ಐಪಿಎಲ್ ನಲ್ಲಿ ದಾಂಡಿಗರ ಬ್ಯಾಟ್ ಪರಿಶೀಲನೆ ಅಂಪೈರ್ ಮಾಡುವುದು ಯಾಕೆ!

ಐಪಿಎಲ್ ನಲ್ಲಿ ದಾಂಡಿಗ ಬ್ಯಾಟ್ ಹಿಡಿದು ಕ್ರೀಸಿಗೆ ಬರುತ್ತಿದ್ದಾರೆ. ಸಡನ್ನಾಗಿ ಅಂಪೈರ್ ಅವರ ಬ್ಯಾಟ್ ಹಿಡಿದು ಅದನ್ನು ಪರೀಕ್ಷಿಸುತ್ತಿದ್ದಾರೆ. ಹೀಗೆ ಯಾಕೆ ಮಾಡುತ್ತಾರೆ, ಇದು ಅವಮಾನವಲ್ಲವೇ, ಆಟಗಾರರ ಕ್ಷಮತೆ ಮೇಲೆ ಅನುಮಾನವೇಕೆ ಎಂದು ಅನಿಸಬಹುದು. ಆದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಪಿಎಲ್ ನಿಯಮಗಳಲ್ಲಿ ಹೊಸ ಬದಲಾವಣೆಯನ್ನು ತರುತ್ತಿದ್ದು, ನಾಲ್ಕೈದು ದಿನಗಳಿಂದ ಅಂಪೈರ್ ಗಳು ಬ್ಯಾಟ್ಸಮೆನ್ ಗಳ ಬ್ಯಾಟಿನ ಸೈಜ್ ಬಗ್ಗೆ ತಪಾಸಣೆಗೆ ಇಳಿದಿದ್ದಾರೆ.
ರೋಹಿತ್ ಶರ್ಮಾ, ಸೂರ್ಯ ಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ಇವರ ಬ್ಯಾಟ್ ಗಳನ್ನು ಚೆಕ್ ಮಾಡಿರುವ ಅಂಪೈರ್ ಗಳು ಸಮಾಧಾನಗೊಂಡ ಬಳಿಕ ಆಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಐಪಿಎಲ್ ಎಂದರೆ ಅಲ್ಲಿ ರನ್ ಸುರಿಮಳೆ ಇಲ್ಲದಿದ್ದರೆ ಬ್ಯಾಟರ್ ಗೆ ಮರ್ಯಾದೆ ಇಲ್ಲ. ಆದ್ದರಿಂದ ಮೈದಾನದಲ್ಲಿ ಸಿಕ್ಸರ್, ಫೋರ್ ಬಾರಿಸುವ ದಾಂಡಿಗನ ಬ್ಯಾಟ್ ಐಪಿಎಲ್ 5.7 ನಿಯಮಗಳ ಪ್ರಕಾರ ಇದೆಯೇ ಎನ್ನುವುದು ಕೂಡ ಅಷ್ಟೇ ಮುಖ್ಯ.
ಹಾಗಾದರೆ ಐಪಿಎಲ್ 5.7 ನಿಯಮ ಏನು?
ಕ್ರಿಕೆಟ್ ನಲ್ಲಿ ಬ್ಯಾಟ್ ಎರಡು ಭಾಗಗಳನ್ನು ಹೊಂದಿರುತ್ತದೆ. ಮೊದಲನೇಯದು ಹ್ಯಾಂಡಲ್ ಮತ್ತು ಎರಡನೇಯದು ಬ್ಲೇಡ್. ಹ್ಯಾಂಡಲ್ ಹೊರತುಪಡಿಸಿ ಒಟ್ಟು ಉದ್ದ 38 ಇಂಚು ಇರಬೇಕು ಅಥವಾ 96.52 ಸೆಂಟಿಮೀಟರ್ ಮೀರಬಾರದು. ಬ್ಲೇಡ್ ನ ಅಗಲ ಗರಿಷ್ಟ 4.25 ಇಂಚುಗಳಾಗಿರಬಹುದು. ಬ್ಯಾಟ್ ನ ಆಳ 2.64 ಇಂಚು ಮೀರಬಾರದು. ಮತ್ತು ಅಂಚುಗಳು 1.56 ಇಂಚು ಮೀರಬಾರದು. ಇಷ್ಟಿದ್ದೂ ಬ್ಯಾಟರ್ ಗಳು ನಿಯಮ ಉಲ್ಲಂಘಿಸಿ ಕ್ರೀಸಿಗೆ ಬಂದರೆ ಬ್ಯಾಟ್ಸಮೆನ್ ಗಳಿಗೆ ಬೇರೆ ಬ್ಯಾಟ್ ಬಳಸಲು ಅಂಪೈರ್ ಗಳು ಸೂಚಿಸಬಹುದೇ ವಿನ: ದಂಡದ ಅವಕಾಶ ನಿಯಮಗಳಲ್ಲಿ ಇಲ್ಲ.
ಆದ್ದರಿಂದ ಒಂದು ವೇಳೆ ನಿಯಮಗಳು ಉಲ್ಲಂಘನೆಯಾದರೆ ಬ್ಯಾಟ್ಸಮೆನ್ ಗಳು ಇರಿಸುಮುರಿಸು ಅನುಭವಿಸುವ ಬದಲು ಮೊದಲೇ ನಿಯಮಗಳ ಪ್ರಕಾರ ಬ್ಯಾಟ್ ಹಿಡಿದು ಆಡಲು ಆಗಮಿಸುವುದರಿಂದ ಇಲ್ಲಿಯ ತನಕ ನಿಯಮ ಉಲ್ಲಂಘನೆಯಾದ ಉದಾಹರಣೆ ಇಲ್ಲ.
Leave A Reply