ಕಾಂಗ್ರೆಸ್ಸಿನ ಬಣ ರಾಜಕೀಯಕ್ಕೆ ಜಿರಳೆ ಬಲಿ!
ಇಂದಿರಾ ಕ್ಯಾಂಟೀನ್ ಪ್ರಾರಂಭಿಸಿ ಅದರ ಮೈಲೇಜನ್ನು ಹೇಗಾದರೂ ಈ ಬಾರಿಯ ಚುನಾವಣೆಯಲ್ಲಿ ಬಳಸಿ ಕುಸಿದು ಹಳ್ಳ ಹಿಡಿದಿರುವ ಕಾಂಗ್ರೆಸ್ ವರ್ಚಸ್ಸನ್ನು ಶತಾಯಗತಾಯ ಮೇಲಕ್ಕೆ ಎತ್ತಬೇಕೆಂದು ಸಿಎಂ ಸಿದ್ಧರಾಮಯ್ಯ ಪ್ರಯತ್ನ ಮಾಡುತ್ತಿದ್ದರೆ ಇತ್ತ ಅವರದ್ದೇ ಪಕ್ಷದ ಕಾರ್ಯಕತ್ತರು ಏನೋ ಮಾಡಲು ಹೋಗಿ ಏನೋ ಎಡವಟ್ಟು ಮಾಡಿಕೊಂಡಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾಳಗಾಳ ಎನ್ನುವ ಪ್ರದೇಶದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಗೊಂಡಿತ್ತು. ಆ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನಲ್ಲಿ ಎರಡು ಗುಂಪುಗಳಿವೆ. ಇಂದಿರಾ ಕ್ಯಾಂಟೀನ್ ಆರಂಭವಾದ ನಂತರ ಆ ಕ್ಷೇತ್ರದ ಶಾಸಕ, ಕಾಂಗ್ರೆಸ್ ಮುಖಂಡ ಮುನಿರತ್ನ ಅವರ ವರ್ಚಸ್ಸು ಹೆಚ್ಚಾಯಿತು ಎಂದು ಅಸಮಾಧಾನಗೊಂಡ ಕಾಂಗ್ರೆಸ್ಸಿನ ಇನ್ನೊಂದು ಗುಂಪು ಅಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಸಿಗುವ ವಾಂಗೀಬಾತ್ ಮತ್ತು ಖಾರಾಬಾತ್ ನಲ್ಲಿ ಸತ್ತಿರುವ ಜಿರಳೆ ಹಾಕಿ ಆಹಾರದ ಬಗ್ಗೆ ತಗಾದೆ ತೆಗೆದಿದ್ದರು. ಅದರ ಫೋಟೋ ಮತ್ತು ವಿಡಿಯೋ ಮಾಡಿ ಫೇಸ್ ಬುಕ್ ಮತ್ತು ಟ್ವಿಟರ್ ನಲ್ಲಿ ಹಾಕಿದ್ದರು. ಇದು ಮುಖ್ಯಮಂತ್ರಿಗಳ ಹೆಸರು ಕೆಡಿಸಲು ಪ್ರಯತ್ನ ಎಂದು ಕಾಂಗ್ರೆಸ್ ಪಕ್ಷ ಬಿಜೆಪಿಯ ಮೇಲೆ ಆರೋಪ ಮಾಡಿದರೆ ಬಿಜೆಪಿ ಕಾರ್ಯಕತ್ತರು ನಿಮ್ಮ ತಿಂಡಿ ಜಿರಳೆ ತಿನ್ನಲು ಮಾತ್ರ ಫಿಟ್, ಅದಕ್ಕೆ ಅದೇ ಹುಡುಕಿಕೊಂಡು ಬಂದಿರಬೇಕು, ನಮಗೆ ಹಾಕುವ ಅಗತ್ಯವಿಲ್ಲ ಎಂದು ಮಾತಾಡಿಕೊಂಡಿದ್ದರು.
ಈ ಘಟನೆ ಸಂಬಂಧ ಸಿಸಿಟಿವಿ ದೃಶ್ಯಾವಳಿ ಸಹಿತ ಬಿಬಿಎಂಪಿ ಅಧಿಕಾರಿಗಳು ಭಾನುವಾರ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಮತ್ತು ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿ ನಾಲ್ವರು ವ್ಯಕ್ತಿಗಳನ್ನು ಆರೋಪಿಗಳನ್ನಾಗಿ ಮಾಡಿದ್ದರು. ಇಂದಿರಾ ಕ್ಯಾಂಟೀನ್ ನಲ್ಲಿ ಉಪಹಾರದಲ್ಲಿ ಜಿರಳೆ ಹಾಕಿದ ಕುರಿತು ಪೊಲೀಸರು ಹೇಮಂತ್ ಹಾಗೂ ದೇವರಾಜ್ ನನ್ನು ಬಂಧಿಸಿದ್ದಾರೆ. ಅವರು ಕಾಂಗ್ರೆಸ್ ಕಾರ್ಯಕತ್ತರು ಎನ್ನಲಾಗಿದೆ. ಕಾಂಗ್ರೆಸ್ ನ ಎರಡು ಬಣಗಳ ಗಲಾಟೆಯಲ್ಲಿ ಇಂದಿರಾ ಕ್ಯಾಂಟೀನ್ ನ ಜಿರಳೆ ರಾಜ್ಯಮಟ್ಟದಲ್ಲಿ ಸುದ್ದಿಯಾದದ್ದು ಮಾತ್ರ ವಿಪರ್ಯಾಸ. ಒಂದು ವೇಳೆ ಆರೋಪಿಗಳು ಬಿಜೆಪಿ ಕಾರ್ಯಕತ್ತರಾಗಿದ್ದಲ್ಲಿ ಜನರಿಗೂ ಬಿಜೆಪಿ ಬಗ್ಗೆ ಅಸಹ್ಯ ಮೂಡುತ್ತಿತ್ತು. ಆದರೆ ಕಾಂಗ್ರೆಸ್ಸಿಗರೇ ಮಾಡಿದ ಕಾರಣ ಅದು ಅಲ್ಲಿಗೆ ಮುಗಿದಿದೆ!
Leave A Reply