ಈ ಖರ್ಚನ್ನು ಸರಕಾರವೇ ಭರಿಸಲಿ!
ಸಮುದ್ರದಿಂದ ಬಕೆಟ್ ನೀರು ತೆಗೆಯಿರಿ!
ಯಾರದ್ದೋ ದುಡ್ಡು, ಇನ್ಯಾರದ್ದೋ ಜಾತ್ರೆ ಎನ್ನುವ ಗಾದೆಯನ್ನು ಪಾಲಿಕೆಯ ದುಡ್ಡು, ಕಾಂಗ್ರೆಸ್ ಸರಕಾರದ ಜಾತ್ರೆ ಎಂದು ಹೇಳಿದರೂ ಅತಿಶಯೋಕ್ತಿಯಾಗಲಾರದು. ಪೌರಾಡಳಿತ ಸಚಿವರಾದ ರಹೀಂ ಖಾನ್ ಅವರು ಮಂಗಳೂರಿಗೆ ಬಂದು 9 ಹೊಸ ಇಂದಿರಾ ಕ್ಯಾಂಟೀನ್ ಇಲ್ಲಿ ಆರಂಭಿಸುವ ಯೋಜನೆ ಇದೆ ಎಂದು ಹೇಳಿ ಹೋಗಿದ್ದಾರೆ. ನಾನು ಆರಂಭದಲ್ಲಿಯೇ ಸ್ಪಷ್ಟಪಡಿಸುತ್ತೇನೆ. ನಾನು ಇಂದಿರಾ ಕ್ಯಾಂಟಿನ್ ವಿರೋಧಿಯಲ್ಲ. ಬಡವರಿಗೆ, ಅಸಹಾಯಕರಿಗೆ ಅತ್ಯಂತ ಕಡಿಮೆ ದರದಲ್ಲಿ ಒಂದಿಷ್ಟು ಉದರ ತುಂಬುತ್ತದೆ ಎಂದಾದರೆ ಅದನ್ನು ವಿರೋಧಿಸುವುದು ಮಾನವೀಯತೆ ಅಲ್ಲ. ಆದರೆ ಇದಕ್ಕೆ ತಗಲುವ ಲಕ್ಷಾಂತರ ರೂಪಾಯಿ ಖರ್ಚನ್ನು ರಾಜ್ಯ ಸರಕಾರವೇ ಭರಿಸಲಿ ಎನ್ನುವುದು ನನ್ನ ಆಶಯ. ಈಗ ನಿಯಮ ಹೇಗಿದೆ ಎಂದರೆ ಇಂದಿರಾ ಕ್ಯಾಂಟೀನ್ ನಡೆಸಲು ಬಿಡ್ ಕರೆಯಲಾಗುತ್ತದೆ. ಅದರಲ್ಲಿ ಒಬ್ಬ ವ್ಯಕ್ತಿ ಟಿಫಿನ್, ಊಟಕ್ಕೆ ಇಂತಿಷ್ಟು ಹಣಕ್ಕೆ ತಾನು ರೆಡಿ ಎಂದು ಹಾಕುತ್ತಾನೆ. ಸರಕಾರ ಊಟಕ್ಕೆ 10 ರೂಪಾಯಿ. ಟಿಫಿನ್ ಗೆ 5 ರೂಪಾಯಿ ಎಂದು ನಿಗದಿಪಡಿಸಿರುತ್ತದೆ. ನೀವು 10 ರೂಪಾಯಿ ಕೊಟ್ಟು ಊಟ ಮಾಡುತ್ತೀರಿ. ಆದರೆ ಆ ಊಟಕ್ಕೆ ಗುತ್ತಿಗೆದಾರ ಹಾಕಿದ ರೇಟ್ 50 ರೂಪಾಯಿ. ನೀವು 10 ರೂಪಾಯಿ ಇಂದಿರಾ ಕ್ಯಾಂಟೀನ್ ನಲ್ಲಿ ಆಲ್ ರೆಡಿ ಕೊಟ್ಟಿರುತ್ತೀರಿ. ಉಳಿದದ್ದು 40 ರೂಪಾಯಿಯಲ್ಲಿ ಸರಿ ಸುಮಾರು ಇಪ್ಪತ್ತೆಂಟು ರೂಪಾಯಿ ಪಾಲಿಕೆ ಮತ್ತು 12 ರೂಪಾಯಿ ರಾಜ್ಯ ಸರಕಾರ ನೀಡಬೇಕಾಗುತ್ತೆ. ಗುತ್ತಿಗೆದಾರರಿಗೆ ಕೊಡಬೇಕಾದ ಒಟ್ಟು ಮೊತ್ತದಲ್ಲಿ 70% ವನ್ನು ಮಹಾನಗರ ಪಾಲಿಕೆ ನೀಡಬೇಕಾಗುತ್ತದೆ. ಉಳಿದ 30% ಹಣವನ್ನು ಮಾತ್ರ ರಾಜ್ಯ ಸರಕಾರ ನೀಡುತ್ತದೆ. ಈಗ ಉದಾಹರಣೆಗೆ ಒಂದು ಇಂದಿರಾ ಕ್ಯಾಂಟಿನಿಗೆ ತಿಂಗಳಿಗೆ ಸರಾಸರಿ ಹತ್ತು ಲಕ್ಷ ಗುತ್ತಿಗೆದಾರರಿಗೆ ಪಾವತಿಸಬೇಕಾದರೆ ಅದರಲ್ಲಿ ಏಳು ಲಕ್ಷ ಪಾಲಿಕೆಯೇ ತನ್ನ ಬಜೆಟಿನಲ್ಲಿ ಹಣ ಮೀಸಲಿಟ್ಟು ಕೊಡಬೇಕಾಗುತ್ತದೆ.
ನಿತ್ಯ ಯಾರೇನೂ ಚೆಕ್ ಮಾಡಲು ಆಗಲ್ಲ!
ಒಂದೊಂದು ಇಂದಿರಾ ಕ್ಯಾಂಟಿನ್ ನಲ್ಲಿ ಬೆಳಿಗ್ಗೆ ಐನೂರು ಜನರಿಗೆ ತಿಂಡಿ, ಮಧ್ಯಾಹ್ನ ಊಟ, ಸಂಜೆ ತಿಂಡಿ ಕೊಡಬೇಕೆಂಬ ನಿಯಮ ಇದೆ. ಆದರೆ ಇಷ್ಟು ಮಂದಿಗೆ ಕೊಡುತ್ತಾರೋ ಇಲ್ವೋ ಎಂದು ನೋಡುವುದು ಯಾರು? ಯಾಕೆಂದರೆ ಪ್ರತಿ ತಿಂಗಳು ಗುತ್ತಿಗೆದಾರರು ಬಿಲ್ ಕೊಡುವುದಿಲ್ಲ. ಐದಾರು ತಿಂಗಳಿಗೆ ಒಮ್ಮೆ ಕೊಡುತ್ತಾರೆ. ಆದ್ದರಿಂದ ನಿತ್ಯ ಎಷ್ಟು ಮಂದಿಗೆ ತಿಂಡಿ, ಊಟ ಹೋಗುತ್ತದೆ ಎನ್ನುವುದು ನಿಖರವಾಗಿ ಹೇಳಲು ಆಗುವುದಿಲ್ಲ. ಇನ್ನೂರು ಜನರು ಟಿಫಿನ್ ಮಾಡಿದಾಗಲೂ ಐನೂರು ಜನರಿಗೆ ಟಿಫಿನ್ ಕೊಡಲಾಗಿದೆ ಎಂದು ಹೇಳಿ ಗುತ್ತಿಗೆದಾರರ ಸುಳ್ಳು ಲೆಕ್ಕ ತೋರಿಸಿದರೆ, ಆಗ ಜಿಲ್ಲಾಧಿಕಾರಿ ಏನೂ ನಿತ್ಯ ಚೆಕ್ ಮಾಡಲು ಬರುವುದಿಲ್ಲ.
ಈ ಖರ್ಚನ್ನು ಸರಕಾರವೇ ಭರಿಸಲಿ!
ಹತ್ತು ದಿನಗಳ ಹಿಂದೆ ಎಂಟು ತಿಂಗಳದ್ದು ಎಂದು ಹತ್ತು ಲಕ್ಷ ರೂಪಾಯಿಯ ಬಿಲ್ ಜಿಲ್ಲಾಧಿಕಾರಿ ಕಚೇರಿಗೆ ಬಂದಿದೆ. ಈಗ ಅದರಲ್ಲಿ ಏಳು ಲಕ್ಷ ಪಾಲಿಕೆ ಕೊಡಬೇಕು. ಹೀಗೆ ಮುಂದೆ 9 ಹೊಸ ಇಂದಿರಾ ಕ್ಯಾಂಟಿನ್ ಎಂದು ಶುರುವಾದರೆ ಪಾಲಿಕೆಯ ಮೇಲೆ ಹೆಚ್ಚುವರಿ ಹೊಡೆತ ಪ್ರತಿ ವರ್ಷ ಬೀಳುತ್ತದೆ. ಇಂದಿರಾ ಕ್ಯಾಂಟೀನ್ ಮಾಡುವುದೇ ಆದರೆ ಅದರ ಸಂಪೂರ್ಣ ಖರ್ಚಿನ ಜವಾಬ್ದಾರಿ ರಾಜ್ಯ ಸರಕಾರವೇ ಹೊರಲಿ. ಈ ಸ್ಥಳಿಯಾಡಳಿತ ಸಂಸ್ಥೆಗಳಿಗೆ ಇರುವ ಸೀಮಿತ ಆದಾಯದಲ್ಲಿ ಇನ್ನಷ್ಟು ಹೊರೆ ಹಾಕಿದ್ರೆ ಅಭಿವೃದ್ಧಿ ಕಾರ್ಯಗಳಿಗೆ ಹೊಡೆತ ಬೀಳುತ್ತದೆ. ಪಾಲಿಕೆಯ ಹಣ ಆ ನಗರದ ಅಭಿವೃದ್ಧಿಗೆ ಬಳಕೆಯಾಗಬೇಕು. ಜನಪ್ರಿಯ ಯೋಜನೆಗಳಿಗೆ ರಾಜ್ಯ ಸರಕಾರ ಹಣ ನೀಡಬೇಕು. ನಿಯಮಗಳನ್ನು ಹಾಗೆ ಬದಲಾಯಿಸಿ. ಹೇಗೂ ಉಸಿರು ಬಿಡುತ್ತಾ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದ್ದಿರಿ. ಅದಕ್ಕೆ ಇಂದಿರಾ ಕ್ಯಾಂಟೀನ್ ಖರ್ಚು ಕೂಡ ಸೇರಿಸಿ, ಪುಣ್ಯ ಕಟ್ಟಿಕೊಳ್ಳಿ!
Leave A Reply