ಈ ಹಣ ಪಾಲಿಕೆಯ ಹಕ್ಕು, ಆರ್ ಟಿಒ ಭಿಕ್ಷೆ ಅಲ್ಲ!
ಲಾಲ್ ಭಾಗ್ ನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ಕಟ್ಟಡದ ತುತ್ತತುದಿಗೆ ಹೋಗಿ ಜೋರಾಗಿ ಒಂದು ಕಲ್ಲು ಎಸೆದರೂ ಅದು ಎಬಿ ಶೆಟ್ಟಿ ಸರ್ಕಲ್ ಹತ್ತಿರವಿರುವ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಚೇರಿಯ ಅಂಗಳದಲ್ಲಿ ಹೋಗಿ ಬೀಳುತ್ತದೆ. ಅಷ್ಟು ಸನಿಹದಲ್ಲಿದ್ದ ಮೇಲೆಯೂ ಕಳೆದ 20 ವರುಷಗಳಿಂದ ಪಾಲಿಕೆಯ ತಿಜೋರಿಗೆ ಬರಬೇಕಾಗಿದ್ದ ಹಣ ಬರಲಿಲ್ಲ ಎಂದರೆ ಏನು ಕಥೆ? ಇದನ್ನು ನಿರ್ಲಕ್ಷ್ಯ ಎನ್ನುತ್ತೀರಾ? ಜ್ಞಾನದ ಶೂನ್ಯತೆ ಎನ್ನುತ್ತೀರಾ ಅಥವಾ ಇಚ್ಚಾಶಕ್ತಿಯ ಕೊರತೆ ಎನ್ನುತ್ತೀರಾ? ಏನು ಬೇಕಾದರೂ ಹೇಳಬಹುದು. ಒಂದಂತೂ ನಿಜ. ಇದು ಮಾಹಿತಿಯ ಕೊರತೆ ಅಲ್ಲ. ಯಾಕೆಂದರೆ ನಾನೇ ಈ ಬಗ್ಗೆ ಪಾಲಿಕೆಯ ಎಷ್ಟೋ ಸಭೆಗಳಲ್ಲಿ ಹೇಳುತ್ತಾ ಬಂದಿದ್ದೇನೆ. ನನ್ನ ಗಂಟಲ ಪಸೆ ಆರಿದೆ ವಿನ: ಪಾಲಿಕೆಯಲ್ಲಿ ಕಳೆದ 20 ವರುಷಗಳಿಂದ ಅಧಿಕಾರ ನಡೆಸಿರುವ ಯಾವ ಮೇಯರ್ ಕೂಡ ಇದನ್ನು ಗಂಭೀರವಾಗಿ ತೆಗೆದುಕೊಂಡು ಪಾಲಿಕೆಯ ಆದಾಯ ಹೆಚ್ಚಿಸುವ ಕೆಲಸ ಮಾಡಿಲ್ಲ. ಅಷ್ಟಕ್ಕೂ ಯಾವ ಆದಾಯ 20 ವರುಷಗಳಿಂದ ಸೋರಿ ಹೋಗುತ್ತಿದೆ.
ಈ ಹಣ ಪಾಲಿಕೆಯ ಹಕ್ಕು, ಆರ್ ಟಿಒ ಭಿಕ್ಷೆ ಅಲ್ಲ!
ಕರ್ನಾಟಕ ಮಹಾನಗರ ಪಾಲಿಕೆಯ ಅಧಿನಿಯಮ 1976 ಪ್ರಕರಣ 103 – ಬಿ ಹಾಗೂ ಅನುಸೂಚಿ – 3 ರಡಿ ನಿಯಮ 7-ಬಿ ರನ್ವಯ ಮೂಲ ಸೌಕರ್ಯ ಉಪಕರ ( ಮೋಟಾರ ವಾಹನ ಉಪಕರವನ್ನು) ಸಂಗ್ರಹದ ಕುರಿತು ಸರಕಾರದ ಅಧಿಸೂಚನೆಯಲ್ಲಿಯೇ ಇದೆ. ಅದೇನೆಂದರೆ ಪಾಲಿಕೆ ವ್ಯಾಪ್ತಿಯಲ್ಲಿ ನೋಂದಣಿಯಾದಂತಹ, ಬಾಡಿಗೆಗೆ ಖರೀದಿಸಿರುವ, ಗುತ್ತಿಗೆ ಪಡೆದಿರುವ ವಾಹನಗಳಿಗೆ ಇಂತಿಷ್ಟು ಉಪಕರ ಎಂದು ನಿಗದಿಗೊಳಿಸಲಾಗಿದೆ. ಉದಾಹರಣೆಗೆ ದ್ವಿಚಕ್ರ ವಾಹನಗಳಿಗೆ 50 ರೂ, ಲಘು ಮೋಟಾರ್ ವಾಹನಗಳಲ್ಲಿ ತ್ರಿಚಕ್ರ ವಾಹನಗಳಿಗೆ ನೂರು ರೂ, ನಾಲ್ಕು ಚಕ್ರ ವಾಹನಗಳಿಗೆ ಮುನ್ನೂರು, ಮಧ್ಯಮ ಮತ್ತು ಭಾರಿ ಗಾತ್ರದ ವಾಹನಗಳಲ್ಲಿ ಪ್ರಯಾಣಿಕ ವಾಹನಗಳಿಗೆ 400 ರೂ ಹಾಗೂ ಗೂಡ್ಸ್ ವಾಹನಗಳಿಗೆ 500 ರೂ ಉಪಕರ ವಿಧಿಸಲಾಗಿದೆ. ಅಂದರೆ ನೀವು ನಿಮ್ಮ ವಾಹನಗಳನ್ನು ನೊಂದಾಯಿಸುವಾಗ ಪಾಲಿಕೆಯ ಉಪಕರ ಎಂದು ನಿಮ್ಮಿಂದ ಪಡೆಯಲಾಗುತ್ತದೆ. ಇದನ್ನು ಆರ್ ಟಿಒ ಕಚೇರಿಯಲ್ಲಿ ನೀವು ಕಟ್ಟುವುದಾಗಿದ್ದರೂ ಇದು ಹೋಗಬೇಕಾಗಿರುವುದು ಪಾಲಿಕೆಗೆ. ಕಾಲಕಾಲಕ್ಕೆ ಇದನ್ನು ಪಾಲಿಕೆಯವರು ಆರ್ ಟಿಒದಿಂದ ಪಡೆದುಕೊಳ್ಳಬೇಕು. ಪ್ರತಿ ತಿಂಗಳು ಇಂತಿಷ್ಟು ವಾಹನ ರಿಜಿಸ್ಟ್ರೆಡ್ ಆಗಿದೆ ಎನ್ನುವುದು ಅಲ್ಲಿ ದಾಖಲೆ ಇರುತ್ತದೆ. ಅದನ್ನು ನೋಡಿ ನಮ್ಮದು ಇಷ್ಟು ಎಂದು ಬ್ಯಾಂಕಿಗೆ ಹಾಕಿಬಿಡಿ ಎಂದು ಒಂದು ಪತ್ರ ಕಳುಹಿಸಿಕೊಟ್ಟರಾಯಿತು. ಒಂದು ವೇಳೆ ಪ್ರತಿ ತಿಂಗಳು ಇದು ಮಾಡಲಿಕ್ಕೆ ಆಲಸ್ಯ ಎಂದಾದರೆ ಮೂರು ತಿಂಗಳಿಗೆ ಒಮ್ಮೆಯಾದರೂ ಮಾಡಬಹುದಲ್ಲ. ಆದರೆ ಮೂರು ತಿಂಗಳು ಬಿಡಿ, ಒಂದು ವರ್ಷ ಬಿಡಿ, ಇವರು ಕಳೆದ 20 ವರುಷಗಳಿಂದ ಮಾಡಿಲ್ಲ.
ರಾಜ್ಯ ಸರಕಾರ ಸೂಚಿಸಿದರೂ ಆಗಿಲ್ಲ!
2004 ರಿಂದ ಪಾಲಿಕೆ ಹಣ ವಸೂಲಿ ಮಾಡುತ್ತಿಲ್ಲ ಎಂದು 2019 ಸೆಪ್ಟೆಂಬರ್ ನಲ್ಲಿ ರಾಜ್ಯ ಸರಕಾರವೇ ಸೂಚನೆ ಹೊರಡಿಸಿ ತಕ್ಷಣ ಉಪಕರ ಸಂಗ್ರಹ ಮಾಡುವಂತೆ ಪಾಲಿಕೆಗೆ ಆದೇಶ ನೀಡಿತ್ತು. ಆದರೂ ಪಾಲಿಕೆಯದ್ದು ದಿವ್ಯಮೌನ. ಕರ್ನಾಟಕದಲ್ಲಿ ಬೆಂಗಳೂರು ಬಿಟ್ಟರೆ ಅತೀ ಹೆಚ್ಚು ಆದಾಯ ಇರುವ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಎಂದರೆ ಅದು ಮಂಗಳೂರು. ಇಲ್ಲಿ ನಿತ್ಯ ಅದೆಷ್ಟೋ ವಾಹನಗಳ ರಿಜಿಸ್ಟ್ರೇಶನ್ ನಡೆಯುತ್ತದೆ. ಹೀಗಿರುವಾಗ 20 ವರುಷಗಳಿಂದ ನೀವೆ ಲೆಕ್ಕ. ಎಷ್ಟು ಕರ ಅಲ್ಲಿಯೇ ಉಳಿದಿದೆ. ಇನ್ನು ಈಗ ಒಮ್ಮೆಲ್ಲೇ ಅಷ್ಟೂ ವರ್ಷಗಳ ಉಪಕರ ಎಷ್ಟು ಎಂದು ಲೆಕ್ಕ ಹಾಕುವುದು ಸಾಧ್ಯವಿದೆಯಾ? ಇದನ್ನು ಯಾವುದೇ ಒಂದು ಪಕ್ಷದ ಆಡಳಿತದ ತಪ್ಪು ಎಂದು ನಾನು ಹೇಳುತ್ತಿಲ್ಲ. ಕಳೆದ 20 ವರ್ಷಗಳಲ್ಲಿ ಎರಡೂ ಪಕ್ಷಗಳು ಸಮನಾಗಿ ವರುಷಗಳನ್ನು ಹಂಚಿಕೊಂಡಂತೆ ಆಡಳಿತ ನಡೆಸಿವೆ. ಆದರೂ ಹೀಗೆ? ಅದಕ್ಕೆ ಹೇಳುವುದು, ಇವರ ಪ್ರತಾಪ ಏನಿದ್ದರೂ ನಾಲ್ಕು ದಿನ ತಡವಾಗಿ ಟ್ಯಾಕ್ಸ್ ಕಟ್ಟುವ ಜನಸಾಮಾನ್ಯನ ಮೇಲೆಯೇ ಹೊರತು ಬಲಾಢ್ಯರ ಮೇಲೆ ಅಲ್ಲ. ಪರಿಸ್ಥಿತಿ ಹೀಗೆ ಇದ್ದಾಗ ಪಾಲಿಕೆಗೆ ಆದಾಯ ಬರುವುದು ಎಲ್ಲಿಂದ. ಮೊನ್ನೆ ಕೂಡ ಸಭೆಯಲ್ಲಿ ಈ ವಿಷಯ ಹೇಳಿದ್ದೇನೆ. ಎಚ್ಚೆತ್ತುಕೊಳ್ಳುತ್ತಾರೋ ನೋಡಬೇಕು!
Leave A Reply