ಪೆಟ್ರೋಲ್, ಡಿಸೀಲ್, ಮದ್ಯ ಜಿಎಸ್ ಟಿ ಅಡಿ ಬರಬೇಕು!
ಅನೇಕ ವರ್ಷಗಳಿಂದ ಅಥವಾ ಬಹುತೇಕ ಸ್ವಾತಂತ್ರ್ಯ ನಂತರ ನಿಂತ ನೀರಿನಂತಿದ್ದ ನಮ್ಮ ತೆರಿಗೆ ಪದ್ಧತಿಯಲ್ಲಿ ಈಗ ಬದಲಾವಣೆ ಕಾಣುತ್ತಿದೆ. ಅಫ್ ಕೋರ್ಸ್ ನಿಂತ ನೀರು ಎಂದರೆ ಅದರಲ್ಲಿ ಸೊಳ್ಳೆ, ಕ್ರಿಮಿಕೀಟಗಳು ಮೊಟ್ಟೆ ಇಟ್ಟು ತಮ್ಮ ಸಂತತಿ ಬೆಳೆಸಿಕೊಳ್ಳುತ್ತಿದ್ದವು ಬಿಟ್ಟರೆ ದೇಶಕ್ಕೆ ಲಾಭ ಇರಲಿಲ್ಲ. ಅದನ್ನು ಬದಲಾಯಿಸಬೇಕೆಂದು ಹೊರಟವರೇ ಪ್ರಧಾನ ಮಂತ್ರಿ ನರೇಂದ್ರ ಮೋದಿ. ಯಾವುದೇ ಹಳೆಯ ಜಿಡ್ಡುಗಟ್ಟಿದ ವ್ಯವಸ್ಥೆಯನ್ನು ಬದಲಾಯಿಸಬೇಕಾದರೆ ಪಾಮಾಜಿಯಂತೆ ತುಂಬಿದ ಕಳೆಯನ್ನು ಕಿತ್ತು ತೆಗೆಯಬೇಕಾಗುತ್ತದೆ. ಆಗ ಒಂದಿಷ್ಟು ಕೆಲಸ ಕಾರ್ಯಗಳು ಭರದಿಂದ ನಡೆಯುತ್ತದೆ. ಅಂತಹ ಸಂದರ್ಭದಲ್ಲಿ ಒತ್ತಡ ಇದ್ದದ್ದೇ. ಆದರೆ ಜಿಎಸ್ ಟಿ ಎನ್ನುವ ಆಧುನಿಕ ತೆರಿಗೆ ವ್ಯವಸ್ಥೆಯೇ ತಪ್ಪು ಎಂದು ಕಾಂಗ್ರೆಸ್ಸಿಗರು ವಾದಿಸಲು ಶುರು ಮಾಡಿದ ನಂತರ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರ ಸೂಚನೆ ಮೇರೆಗೆ ರಾಷ್ಟ್ರದ ವಿವಿಧ ಕಡೆಗಳಲ್ಲಿ ವಿವಿಧ ಕ್ಷೇತ್ರಗಳ ಗಣ್ಯರೊಂದಿಗೆ ಸಂವಾದ, ಸಾರ್ವಜನಿಕರ ಅಭಿಪ್ರಾಯಗಳನ್ನು ತೆಗೆದುಕೊಳ್ಳುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅದರ ಒಂದು ಅಂಗವಾಗಿ ಮಂಗಳೂರಿನ ಕೆನರಾ ಪ್ರೌಢಶಾಲೆಯ ಭುವನೇಂದ್ರ ಸಭಾಭವನದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವ ವಹಿಸಿದ್ದರು. ವಿವಿಧ ಕ್ಷೇತ್ರಗಳ ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ಕೆನರಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷೆ ವಾಟಿಕಾ ಪೈ ಬಹಳ ಅರ್ಥಪೂರ್ಣವಾಗಿ ತಮ್ಮ ಅಭಿಪ್ರಾಯ ಮಂಡಿಸಿದರು. ನಂತರ ಕ್ರೆಡಾಯ್ ಅಧ್ಯಕ್ಷ ಮೆಹ್ತಾ ಅವರು ಮಾತನಾಡಿ ರೇರಾ ಕಾಯ್ದೆ ಮತ್ತು ಜಿಎಸ್ ಟಿ ಒಟ್ಟಿಗೆ ಜಾರಿಯಲ್ಲಿ ಬಂದ ಕಾರಣ ರಿಯಲ್ ಎಸ್ಟೇಟ್ ಉದ್ಯಮ ಒಂದಿಷ್ಟು ಹೆಚ್ಚು ಒತ್ತಡಕ್ಕೆ ಸಿಲುಕಿದೆ ಎಂದರು. ಗೇರುಬೀಜ, ಒಣಮೀನು ಹೀಗೆ ವಿವಿಧ ವ್ಯಾಪಾರಿ ವಲಯಗಳನ್ನು ಪ್ರತಿನಿಧಿಸುವವರು ಮಾತನಾಡಿದರು. ಹೀಗೆ ವ್ಯಾಪಾರಿಗಳು ತಮ್ಮ ಕಷ್ಟ ಹೇಳಿದ ನಂತರ ಸಾರ್ವಜನಿಕ ವಲಯದಿಂದ ಯಾರಾದರೂ ಮಾತನಾಡದಿದ್ದರೆ ಹೇಗೆ ಎನ್ನುವ ಐಡಿಯಾ ನನ್ನ ಮನಸ್ಸಿಗೆ ಬಂತು.
ಅಷ್ಟಕ್ಕೂ ಈ ತೆರಿಗೆ ಕೇವಲ ಉದ್ದಿಮೆದಾರರಿಗೆ ಸಂಬಂಧಿಸಿದ್ದಲ್ಲ. ನಮ್ಮಂತಹ ಜನಸಾಮಾನ್ಯರು ಕೂಡ ಈ ತೆರಿಗೆ ಪದ್ಧತಿಯನ್ನು ತಮ್ಮ ಕಲ್ಪನೆಯಲ್ಲಿಯೇ ವಿಶ್ಲೇಷಿಸುತ್ತಿದ್ದಾರೆ. ಆದ್ದರಿಂದ ಜನಸಾಮಾನ್ಯರ ಮನಸ್ಸಿನಲ್ಲಿರುವ ಭಾವನೆಗಳನ್ನು ಎಲ್ಲರ ಎದುರಿನಲ್ಲಿ ಇಡುವುದಕ್ಕಾಗಿ ನಾನು ವೇದಿಕೆ ಹತ್ತಿದೆ.
ಈ ಗುಡ್ ಸಿಂಪಲ್ ಟ್ಯಾಕ್ಸ್ ಅನ್ನು ಎಲ್ಲ ವಸ್ತುಗಳಿಗೆ ಹಾಕಲಾಗಿದೆ ಅಥವಾ ಎಲ್ಲಾ ಉತ್ಪನ್ನಗಳನ್ನು ಜಿಎಸ್ ಟಿ ಅಡಿ ತರಲಾಗಿದೆ. ಆದರೆ ಎಲ್ಲಾ ವಸ್ತುಗಳ ಬೆಲೆ ಹೆಚ್ಚು ಕಡಿಮೆ ನಿರ್ಧಾರವಾಗುವುದು ಈ ಟ್ರಾನ್ಸಪೋರ್ಟ್ ಖರ್ಚಿನ ಆಧಾರದ ಮೇಲೆ. ಪೆಟ್ರೋಲ್, ಡಿಸೀಲ್ ಬೆಲೆ ಹೆಚ್ಚಿದ್ದರೆ ಉತ್ಪನ್ನವನ್ನು ಕಡಿಮೆ ಬೆಲೆಗೆ ಕೊಡಬೇಕು ಎಂದು ಉತ್ಪಾದಿಸಿದವರಿಗೆ ಮನಸ್ಸಿದ್ದರೂ ಕೊಡಲು ಆಗುವುದಿಲ್ಲ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇವತ್ತಿಗೂ ಹೆಚ್ಚು ಕಡಿಮೆ ಹಾಗೆ ಇದೆ. ಆದ್ದರಿಂದ ಎಲ್ಲಾ ವಸ್ತುಗಳು ಜನರ ಕೈಗೆಟುಕುವಂತೆ ಆಗಬೇಕಾದರೆ ಪೆಟ್ರೋಲ್, ಡಿಸೀಲ್ ಬೆಲೆ ಕಡಿಮೆಯಾಗಬೇಕು. ಕಡಿಮೆಯಾಗಬೇಕಾದರೆ ಅವುಗಳನ್ನು ಜಿಎಸ್ ಟಿ ಅಡಿಯಲ್ಲಿ ತರಬೇಕು. ತರಲು ಕೇಂದ್ರ ಸರಕಾರ ಮುಂದಾಗಬೇಕು ಎಂದೆ. ಅದರ ಬಳಿಕ ಕೇಂದ್ರ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ವ್ಯಾಟ್ 4% ಇಳಿಸಿದೆ. ಅದನ್ನು ಗುಜರಾತ್ ಅನುಷ್ಟಾನಕ್ಕೆ ತಂದಿದೆ. ಆದರೆ ನಮ್ಮ ಸಿಎಂ “ನೋ” ಎಂದಿದ್ದಾರೆ.
ಅದರೊಂದಿಗೆ ಮದ್ಯವನ್ನು ಕೂಡ ಜಿಎಸ್ ಟಿ ಅಡಿಯಲ್ಲಿ ತಂದರೂ ಕೂಡ ತಪ್ಪಲ್ಲ. ಯಾಕೆಂದರೆ ರೇಟ್ ಕಡಿಮೆ ಆಯಿತು ಎಂದು ಯಾರೂ ಕೂಡ ನಾಳೆಯಿಂದ ಹೊಸತಾಗಿ ಕುಡಿಯಲು ಶುರು ಮಾಡುವುದಿಲ್ಲ. ಕುಡಿಯುವವ ಎಷ್ಟು ಬೇಕೋ ಅಷ್ಟೇ ಕುಡಿಯಬಲ್ಲ. ಹಣ ಉಳಿದರೆ ಅವನ ಹೆಂಡ್ತಿ, ಮಕ್ಕಳಿಗೆ ಖುಷಿಯಾಗುತ್ತದೆ ಎನ್ನುವ ತಾತ್ಪರ್ಯ ನನ್ನ ಮಾತುಗಳ ಹಿಂದೆ ಅಡಕವಾಗಿತ್ತು. ಮದ್ಯವನ್ನು ಗೂಡ್ಸ್ ಅಂಡ್ ಸರ್ವಿಸ್ ಟ್ಯಾಕ್ಸ್ ಅಡಿಯಲ್ಲಿ ತರಬಹುದು ಎಂದು ನಾನು ಹೇಳಿದ್ದನ್ನು ಕೇಳಿ ವೇದಿಕೆಯ ಮೇಲೆ ಮತ್ತು ಕೆಳಗೆ ಇದ್ದವರು ಅವಕ್ಕಾದರು. ಕೆಲವರು ನನ್ನ ಬಗ್ಗೆ ಗೊತ್ತಿಲ್ಲದವರು ಇವನಿಗೆ ನಿತ್ಯ ಗುಂಡು ಹಾಕುವ ಅಭ್ಯಾಸ ಇದೆಯೇನೋ ಎಂದು ಅಂದುಕೊಂಡಿರಬಹುದು. ಒಂದು ಲಕ್ಷ ರೂಪಾಯಿ ಕೊಡುತ್ತೇನೆ, ಕುಡಿ ಎಂದು ಹೇಳಿದರೂ ಮದ್ಯಕ್ಕೆ ನಾನು ಕೈ ಹಾಕುವವನಲ್ಲ. ನಾನು ಕೊನೆಯದಾಗಿ ಗ್ಲಾಸು ಕೆಳಗಿಟ್ಟು 22 ವರ್ಷಗಳ ಮೇಲಾಗಿದೆ. ಅಷ್ಟಕ್ಕೂ ಗೆಳೆಯರ ಮದ್ಯದ ಪಾರ್ಟಿಗಳಲ್ಲಿ ಭಾಗವಹಿಸುತ್ತೇನೆ ಹಾಗಂತ ಯಾವುದೇ ಪ್ರಕಾರದ ಮದ್ಯವನ್ನು ಮುಟ್ಟುವುದಿಲ್ಲ. ಆದರೆ ಯಾವುದೇ ಪಾಪದವನಿಗೆ ನಾಲ್ಕು ರೂಪಾಯಿ ಉಳಿಯುತ್ತದೆ ಎಂದಾದರೆ ಅದನ್ನು ಜಿಎಸ್ ಟಿ ಅಡಿಯಲ್ಲಿ ತನ್ನಿ ಎಂದೆ!
Leave A Reply