ಇವರ ಇ-ಟಾಯ್ಲೆಟ್ ಒಳಗೆ ಹೋಗಿದ್ದಿರಾ?
ನನ್ನ ಎಲ್ಲಾ ಹಿತೈಷಿಗಳಿಗೆ ನವರಾತ್ರಿ ಹಬ್ಬದ ಶುಭಾಶಯಗಳು. ದುಷ್ಟರ ಮೇಲೆ ಶಿಷ್ಟರ ಜಯ ಆಗುವಂತೆ ಭ್ರಷ್ಟರ ಮೇಲೆ ಒಳ್ಳೆಯವರ ಜಯ ಆಗಲಿ ಎನ್ನುವ ನಿರೀಕ್ಷೆಯೊಂದಿಗೆ ಇವತ್ತು ನವರಾತ್ರಿಯ ಮೊದಲ ದಿನ ಹೊಸ ವಿಷಯವನ್ನು ಆರಂಭಿಸೋಣ. ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟ್ ವಿಷಯವನ್ನು ಬರೆಯಲು ಇದೆ. ಆದರೆ ಆ ನಡುವೆ ಆರು ಲಕ್ಷ ಚಿಲ್ಲರೆಯ ಯೋಜನೆಯೊಂದು ಹಾಗೆ ಹಳ್ಳ ಹಿಡಿಯುವ ಮುನ್ಸೂಚನೆ ಕಾಣುತ್ತಿರುವುದರಿಂದ ಅದನ್ನು ಮೊದಲು ನಿಮ್ಮ ಗಮನಕ್ಕೆ ತರುವ ಅಗತ್ಯ ಇದೆ.
ಈ ಲಾಲ್ ಭಾಗ್ ಏರಿಯಾ ಮಂಗಳೂರಿನ ಮಟ್ಟಿಗೆ ಎಷ್ಟು ಪ್ರಾಮುಖ್ಯವಾದ ಪ್ರದೇಶ ಎಂದು ಎಲ್ಲರಿಗೂ ಗೊತ್ತಿದೆ. ಪಾಲಿಕೆಯಲ್ಲಿ ಏನಾದರೂ ಕೆಲಸಕ್ಕೆ ಬರುವವರು ಸೇರಿ, ಅಕ್ಕಪಕ್ಕ ಯಾವುದೇ ಅಗತ್ಯಕ್ಕೆ ಬರುವವರಿಗೆ ಎಲ್ಲವನ್ನು ಮನೆಯಲ್ಲಿಯೇ ಮುಗಿಸಿ ಬಂದರೂ ಪ್ರಕೃತಿಯ ಕರೆ ಯಾವಾಗ ಬರುತ್ತೆ ಎಂದು ಹೇಳಲಿಕ್ಕೆ ಆಗುವುದಿಲ್ಲವಾದ ಕಾರಣ ಈ ಭಾಗದಲ್ಲಿ ಒಂದು ಸಾರ್ವಜನಿಕ ಶೌಚಾಲಯ ಆಗಬೇಕೆನ್ನುವ ಬೇಡಿಕೆ ಇತ್ತು. ಬೇಡಿಕೆ ಎಂದ ಕೂಡಲೇ ನಮ್ಮ ಜನರೇನೂ ಹೋರಾಟ ಮಾಡಿ ಅದನ್ನು ಪಡೆದದ್ದಲ್ಲ. ಆದರೆ ಇಲ್ಲೊಂದು ಟಾಯ್ಲೆಟ್ ಇದ್ದರೆ ಒಳ್ಳೆಯದು, ನಾವು ಜನರಿಗೆ ಏನಾದರೂ ಮಾಡಿದ್ದೇವೆ ಎಂದು ತೋರಿಸುವ ಜರೂರತ್ತು ಇದ್ದ ಕಾರಣ ಮಂಗಳೂರು ಮಹಾನಗರ ಪಾಲಿಕೆ, ಇಲ್ಲಿನ ಶಾಸಕರು ನಾವು ಮೊತ್ತ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇ-ಟಾಯ್ಲೆಟ್ ಪ್ರಾರಂಭಿಸಿದ್ದೇವೆ ಎನ್ನುವ ಹೆಗ್ಗಳಿಕೆಯನ್ನು ತೋರಿಸುವುದಕ್ಕಾಗಿ ಮತ್ತು ಚುನಾವಣಾ ಪ್ರಚಾರದಲ್ಲಿ ಒಂದು ಗ್ರೂಪ್ ಫೋಟೋ ಪತ್ರಿಕೆಯಲ್ಲಿ ಹಾಕಲು ಬೇಕಾಗುತ್ತದೆ ಎಂದು ಇ-ಟಾಯ್ಲೆಟ್ ಎನ್ನುವ ಒಂದು ಶೌಚಾಲಯಗಳನ್ನು ಉದ್ಘಾಟಿಸಿದರು. ಸಾಮಾನ್ಯವಾಗಿ ಯಾವುದಾದರೂ ಕ್ರಿಕೆಟ್, ಫುಟ್ ಬಾಲ್ ಪಂದ್ಯಾಟ ಉದ್ಘಾಟನೆಯಾಗುವಾಗ ಅತಿಥಿಗಳು ಅದನ್ನು ಹೇಗೆ ಉದ್ಘಾಟಿಸುತ್ತಾರೆ ಎಂದು ನೀವು ನೋಡಿದ್ದಿರಿ. ಆದರೆ ಹೊಸ ಟಾಯ್ಲೆಟ್ ಉದ್ಘಾಟನೆ ಮಾಡುವಾಗ ಹಾಗೆ ಮಾಡಲು ಆಗುತ್ತಾ ಎಂದು ಶಾಸಕರು ಮತ್ತು ಇತರ ಗಣ್ಯರು ಹೊರಗಿನಿಂದಲೇ ರಿಬ್ಬನ್ ಕತ್ತರಿಸಿ, ಫೋಟೋ ತೆಗೆಸಿ, ಪರಸ್ಪರ ಕೈ ಕುಲುಕಿ ಹೊರಟು ಹೋದರು. ಪ್ರಾಬ್ಲಂ ಶುರುವಾದದ್ದೇ ಅಲ್ಲಿಂದ.
ಯಾಕೆ ಗೊತ್ತಾ? ಯಾರೂ ಒಳಗೆ ಹೋಗಿ ಉಪಯೋಗಿಸದೇ ಇದ್ದ ಕಾರಣ ಇದು ಹೇಗೆ ಕೆಲಸ ಮಾಡುತ್ತೆ ಎಂದು ಪ್ರಾಕ್ಟಿಕಲ್ ಆಗಿ ಯಾರಿಗೂ ಮಾಹಿತಿ ಇದ್ದಂತೆ ಕಾಣುತ್ತಿಲ್ಲ. ಸಾಮಾನ್ಯವಾಗಿ ಇಂತಹ ಶೌಚಾಲಯಗಳನ್ನು ಉಪಯೋಗಿಸುವುದು ಸಾಮಾನ್ಯ ಜನರು ಮಾತ್ರ. ಕಾರಿನಲ್ಲಿ ಹೋಗಿ ಬರುವ, ಕೆಳಗೆ ಇಳಿದರೆ ಶೂ ಸವೆದು ಹೋಗುತ್ತೋ ಎಂದು ಅಂದುಕೊಳ್ಳುವ, ಹೈ ಕ್ಲಾಸ್ ಜನ ಈ ಟಾಯ್ಲೆಟ್ ಗಳಿಗೆ ಹೋಗುವುದಿಲ್ಲ. ಅವರು ವಿದೇಶಕ್ಕೆ ಹೋಗಿದ್ದಾಗ ಇದನ್ನು ಅಲ್ಲಿ ಉಪಯೋಗಿಸಿರುತ್ತಾರೆ ವಿನ: ನಮ್ಮ ದೇಶದಲ್ಲಿ ಬಂದರೆ ಹೋ, ನೋ, ಐಸಿ ಎಂದು ಹೇಳಿ ಈ ಕಡೆ ಬರುವುದಿಲ್ಲ. ಅವರಿಗೆ ಉಪಯೋಗಿಸಲು ಬರುತ್ತೆ, ಆದರೆ ಉಪಯೋಗಿಸಲ್ಲ. ಆದರೆ ನಮ್ಮ ಸಾಮಾನ್ಯ ಜನರಿಗೆ ಇದರ ಅಗತ್ಯ ಇರುತ್ತದೆ. ಆದರೆ ಹೇಗೆ ಉಪಯೋಗಿಸಬೇಕು ಎಂದು ಗೊತ್ತಿಲ್ಲದ ಕಾರಣ ಅವರು ಗೊಂದಲಕ್ಕೆ ಒಳಗಾಗಿರುತ್ತಾರೆ.
ಇವರು ಹೇಳುವ ಇ-ಟಾಯ್ಲೆಟ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದರೆ ನೀವು ಬಾಗಿಲಿನ ಬಳಿ ಇರುವ ಬಾಕ್ಸಿನಲ್ಲಿ ಒಂದು ರೂಪಾಯಿ ಹಾಕಿದ ಕೂಡಲೇ ಬಾಗಿಲು ತೆರೆಯುತ್ತದೆ. ಬಾಗಿಲು ತೆರೆದ ಕೂಡಲೇ ಲೈಟ್ ಆನ್ ಆಗುತ್ತದೆ. ನೀರು ಬರಲು ಶುರುವಾಗುತ್ತದೆ. ಅದರ ನಂತರ ನೀವು ಅದನ್ನು ಉಪಯೋಗಿಸಿ ಹೊರಗೆ ಬಂದ ನಂತರ ಎಲ್ಲವೂ ಬಂದ್ ಆಗುತ್ತದೆ. ನಂತರ ನೀವು ಅಲ್ಲಿ ಕೋಮೋಡ್ ನಲ್ಲಿ ಬಿಟ್ಟಿದ್ದು ಡ್ರೈನೇಜ್ ಸೇರಿಕೊಳ್ಳುತ್ತದೆ. ಅದಕ್ಕೆ ಒಂದು ವ್ಯವಸ್ಥೆ ಮಾಡಿಕೊಡಲಾಗಿದೆ. ಆದ್ದರಿಂದ ಇವರು ಮಾಡಿರುವ ಇ-ಟಾಯ್ಲೆಟ್ ಗೆ ಡೈನೇಜ್ ವ್ಯವಸ್ಥೆ ಬೇಕು. ಲೆಕ್ಕದ ಪ್ರಕಾರ ಇ-ಟಾಯ್ಲೆಟ್ ಎಂದರೆ ಅದಕ್ಕೆ ಡ್ರೈನೇಜ್ ಕನೆಕ್ಷನ್ ಇರುವುದಿಲ್ಲ. ಒಂದು ವೇಳೆ ಇದ್ದರೆ ಅದು ಇ-ಟಾಯ್ಲೆಟ್ ಆಗುವುದಿಲ್ಲ.
ಅದರೊಂದಿಗೆ ಇದು ಒಮ್ಮೆ ಹಾಳಾದರೆ ಅದನ್ನು ಯಾರು ನಿರ್ವಹಣೆ ಮಾಡಬೇಕು ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಪಾಲಿಕೆಯ ಕರಾರು ಪ್ರಕಾರ ಇದನ್ನು ಯಾರು ಪ್ರಾರಂಭಿಸುವ ಗುತ್ತಿಗೆ ಪಡೆದುಕೊಂಡಿದ್ದಾರೋ ಅವರೇ ಒಂದು ವರ್ಷದ ತನಕ ಇದನ್ನು ನಿರ್ವಹಿಸಿಕೊಂಡು ಹೋಗಬೇಕು. ಈಗ ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ ಬೆಂಗಳೂರಿನ ಸಂಸ್ಥೆಯೊಂದು ಇದನ್ನು ಇಲ್ಲಿ ಆರಂಭಿಸಿರುವುದು. ಅವರು ಇಲ್ಲಿ ಐದು ಕಡೆ ಇಂತಹ ಟಾಯ್ಲೆಟ್ ಆರಂಭಿಸಿದ್ದಾರೆ. ಹಾಗೆ ಕಾಸರಗೋಡುವಿನಲ್ಲಿ 40 ಕಡೆ ಹೀಗೆ ಆರಂಭಿಸಿದ್ದಾರೆ. ಅದನ್ನು ನಿರ್ವಹಿಸಲು ಕಾಸರಗೋಡುವಿನಲ್ಲಿ ಈ ಸಂಸ್ಥೆಯವರು ಜನರನ್ನು ಇಟ್ಟುಕೊಂಡಿದ್ದಾರೆ. ಇಲ್ಲಿ ಹಾಳಾದರೆ ಅವರಿಗೆ ಬೆಂಗಳೂರಿನಲ್ಲಿ ಕುಳಿತ ಕಡೆ ಗೊತ್ತಾಗುತ್ತೆ ಎಂದು ಹೇಳಲಾಗುತ್ತದೆ. ನಂತರ ಅವರು ಕಾಸರಗೋಡಿನ ತಮ್ಮ ಸಿಬ್ಬಂದಿಗೆ ಹೇಳಿ ಅವರು ಬಂದು ನೋಡಿ ಸರಿ ಮಾಡಲು ನಾಲ್ಕು ದಿನವಾದರೂ ಬೇಕಾಗಬಹುದು. ಅಲ್ಲಿಯ ತನಕ ನಿಮಗೆ ಅರ್ಜೆಂಟಾಗಿ ಪ್ರಕೃತಿ ಕರೆದರೆ ಏನು ಮಾಡುವುದು? ಲಾಲ್ ಭಾಗಿನ ರಸ್ತೆ ಬದಿಯಲ್ಲಿ ಮಾಡುವುದಾ? ಅಲ್ಲಿ ಏನು ಮಾಡಿದರೂ ಎಲ್ಲಿಯಿಂದ ಆದರೂ ಯಾರಾದರೂ ಫೋಟೋ ತೆಗೆದು ಸಾಮಾಜಿಕ ತಾಣದಲ್ಲಿ ಹಾಕಿದರೆ ಮರ್ಯಾದೆ ಹೋಗುವುದು ಯಾರದ್ದು? ಕಥೆ ಇಷ್ಟೇ ಅಲ್ಲ. ಇನ್ನೂ ಇದೆ. ಈ ಟಾಯ್ಲೆಟ್ ಒಳಗಿರುವ ನೀರು ಎಷ್ಟು? ಅದು ಎಷ್ಟು ಜನರಿಗೆ ಸಾಕಾಗುತ್ತೆ? ಇದನ್ನು ನಿರ್ವಹಿಸುವವರು ಸರಿಯಾಗಿ ನಿರ್ವಹಣೆ ಮಾಡುತ್ತಾರಾ, ಇಲ್ಲದಿದ್ದರೆ ಇದು ಯಾಕೆ ಬಂದ್ ಆಯಿತು ಎಲ್ಲಾ ಹೇಳಲು ಇದೆ.
ಪಾಪ, ಇದನ್ನು ಪ್ರಾರಂಭಿಸಿರುವ ಗುತ್ತಿಗೆದಾರ ಸಂಸ್ಥೆ ಒಂದೊಂದು ಟಾಯ್ಲೆಟಿಗೂ ಆರೂ ಚಿಲ್ಲರೆ ಲಕ್ಷ ಬಿಲ್ ಹಾಕಿ, ಬಿಲ್ ಪಾಸ್ ಆಗುವಾಗ ಐದು ಟಾಯ್ಲೆಟಿದ್ದು ಸೇರಿ ಮೂವತ್ತು ಲಕ್ಷ ರೂಪಾಯಿಯಲ್ಲಿ ಯಾರ್ಯಾರಿಗೆ ಎಷ್ಟೇಷ್ಟು ಕಮಿಷನ್ ಕೊಡಬೇಕೋ ಅದನ್ನು ಕೊಟ್ಟು ತನ್ನ ಪಾಡಿಗೆ ತಾನು ಹೋಗಿರುತ್ತದೆ. ಅವನಿಗೆ ಇದರ ಹಂಗು ಇಲ್ಲ, ಋಣ ಕೂಡ ಇಲ್ಲ. ಇವರಿಗೆ ತಮ್ಮ ಪಾಲಿನ ಕಮಿಷನ್ ತೆಗೆದುಕೊಂಡ ಕಾರಣ ಕೇಳುವ ನೈತಿಕತೆ ಇಲ್ಲ. ಪ್ರಶ್ನೆ ಈಗ ಉದ್ಘವಿಸಿರುವುದು ಹಾಗಾದರೆ ನಮಗೆ ಅರ್ಜೆಂಟ್ ಪ್ರಕೃತಿ ಕರೆ ಮಾಡಿದರೆ ನಾವು ಯಾರಿಗೆ ಕರೆ ಮಾಡುವುದು? ಶಾಸಕರಿಗಾ? ಮೇಯರಿಗಾ?
Leave A Reply