ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಹೋಗಲು ಆಗುತ್ತಾ?
ಸುಪ್ರೀಂಕೋರ್ಟ್ ಆರ್ಟಿಕಲ್ 370 ಪ್ರಕರಣದ ಮೇಲೆ ನೀಡಿದ ತೀರ್ಪು ನಮ್ಮ ಪಾಲಿನ ಮರಣ ಶಾಸನ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ. ಅದರೊಂದಿಗೆ ನಾವು ಸುಪ್ರೀಂಕೋರ್ಟ್ ಸೇರಿದಂತೆ ಯಾರೂ ಕೂಡ ಆರ್ಟಿಕಲ್ 370 ನಿಷೇಧದ ಬಗ್ಗೆ ನೀಡುವ ತೀರ್ಪನ್ನು ಒಪ್ಪುವುದು ಇಲ್ಲ ಎಂದು ಹೇಳಿದ್ದಾರೆ. ಇದು ಅಂತ್ಯವಲ್ಲ, ತಮ್ಮ ಗುರಿಯೆಡೆಗೆ ಪ್ರಯಾಣವನ್ನು ನಿಲ್ಲಿಸಬೇಡಿ ಎಂದು ಕೂಡ ವಿಡಿಯೋ ಮಾಡಿ ಬಿಟ್ಟಿದ್ದಾರೆ. ಇದರ ಅರ್ಥ ಏನು? ಹೀಗೆ ಹೇಳುವ ಇವರಿಗೂ ಮತ್ತು ಇವರ ಹಾಗೆ ಯೋಚಿಸುವ ಅನೇಕರಿಗೆ ತಮ್ಮ ನಾಲಿಗೆಯ ಮೇಲೆ ಹಿಡಿತವಿಲ್ಲವೇ? ಕೇಂದ್ರ ಸರಕಾರದ ನಿರ್ಧಾರದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಲೇರಿದ ಒಟ್ಟು 24 ಮಂದಿಗೆ ಕಾಶ್ಮೀರ ಎನ್ನುವುದು ಅವರಪ್ಪ ಅವರಿಗೆ ಬಿಟ್ಟು ಹೋದ ಸ್ವತ್ತು ಎಂದು ಅನಿಸಿದೆಯಾ? ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ಮೋದಿ, ಶಾ ಎಳೆದುಕೊಂಡು ಬಿಟ್ಟಂತೆ ಇವರ್ಯಾಕೆ ಆಡುತ್ತಿದ್ದಾರೆ. ಸ್ವಾತಂತ್ರ್ಯ ಸಿಕ್ಕಿದ ಬಳಿಕ 75 ವರ್ಷ ಜಮ್ಮು-ಕಾಶ್ಮೀರವನ್ನು ಉಂಡು, ತೇಗಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದವರಿಗೆ ಈಗ ಬಿಸಿ ತಾಗುತ್ತಿದೆ. ಪಾಕಿಸ್ತಾನಕ್ಕೆ ಹೋಗಲು ಬಯಸದೇ ಭಾರತದಲ್ಲಿಯೇ ಉಳಿದ ಮುಸಲ್ಮಾನರಿಗೆ ಮಾಡಿದ ಅನ್ಯಾಯವಿದು ಎಂದು ಮುಫ್ತಿ ವಾದಿಸುತ್ತಿದ್ದಾರೆ. ಮಹಾತ್ಮಾ ಗಾಂಧಿಯವರ ಕಲ್ಪನೆಯ ಭಾರತಕ್ಕೆ ಇದು ವಿರುದ್ಧ ಎಂದು ಇವರು ತಗಾದೆ ತೆಗೆದಿದ್ದಾರೆ. ಜಮ್ಮು, ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಹೇಳುತ್ತಲೇ ಪಾಕಿಸ್ತಾನವನ್ನು ಸೋದರ ಸಂಬಂಧಿಯಂತೆ ಉಪಚರಿಸುತ್ತಿದ್ದ ಇಂತವರಿಗೆ ಇನ್ನು ಆ ರಸ್ತೆ ಬಂದಾಗಿದೆ. ಹಾಗಾದರೆ ಮುಂದೇನು?
ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಹೋಗಲು ಆಗುತ್ತಾ?
ಇಲ್ಲ, ಮೊಹಮ್ಮದ್ ಮುಫ್ತಿ ಸಹಿತ ಇವಳ ಒರಗೆಯ ಕಸಿನ್ಸ್ ಗಳು ಹೆಚ್ಚೆಂದರೆ ಅಲ್ಲಿನ ಮುಸ್ಲಿಮರನ್ನು ಎಬ್ಬಿಸುವ ಕೆಲಸ ಮಾಡಬಹುದು. ಆದರೆ ಅಲ್ಲಿನ ಮುಸ್ಲಿಮರಿಗೆ ಇಂತವರ ನಾಟಕ ಗೊತ್ತಿದೆ. ಅವರು ಇವರು ಹೇಳಿದ ಹಾಗೆ ದಂಗೇಳುವುದಿಲ್ಲ. ಹೆಚ್ಚೆಂದರೆ ಪಿಡಿಪಿ, ಎನ್ ಸಿ ಹಾಗೂ ಓವೈಸಿ ಸಹಿತ ಕೆಲವು ಮೂಲಭೂತ ಸಿದ್ಧಾಂತದ ಪಕ್ಷಗಳ ಕಾರ್ಯಕರ್ತರು ಇವರ ಕರೆಗೆ ಓಗೊಡಬಹುದು. ಆಗ ಏನು ಮಾಡಬೇಕೆಂದು ಕೇಂದ್ರ ಸರಕಾರಕ್ಕೆ ಗೊತ್ತಿದೆ. ಇನ್ನು ಜಮ್ಮು-ಕಾಶ್ಮೀರಕ್ಕೆ ವಿಶೇಷ ಅಧಿಕಾರ ಕೊಟ್ಟಿದ್ದು 1947 ರಲ್ಲಿ ಮಹಾರಾಜ ಹರಿಸಿಂಗ್ ಭಾರತಕ್ಕೆ ವಿಲೀನವಾಗುವ ಮೊದಲು ಕೇಳಿದ ಶರ್ತುಗಳ ಆಧಾರದಲ್ಲಿ. ಈಗ ಹರಿಸಿಂಗ್ ಆವತ್ತು ಎದುರಿಸಿದ ಪರಿಸ್ಥಿತಿಯೂ ಇಲ್ಲ. ಪಕ್ಕದ ಪಾಕಿಸ್ತಾನಕ್ಕೆ ಅಷ್ಟು ಧಮ್ ಕೂಡ ಉಳಿದಿಲ್ಲ. ಆದ್ದರಿಂದ ಆವತ್ತು ತಾತ್ಕಾಲಿಕ ನೆಲೆಯಲ್ಲಿ ನೀಡಿದ ಸೌಲಭ್ಯವನ್ನು ಇನ್ನು ನೂರಿನ್ನೂರು ವರ್ಷಗಳ ತನಕ ಕೊಡುವ ಅವಶ್ಯಕತೆ ಇಲ್ಲ. ಆವತ್ತು ಕೊಟ್ಟ ವಿಶೇಷಾಧಿಕಾರವನ್ನು ಹಿಂದಕ್ಕೆ ಪಡೆಯುವ ಸ್ವಾತಂತ್ರ್ಯ ಕೇಂದ್ರ ಸರಕಾರಕ್ಕೆ ಯಾವತ್ತೂ ಇದ್ದೇ ಇತ್ತು. ಆದರೆ ಕಾಂಗ್ರೆಸ್ ಅಧಿಕಾರದಲ್ಲಿ ಇರುವ ತನಕ ಅದಕ್ಕೆ ಕೈ ಹಾಕಲು ಹೋಗಿರಲಿಲ್ಲ. ಒಂದು ವೇಳೆ ಹಿಂದೆನೆ ಕಾಂಗ್ರೆಸ್ ಮಾಡಿದಿದ್ದರೆ ಅದು ತಪ್ಪಾಗುತ್ತಿರಲಿಲ್ಲ. ಆದರೆ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬರುವ ಮೊದಲು ಈ ವಿಷಯದ ಕುರಿತು ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಅದನ್ನು ಈಡೇರಿಸಿ ತೋರಿಸಿದೆ.
ಇನ್ನು ಅಲ್ಲಿ ಚುನಾವಣೆಯತ್ತ ಎಲ್ಲರ ಚಿತ್ತ!
ಇನ್ನು 2024 ರ ಸೆಪ್ಟೆಂಬರ್ 30 ರ ಒಳಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಉಳಿದ ರಾಜ್ಯಗಳ ಮಾದರಿಯಲ್ಲಿಯೇ ವಿಧಾನಸಭಾ ಚುನಾವಣೆ ಮಾಡಿ ಮುಗಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ. ಇದು ಲೋಕಸಭಾ ಚುನಾವಣೆಯ ನಂತರ ಬರುವುದರಿಂದ ಒಂದಂತೂ ಸ್ಪಷ್ಟ. ಒಂದು ವೇಳೆ ಎನ್ ಡಿಎ ಈಗಿನಕ್ಕಿಂತ ಹೆಚ್ಚು ಶಕ್ತಿಯೊಂದಿಗೆ ಅಧಿಕಾರಕ್ಕೆ ಮರಳಿದರೆ ಆಗ ಅಲ್ಲಿ ಕೂಡ ಬಿಜೆಪಿ ಹೆಚ್ಚಿನ ಸ್ಥಾನ ಗೆದ್ದು ಅಧಿಕಾರ ಹಿಡಿಯಬಹುದು. ಅದು ಆಗದಿದ್ದರೆ ಪಿಡಿಪಿ ಸಹಿತ ಅವರಂತಹ ಪಕ್ಷಗಳು ರೆಕ್ಕೆ ಪುಕ್ಕ ಬಿಚ್ಚಿ ಜಾತ್ರೆ ಹೊರಡಬಹುದು. ಅದರೊಂದಿಗೆ ಲಡಾಕ್ ಕೂಡ ಕೇಂದ್ರಾಡಳಿತ ಪ್ರದೇಶವಾಗುವ ಕೇಂದ್ರ ಸರಕಾರದ ತೀರ್ಮಾನಕ್ಕೆ ರಾಷ್ಟ್ರಪತಿಗಳ ಅಂಕಿತದ ವಿರುದ್ಧ ಕೋರ್ಟ್ ಮೆಟ್ಟಲೇರಿದವರಿಗೆ ಸೋಲಾಗಿದೆ. ಒಟ್ಟಿನಲ್ಲಿ ಇನ್ನು ಮುಂದೆ ತಾವು ಈ ವಿಷಯದಲ್ಲಿ ವಿರುದ್ಧ ಧ್ವನಿ ಎತ್ತುವಂತಿಲ್ಲ ಎಂದು ಗೊತ್ತಿದ್ದರೂ “ನಾವು ಹತಾಶರಾಗಬಾರದು, ಇಂತಹ ಅನೇಕ ಏರಿಳಿತಗಳನ್ನು ನಾವು ನೋಡಿದ್ದೇವೆ, ಆದ್ದರಿಂದ ಬೇಸರಗೊಳ್ಳಬೇಡಿ” ಎಂದು ಮೊಹಮ್ಮದ್ ಮುಫ್ತಿ ಮರ್ಯಾದೆ ಬಿಟ್ಟು ಹೇಳಿದ್ದಾರೆ. ಓವೈಸಿ ಕೂಡ ಇಂತಹ ತೀರ್ಪು ಒಪ್ಪಿಗೆಯಾಗಲ್ಲ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ದೇಶ ವಿರೋಧಿಗಳಿಗೆ ಸುಪ್ರೀಂಕೋರ್ಟ್ ತೀರ್ಪು ಮರಣಶಾಸನವಾಗಿದೆ. ಯಾಕೆಂದರೆ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಈ ತೀರ್ಪು ಹೊಸ ಆಯಾಮವನ್ನು ನೀಡಿದೆ. ಕೆಲವರಿಗೆ ಅಭಿವೃದ್ಧಿ ಬೇಕಿರಲಿಲ್ಲ. ಜಮೀನ್ದಾರಿಕೆ ರೀತಿಯ ವ್ಯವಸ್ಥೆ ಬೇಕಿತ್ತು. ಅಭಿವೃದ್ಧಿ ಬೇಕಿದ್ದವರಿಗೆ ಈ ತೀರ್ಪು ಹಾಲು ಕುಡಿದಷ್ಟೇ ಖುಷಿಯಾಗಿದೆ!
Leave A Reply