ಪ್ರಾಚೀನ ಯೋಗಿನಿ ದೇವಾಲಯ: ಶಿವನನ್ನು ಕೇಂದ್ರವಾಗಿಸಿದ ದೇವಿಯ 65 ರೂಪಗಳು
ಇದು ಮಧ್ಯಪ್ರದೇಶದ ಗ್ವಾಲಿಯರ್ ಹತ್ತಿರದ ಮಿತಾವಲಿ ಎನ್ನುವ ಹಳ್ಳಿಯಲ್ಲಿರುವ ದೇಶದ ಏಕೈಕ ಯೋಗಿನಿ ದೇವಾಲಯ. ದಿಲ್ಲಿಯ ಸಂಸತ್ ಭವನವನ್ನು ಹೋಲುವ ಅತ್ಯಂತ ವೈಶಿಷ್ಟ ಪೂರ್ಣವಾದ ಆಕಾರವುಳ್ಳ ಶಿವನ ಮಂದಿರ.
ಶಿವನನ್ನು ಕೇಂದ್ರವಾಗಿಸಿಕೊಂಡು ತಾಯಿ ಪಾರ್ವತಿಯಿಂದ ಕೂಡಿ ಅರವತ್ತನಾಲ್ಕು ಗುಡಿಗಳು ಇಲ್ಲಿಯ ವಿಶೇಷತೆ. ಒಟ್ಟಿಗೆ ದೇವಿಯ 65 ರೂಪಗಳಿಗೆ ಪ್ರತ್ಯೇಕವಾಗಿ ಗರ್ಭಗೃಹ ಹಾಗೂ ಮಧ್ಯದಲ್ಲಿ ಶಿವನ ಮಂದಿರ. ಎಲ್ಲವೂ ವರ್ತುಲಾಕಾರದಲ್ಲಿದೆ.
ರಜಪೂತ ರಾಜ ದೇವಪಾಲ ಎನ್ನುವವನಿಂದ 13ನೇ ಶತಮಾನದಲ್ಲಿ ಈ ದೇವಾಲಯ ನಿರ್ಮಿಸಲ್ಪಟ್ಟಿದೆ. ಪುರುಷ ಪ್ರಕೃತಿ ಎನ್ನುವ ಅನುಬಂಧದಿಂದ ಶಿವ ಪಾರ್ವತಿಯರು ಈ ದೇವಸ್ಥಾನದ ಅಧಿಷ್ಠಾತೃ ದೇವತೆಗಳು. ಆದ್ದರಿಂದ ಭೂಮಿಯು ವರ್ತುಲ ಆಕಾರ ಎನ್ನುವ ಉದ್ದೇಶದಿಂದ ಈ ದೇವಾಲಯವನ್ನು ವರ್ತುಲಾಕಾರದಲ್ಲಿ ಮಾಡಲ್ಪಟ್ಟಿದೆ ಎನ್ನಬಹುದು.
ದೇಶದಲ್ಲಿ ಸುಮಾರು 10 ಕಡೆ ಯೋಗಿನಿ ದೇವಾಲಯಗಳು ನಮಗೆ ಕಾಣುತ್ತವೆ. ಸಾಧಾರಣ ಎಲ್ಲಾ ಕಡೆಯೂ ಗರ್ಭಗೃಹದ ಗೋಡೆಯಲ್ಲಿ ಅಥವಾ ಹೊರಾವರಣದ ಒಳಭಾಗದ ಗೋಡೆಗಳಲ್ಲಿ ಅಥವಾ ಕಂಬಗಳಲ್ಲಿ ಯೋಗಿನಿ ದೇವತೆಗಳು ಕೆತ್ತಲ್ಪಟ್ಟಿರುತ್ತದೆ. ಆದರೆ ಪ್ರತ್ಯೇಕವಾಗಿ ಗರ್ಭಗುಡಿಯನ್ನು ಹೊಂದಿರುವಂತಹ ದೇವಾಲಯ ಇದು ಮಾತ್ರವಾಗಿರಬಹುದು.
ಎಲ್ಲಾ ದೇವಾಲಯಗಳಂತೆ ಪರಕೀಯರ ಆಕ್ರಮಣಕ್ಕೆ ತುತ್ತಾಗಿ ಇಲ್ಲಿ ಯೋಗಿನಿ ದೇವತೆಗಳ ಮೂರ್ತಿ ನಾಶವಾಗಿದೆ. ಗರ್ಭಗೃಹಗಳಲ್ಲಿ ಶಿವಲಿಂಗ ಪ್ರತಿಷ್ಠಾಪಿತವಾಗಿದೆ. ಆದರೆ ಗರ್ಭಗೃಹದ ಹೊರಭಾಗದಲ್ಲಿ ಯೋಗಿನಿ ದೇವತೆಗಳ ಕೆತ್ತನೆಗಳು ಕಾಣುತ್ತವೆ. ಮತ್ತೆ ಉಳಿದಂತೆ ಬಹು ಭಾಗ ನಾಶವಾದಂತೆ ಕಾಣುತ್ತದೆ. ದೇವಸ್ಥಾನದ ಪ್ರಧಾನ ಅಂಗವಾದ ಶಿಖರ ಇಲ್ಲಿ ನಮಗೆ ಕಾಣುವುದಿಲ್ಲ. ಕಟ್ಟುವಾಗಲೇ ಅರ್ಧಕ್ಕೆ ನಿಂತಿದೆಯೋ ಅಥವಾ ನಷ್ಟವಾಗಿರುವ ದೇವಸ್ಥಾನವನ್ನು ಸರಿ ಮಾಡಿ ಇಷ್ಟರಮಟ್ಟಿಗೆ ತಂದು ನಿಲ್ಲಿಸಿದ್ದಾರೆಯೋ ಎನ್ನುವುದು ಅಸ್ಪಷ್ಟ ಮಾಹಿತಿ. ಆದರೆ ಮತ್ತುಳಿದ ಭಾಗಗಳೆಲ್ಲವೂ ಆದಷ್ಟು ಮಟ್ಟಿಗೆ ತನ್ನ ನೈಜತೆಯನ್ನು ಉಳಿಸಿಕೊಂಡಿದೆ.
ನೆಲದಿಂದ ನೂರು ಅಡಿ ಎತ್ತರದ ಪರ್ವತದಲ್ಲಿ ಈ ದೇವಸ್ಥಾನಕ್ಕೆ ಕಟ್ಟಲ್ಪಟ್ಟಿರುವುದು. ಯಾವುದೇ ಭೂಕಂಪ ಬಿರುಗಾಳಿಗೆ ಬಲಿಯಾಗದೆ ಗಟ್ಟಿಯಾಗಿ ನಿಂತಿದೆ. ಹಾಗೆಯೇ ಪ್ರಾಚೀನ ಕಾಲದಲ್ಲಿ ಭೌಗೋಳಿಕವಾದಂತಹ ಅಧ್ಯಯನ ಕೇಂದ್ರವಾಗಿತ್ತು ಎನ್ನುತ್ತದೆ ಕೆಲವು ಇತಿಹಾಸಗಳು. ಸಂಸತ್ ಭವನದ ನಿರ್ಮಾಣದ ಸಮಯದಲ್ಲೂ ಕೂಡ ವೃತ್ತಾಕಾರದ ತೀರ್ಮಾನವನ್ನು ಈ ಮಂದಿರವನ್ನು ನೋಡಿಯೇ ಸ್ವೀಕರಿಸಿದ್ದಾರೆ ಎನ್ನುವ ವದಂತಿಯಿದೆ. ಏನೇ ಆಗಲಿ ಮಧ್ಯಪ್ರದೇಶದ ಒಂದು ಸಣ್ಣ ಹಳ್ಳಿಯಲ್ಲಿ ದಿಲ್ಲಿಯನ್ನು ಹೋಲುವ ವೈಭವ ನಾವಿಲ್ಲಿ ಕಾಣುತ್ತೇವೆ.
Leave A Reply