ಸಾಯುವ ವ್ಯಕ್ತಿ ಸುಳ್ಳು ಹೇಳಲ್ಲ, ಇದು ನಂಬಿಕೆ!
ಕೆಲವು ಆತ್ಮಹತ್ಯೆಗಳಿಗೆ ಹಲವು ಆಯಾಮಗಳಿರುತ್ತವೆ. ಕೆಲವು ಆತ್ಮಹತ್ಯೆಗಳು ಹಲವು ಸತ್ಯಗಳನ್ನು ಸಾಯಿಸುತ್ತವೆ. ಕೆಲವು ಆತ್ಮಹತ್ಯೆಗಳು ಏನೂ ಹೇಳುವುದಿಲ್ಲ, ಆದರೂ ಅದರ ಹಿಂದೆ ತನಿಖೆ ಮಾಡಿದರೆ ಮುಂದೆ ಏನಾಗಬಹುದು ಎಂದು ಗೊತ್ತಾಗುತ್ತದೆ. ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಉಡುಪಿಗೆ ಬಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಯಾವ ಕ್ಯಾಟಗರಿಗೆ ಬರುತ್ತದೆ ಎಂದು ನೋಡಬೇಕು. ಸಾಯುವ ವ್ಯಕ್ತಿ ಸುಳ್ಳು ಹೇಳಿ ಸಾಯಲಾರ. ಅದು ಡಿವೈಎಸ್ ಪಿ ಗಣಪತಿ ಪ್ರಕರಣದಲ್ಲಿ ಭಾರತೀಯ ಜನತಾ ಪಾರ್ಟಿಯವರು ತೆಗೆದುಕೊಂಡ ಸ್ಟ್ಯಾಂಡ್ ಅನ್ನೇ ಈಗ ಅವರು ಈ ಪ್ರಕರಣದಲ್ಲಿಯೂ ತೆಗೆದುಕೊಂಡರೆ ಮುಗಿಯಿತು. ತನಿಖೆ ಆಗುವವರೆಗೂ ನೀವು ಮಂತ್ರಿಯಾಗಿರುವುದು ಬೇಡಾ ಎಂದು ಯಾರ ಮೇಲೆ ಆರೋಪ ಇದೆಯೋ ಅವರಿಗೆ ಹೇಳಿದರೆ ಮುಗಿಯಿತು. ಈಗ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಈಶ್ವರಪ್ಪನವರೇ ಕಾರಣ, ರಾಜೀನಾಮೆ ಕೊಡಿ ಎಂದು ಪ್ರತಿಭಟನೆ ಮಾಡುತ್ತಿರುವ ಕಾಂಗ್ರೆಸ್ಸಿಗರು ಆವತ್ತು ಜಾರ್ಜ್ ಮೇಲೆ ಆರೋಪ ಬಂದಾಗ ತಕ್ಷಣ ರಾಜೀನಾಮೆ ಕೊಡಿಸಿದ್ದೀರಾ, ಇಲ್ಲ. ಭಾರತೀಯ ಜನತಾ ಪಾರ್ಟಿಯ ನಿರಂತರ ಪ್ರತಿಭಟನೆ ಬಳಿಕ ಕೊಡಿಸಲಾಗಿತ್ತು. ಹಾಗೇ ನೀವು ಇವತ್ತೇ ರಾಜೀನಾಮೆ ಸಿಗುತ್ತೆ ಎಂದು ನಿರೀಕ್ಷೆ ಮಾಡುವುದು ತಪ್ಪು. ಹಾಗೆ ಬಿಜೆಪಿ ಹೈಕಮಾಂಡ್ ಮುಂದಿನ ವಾರಾಂತ್ಯ ಕೆಲವು ಸಚಿವರನ್ನು ಕೈಬಿಡುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತೀದ್ದಿರಿ. ಅದೇ ಸಂದರ್ಭದಲ್ಲಿ ಈಶ್ವರಪ್ಪನವರಿಂದ ರಾಜೀನಾಮೆ ಕೊಟ್ಟು ಅವರನ್ನು ಪಕ್ಷದ ಕಾರ್ಯಕ್ಕೆ ಬಳಸುವುದಾಗಿ ಹೇಳಿ. ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆದ ಹಾಗೆ ಆಗುತ್ತೆ. ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂದು ಎಲ್ಲರಿಗೂ ಅನಿಸುತ್ತದೆ. ಇದೆಲ್ಲವೂ ರಾಜಕೀಯ.
ಶವವನ್ನು ಮುಂದಿಟ್ಟು ರಾಜಕೀಯವನ್ನು ಮಾಡಲು ಕರ್ನಾಟಕದಲ್ಲಿ ಶುರುವಾಗಿ ಕೆಲವು ವರ್ಷಗಳಾಗಿವೆ. ಸಂತೋಷ್ ಪಾಟೀಲ್ ಅದಕ್ಕೆ ತಾಜಾ ಉದಾಹರಣೆ. ಮೊದಲನೇಯದಾಗಿ ಆಗಬೇಕಾಗಿರುವುದು ಸಂತೋಷ್ ಇಂತಹ ಕಠಿಣ ನಿರ್ಧಾರ ಮಾಡುವ ಹಿಂದೆ ನಿಜಕ್ಕೂ ಅಂತಹ ಪ್ರಬಲ ಕಾರಣಗಳಿತ್ತಾ? ಇರದೇ ಸಾಯಲು ಹೋಗಲಾರ. ಮೊದಲನೇಯದಾಗಿ ಯಾವ ಕಾರಣ? ಸಾಮಾನ್ಯವಾಗಿ ಹಿಂದೂ ಕಾರ್ಯಕರ್ತರು ತಮ್ಮದೇ ಪಕ್ಷದವರ ವಿರುದ್ಧ ಮೋದಿಯವರಿಗೆ ದೂರು ಕೊಡಲು ಹೋಗುವುದಿಲ್ಲ. ಆದರೆ ಸಂತೋಷ್ ಹೋಗಿದ್ದಾರೆ. ಅದಕ್ಕೆ ಯಾರದಾದರೂ ಕುಮ್ಮಕ್ಕು ಇತ್ತಾ? ಯಾರದ್ದಾದರೂ ಒತ್ತಡದಲ್ಲಿ ದೂರು ಕೊಟ್ಟರಾ? ದೂರು ಕೊಟ್ಟ ಬಳಿಕ ಅಲ್ಲಿಂದ ತನಿಖೆ ಶುರುವಾಗುತ್ತದೆ. ಅದಕ್ಕೆ ಸಂತೋಷ್ ಬಳಿ ಸಾಕ್ಷ್ಯಾಧಾರಗಳು ಇರಲಿಲ್ಲವಾ? ಈ ನಡುವೆ ಸಂತೋಷ್ ಆಗಾಗ ಈಶ್ವರಪ್ಪನವರ ವಿರುದ್ಧ ಆರೋಪ ಮಾಡುತ್ತಿದ್ದರು. ಅದಕ್ಕೆ ಪ್ರತಿಯಾಗಿ ಈಶ್ವರಪ್ಪನವರು ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಅದು ನ್ಯಾಯಾಲಯದ ವಿಚಾರಣೆಯ ಹಂತದಲ್ಲಿದೆ. ಅಲ್ಲಿ ಸೋಲಾದರೆ ತನ್ನ ಮಾನ ಹೋಗಬಹುದು ಎಂದು ಸಂತೋಷ್ ಅಂದುಕೊಂಡರಾ? ಈಶ್ವರಪ್ಪನವರಾಗಲಿ, ಅವರ ಸಹಾಯಕರಾಗಲಿ ಕಮೀಷನ್ ಕೇಳಿದ್ರು ಎನ್ನುವುದಕ್ಕೆ ಏನೂ ಸಾಕ್ಷ್ಯಾಧಾರಗಳು ಇರಲಿಲ್ಲವಾ? ಇದ್ದರೆ ಹೆದರಿಕೆ ಯಾಕೆ?
ಇವತ್ತಿನ ದಿನಗಳಲ್ಲಿ ಗ್ರಾಮ ಪಂಚಾಯತ್ ನಿಂದ ಲೋಕಸಭೆಯ ತನಕ ಲಂಚಾವತಾರ ಇದೆ. ಅಲ್ಲಲ್ಲಿ ಮೋದಿ ತರಹ ಬೆರಳೆಣಿಕೆಯ ರಾಜಕಾರಣಿಗಳು ಕೈ ಬಾಯಿ ಸ್ವಚ್ಚ ಇಟ್ಟುಕೊಂಡಿರಬಹುದು. ಹಾಗಂತ ಲಂಚ ಎಂದರೆ ಕೇವಲ ಜನಪ್ರತಿನಿಧಿಗಳು ಮಾತ್ರ ತೆಗೆದುಕೊಳ್ಳುತ್ತಾರೆ ಎಂದಲ್ಲ. ಅಧಿಕಾರಿಗಳು ಲಂಚದ ಹಣಕ್ಕಾಗಿ ಬಾಯಿ ತೆರೆದು ಕಾದಿರುತ್ತಾರೆ. ಅವರ ಹಸಿವು ಇನ್ನೂ ದೊಡ್ಡದು. ರಾಜಕಾರಣಿಗಳಾದರೂ ಹಣ ತೆಗೆದುಕೊಂಡರೆ ಮತ್ತೆ ಕಾರ್ಯಕರ್ತರ, ಸಂಘ,ಸಂಸ್ಥೆಗಳ ಕಾರ್ಯಕ್ರಮಗಳಿಗೆ ದೇಣಿಗೆ, ಸಹಕಾರ ಎಂದು ಕೆರೆಯ ನೀರನ್ನು ಕೆರೆಗೆ ಚೆಲ್ಲಿಬಿಡುತ್ತಾರೆ. ಆದರೆ ಅಧಿಕಾರಿಗಳು ತಮ್ಮ ಖಜಾನೆ ಮಾತ್ರ ತುಂಬಿಸಿಕೊಳ್ಳುತ್ತಾರೆ. ಇನ್ನು ವರ್ಕ್ ಆರ್ಡರ್ ಇಲ್ಲದೆ ಕೆಲಸ ಮಾಡಲಾಗಿದೆ, ಅದು ಸರಿಯಾ ಎಂದು ಕೇಳುವವರು ಇದ್ದಾರೆ. ಅನೇಕ ಕಾಮಗಾರಿಗಳು ಶಾಸಕರ, ಸಚಿವರ ಮೌಕಿಕವಾಗಿ ಹೇಳಿದ ನಂತರ ನಂಬಿಕೆಯ ಮೇಲೆ ಆಗುತ್ತದೆ. ಅಂತವರಿಗೆ ಹಣ ಕೊಡಿಸಲು ಶ್ರಮ ವಹಿಸಬೇಕಾಗಿರುವುದು ಅದೇ ಶಾಸಕರು ಅಥವಾ ಸಚಿವರು. ಅಂತಹ ಒತ್ತಡ ಸಹಿಸಿಕೊಳ್ಳಲು ತಯಾರಾಗಿರುವವರು ಮಾತ್ರ ಗುತ್ತಿಗೆದಾರರಾಗಬೇಕು ಅಥವಾ ಜನಪ್ರತಿನಿಧಿಯಾಗಬೇಕು. ಕಾಮಗಾರಿ ಆದಷ್ಟು ಜನಪ್ರತಿನಿಧಿಗಳಿಗೆ ಎರಡು ರೀತಿಯ ಲಾಭವಿದೆ. ಒಂದು ಕಾಮಗಾರಿ ಮಾಡಿದ್ದಕ್ಕೆ ಜನರಿಂದ ಹೊಗಳಿಕೆ ಮತ್ತು ಸಂಬಂಧಪಟ್ಟ ಗುತ್ತಿಗೆದಾರರಿಂದ ಕಮೀಷನ್. ಇನ್ನು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಎನ್ನುವವರು ನಾವು ಈ 40% ಕಮೀಷನ್ ಬಗ್ಗೆ ಈ ಮೊದಲೇ ಹೇಳಿದ್ದೇವೆ ಎಂದಿದ್ದಾರೆ. ಅದು ನಿಜ. ಆದರೆ ಸಾಕ್ಷಿ. ಸಾಕ್ಷಿ ಕೊಡಲು ನಮ್ಮಿಂದ ಯಾರೂ ಕೇಳಿಲ್ಲ. ನಮ್ಮನ್ನು ಕರೆದು ಯಾರೂ ಮಾತನಾಡಲೇ ಇಲ್ಲ ಎಂದಿದ್ದಾರೆ. ಮೋದಿ, ಶಾ ಆಗಾಗ ತಮ್ಮ ನಂಬುಗೆಯ ಕೆಲವು ಟೀಮ್ ಗಳನ್ನು ಗುಪ್ತವಾಗಿ ಆಯಾಯಾ ರಾಜ್ಯಗಳಿಗೆ ಕಳುಹಿಸುವುದುಂಟು. ಹಾಗೆ ಈ ವಿಚಾರದಲ್ಲಿ ನೋಡಿಬನ್ನಿ ಎಂದು ಒಂದು ಟೀಮ್ ಕಳುಹಿಸಿದರೆ ತಪ್ಪಿಲ್ಲ. ಒಂದು ವೇಳೆ ಆರೋಪ ಸತ್ಯ ಎಂದು ಸಾಬೀತಾದರೆ ಆಗ? ತಮ್ಮ ಪಕ್ಷದ ಕಾಲ ಮೇಲೆ ದೆಹಲಿಯವರು ಕೊಡಲಿ ಹೊಡೆಯಲು ತಯಾರಾಗಿರುತ್ತಾರಾ ಎನ್ನುವುದು ಪ್ರಶ್ನೆ. ಈಗ ಈ ಆತ್ಮಹತ್ಯೆಯ ಪ್ರಕರಣದ ಬಗ್ಗೆ ತನಿಖೆಯಾಗಲಿ ಎಂದು ಈಶು ಸಿಎಂಗೆ ಹೇಳಿದ್ದಾರಂತೆ. ತನಿಖೆ ಆದರೆ ಒಳ್ಳೆಯದು. ಆದರೆ ಬೇಲಿ ಎದ್ದಿರುವಾಗ ಮೇಯುತ್ತಾ ತನಿಖೆ ಮಾಡಲು ಸಾಧ್ಯವಾ, ಅದು ಪ್ರಶ್ನೆ!
Leave A Reply