ಪೊಲೀಸರ ದಬ್ಬಾಳಿಕೆ ಸಹಿಸಲು ಸಂಸದರು ಕೈಗೆ ಬಳೆ ತೊಟ್ಟಿಲ್ಲ!
ಪೊಲೀಸ್ ಅಧಿಕಾರಿಗಳೇ ನಿಮಗೆ ರಾಜ್ಯ ಸರಕಾರದಿಂದ ಏನು ಸೂಚನೆ ಬಂದಿದೆ, ಹೇಳಿ ಬಿಡಿ. ಅದು ಬಿಟ್ಟು ಸುಮ್ಮನೆ ಭಾರತೀಯ ಜನತಾ ಪಾರ್ಟಿಯ ಮಹಿಳೆಯರ ಮೇಲೆ ನಿಮ್ಮ ದರ್ಪ ತೋರಿಸಲು ಹೋಗಬೇಡಿ. ಒಂದು ವೇಳೆ ಮಂಗಳೂರು ಚಲೋಗೆ ಬಂದಿರುವ ಮಹಿಳಾ ಕಾರ್ಯಕರ್ತರನ್ನು ಮಾನಸಿಕವಾಗಿ ಹೆದರಿಸಲೇಬೇಕು ಎಂದು ನೀವು ನಿರ್ಧರಿಸಿದ್ದಲ್ಲಿ ಅದಕ್ಕೆ ಜವಾಬು ಕೊಡಲು ಭಾರತೀಯ ಜನತಾ ಪಾರ್ಟಿಯ ಸಂಸದರು, ಮುಖಂಡರು ಕೈಗೆ ಬಳೆ ತೊಟ್ಟು ಕುಳಿತಿಲ್ಲ ಎನ್ನುವುದು ನಿಮಗೆ ನೆನಪಿರಲಿ.
ಪ್ರತಿಭಟನೆಯಲ್ಲಿ ಭಾಗವಹಿಸಿ ಮರಳುತ್ತಿದ್ದ ದಕ್ಷಿಣ ಕನ್ನಡ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಪೂಜಾ ಪೈ ಹಾಗೂ ಮಹಿಳಾ ಮೋರ್ಚಾ ಕಾರ್ಯದಶರ್ಿ ಅವರಿಗೆ ಕದ್ರಿಯ ಗೋರಕ್ಷಕ ಸಭಾಭವನದಲ್ಲಿ ಪಕ್ಷದ ವತಿಯಿಂದ ಊಟದ ವ್ಯವಸ್ಥೆ ಇದೆ ಎಂದು ಗೊತ್ತಾಗಿ ಅವರು ಒಳಗೆ ಹೋಗಿದ್ದಾರೆ. ಅವರು ಊಟ ಮಾಡುತ್ತಿದ್ದಂತೆ ಪಕ್ಷದ ಬೆಳ್ತಂಗಡಿ ಘಟಕದ ಕಾರ್ಯಕತ್ತರಿಗೂ ವಿಷಯ ತಿಳಿದು ಅವರು ಕೂಡ ಒಳಗೆ ಬಂದಿದ್ದಾರೆ. ಎಲ್ಲರೂ ಊಟ ಮಾಡುತ್ತಿದ್ದಂತೆ ಪೊಲೀಸರು ಹೊರಗಿನಿಂದ ಬಾಗಿಲು ಮುಚ್ಚಿ ಲಾಕ್ ಮಾಡಿದ್ದಾರೆ. ಪೂಜಾ ಪೈ ಹಾಗೂ ಇನ್ನೊರ್ವ ಮಹಿಳೆ ಊಟ ಮುಗಿಸಿ ಕೈ ತೊಳೆದು ಹೊರಗೆ ಹೋಗಲು ಬಂದಾಗ ಬಾಗಿಲು ಮುಚ್ಚಿದ್ದು ಗೊತ್ತಾಗಿದೆ. ನಾವು ಹೋಗಬೇಕು, ಬಾಗಿಲು ತೆರೆಯಿರಿ ಎಂದಾಗ ಪೊಲೀಸರು ಇನ್ನರ್ಧ ಗಂಟೆ ಇಲ್ಲಿಯೇ ನೀವು ಇರಬೇಕು ಎಂದಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ಎಲ್ಲರ ಊಟ ಮುಗಿದು ಹೋಗಬೇಕು ಎಂದರೆ ಪೊಲೀಸರು ಬಿಟ್ಟಿಲ್ಲ. ಇದರ ನಂತರ ಪೂಜಾ ಪೈ ಅವರು ಮನಪಾ ಸದಸ್ಯೆ ರೂಪಾ ಡಿ ಬಂಗೇರ ಅವರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅವರು ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಿ ಪೂಜಾ ಪೈ ಅವರು ಬೇರೆ ಬೇರೆ ನಾಯಕರಿಗೆ ವಿಷಯ ಮುಟ್ಟಿಸಿದ್ದಾರೆ. ಎಲ್ಲರೂ ಸ್ಥಳಕ್ಕೆ ಬರುವ ಭರವಸೆ ನೀಡಿದ್ದಾರೆ. ಊಟಕ್ಕೆ ಒಳಗೆ ಹೋಗುವಾಗ ಪೊಲೀಸರು ಪೂಜಾ ಪೈ ಸಹಿತ ಎಲ್ಲರಿಂದ ಸಹಿ ಹಾಕಿಸಿಕೊಂಡು ಒಳಗೆ ಬಿಟ್ಟಿದ್ದರು. ಆದರೆ ಈಗ ಹೊರಗೆ ಹೋಗಲು ಯಾಕೆ ಬಿಡುತ್ತಿಲ್ಲ ಎಂದು ಅಲ್ಲಿಗೆ ಬಂದ ನಾಯಕರು ಪೊಲೀಸರನ್ನು ಪ್ರಶ್ನಿಸಿದ್ದಾರೆ. ಅಷ್ಟರಲ್ಲಿ ವಿಷಯ ತಿಳಿದುಕೊಂಡ ನಳಿನ್ ಕುಮಾರ್ ಕಟೀಲು ಅವರು ಸ್ಥಳಕ್ಕೆ ಧಾವಿಸಿದ್ದಾರೆ. ಅಷ್ಟೊತ್ತಿಗೆ ಇಂತಹ ಘಟನೆಗಳು ವಿಟಿ ರಸ್ತೆಯ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿಯೂ ನಡೆದಿದೆ ಎಂದು ಅವರ ಗಮನಕ್ಕೆ ಬಂದಿದೆ. ಅಲ್ಲಿ ಕೂಡ ಮಹಿಳಾ ಕಾರ್ಯಕತ್ತರನ್ನು ಒಳಗೆ ಹಾಕಿ ಹೊರಗೆ ಬಿಡುತ್ತಿಲ್ಲ ಎಂದು ಮಾಹಿತಿ ಸಿಕ್ಕಿದೆ.
ಗೋರಕ್ಷಕನಾಥ ಹಾಲ್ ಗೆ ಸಂಸದರು ಬಂದು ಒಳಗೆ ಹೋಗಿ ಪರಿಸ್ಥಿತಿ ಅವಲೋಕಿಸುತ್ತಿದ್ದಂತೆ ಮತ್ತೆ ಬಾಗಿಲು ಮುಚ್ಚಿ ಪೊಲೀಸರು ಅನುಚಿತವಾಗಿ ವರ್ತಿಸಿದ್ದಾರೆ. ಅಷ್ಟೊತ್ತಿಗೆ ಗಂಟೆ ಮೂರು ಕಳೆದಿದೆ. ಹೀಗೆ ಏಕೆ ಮಾಡುತ್ತಿದ್ದಿರಿ, ಯಾಕೆ ಮಹಿಳೆಯರನ್ನು ಹಿಂಸಿಸುತ್ತಿದ್ದಿರಿ ಎಂದು ನಳಿನ್ ಅವರು ಮತ್ತೆ ಮತ್ತೆ ಪ್ರಶ್ನಿಸುತ್ತಿದ್ದರೂ ಪೊಲೀಸ್ ಅಧಿಕಾರಿ ಮಾರುತಿ ನಾಯಕ್ ಅಸಂಬದ್ಧವಾಗಿ ಉತ್ತರಿಸಲು ಪ್ರಯತ್ನಿಸಿದ್ದಾರೆ. ಈ ರೀತಿಯ ವರ್ತನೆಯನ್ನು ನೀವು ತೋರಿಸುವ ಮೂಲಕ ಯಾರ ತಾಳಕ್ಕೆ ಕುಣಿಯುತ್ತಿದ್ದಿರಿ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದೆಂತಹ ಪೊಲೀಸ್ ಗಿರಿ ಎಂದು ಸಂಸದರು ಪ್ರಶ್ನಿಸಿದ್ದಾರೆ. ನಂತರ ಎಲ್ಲರನ್ನು ಪೊಲೀಸರು ಕಳುಹಿಸಿಕೊಟ್ಟಿದ್ದಾರೆ. ಸಂಸದರು ತಮ್ಮ ಪಕ್ಷದ ಕಾರ್ಯಕರ್ತರ ರಕ್ಷಣೆಗೆ ಧಾವಿಸಿದ್ದು ಎಲ್ಲೆಡೆ ಶ್ಲಾಘನೆಗೆ ಪಾತ್ರವಾಗಿದೆ. ಮಹಿಳಾ ಕಾರ್ಯಕರ್ತರು ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಕಾರ್ಯಕತ್ತರು ಜಯಕಾರ ಹಾಕಿ ಅಭಿನಂದಿಸಿದ್ದಾರೆ. ನಳಿನ್ ಕುಮಾರ್ ಕಟೀಲ್ ಅವರು ಪೊಲೀಸರೊಂದಿಗೆ ಮಾತನಾಡಿದ ವಿಡಿಯೋ ವೈರಲ್ ಆಗಿದೆ.
Leave A Reply