ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ನಾಮಕರಣ ಮಾಡಬೇಕಾ?

ದಕ್ಷಿಣ ಕನ್ನಡ ಜಿಲ್ಲೆ ನಿಜವಾದ ರೀತಿಯಲ್ಲಿ ಭಾಷಾ ಸಾಮರಸ್ಯವನ್ನು ಸಾರುವ ಪ್ರದೇಶ. ರಾಜ್ಯ ಭಾಷೆಯಾಗಿರುವ ಕನ್ನಡ ಇಲ್ಲಿ ಆಡಳಿತ ಭಾಷೆಯಾಗಿದ್ದರೂ, ಅತೀ ಹೆಚ್ಚಿನ ಸಂಖ್ಯೆಯಲ್ಲಿ ತುಳು, ಕೊಂಕಣಿ ಮತ್ತು ಬ್ಯಾರಿ ಮಾತನಾಡುವ ಜನರು ಇಲ್ಲಿ ವ್ಯವಹಾರ, ಉದ್ಯಮ, ಉದ್ಯೋಗ, ಶಿಕ್ಷಣ ಪಡೆಯುತ್ತಾ ಇಲ್ಲಿಯೇ ನೆಲೆ ಕಂಡುಕೊಂಡಿದ್ದಾರೆ. ಇದರ ಅರ್ಥ ಮಂಗಳೂರು ಭಾಷೆಯ ವಿಷಯದಲ್ಲಿ ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ಪ್ರದೇಶವಾಗಿದೆ. ಆದರೆ ಇಡೀ ಜಿಲ್ಲೆಯನ್ನು ನೋಡುವಾಗ ಎಲ್ಲಿ ಕೂಡ ದಕ್ಷಿಣ ಕನ್ನಡ ಜಿಲ್ಲೆ ಎನ್ನುವ ಹೆಸರು ಕೇವಲ ಬೋರ್ಡಿನಲ್ಲಿ ಮಾತ್ರ ಕಾಣಬಹುದೇ ವಿನ: ಬಾಯಿ ಮಾತಿನಲ್ಲಿ ನೀವು ಎಲ್ಲಿಯವರು ಎಂದು ಕೇಳಿದರೆ ಎಲ್ಲರೂ ಹೇಳುವುದು ನಾವು ಮಂಗಳೂರಿನವರು ಎಂದು. ಸುಳ್ಯ, ಕಡಬ, ಬೆಳ್ತಂಗಡಿ, ಉಳ್ಳಾಲದಲ್ಲಿ ವಾಸಿಸುವವರು ಕೂಡ ಹೊರ ಪ್ರದೇಶಗಳಿಗೆ ಹೋಗುವಾಗ ಯಾರಾದರೂ ವಿಚಾರಿಸಿದರೆ ತಮ್ಮ ಊರು ಎಂದು ಹೇಳುವುದೇ ಮಂಗಳೂರು. ಆದ್ದರಿಂದ ಇದನ್ನು ದಕ್ಷಿಣ ಕನ್ನಡ ಎಂದು ಬರೆದಿರುವುದು ಕೇವಲ ಸರಕಾರಿ ಮತ್ತು ಎನ್ ಜಿಒಗಳ ಲೆಟರ್ ಹೆಡ್ಡಿನಲ್ಲಿ ಮಾತ್ರ.
ಇನ್ನು ಈ ಹೆಸರು ಇಡುವಾಗ ಇಲ್ಲಿ ಕನ್ನಡಕ್ಕೆ ವಿಶೇಷ ಒತ್ತು ಕೊಟ್ಟು ದಕ್ಷಿಣ ಕನ್ನಡ ಎಂದು ಹೇಳಿರುವುದು ಯಾಕೆ ಎಂದು ಗೊತ್ತಾಗುತ್ತಿಲ್ಲ. ಪ್ರಸ್ತುತ ಈಗ ಈ ಹೆಸರನ್ನು ಬದಲಾಯಿಸಿ ಇದನ್ನು ಮಂಗಳೂರು ಜಿಲ್ಲೆ ಎಂದು ನಾಮಕರಣ ಮಾಡಬೇಕು ಎನ್ನುವ ಕೂಗು ಬಲಯುತವಾಗಿ ಕೇಳಿಬರುತ್ತಿದೆ. ದಕ್ಷಿಣ ಕನ್ನಡ ಎಂಬ ಹೆಸರು ಯಾವುದೇ ರೀತಿಯಲ್ಲಿಯೂ ಈ ಪ್ರದೇಶಕ್ಕೆ ಹೊಂದುವುದಿಲ್ಲ. ಈ ನೆಲದ ಅಸ್ಮಿತೆಯನ್ನು ಪ್ರಸ್ತುತಪಡಿಸುವ ಹೆಸರಿಡಬೇಕು ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ಬಲಯುತವಾಗಿ ಕೇಳಿಬರುತ್ತಿದೆ.
ತುಳುನಾಡಿನ ಜಾನಪದ ಸಂದಿ – ಪಾರ್ದನಗಳಲ್ಲೂ ತುಳುನಾಡು, ಮಂಗಳೂರು ಎಂಬ ಉಲ್ಲೇಖವಿದೆ. ರಾಜ ಮನೆತನಗಳ ಕಾಲದಲ್ಲಿಯೂ ತುಳುನಾಡಿನ ಪ್ರಸ್ತಾಪವಿದೆ. ಶೇ 90 ರಷ್ಟು ತುಳು ಮಾತೃಭಾಷೆ ಹೊಂದಿರುವ ಪ್ರದೇಶಕ್ಕೆ ಅದೇ ಸಾಮ್ಯತೆ ಇರುವ ಹೆಸರು ಇಡಲೇಬೇಕಿದೆ. ಇದು ಸಾಧ್ಯವಾಗಬೇಕಾದರೆ ಜನರ ಧ್ವನಿ ಮೊಳಗಬೇಕು. ಜನಪ್ರತಿನಿಧಿಗಳು ವಿಧಾನಸಭೆಯಲ್ಲಿ, ಸಂಸತ್ತಿನಲ್ಲಿ ಅಂಕಿಅಂಶಗಳೊಂದಿಗೆ ವಾದ ಮಂಡಿಸಬೇಕು. ಸಂಘಟನೆಗಳು ಗಟ್ಟಿಯಾಗಿ ತಮ್ಮ ಅಭಿಪ್ರಾಯ ಹಂಚಿಕೊಳ್ಳಬೇಕು.
ಅಂತಿಮವಾಗಿ ಯಾವ ಹೆಸರು ಅಂತಿಮವಾಗಬೇಕು ಎನ್ನುವುದರ ನಡುವೆನೂ ಬಹುತೇಕರು ಮಂಗಳೂರು ಎಂದೇ ಹೆಸರು ಅಂತಿಮಗೊಳಿಸಲಿ ಎಂದು ಇಚ್ಚೆ ಪಡುತ್ತಿದ್ದಾರೆ. ಮಂಗಳಾಪುರ, ಕುಡ್ಲ, ತುಳುನಾಡು ಹೀಗೆ ಬೇರೆ ಬೇರೆ ಹೆಸರುಗಳು ಈಗ ಪ್ರಸ್ತಾಪದಲ್ಲಿದೆ. ಯಾವುದೇ ಫೈನಲ್ ಆಗುತ್ತದೆ ಎಂದು ಕಾದು ನೋಡಬೇಕು. ಈ ಹಿಂದೆನೂ 2014 ರಲ್ಲಿ ಈ ಬಗ್ಗೆ ಪ್ರಯತ್ನವಾಗಿತ್ತು. ಆದರೆ ಆಗ ಜಿಲ್ಲಾಧಿಕಾರಿಯಾಗಿದ್ದವರು ಸಕರಾತ್ಮಕವಾಗಿ ವರದಿ ಕೊಡಲಿಲ್ಲವಾದ ಕಾರಣ ಅದು ನೆನೆಗುದಿಗೆ ಬಿತ್ತು. ಈಗ ಹೊಸ ಜಿಲ್ಲಾಧಿಕಾರಿಯವರು ಜನರ ಭಾವನೆಗಳಿಗೆ ಸ್ಪಂದಿಸಿದರೆ ಹೆಸರು ಬದಲಾವಣೆ ಆಗಬಹುದು. ಆದರೆ ಎಷ್ಟರಮಟ್ಟಿಗೆ ಧ್ವನಿ ಮೊಳಗುತ್ತದೆ ಎನ್ನುವುದರ ಮೇಲೆ ಇದು ಅವಲಂಬಿತವಾಗಿದೆ.