ಇಂದೋರ್ ನೋಡಿ ಹೇಗಿದೆ!
ಮತ್ತೊಮ್ಮೆ ನಾವು ಇಷ್ಟು ಹಿಂದೆ ಬಿದ್ದಿದ್ದೇಗೆ?
ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಾವು ಸುರಿಯುತ್ತಿರುವ ಹಣ ಮತ್ತು ನಮಗೆ ರಾಷ್ಟ್ರಮಟ್ಟದಲ್ಲಿ ಸ್ವಚ್ಚತೆಯ ವಿಷಯದಲ್ಲಿ ಸ್ವಚ್ಚ ಸಂರಕ್ಷಣಾ ಅಭಿಯಾನದಲ್ಲಿ ಸಿಗುವ ಸ್ಥಾನಮಾನ ಒಂದಕ್ಕೊಂದು ತಾಳೆ ಆಗುತ್ತಿಲ್ಲ. ತಿಂಗಳಿಗೆ ಕೋಟಿ ರೂಪಾಯಿ ಖರ್ಚು ಮಾಡಿದ ಪ್ರಕಾರ ನಾವು ದೇಶದಲ್ಲಿ ಒಂದರಿಂದ ಮೂರು ಸ್ಥಾನದ ಒಳಗೆ ಪ್ರತಿ ವರ್ಷ ಬರಬೇಕಿತ್ತು. ಆದರೆ ಈ ವರ್ಷ ನಾವು ಎಷ್ಟನೇ ಸಂಖ್ಯೆಯಲ್ಲಿ ಇದ್ದೇವೆ, ಗೊತ್ತಾ? 253 ನೇ ಸ್ಥಾನದಲ್ಲಿದ್ದೇವೆ. ದೇಶ ಬಿಡಿ, ನಾವು ರಾಜ್ಯದಲ್ಲಿಯೂ ಮೊದಲ ಮೂರು ಸ್ಥಾನದಲ್ಲಿ ಇಲ್ಲ. ಕರ್ನಾಟಕದಲ್ಲಿಯೂ ನಮ್ಮದು ಒಂಭತ್ತನೇ ಸ್ಥಾನ. ಇದು ಯಾವ ಪರಿಸ್ಥಿತಿ ಎಂದರೆ ಲಕ್ಷಾಂತರ ರೂಪಾಯಿ ಶಾಲೆಯ ಫೀಸ್ ಕಟ್ಟಿ, ಸಾವಿರಾರು ರೂಪಾಯಿ ಖರ್ಚು ಮಾಡಿ ಟ್ಯೂಶನ್ ಗೆ ಕಳುಹಿಸಿ ಹುಡುಗ ಐದರಲ್ಲಿ ನಾಲ್ಕು ಫೇಲ್ ಆಗುತ್ತಿದ್ದಾನೆ ಎಂದರೆ ಸಮಸ್ಯೆ ಎಲ್ಲಿಯೋ ಇದೆ ಎಂದೇ ಅರ್ಥ. ಒಂದೋ ಶಾಲೆಯಲ್ಲಿ ಬೇಕಾಬಿಟ್ಟಿ ಕಲಿಸುತ್ತಾರೆ, ಟ್ಯೂಶನ್ ಬರಿ ಹರಟೆಗೆ ಸೀಮಿತವೋ ಅಥವಾ ಹುಡುಗನೇ ವೀಕೋ, ಪೋಷಕರು ತಿಳಿಯಬೇಕಾಗಿದೆ.
ಇಂದೋರ್ ನೋಡಿ ಹೇಗಿದೆ!
ಇಲ್ಲಿ ಕೂಡ ಹೀಗೆಯೇ. ಬೇಕಾದರೆ ಮಧ್ಯಪ್ರದೇಶದ ಇಂದೋರ್ ಸಿಟಿ ನೋಡಿ. ಅವರು ಕಳೆದ ಏಳು ವರ್ಷಗಳಿಂದ ಒಂದನೇ ಸ್ಥಾನದಲ್ಲಿಯೇ ಇದ್ದಾರೆ. ಅದಕ್ಕೆ ಕಾರಣ ಅಲ್ಲಿನ ಆಡಳಿತ ವ್ಯವಸ್ಥೆ ಮತ್ತು ನಾಗರಿಕರು ಎನ್ನುವುದರಲ್ಲಿ ಸಂಶಯವಿಲ್ಲ. ಹೇಗೆ ಎನ್ನುವುದನ್ನು ವಿವರಿಸುತ್ತೇನೆ. ಅಲ್ಲಿ ಬೆಳಗ್ಗೆನೆ ಕಸ ಗುಡಿಸುತ್ತಾರೆ. ಹಸಿಕಸ ಮತ್ತು ಒಣಕಸವನ್ನು ಒಂದೇ ಗಾಡಿಯಲ್ಲಿ ಬೇರೆ ಬೇರೆ ಕಂಪಾರ್ಟಮೆಂಟ್ ನಲ್ಲಿ ಹಾಕಿ ಅದನ್ನು ತೆಗೆದುಕೊಂಡು ಹೋಗಲಾಗುತ್ತದೆ. ಇನ್ನು ಅಲ್ಲಿ ಆರೋಗ್ಯ ವಿಭಾಗದ ಅಧಿಕಾರಿಗಳು ಕೂಡ ತಮ್ಮ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿಸಿದರೆ ಅವರಿಗೆ ನೋಟಿಸು ನೀಡಿ ಅವರ ವಿರುದ್ಧ ಸೂಕ್ತ ಕ್ರಮಗಳನ್ನು ಅಲ್ಲಿನ ಆಡಳಿತ ತೆಗೆದುಕೊಳ್ಳುತ್ತದೆ. ಆದರೆ ನಮ್ಮ ಮಂಗಳೂರಿನಲ್ಲಿ ಆಗುತ್ತಿರುವುದೇನು?
ಆರೋಗ್ಯ ವಿಭಾಗದ ಅಧಿಕಾರಿಗಳು ಬೆಳಗ್ಗೆಯಿಂದ ಮಧ್ಯಾಹ್ನದ ತನಕ ತಮಗೆ ನಿಗದಿಯಾಗಿರುವ ವಾರ್ಡುಗಳಲ್ಲಿ ಸ್ವಚ್ಚತೆಯ ಉಸ್ತುವಾರಿಗಳು ನೋಡಿಕೊಳ್ಳಬೇಕು ಎನ್ನುವುದು ಅವರ ಕಡ್ಡಾಯ ದೈನಂದಿನ ದಿನಚರಿ. ಆದರೆ ಎಷ್ಟು ಮಂದಿ ಹೆಲ್ತ್ ಇನ್ಸಪೆಕ್ಟರುಗಳು ಈ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಇಲ್ಲ. ಒಂದು ವೇಳೆ ಅವರು ಫೀಲ್ಡಿಗೆ ಹೋಗದೇ ಇದ್ದರೆ ಅವರನ್ನು ಕೇಳುವವರು ಯಾರು? ಕೇಳುವವರು ಯಾರೂ ಇಲ್ಲ. ಹಾಗಿದ್ದ ಮೇಲೆ ಕೇರ್ ಲೇಸ್ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಎಲ್ಲಿಂದ ಬಂತು?
ಹೃದಯ ಭಾಗದ್ದೇ ಹೀಗಾದರೆ…
ಪರಿಸ್ಥಿತಿ ಹೀಗಿರುವುದರಿಂದಲೇ ಪಾಲಿಕೆಯ ಎ ಗ್ರೇಡ್ ಎನಿಸಿಕೊಂಡಿರುವ ವಾರ್ಡುಗಳಲ್ಲಿಯೇ ಕಸ ಗುಡಿಸುವವರಿಗೆ ಗತಿ ಇಲ್ಲ. ಬೇರೆ ವಾರ್ಡ್ ಬಿಡಿ, ಪಾಲಿಕೆ ಆಯುಕ್ತರ ಸರಕಾರಿ ಬಂಗ್ಲೆ ಇರುವ ವಾರ್ಡಿನಲ್ಲಿ, ಆ ರಸ್ತೆಯಲ್ಲಿ ಕಸದ ಕೊಂಪೆ ರಾಶಿ ಬಿದ್ದಿರುತ್ತದೆ. ಒಂದು ವೇಳೆ ಅಪ್ಪಿತಪ್ಪಿ ಗುಡಿಸುವುದು ಕಾಣಿಸಿಕೊಂಡರೆ ಅದು ಯಾವುದೋ ಭೂಗತ ಲೋಕದ ಜೀವಿ ಧರೆಗಿಳಿದು ಬಂತೆಂದೇ ಲೆಕ್ಕ. ಇನ್ನು ಇವರು ನಾವು ಕಸ ತೆಗೆಯುತ್ತೇವೆ ಎನ್ನುವುದನ್ನು ವಾದಿಸುವುದೇ ಆಗಿದ್ದರೆ ಫುಟ್ ಪಾತ್ ಬದಿಯಲ್ಲಿ, ರಸ್ತೆ ವಿಭಾಜಕಗಳ ಕೆಳಗೆ ಕಸಕಡ್ಡಿಗಳು ಕಾಣಿಸಬಾರದು. ಸದ್ಯ ಆಂಟೋನಿ ವೇಸ್ಟ್ ಮ್ಯಾನೇಜಮೆಂಟ್ ನವರ ಗುತ್ತಿಗೆ ಮುಗಿದು ಈಗ ಪಾಲಿಕೆ ನೇರವಾಗಿ ಸ್ವಚ್ಚತೆಯ ಕೆಲಸವನ್ನು ನೋಡಿಕೊಳ್ಳುವುದು ಎಂದಾಗಿದೆ. 300 ಜನರನ್ನು ಈ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ. ಈಗ ಹೊಸದಾಗಿ ನೇಮಕವಾಗಿರುವ ಇವರ ಬಳಿ ಈಗಲೇ ಕೆಲಸವನ್ನು ಸರಿಯಾಗಿ ಮಾಡಿಸದಿದ್ದರೆ ಕೆಲವು ಸಮಯದ ಬಳಿಕ ಇವರಿಂದ ಕೆಲಸ ಮಾಡಿಸುವುದು ಕಷ್ಟಸಾಧ್ಯ. ಮೊದಲಿಗೆ ಹೆಲ್ತ್ ಇನ್ಸಪೆಕ್ಟರ್ ಗಳು ಫೀಲ್ಡಿಗೆ ಇಳಿಯಬೇಕು. ಕಮೀಷನರ್ ಬಂಗ್ಲೆ ರಸ್ತೆ, ಸರಕಾರಿ ಉಗ್ರಾಣ ರಸ್ತೆ, ಮಣ್ಣಗುಡ್ಡೆ, ಹ್ಯಾಟ್ ಹಿಲ್, ಕೋರ್ಟ್ ರಸ್ತೆ, ಕುದ್ಮುಲ್ ರಂಗರಾವ್ ರಸ್ತೆ, ಕದ್ರಿ ರಸ್ತೆ, ಪಳ್ನೀರ್ ರಸ್ತೆ, ಬಿಜೈ ರಸ್ತೆ ಹೀಗೆ ಈ ಪ್ರದೇಶಗಳಲ್ಲಿಯೇ ಸ್ವಚ್ಚತೆ ಮರಿಚೀಕೆ ಆಗಿ ಹೋದರೆ ಉಳಿದ ವಾರ್ಡುಗಳ ಗತಿ ಏನು
Leave A Reply