಯಾವುದೇ ಶೂರಿಟಿ ಇಲ್ಲದೆ ಹತ್ತು ಹತ್ತು ಸಾವಿರ ರೂಪಾಯಿಗಳನ್ನು ಸಾಲ ಎಂದು ಕೊಡಲು ಹೊರಟರಲ್ಲ. ಆಗ ಮಂಗಳೂರಿನಲ್ಲಿ ಎಷ್ಟು ಮಂದಿ ಈ ಯೋಜನೆಯಲ್ಲಿ ಹಣ ಪಡೆದುಕೊಂಡರು ಎಂದು ನೋಡಿದರೆ ಬರೋಬ್ಬರಿ ಒಂದು ಸಾವಿರ. ಅರೇ, ಅದೇಗೆ ಮುನ್ನೂರರಿಂದ ಒಂದು ಸಾವಿರ ಅಚಾನಕ್ ಆಗಿ ಹೇಗೆ ಹೆಚ್ಚಾಯಿತು ಎಂದು ನೀವು ಕೇಳಬಹುದು. ಹೆಚ್ಚಾದದ್ದಲ್ಲ, ಹೆಚ್ಚು ಮಾಡಿದ್ದು. ನಮಗೆ ಒಂದು ಸಾವಿರ ಮಂದಿಗೆ ತಲಾ ಹತ್ತು ಸಾವಿರ ಕೊಡಲು ಹೇಳಿದ್ದಾರೆ ಎಂದು ಅಧಿಕಾರಿಗಳು ಇದ್ದಬದ್ದವರಿಗೆಲ್ಲ ಬೀದಿ ಬದಿ ವ್ಯಾಪಾರಿಗಳ ಹೆಸರಿನಲ್ಲಿ ಹಣ ಹಂಚಲು ಶುರು ಮಾಡಿದರು. ಎಲ್ಲಿಯ ತನಕ ಅಂದರೆ ಟೊಮೆಟೋ, ಬಟಾಟೆ, ನೀರುಳ್ಳಿಯ ಬಾಕ್ಸ್ ಎದುರಿಗೆ ಇಟ್ಟು ಅದರ ಹಿಂದೆ ಕುಕ್ಕರಗಾಲಿನಲ್ಲಿ ಕುಳಿತು ಫೋಟೋ ತೆಗೆಸಿ ನಾವು ಕೂಡ ಬೀದಿಬದಿ ವ್ಯಾಪಾರಿಗಳು ಎಂದು ಹಣ ತೆಗೆದುಕೊಂಡವರೇ 700 ಜನ ಇದ್ದರು. ಆ ಕಥೆ ಅಲ್ಲಿಗೆ ಮುಗಿಯಿತು, ಹಣ ತೆಗೆದುಕೊಂಡವರು ಖುಷಿಯಾಗಿ ಇದ್ದರು ಎಂದು ನೀವು ಅಂದುಕೊಂಡರೆ ತಪ್ಪು.
ಆ ಸ್ಟೋರಿ ಈಗ ವಿಭಿನ್ನ ತಿರುವು ಪಡೆದುಕೊಂಡು ಮಂಗಳೂರು ಮಹಾನಗರ ಪಾಲಿಕೆಯ ಮುಂದೆ ನಿಂತಿದೆ. ಆವತ್ತು ಹಣ ಪಡೆದುಕೊಂಡವರಲ್ಲಿ ಬಹುತೇಕರು ತಮಗೆ ಸಾಲ ಸಿಕ್ಕಿದ್ದೇ ಮಾನದಂಡ ಅಂದುಕೊಂಡು ನಾವು ಕೂಡ ಬೀದಿಬದಿ ವ್ಯಾಪಾರಿಗಳು, ನಮಗೂ ಎಲ್ಲಿಯಾದರೂ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಿ ಎಂದು ದಂಬಾಲು ಬಿದ್ದಿದ್ದಾರೆ. ಅಷ್ಟೇ ಅಲ್ಲ, ಸಾಲ ಸಿಕ್ಕಿದ ಅರ್ಹತೆಯನ್ನೇ ಇಟ್ಟುಕೊಂಡು ಸಿಕ್ಕಿದ ಕಡೆ ವ್ಯಾಪಾರಕ್ಕೆ ಕುಳಿತುಕೊಳ್ಳುತ್ತಿದ್ದಾರೆ. ಇದು ಈಗ ಪಾಲಿಕೆಯ ಅಧಿಕಾರಿಗಳ ಕುತ್ತಿಗೆಯ ತನಕ ಬಂದಿದೆ. ಅದೇ ಕಾರಣದಿಂದ ಈಗ ಅಂತವರನ್ನು ಎಬ್ಬಿಸಲು ಗುರುವಾರ ಕೆಲವು ಕಡೆ ಪಾಲಿಕೆಯಿಂದ ದಾಳಿ ನಡೆದಿದೆ.
ಹಾಗಾದರೆ ಬೀದಿಬದಿ ವ್ಯಾಪಾರಿಗಳಿಗೆ ಬದುಕುವ ಹಕ್ಕಿಲ್ಲವೇ? ಇದೆ. ಆದರೆ ಅವರಿಗೆ ತಮಗೆ ಎಲ್ಲಿ ಬೇಕೋ ಅಲ್ಲಿ ಕುಳಿತುಕೊಂಡು ವ್ಯಾಪಾರ ಮಾಡುವ ಹಕ್ಕಿಲ್ಲ. ಈಗ ಸ್ಟೇಟ್ ಬ್ಯಾಂಕ್ ನಲ್ಲಿ ಸಿಟಿ ಬಸ್ಸುಗಳು ನಿಲ್ಲುವ ರಸ್ತೆ ಇದೆಯಲ್ಲ, ಅಲ್ಲಿ ಈಗ ಡಿವೈಡರ್ ತೆಗೆದು ಹಾಕಲಾಗಿದೆ. ಇದರಿಂದ ಬೀದಿಬದಿ ವ್ಯಾಪಾರಿಗಳಿಗೆ ಸುಗ್ಗಿಯೋ ಸುಗ್ಗಿ. ಅಲ್ಲಿ ಮೊದಲೇ ಫುಟ್ ಪಾತ್ ಎನ್ನುವುದು ತಮ್ಮ ವಸ್ತುಗಳನ್ನು ಇಡಲು ಮಾಡಿದ ವ್ಯವಸ್ಥೆ ಎಂದು ಅಂಗಡಿಯವರು ಅಂದುಕೊಂಡಿದ್ದಾರೆ. ಅಂಗಡಿಯ ಒಳಗೆ ಎಷ್ಟು ವಸ್ತುಗಳು ಇರುತ್ತದೆಯೋ ಅಷ್ಟೇ ಸಾಮಾನು ಸರಂಜಾಮು ಅಲ್ಲಿನ ಫುಟ್ ಪಾತ್ ಮೇಲಿರುತ್ತದೆ. ಇನ್ನು ಸ್ಟೇಟ್ ಬ್ಯಾಂಕ್ ಪರಿಸರ ಮಾಡಿದ್ದೇ ನಮಗಾಗಿ ಎಂದು ತಲೆಯಲ್ಲಿ ತುಂಬಿಕೊಂಡಿರುವ ಬೀದಿಬದಿ ವ್ಯಾಪಾರಿಗಳು ರಸ್ತೆಯನ್ನು ಅತಿಕ್ರಮಣ ಮಾಡಿ ವ್ಯಾಪಾರಕ್ಕೆ ಕುಳಿತುಬಿಡುತ್ತಾರೆ. ಒಂದು ಕಡೆ ಸಿಟಿ ಬಸ್ಸುಗಳ ಓಡಾಟ, ಇನ್ನೊಂದೆಡೆ ವೇಗವಾಗಿ ಬರುವ ವಾಹನಗಳು, ಇದರ ನಡುವೆ ಪಾದಚಾರಿಗಳು ಜೀವವನ್ನು ಕೈಹಿಡಿದು ನಡೆಯಬೇಕಾದ ಪರಿಸ್ಥಿತಿ. ಇನ್ನು ಲೇಡಿಗೋಶನ್ ನಿಂದ ಲಿಂಕಿಂಗ್ ಟವರ್ ಇರುವ ರಸ್ತೆಯಲ್ಲಿ ಕೂಡ ಉದ್ದಕ್ಕೆ ಬೀದಿಬದಿ ವ್ಯಾಪಾರಿಗಳು ತಮ್ಮ ವಸ್ತುಗಳನ್ನು ತೆರೆದು ಕುಳಿತುಕೊಂಡಿರುತ್ತಾರೆ. ಅಲ್ಲಿ ಜಿನಸಿ ವಸ್ತುಗಳನ್ನು ಪೊಟ್ಟಣ ಮಾಡಿ ಮಾರುವುದರಿಂದ ಇಲೆಕ್ಟ್ರಿಕಲ್ ವಸ್ತುಗಳನ್ನು ಮಾರುವ ತನಕ ಎಲ್ಲವೂ ನಡೆಯುತ್ತದೆ. ನಿಯಮ ಪ್ರಕಾರ ಬೀದಿಬದಿ ವ್ಯಾಪಾರದಲ್ಲಿ ಸೆಕೆಂಡ್ ಹ್ಯಾಂಡ್ ಪುಸ್ತಕಗಳನ್ನು, ಬಟ್ಟೆಬರೆಗಳನ್ನು, ಇಲೆಕ್ಟ್ರಾನಿಕ್ ವಸ್ತುಗಳನ್ನು ಮಾರುವಂತಿಲ್ಲ. ಆದರೆ ಇದನ್ನು ಇಲ್ಲಿ ಕೇಳುವವರು ಇಲ್ಲ. ಇನ್ನು ಸೆಂಟ್ರಲ್ ಮಾರುಕಟ್ಟೆ ಬಂದ್ ಆಗಿ ವರ್ಷಗಳು ಕಳೆದರೂ ಆ ಪರಿಸರದಲ್ಲಿ ಇವತ್ತಿಗೂ ಹಿಂದೆ ಸೆಂಟ್ರಲ್ ಮಾರುಕಟ್ಟೆಯಿಂದ ಎಷ್ಟು ತ್ಯಾಜ್ಯ ಉತ್ಪತ್ತಿಯಾಗುತ್ತಿತ್ತೋ ಅಷ್ಟೇ ಉತ್ಪತ್ತಿಯಾಗುತ್ತದೆ. ಇದರೊಂದಿಗೆ ಇನ್ನೊಂದು ನಿಯಮ ಇದೆ. ಅದೇನೆಂದರೆ ಪಾಲಿಕೆ ಕಡೆಯಿಂದ ರೇಡ್ ಆಗಿ ವಸ್ತುಗಳನ್ನು ಲಾರಿಯಲ್ಲಿ ಹಾಕಿ ತೆಗೆದುಕೊಂಡರೆ ಅದನ್ನು ವಾಪಾಸು ವ್ಯಾಪಾರಿಗಳಿಗೆ ಹಿಂತಿರುಗಿಸುವ ಕ್ರಮ ಇಲ್ಲ. ಆದರೆ ನಮ್ಮಲ್ಲಿ ಏನಾಗುತ್ತದೆ ಎಂದರೆ ರೇಡ್ ಆಗುತ್ತದೆ. ಇಲ್ಲಿಂದ ಎಲ್ಲವನ್ನು ಗಾಡಿಯಲ್ಲಿ ತುಂಬಿಸಿಕೊಂಡು ತೆಗೆದುಕೊಂಡು ಹೋಗಲಾಗುತ್ತದೆ. ಬೆಳಿಗ್ಗೆ ರೇಡ್ ಆದರೆ ಸಂಜೆ ಆ ವಸ್ತುಗಳು ಮತ್ತೆ ಮಾಲೀಕರ ಬಳಿ ಇರುತ್ತವೆ. ಅದಕ್ಕೆ ಕಾರಣ ಕಾರ್ಪೋರೇಟರ್, ಜನಪ್ರತಿನಿಧಿಗಳ ಶಿಫಾರಸ್ಸು. ಅಣ್ಣೇರೆ, ನಮ ಪತ್ತೊಂದು ಪೊತೆರ್, ದಾಲಾ ಬುಡ್ ಪಾದು ಕೊರ್ಲೆ ಎಂದು ಮೇಯರ್, ಕಾರ್ಪೋರೇಟರ್ ಗಳಿಗೆ ಫೋನ್ ಮಾಡಿ ದಂಬಾಲು ಬೀಳುವ ಬೀದಿಬದಿ ವ್ಯಾಪಾರಿಗಳಿಗೆ ಆಗಲ್ಲ ಎಂದು ಹೇಳಲು ಆಗುತ್ತಾ ಎಂದು ಹೇಳುತ್ತಾ ಅಧಿಕಾರಿಗಳಿಗೆ ಫೋನ್ ಮಾಡಿ ಬಿಡಿಸುವ ಜವಾಬ್ದಾರಿ ಕಾರ್ಪೋರೇಟರ್ ಗಳದ್ದು. ಇದರಿಂದ ಏನಾಗುತ್ತೆ? ರೇಡ್ ಮಾಡಿದ ಉದ್ದೇಶವೇ ಹಾಳಾಗಿ ಹೋಗುತ್ತದೆ. ರೇಡ್ ಮಾಡಿದ ಖರ್ಚು ವೇಸ್ಟ್. ಇನ್ನು ಬೀದಿಬದಿ ವ್ಯಾಪಾರವನ್ನು ಯಾವುದೇ ಮಾರುಕಟ್ಟೆ, ಬಸ್ ಸ್ಟೇಂಡ್, ಆಸ್ಪತ್ರೆ, ಶಾಲಾ, ಕಾಲೇಜುಗಳ ಹೊರಗೆ ಮಾಡುವಂತಿಲ್ಲ. ಆದರೆ ಈ ನಿಯಮಗಳನ್ನು ಕೂಡ ಉಲ್ಲಂಘಿಸಲಾಗುತ್ತಿದೆ. ಇಷ್ಟೆಲ್ಲ ಆದ ನಂತರವೂ ಮತ್ತೊಮ್ಮೆ ಬೀದಿಬದಿ ವ್ಯಾಪಾರಿಗಳು ನಾಳೆ ಅಲ್ಲಿಯೇ ವ್ಯಾಪಾರ ಮಾಡುತ್ತಾರೆ, ಮತ್ತೊಮ್ಮೆ ದಾಳಿ ಆಗುವ ತನಕ!
Leave A Reply