ಕಪ್ಪು ಹಣಕ್ಕೆ ಕಡಿವಾಣ ಹಾಕದೆ ಬಿಡಲ್ಲ: ಅರುಣ್ ಜೇಟ್ಲಿ
ನವದೆಹಲಿ: ಕೇಂದ್ರ ಸರ್ಕಾರದ ಕಪ್ಪು ಹಣದ ವಿರುದ್ಧದ ಹೋರಾಟಕ್ಕೆ ಹಲವು ವಿರೋಧ, ಟೀಕೆ, ಆಕ್ಷೇಪ, ಆರೋಪಗಳು ಕೇಳಿಬರುತ್ತಿದ್ದರೂ, ನಾವು ಕಪ್ಪು ಹಣಕ್ಕೆ ಕಡಿವಾಣ ಹಾಕದೆ ಬಿಡುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಗುಡುಗಿದ್ದಾರೆ.
ಕಾಳಧನಿಕರ ಹುಟ್ಟಡಗಿಸುವುದೇ ನಮ್ಮ ಉದ್ದೇಶವಾಗಿದೆ. ಈ ದಿಸೆಯಲ್ಲಿ ನಾವು ಜಾರಿಗೆ ತಂದ ಸುಧಾರಣಾ ಕ್ರಮಗಳು ಮುಂದಿನ ದಿನಗಳಲ್ಲಿ ಸಕಾರಾತ್ಮಕ ಪರಿಣಾಮ ಬೀರಲಿದ್ದು, ಜನರಿಗೆ ಒಳಿತಾಗಲಿದೆ ಎಂದು ತಿಳಿಸಿದ್ದಾರೆ.
ನೋಟು ನಿಷೇಧ, ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಯಂಥ ಮಹತ್ತರ ಯೋಜನೆ ಮೂಲಕ ಸರ್ಕಾರ ಕಪ್ಪು ಹಣ ತಡೆಯಲು ಯತ್ನಿಸುತ್ತಿದೆ. ಈ ಹಾದಿಯಲ್ಲಿ ಯಾವುದೇ ಸವಾಲು ಎದುರಾದರೂ ನಾವು ವಿಮುಖರಾಗುವುದಿಲ್ಲ. ಭಾರತದ ಆರ್ಥಿಕ ವ್ಯವಸ್ಥೆ ಕಸ ಸ್ವಚ್ಛಗೊಳಿಸದೇ ಬಿಡುವುದಿಲ್ಲ ಎಂದಿದ್ದಾರೆ.
ಪ್ರಸ್ತುತ ಭಾರತ ವಿಶ್ವದಲ್ಲೇ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಇದಕ್ಕೆ ಮತ್ತಷ್ಟು ವೇಗ ನೀಡಲು ಅಭಿವೃದ್ಧಿ, ಪಾರದರ್ಶಕ, ಮುಕ್ತ ಹಾಗೂ ಪ್ರಬಲ ಆರ್ಥಿಕ ವ್ಯವಸ್ಥೆ ಇರಬೇಕು ಎಂಬುದೇ ನಮ್ಮ ಆಶಯ. ಹಾಗಾಗಿಯೇ ನಾವು ಯಾವುದೇ ಕಾರಣಕ್ಕೂ ಕಪ್ಪು ಹಣ ಆಧಾರಿತ ಆರ್ಥಿಕ ವ್ಯವಸ್ಥೆ ನಿರ್ಮಾಣ ಹಾಗೂ ಅಸ್ತಿತ್ವ ಉಳಿಸುವುದಿಲ್ಲ ಎಂದು ಜೇಟ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಕೇಂದ್ರದ ನೋಟು ನಿಷೇಧ ಹಾಗೂ ಜಿಎಸ್ಟಿಯಿಂದ ದೇಶದ ಆರ್ಥಿಕ ವ್ಯವಸ್ಥೆ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತಿದೆ ಎಂಬ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಜೇಟ್ಲಿ ಹೇಳಿದ್ದಾರೆ.
Leave A Reply