ಕದ್ರಿ ಇ-ಟಾಯ್ಲೆಟಿಗೆ ಮಧ್ಯಾಹ್ನ ಹೋಗುವವರು ನೀರು ತೆಗೆದುಕೊಂಡೇ ಹೋಗಿ!
ಮಂಗಳೂರಿನ ಲಾಲ್ ಭಾಗ್ ಬಸ್ ಸ್ಟಾಪಿನಲ್ಲಿ ಇ-ಟಾಯ್ಲೆಟ್ ಇದೆ. ಅದರ ಬಗ್ಗೆ ನಿನ್ನೆ ಬರೆದಿದ್ದೆನೆ. ಈಗ ದೃಶ್ಯ 1: ಕದ್ರಿಯಲ್ಲಿರುವ ಇ-ಟಾಯ್ಲೆಟ್ ಬಗ್ಗೆ ಬರೋಣ. ಅನೇಕ ಜನ ಇಲ್ಲಿ ಬೆಳಗ್ಗಿನ ಜಾವ ವಾಕಿಂಗ್ ಗೋಸ್ಕರ ಬರುತ್ತಾರೆ. ಬಂದವರು ಬೆವರು ಸುರಿಸುವುದು ಮಾಮೂಲು. ಅರ್ಜೆಂಟಾಗಿ ದೇಹಭಾದೆ ತೀರಿಸೋಣ ಎಂದು ಇಲ್ಲಿನ ಇ-ಟಾಯ್ಲೆಟ್ ಗೆ ಹೋಗುತ್ತಾರೆ.
ದೃಶ್ಯ2: ನೀವು ಸಂಜೆ ವಾಯು ವಿಹಾರಕ್ಕೆಂದು ಕದ್ರಿ ಪಾರ್ಕ್ ಗೆ ಬರುತ್ತೀರಿ. ನಿಮಗೂ ದೇಹಭಾದೆ ಆಯಿತು ಎಂದು ಇಟ್ಟುಕೊಳ್ಳೋಣ. ನೀವು ಅದೇ ಇ-ಟಾಯ್ಲೆಟಿಗೆ ಹೋಗುತ್ತೀರಿ. ಮೊದಲಿಗೆ ಅಲ್ಲಿ ನೀರು ಇದೆಯಾ ಎಂದು ಪರಿಶೀಲಿಸಿ. ಯಾಕೆಂದರೆ ಅದೇ ಇವತ್ತಿನ ಕಥೆ.
ದೃಶ್ಯ 1 ರಲ್ಲಿ ಟಾಯ್ಲೆಟಿಗೆ ಹೋದವರು ತಮ್ಮ ಕೆಲಸ ಮುಗಿಸಿ ಬರುತ್ತಾರೆ. ಇನ್ನೊಬ್ಬರು ಒಳಗೆ ಹೋಗುತ್ತಾರೆ. ಅವರು ಹೊರಗೆ ಬರುತ್ತಾರೆ. ಮತ್ತೊಬ್ಬರು ಹೋಗುತ್ತಾರೆ. ಹೀಗೆ ಅನೇಕರು ಹೋಗಿ ಬರುತ್ತಾರೆ. 25-30 ಜನ ಕನಿಷ್ಟ ಬೆಳಗ್ಗಿನ ಜಾವ ಒಳಗೆ ಹೋಗಿ ಹೊರಗೆ ಬರಬಹುದು. ಅಲ್ಲಿಗೆ ಎಷ್ಟು ನೀರು ಖಾಲಿಯಾಗಿರಬಹುದು ಎನ್ನುವ ಅಂದಾಜು ನಿಮ್ಮದು.
ಈ ದೃಶ್ಯ 2ರಲ್ಲಿ ನೀವು ಒಳಗೆ ಹೋಗುವಾಗ ನೀರು ಇದೆಯಾ ಎಂದು ಪರಿಶೀಲಿಸಿ ನೋಡಿ ಎಂದು ಹೇಳಿದ್ದು ಯಾಕೆ ಗೊತ್ತಾ? ಇಂತಹ ಟಾಯ್ಲೆಟ್ ಗಳಲ್ಲಿ ಇರುವ ಒಟ್ಟು ನೀರಿನ ಪ್ರಮಾಣ ಕೇವಲ 150 ಲೀಟರ್. ಬೆಳಿಗ್ಗೆ 5 ಗಂಟೆಯಿಂದ 9 ಗಂಟೆಯ ಒಳಗೆ ವಾಕಿಂಗ್ ಗೆ ಬಂದಿರುವವರು ಇ-ಟಾಯ್ಲೆಟ್ ಬಳಸಿದರೆ ಅಲ್ಲಿರುವ ನೀರೆಲ್ಲಾ ಖಾಲಿ. ಅಂದರೆ ಮತ್ತೆ ನೀರು ಅಲ್ಲಿ ಇರುವುದಿಲ್ವೇ ಎಂದು ಕೇಳಬಹುದು. ಕದ್ರಿಯ ಈ ಟಾಯ್ಲೆಟ್ ಗಳಿಗೆ ನೀರು ಪೂರೈಕೆಯಾಗುವುದು ಪ್ರತಿ ದಿನ ರಾತ್ರಿ 10 ಗಂಟೆಗೆ. ಅದು ಒಮ್ಮೆ ಫುಲ್ ಆದರೆ ರಾತ್ರಿಯಿಂದ ಬೆಳಗ್ಗಿನ ತನಕ ಟ್ಯಾಂಕ್ ತುಂಬಿರುತ್ತದೆ. ಬೆಳಿಗ್ಗೆ ವಾಕಿಂಗ್ ಬರುವ ಜನರಲ್ಲಿ 10 ಶೇಕಡಾ ಜನ ಹೋದರೂ 150 ಲೀಟರ್ ಖಾಲಿಯಾಗುತ್ತದೆ. ನೀವು ಮಧ್ಯಾಹ್ನದ ನಂತರ ಒಳಗೆ ಹೋದರೆ ನೀರು ಇರುವುದು ಡೌಟು. ಬಹುಶ: ಇದ್ದರೆ ನಿಮ್ಮ ಅದೃಷ್ಟ. ನೀರು ಬೇಕಂತಿಲ್ಲ, ಬರೀ ಮೂತ್ರ ಮಾಡಿ ಬರುತ್ತೇವೆ ಎಂದು ಹೇಳಿದಿರೋ, ನಿಮಗಿಂತ ಮೊದಲು ಹೋಗಿ ಬಂದವರು ಮಾಡಿ ಹೋದ ವಾಸನೆ ನಿಮ್ಮ ಮೂಗಿಗೆ ಬಡಿಯುತ್ತದೆ. ಅದು ಇ-ಟಾಯ್ಲೆಟ್ ಅಲ್ಲವಾದ್ದರಿಂದ ತ್ಯಾಜ್ಯ ಇಂಗಿ ಹೋಗಲ್ಲ.
ನನ್ನ ನಿರೀಕ್ಷೆ ಇಷ್ಟೇ. ನೀವು ಅಷ್ಟು ಜನನಿಬಿಡ ಸ್ಥಳದಲ್ಲಿ ಆರು ಲಕ್ಷದ ಟಾಯ್ಲೆಟ್ ಕಟ್ಟುವಾಗ ಅದರಲ್ಲಿ ನೀರಿನ ಹೆಚ್ಚುವರಿ ಟಾಂಕಿ ಇಡಲೇಬೇಕು. ಆಗ ಒಂದರಲ್ಲಿ ನೀರು ಖಾಲಿಯಾದರೆ ಮತ್ತೊಂದು ಮೀಸಲು ಇರುತ್ತದೆ. ಅದು ಬಿಟ್ಟು ಹೊರಗಿನಿಂದ ಉದ್ಘಾಟನೆಗೆ ಗ್ರೂಪ್ ಫೋಟೊ ತೆಗೆಯಲು ಮಾತ್ರ ಅದನ್ನು ಪ್ರಾರಂಭಿಸಿದ್ದರೆ ಅದು ಈಗ ಕೊಡಿಯಾಲ್ ಬೈಲ್, ಜೈಲ್ ರೋಡಿನಲ್ಲಿರುವ ಸಾರ್ವಜನಿಕ ಶೌಚಾಲಯದ ಲೆವೆಲ್ಲಿಗೆ ಸೊಳ್ಳೆ, ಇಲಿ, ಹಾವು, ಕ್ರಿಮಿಕೀಟಗಳಿಗೆ ಅರಮನೆ ಕಟ್ಟಿಕೊಟ್ಟು ಎಂಜಾಯ್ ಮಾಡಲು ಬಿಟ್ಟಂತೆ ಆಗುತ್ತದೆ.
ನೀವು ಮಂಗಳೂರಿನಲ್ಲಿರುವ ಕೆಲವು ಪಬ್ಲಿಕ್ ಟಾಯ್ಲೆಟ್ ಗಳನ್ನು ನೋಡಿರಬಹುದು. ಅವು ಪಾಳು ಬಿದ್ದಂತೆ ಇರುತ್ತವೆ. ಈ ಕುರಿತು ವಿಸ್ತ್ರತವಾಗಿ ಹಿಂದೆ ಬರೆದಿದ್ದೇನೆ. ಕೆಲವು ಟಾಯ್ಲೆಟ್ ಗಳಲ್ಲಿ ಮಾತ್ರ ಹಣ ತೆಗೆದುಕೊಂಡು ಕ್ಲೀನ್ ಆಗಿ ಇಟ್ಟಿರುತ್ತಾರೆ. ಯಾಕೆಂದರೆ ಪಾಲಿಕೆ ಟೆಂಡರ್ ಕರೆಯುವಾಗ ಎಲ್ಲಿ ಚೆನ್ನಾಗಿ ಲಾಭ ಇದೆಯೋ ಅವುಗಳನ್ನು ಮಾತ್ರ ಗುತ್ತಿಗೆದಾರರು ತೆಗೆದುಕೊಳ್ಳುತ್ತಾರೆ. ಅದರ ಬದಲಿಗೆ ಏನು ಮಾಡಬೇಕು ಎಂದರೆ ಪ್ಯಾಕೇಜ್ ಸಿಸ್ಟಂ ಮಾಡಬೇಕು. ಒಂದಕ್ಕೆ ಒಂದು ಕಡ್ಡಾಯ ಎಂದು ಮಾಡಬೇಕು. ಉದಾಹರಣೆಗೆ ಮಂಗಳೂರು ಸರ್ವಿಸ್ ಬಸ್ ಸ್ಟ್ಯಾಂಡ್ ನ ಸುಲಭ ಶೌಚಾಲಯ ತೆಗೆದುಕೊಳ್ಳುವವರು ಅದರೊಂದಿಗೆ ಕೊಡಿಯಾಲ್ ಬೈಲ್ ಟಾಯ್ಲೆಟ್ ಕೂಡ ತೆಗೆದುಕೊಳ್ಳಬೇಕು. ಇದಕ್ಕೆ ಎಕ್ಸಟ್ರಾ ಪೇಮೆಂಟ್ ಇಲ್ಲ. ಆದರೆ ಇದನ್ನು ಕ್ಲೀನ್ ಇಟ್ಟು ನಿರ್ವಹಿಸಬೇಕು. ಅದು ಕಡ್ಡಾಯ. ಆಗ ಎಲ್ಲವೂ ಚೆನ್ನಾಗಿರುತ್ತವೆ. ಹೇಗಿದೆ ಐಡಿಯಾ!
Leave A Reply