ರಸ್ತೆಗೆ “ಸದಾ ಆನಂದ” ಪಡುವವರ ಹೆಸರು ಇಡುವುದರ ಹಿಂದೆ….
ಒಂದು ರಸ್ತೆಗೆ ಒಬ್ಬ ವ್ಯಕ್ತಿಯ ಹೆಸರು ಇಡುವುದು ಯಾವ ಕಾರಣಕ್ಕೆ ಎನ್ನುವ ಪ್ರಶ್ನೆಯನ್ನು ಬೇರೆ ಬೇರೆ ಮನಸ್ಥಿತಿಯ ಜನರಲ್ಲಿ ಕೇಳಿದರೆ ಬೇರೆ ಬೇರೆ ಉತ್ತರ ಸಿಗಬಹುದು. ರಾಜಕೀಯದಲ್ಲಿ ಇರುವವರ ಬಳಿ ಕೇಳಿದರೆ ಆ ಹೆಸರನ್ನು ಇಟ್ಟು ಅವರ ಜಾತಿಯವರನ್ನು ಖುಷಿಪಡಿಸಿ ವೋಟ್ ಬ್ಯಾಂಕ್ ಮಾಡಿಕೊಳ್ಳುವುದು ಎನ್ನುವ ಉತ್ತರ ಆಫ್ ದಿ ರೆಕಾರ್ಡ್ ಸಿಗಬಹುದು. ಸಾಮಾಜಿಕ ಸೇವಾಕ್ಷೇತ್ರದಲ್ಲಿ ಇರುವವರ ಬಳಿ ಕೇಳಿದರೆ ಆ ಹೆಸರು ಇಡುವ ವ್ಯಕ್ತಿ ಕೊಟ್ಟ ಕೊಡುಗೆಯನ್ನು ಸ್ಮರಿಸುವುದು. ಸಾಹಿತಿ, ಸರಸ್ವತಿ ವಲಯದಲ್ಲಿ ಇರುವವರ ಬಳಿ ಕೇಳಿದರೆ ಆ ವ್ಯಕ್ತಿಯ ಹೆಸರನ್ನು ಮುಂದಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡುವುದು. ಅದೇ ಯಾವುದರಲ್ಲಿಯೂ ಇರದವರ ಬಳಿ ಕೇಳಿದರೆ ರಸ್ತೆಗೆ ಒಂದು ಹೆಸರು ಎಂದು ಬೇಕಲ್ಲ, ಅದಕ್ಕೆ ಇಡುವುದು ಎಂದು ಹೇಳಬಹುದು. ಹೀಗೆ ಬೇರೆ ಬೇರೆ ಕಾರಣಗಳು ಸಿಗುತ್ತವೆ. ಕೊನೆಗೆ ಆ ರಸ್ತೆಗೋ, ಸರ್ಕಲ್ಲಿಗೋ ಆ ಹೆಸರು ಇಡಲಾಗುತ್ತದೆ. ರಾಜಕಾರಣಿಗಳು ತಮ್ಮ ಲಾಭವನ್ನು ನೋಡುತ್ತಾರೆ. ಉಳಿದವರು ಅವರವರ ಪಾಲಿಗೆ ಬಂದದ್ದನ್ನು ನೋಡಿ ಖುಷಿಯೋ, ಅಸಮಾಧಾನವೋ ವ್ಯಕ್ತಪಡಿಸುತ್ತಾರೆ. ಆದರೆ ಒಂದಂತೂ ನಿಜ, ಹೀಗೆ ನಾಮಕರಣ ಮಾಡುವಾಗ ನೂರಕ್ಕೆ ತೊಂಭತ್ತು ಶೇಕಡಾವಾದರೂ ಉತ್ತಮ ಮನಸ್ಸಿನಿಂದ ಹೆಸರಿಡುವ ವ್ಯಕ್ತಿಯ ಕೊಡುಗೆ ಮುಂದಿನ ತಲೆಮಾರಿಗೆ ಹೇಳಲು ಈಗಿನ ತಲೆಮಾರಿಗೆ ಕನಿಷ್ಟ ಹೆಮ್ಮೆ, ನೈತಿಕತೆಯಾದರೂ ಇರಲಿ ಎನ್ನುವುದು ಆಶಯ. ಹೆಸರಿಡುವ ಪ್ರಕ್ರಿಯೆಯಲ್ಲಿ ಕೇವಲ ರಾಜಕೀಯ ಲಾಭ ಮಾತ್ರ ನೋಡಿದರೆ ಇಡುವವರಿಗೂ ಲಾಭ ಇಲ್ಲ. ಇಟ್ಟುಕೊಂಡವರಿಂದಲೂ ಏನೂ ಪ್ರಯೋಜನವಿಲ್ಲದೆ ಜನ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರವನ್ನು ತೋರಿಸುತ್ತಾರೆ ಎನ್ನುವುದನ್ನು ನಾನು ನೋಡಿದ್ದೇನೆ.
ಹೆಚ್ಚಿನ ಬಾರಿ ಏನಾಗುತ್ತದೆ ಎಂದರೆ ಹೆಸರು ಇಡುವುದರ ಹಿಂದೆ ಜಾತಿ ಲೆಕ್ಕಾಚಾರ ಇರುತ್ತದೆ. ಆ ಭಾಗದ ಮತದಾರರು ಖುಷಿಗೊಳ್ಳಲಿ ಎನ್ನುವ ಆಶಯ ಜನಪ್ರತಿನಿಧಿಗಳಿಗೆ ಇರುತ್ತದೆ. ಹಾಗಂತ ಯಾರದ್ದೋ ಕೆಲಸಕ್ಕೆ ಬಾರದವರ ಹೆಸರು ಇಡುವ ಮೂಲಕ ಅದರ ಉದ್ದೇಶವನ್ನು ಹಾಳು ಮಾಡಬಾರದು. ಹೋಟೇಲ್ ಉದ್ಯಮಿ, ಸಂಘಟನೆಯ ಅಧ್ಯಕ್ಷ, ಗುತ್ತಿಗೆದಾರ, ಡೋನೇಶನ್ ವೀರ, ರಿಬ್ಬನ್ ಕಟ್ ಶೂರ, ಪ್ರಚಾರದಲ್ಲಿ ಸದಾ ಇರುವವ ಹೀಗೆ ಯಾರದ್ದೋ ಹೆಸರು ಇಡುವುದು ಬಿಡಿ, ಯೋಚಿಸುವುದು ಕೂಡ ತಪ್ಪು. ಇದರಿಂದ ಸಾಧಿಸುವುದು ಏನೂ ಇಲ್ಲ. ಅದು ಚುನಾವಣಾ ಗಿಮಿಕ್ ಎನ್ನುವುದು ಜನರಿಗೆ ಸ್ಪಷ್ಟವಾಗುತ್ತದೆ. ಆದ್ದರಿಂದ ಈ ಬಗ್ಗೆ ಜನಪ್ರತಿನಿಧಿಗಳು ಯೋಚಿಸುವುದು ಉತ್ತಮ. ಈಗ ಮಂಗಳೂರು ಮಹಾನಗರ ಪಾಲಿಕೆ ಕರಂಗಲಪಾಡಿಯಿಂದ ಕೋರ್ಟ್ ಸಂಕೀರ್ಣಕ್ಕೆ ಹೋಗುವ ರಸ್ತೆಗೆ ಸದಾನಂದ ಹೆಗ್ಡೆ ರಸ್ತೆ ಎಂದು ನಾಮಕಾರಣ ಮಾಡಲು ಉತ್ಸುಕವಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ. ಪಾಲಿಕೆ ಹೆಸರಿಡಲು ಬಯಸುತ್ತಿರುವ ಕೌಡೂರು ಸದಾನಂದ ಹೆಗ್ಡೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹಳ ದೊಡ್ಡ ಹೆಸರು. ಬಹುಶ: ಕೆ.ಎಸ್ ಹೆಗ್ಡೆ ಎಂದು ಹೇಳಿದರೆ ಜನರಿಗೆ ಸುಲಭವಾಗಿ ಅರ್ಥವಾಗುತ್ತದೆ. ಇವರು ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಹಾಗೂ ನಿಟ್ಟೆ ವಿನಯ ಹೆಗ್ಡೆಯವರ ಪೂಜ್ಯ ತಂದೆಯವರು. ಅವರ ಹೆಸರು ಪಾಲಿಕೆಯಲ್ಲಿ ಯಾವುದೇ ಚರ್ಚೆ, ವಿರೋಧ ಇಲ್ಲದೆ ಪಾಸಾಗಿದೆ ಎನ್ನುವ ಮಾಹಿತಿ ಇದೆ. ಯಾಕೆಂದರೆ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಸುಪ್ರೀಂಕೋರ್ಟಿನ ನ್ಯಾಯಮೂರ್ತಿ ಹಾಗೂ ಲೋಕಸಭೆಯ ಸ್ಪೀಕರ್ ಆಗಿ ದೇಶದ ಎರಡು ಮಹತ್ತರ ಜವಾಬ್ದಾರಿಯಲ್ಲಿ ಸೇವೆ ಸಲ್ಲಿಸಿದ ಯಾರಾದರೂ ವ್ಯಕ್ತಿ ಇದ್ದರೆ ಅದು ಸದಾನಂದ ಹೆಗ್ಡೆಯವರು ಮಾತ್ರ. ಅವರು ಬಂಟರಾಗಿರಬಹುದು. ಆದರೆ ಅವರು ಜಾತಿಯನ್ನು ಮೀರಿ ಬೆಳೆದವರು. ಅವರನ್ನು ಯಾರೂ ಬಂಟ ಸಮಾಜದವರು ಎನ್ನುವ ಏಕೈಕ ಕಾರಣಕ್ಕೆ ಗೌರವಿಸುತ್ತಾರೆ ಎಂದಲ್ಲ. ಕಾಂಗ್ರೆಸ್ಸಿನಿಂದ ಲೈಟ್ ಕಂಬ ನಿಲ್ಲಿಸಿದರೆ ಕೂಡ ಗೆಲ್ಲುತ್ತೆ ಎನ್ನುವ ರಾಜಕೀಯ ವಾತಾವರಣ ಇದ್ದಾಗ ಜನತಾ ಪಾರ್ಟಿಯಿಂದ ಸ್ಪರ್ಧಿಸಿ ಬೆಂಗಳೂರು ಲೋಕಸಭಾ ಕ್ಷೇತ್ರದಿಂದ ಗೆದ್ದು ಸಂಸದರಾಗಿ ಪ್ರಬಲ ರಾಜಕೀಯ ಪಕ್ಷಕ್ಕೆ ಸೆಡ್ಡು ಹೊಡೆದ ಉದಾತ್ತ ನಾಯಕ ಅವರಾಗಿದ್ದರು. ತಮ್ಮ ಹಿರಿತನವನ್ನು ಕಡೆಗಣಿಸಿ ಬೇರೆಯವರಿಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಮಾಡಿದಾಗ ಅಲ್ಲಿನ ರಾಜಕೀಯವನ್ನು ದಿಕ್ಕರಿಸಿ ಅಧಿಕಾರ ಬಿಸಾಡಿ ರಾಜೀನಾಮೆ ಕೊಟ್ಟು ಬಂದವರು. ಅವರ ಇಡೀ ಕುಟುಂಬದಲ್ಲಿ ಒಂದು ಆದರ್ಶ ಇದೆ. ಆ ಪೂರ್ಣ ಕುಟುಂಬ ಇಡೀ ರಾಷ್ಟ್ರದ ಗೌರವಕ್ಕೆ ಅರ್ಹ. ಹಾಗಿರುವಾಗ ಅವರ ಹೆಸರು ಇಷ್ಟು ತಡವಾಗಿಯಾದರೂ ನ್ಯಾಯಾಲಯ ರಸ್ತೆಗೆ ಇಡಲು ಕಾರ್ಯಸೂಚಿ ತಯಾರಾಗಿರುವುದು ಸಮಾಧಾನಕರ ವಿಷಯ. ಇನ್ನು ಪಾಲಿಕೆಯಲ್ಲಿ ಇದು ಎಷ್ಟು ಸುಲಭವಾಗಿ ಪಾಸಾಯಿತೋ, ಅಷ್ಟೇ ಕಠಿಣವಾಗಿ ಸಿಲುಕಿಕೊಂಡಿರುವುದು ಸುರತ್ಕಲ್ ಜಂಕ್ಷನ್ ಗೆ ವೀರ ಸಾವರ್ಕರ್ ಹೆಸರು ಇಡುವ ಪ್ರಸ್ತಾವ. ಸಾವರ್ಕರ್ ವಿರೋಧಿ ಕಾಂಗ್ರೆಸ್ಸಿಗರು ಈ ವಿಷಯದಲ್ಲಿ ಪಾಲಿಕೆಯಲ್ಲಿ ಕಣ್ಣುಮುಚ್ಚಾಲೆ ಆಡುತ್ತಿದ್ದಾರೆ!
Leave A Reply