ಜೆಡಿಎಸ್ ಗೆ ರಾಜ್ಯಸಭಾ ಚುನಾವಣೆಯಿಂದ ನಿಜಕ್ಕೂ ಲಾಭವಿದೆ!!
ಮಹಾಸಮರಕ್ಕೆ 10 ತಿಂಗಳು ಮಾತ್ರ ಬಾಕಿ ಇರುವ ಈ ಹಂತದಲ್ಲಿ ರಾಜ್ಯಸಭಾ ಚುನಾವಣೆಗಳು ಬರುವುದೇ ಒಂದು ರೀತಿಯಲ್ಲಿ ಅಡ್ಡಗೋಡೆಯ ಮೇಲೆ ಕುಳಿತಿರುವವರು ಯಾವ ಕಡೆ ಹಾರಬೇಕು ಎನ್ನುವುದನ್ನು ಖಚಿತಪಡಿಸಲು. ಈ ಕಾರಣಕ್ಕಾಗಿ ಈಗಲಾದರೂ ನಿಮ್ಮ ಸ್ಟ್ಯಾಂಡ್ ಕ್ಲಿಯರ್ ಮಾಡಿ ಎನ್ನುವ ಕಾರಣಕ್ಕೆ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಾರ್ಟಿ ಹಾಕಿರುವ ರಣತಂತ್ರಕ್ಕೆ ಜಾತ್ಯಾತೀತ ಜನತಾದಳ ಬೋರಲು ಮಲಗಿದೆ. ಒಬ್ಬ ಅಭ್ಯರ್ಥಿ ಗೆಲ್ಲಬೇಕಾದರೆ ಚಲಾವಣೆಯಾಗುವ ಸಿಂಧು ಮತಗಳಲ್ಲಿ ಕನಿಷ್ಟ 45 ಬೀಳಲೇಬೇಕು. ಬಿಜೆಪಿಯಲ್ಲಿ ಇಬ್ಬರು ಪಕ್ಷೇತರರ ಬೆಂಬಲ ಸೇರಿದರೆ 122 ಮತಗಳು ಇವೆ. 90 ಮತಗಳು ಇಬ್ಬರಿಗೆ ಹೋದರೂ 32 ಉಳಿಯುತ್ತದೆ. ಅದು ಮೂರನೇ ಅಭ್ಯರ್ಥಿಗೆ ಸಾಕಾಗುವುದಿಲ್ಲ. ಇನ್ನು ಕಾಂಗ್ರೆಸ್ಸಿನ ಬಳಿ 70 ಮತಗಳಿವೆ. ಅವರಲ್ಲಿ ಒಬ್ಬರಿಗೆ 45 ಹೋದರೆ 35 ಉಳಿಯುತ್ತದೆ. ಇನ್ನೊಬ್ಬರು ಗೆಲ್ಲಲು ಆಗುವುದಿಲ್ಲ. ಇನ್ನು ಜೆಡಿಎಸ್ ನವರಿಗೆ ಇರುವುದೇ 32 ಮತಗಳು. ಒಬ್ಬರೂ ಗೆಲ್ಲಲು ಆಗುವುದಿಲ್ಲ. ಹೀಗಿದ್ದರೂ ಮತ್ತೊಂದು ಸರಳ ಲೆಕ್ಕಾಚಾರಗಳಿವೆ. ಒಬ್ಬ ವ್ಯಕ್ತಿ ತನ್ನ ಮೊದಲ ಪ್ರಾಶಸ್ತ್ಯದ ಮತ ಒಬ್ಬ ಅಭ್ಯರ್ಥಿಗೆ ಹಾಕುವುದಕ್ಕೂ, ಹತ್ತು ಮಂದಿ ತಮ್ಮ ದ್ವಿತೀಯ ಪ್ರಾಶಸ್ತ್ಯದ ಅದೇ ಅಭ್ಯರ್ಥಿಗೆ ಹಾಕುವುದಕ್ಕೂ ಸಮನಾಗುತ್ತದೆ. ಈ ಲೆಕ್ಕದ ಪ್ರಕಾರ ಬಿಜೆಪಿ ತನ್ನ ಮೂರನೇ ಅಭ್ಯರ್ಥಿಯಾದ ಲೆಹರ್ ಸಿಂಗ್ ಅವರನ್ನು ಗೆಲ್ಲಿಸಲು ಬಹುತೇಕ ದಡದ ಸಮೀಪ ಬರುತ್ತದೆ. ಮೊದಲ ಪ್ರಾಶಸ್ತ್ಯದ ಮತ ಹಾಕಿದ ಬಳಿಕವೂ 32 ಬಿಜೆಪಿ ಭತ್ತಳಿಕೆಯಲ್ಲಿ ಇರುತ್ತದೆ. 120 ಜನ ದ್ವಿತೀಯ ಮತ ಹಾಕಿದರೂ ಅದು 12 ಮತಗಳಿಗೆ ಸಮ. 32 ಮತ್ತು 12 ಸೇರಿದರೆ 44 ಆಗುತ್ತದೆ. ಒಂದನ್ನು ಎಲ್ಲಿಯಾದರೂ ಕ್ರಾಸ್ ವೋಟಿಂಗ್ ಮಾಡಿಸಿದರೂ ಲೆಹರ್ ಸಿಂಗ್ ಗೆಲುವಿನ ನಗೆ ಬೀರಲಿದ್ದಾರೆ. ಈ ಲೆಕ್ಕ ಇಟ್ಟುಕೊಂಡೇ ಬಿಜೆಪಿ ಕಣಕ್ಕೆ ಇಳಿಯುತ್ತಿದೆ ಎನ್ನುವುದು ಮೇಲ್ನೋಟಕ್ಕೆ ಅನಿಸಿದರೂ ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿಯೂ ಲೆಕ್ಕ ಕೂಡ ಅಷ್ಟೇ ಸೊಗಸಾಗಿದೆ. ಕಾಂಗ್ರೆಸ್ ಬಳಿ ಒಂದು ಸುಲಭವಾಗಿ ಗೆದ್ದು ಇನ್ನೊಂದು ಗೆಲ್ಲಿಸುವುದಕ್ಕೆ ಇರುವ ಮತ ಏನೂ ಸಾಕಾಗುವುದಿಲ್ಲ.
ಹಾಗಿರುವಾಗ ಜೆಡಿಎಸ್ ನಿಂದ ಇಪ್ಪತ್ತು ಜನ ಕಾಂಗ್ರೆಸ್ಸಿಗೆ ತಮ್ಮ ಮೊದಲ ಪ್ರಾಶಸ್ತ್ಯದ ಮತ ಹಾಕಿದರೆ ಆಗ ಕಾಂಗ್ರೆಸ್ಸಿನ ಅಲ್ಪಸಂಖ್ಯಾತ ಅಭ್ಯರ್ಥಿ ವಿಜಯಮಾಲೆ ಧರಿಸುತ್ತಾರೆ. ಅದನ್ನೇ ವೈಸ್ ವರ್ಸಾ ತೆಗೆದುಕೊಳ್ಳಬಹುದು. ಜೆಡಿಎಸ್ ಬಳಿ ಹೆಸರಿಗೆ 32 ಮತಗಳು ಇದ್ದರೂ ಅವರೆಲ್ಲರೂ ತಮ್ಮ ಪಕ್ಷದ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ ಹಾಕುತ್ತಾರೆ ಎನ್ನುವುದನ್ನು ದೇವೆಗೌಡರು ಕನಸು, ಮನಸ್ಸಿನಲ್ಲಿಯೂ ಎಣಿಸುವುದಿಲ್ಲ. ಯಾಕೆಂದರೆ ಕೆಲವರು ಈಗಾಗಲೇ ಟಿಸಿ ತೆಗೆದುಕೊಂಡು ಬೇರೆ ಕಾಲೇಜಿಗೆ ಸೇರುವ ತಂತ್ರದಲ್ಲಿದ್ದಾರೆ. ಆದ್ದರಿಂದ ಐದಾರು ಜನ ಕೊನೆಯ ಕ್ಷಣಕ್ಕೆ ಲಾಂಗ್ ಜಂಪ್ ಹೊಡೆದರೆ ಜೆಡಿಎಸ್ ಬಳಿ 25 ಉಳಿಯಬಹುದು. ಹೀಗಾದರೆ ಕಾಂಗ್ರೆಸ್ ತನ್ನ ಮೊದಲ ಅಭ್ಯರ್ಥಿಯನ್ನು ಗೆಲ್ಲಿಸಿ ಉಳಿದ ಎಲ್ಲರಿಗೂ ಮೊದಲ ಪ್ರಾಶಸ್ತ್ಯ ಮತ ಕುಪೇಂದ್ರ ರೆಡ್ಡಿಗೆ ಹಾಕಿ ಎಂದರೆ ಆಗ ಕುಪೇಂದ್ರ ಇನ್, ಲೆಹರ್ ಔಟ್ ಆಗುತ್ತಾರೆ. ಆದರೆ ಸದ್ಯ ಅದು ಆಗುವ ಸ್ಥಿತಿಯಲ್ಲಿ ಇಲ್ಲ.
ಈ ಹಂತದಲ್ಲಿ ಕಾಂಗ್ರೆಸ್ ರಾಜ್ಯದ ಮುಸಲ್ಮಾನ ಮತದಾರರಿಗೆ ಏನು ಸಂದೇಶ ಕೊಡಲು ತೀರ್ಮಾನಿಸಿದೆ ಎಂದರೆ ನಾವು ಮುಸಲ್ಮಾನರಿಗೆ ಟಿಕೆಟ್ ಕೊಟ್ಟಿದ್ದೇವೆ. ಆದರೆ ಜೆಡಿಎಸ್ ಬೆಂಬಲ ನೀಡದೇ ಇದ್ದ ಕಾರಣ ಮುಸಲ್ಮಾನ ಅಭ್ಯರ್ಥಿ ಸೋಲುವಂತಾಯಿತು ಎಂದು ಸಂದೇಶ ಕೊಡಲು ಹೊರಟಿದ್ದಾರೆ. ಅದಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ “ಗೆಲ್ಲಲು ಜೈರಾಮ್ ರಮೇಶ್. ಸೋಲಲು ನಮ್ಮ ಸಾಬರಾ” ಎಂದು ಕೀಚಾಯಿಸಿದ್ದಾರೆ. ರೆಹಮಾನ್ ಖಾನ್ ಮಗನನ್ನು ಮೊದಲನೇ ಅಭ್ಯರ್ಥಿ ಮಾಡಿ ಎಂದು ಮೂದಲಿಸಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಹೇಗಾಗಿದೆ ಎಂದರೆ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು ನೇರ ಹೈಕಮಾಂಡ್ ವರಿಷ್ಟರು. ನಿರ್ಮಲಾ ಸೀತಾರಾಮನ್ ಅವರಿಗೆ ಟಿಕೆಟ್ ಸಿಗುವುದರಲ್ಲಿ ಡೌಟ್ ಇರಲಿಲ್ಲ. ಜಗ್ಗೇಶ್ ಹೆಸರು ರೇಸ್ ನಲ್ಲಿ ಇರಲಿಲ್ಲ. ಜೈರಾಮ್ ರಮೇಶ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ನೇರಕೃಪೆ ಇದೆ. ಕುಪೇಂದ್ರ ರೆಡ್ಡಿ ಮಾತ್ರ ಆಯ್ಕೆಯಾಗಿರುವುದು ಬೆಂಗಳೂರಿನ ಪದ್ಮನಾಭ ನಗರದಲ್ಲಿ. ಆದ್ದರಿಂದ ಜೆಡಿಎಸ್ ಬದ್ಧ ವೈರಿ ಸಿದ್ದುಗೆ ಜೆಡಿಎಸ್ ಅಭ್ಯರ್ಥಿ ಗೆಲ್ಲುವುದು ಇಷ್ಟವಿಲ್ಲ. ಹಾಗಾದರೆ ಕಾಂಗ್ರೆಸ್, ಜೆಡಿಎಸ್ ಹಗ್ಗ ಜಗ್ಗಾಟದಲ್ಲಿ ಏನಾಗಲಿದೆ? ತುಂಬಾ ಸಿಂಪಲ್. ಕಾಂಗ್ರೆಸ್ ಅಭ್ಯರ್ಥಿಯ ಸೂಟುಕೇಸ್ ಎಷ್ಟು ಭಾರವಾಗಿದೆ ಎನ್ನುವುದರ ಮೇಲೆ ಅವಲಂಬಿತವಾಗಿದೆ. ಅವರು ಯಾರಿಗೆ ಎಷ್ಟು ಕೊಡುತ್ತಾರೋ ಅಷ್ಟರ ಮಟ್ಟಿಗೆ ಅವರ ಗೆಲುವಿನ ದಾರಿ ಸುಲಭವಾಗುತ್ತದೆ. ಆಗ ಜೆಡಿಎಸ್ ವಿಪ್ ಜಾರಿಗೆ ತರದೇ ಚುನಾವಣೆಗೆ ಹೋದರೆ ಕಾಂಗ್ರೆಸ್ ಮುಸ್ಲಿಂ ಅಭ್ಯರ್ಥಿ ಗೆಲ್ಲಲಿದ್ದಾರೆ. ಅದರಿಂದ ದೇವೆಗೌಡರು ಯಾವುದೇ ಕಾರಣಕ್ಕೂ ಮುಸ್ಲಿಂ ಅಭ್ಯರ್ಥಿ ಸೋಲಲು ಬಿಡಲಿಲ್ಲ ಎಂದು ರಾಜ್ಯದ ಮುಸ್ಲಿಮರು ನಿಟ್ಟುಸಿರುಬಿಡುತ್ತಾರೆ. ಹಾಗಾದರೆ ಜೆಡಿಎಸ್ ತನ್ನ ಅಭ್ಯರ್ಥಿಯ ನಾಮಪತ್ರ ಹಿಂದಕ್ಕೆ ತೆಗೆಯದೇ ಸೋಲಲೇ ಅವರನ್ನು ನಿಲ್ಲಿಸಿದ್ದಾರಾ?
ಮೊದಲನೇಯದಾಗಿ ಇಲ್ಲಿ ಆರ್ಥಿಕ ಲಾಭ-ನಷ್ಟಗಳ ಒತ್ತಡವಿದೆ. ಅದು ಬಿಟ್ಟರೆ ಇನ್ನೊಂದು ಜೆಡಿಎಸ್ ಅಭ್ಯರ್ಥಿ ನಿಲ್ಲಿಸಿರುವುದರಿಂದ ತಮ್ಮ ಪಕ್ಷದ ಹೊಸ್ತಿಲ ಮೇಲೆ ಕುಳಿತು ದಿನದೂಡುತ್ತಿರುವವರು ಯಾರು ಎನ್ನುವ ನಿಖರ ಲೆಕ್ಕ ವಿಧಾನಸಭಾ ಚುನಾವಣೆಯ ಸಾಕಷ್ಟು ಮೊದಲೇ ಕಮಾರಸ್ವಾಮಿಗೆ ಗೊತ್ತಾಗಲಿದೆ. ಯಾಕೆಂದರೆ ರಾಜ್ಯಸಭಾ ಚುನಾವಣಾ ಎಂದರೆ ಪ್ರತಿ ಶಾಸಕ ತಮ್ಮ ಮತವನ್ನು ಪಕ್ಷದ ಚುನಾವಣಾ ಏಜೆಂಟಿಗೆ ತೋರಿಸಿಯೇ ಬಾಕ್ಸಿಗೆ ಹಾಕಬೇಕು. ಇಲ್ಲಿ ಈಗ ಕಾಂಗ್ರೆಸ್, ಬಿಜೆಪಿಗೆ ಹಾರುವವರು ತಾವು ಹಾರಲಿರುವ ಪಕ್ಷಕ್ಕೆ ಮತ ಹಾಕುವ ಸಾಧ್ಯತೆ ದಟ್ಟವಿರುತ್ತದೆ. ಜಮೀರ್, ಚೆಲುವರಾಯಸ್ವಾಮಿ ಸೇರಿ 9 ಶಾಸಕರು ಕಳೆದ ಬಾರಿ ರಾಜ್ಯಸಭಾ ಮತದಾನದ ದಿನ ಕಾಂಗ್ರೆಸ್ಸಿಗೆ ಅಡ್ಡಮತದಾನ ಹಾಕಿ ಜೆಡಿಎಸ್ ನಿಂದ ಹೊರನಡೆದಿದ್ದರು. ಈಗ ಮತ್ತೆ ಇತಿಹಾಸ ಮರುಕಳಿಸಿದೆ. ಯಾರು ಎಲ್ಲಿಗೆ ಮುಂದಿನ ವರ್ಷ ಸಲ್ಲಲ್ಲಿದ್ದಾರೆ ಎಂದು ಜೂನ್ 10ರ ರಾತ್ರಿ ಗ್ಯಾರಂಟಿಯಾಗಲಿದೆ!
Leave A Reply