ಸಮಾನತೆಯ, ರಾಮರಾಜ್ಯದ ಸಂದೇಶ ಸಾರಿದ ವಿಶ್ವ ಹಿಂದೂ ಧರ್ಮ ಸಂಸದ್
ಉಡುಪಿ: ಹಿಂದೂ ಸಮಾಜಕ್ಕೆ ಕಂಟಕವಾಗಿರುವ ಅಸಮಾನತೆಯನ್ನು ಹೊಡೆದೊಡಿಸಬೇಕು. ಎಲ್ಲರೂ ಸೌಖ್ಯದಿಂದ ಬಾಳುವಂತ ರಾಮರಾಜ್ಯದ ಕನಸನ್ನು ಸಾಕಾರಗೊಳಿಸಬೇಕು ಎಂಬ ಮಹತ್ತರ ಸಂದೇಶವನ್ನು ಉಡುಪಿಯಲ್ಲಿ ನಡೆದ ವಿಶ್ವ ಹಿಂದೂ ಧರ್ಮ ಸಂಸದ್ ಸಾರಿತು.
ಹಿಂದೂ ಸಂಘಟನೆಗಳೆಂದರೆ ದಲಿತ ವಿರೋಧಿಗಳು ಎಂಬ ಪಟ್ಟ ಕಳಚಲು ವೇದಿಕೆ ಮೇಲೆಯೇ ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ ಪ್ರವೀಣ ಭಾಯಿ ತೊಗಾಡಿಯಾ ಹೇಳಿದ ಮಾತುಗಳು ಗಮನಾರ್ಹ. ‘ಅಸಮಾನತೆ ತೊಲಗಿಸುವ ಕಾರ್ಯ ಇಲ್ಲಿಂದಲೇ ಆರಂಭವಾಗಬೇಕು. ಇಲ್ಲಿರುವ ಎಲ್ಲ ಸಾಧುಗಳು, ಸಂತರು ಪ್ರತ್ಯೇಕವಾಗಿ ಭೋಜನ ಮಾಡುವುದು ಬಿಟ್ಟು, ಉಳಿದ ಎಲ್ಲ ಸಾಧು, ಸಂತರೊಂದಿಗೆ ಭೋಜನ ಸ್ವೀಕರಿಸಬೇಕು ಎಂದು ಹೇಳಿದ್ದು ಮಹತ್ತ ಘಟನೆ.
ಅಲ್ಲದೇ ಸಂಸದ್ ನ ನಿರ್ಣಯಗಳಲ್ಲೂ ಹಿಂದೂ ಧರ್ಮಕ್ಕೆ ಕಾರ್ಕೋಟಕ ವಿಷದಂತೆ ಕಾಡುತ್ತಿರುವ ಅಸಮಾನತೆ ಹೊಡೆದೋಡಿಸಬೇಕು ಎಂದು ನಿರ್ಣಯ ಕೈಗೊಂಡಿದ್ದು ಶ್ಲಾಘನೀಯ. ಧರ್ಮ ಸಂಸದ್ ಕೇಂದ್ರ ಬಿಂದುವಾಗಿದ್ದ 97ರ ಹರೆಯದ ವಿಶ್ವೇಶ ತೀರ್ಥ ಶ್ರೀಗಳು ಕೈಗೊಂಡ ದಲಿತ ಕಾಲೋನಿಗಳ ಭೇಟಿಯ ಕ್ರಾಂತಿಕಾರಕ ನಡೆಯನ್ನು ವಿರಾಟ ಹಿಂದೂ ಸಮಾವೇಶದಲ್ಲಿ ಮಾತನಾಡಿದ ಎಲ್ಲರೂ ಶ್ಲಾಘಿಸಿದ್ದು, ಅಸಮಾನತೆ ನಿರ್ನಾಮಕ್ಕೆ ಹೊಸ ಮುನ್ನುಡಿ ಬರೆದಂತಿತ್ತು.
ಹಿಂದೂ ಧರ್ಮದ ಎಲ್ಲ ಜಾತಿಯ ಜನರಿಗೆ ಎಲ್ಲ ದೇವಸ್ಥಾನಗಳಲ್ಲಿ, ಹಿಂದೂಗಳ ಮನೆಯಲ್ಲಿ ಮುಕ್ತ ಪ್ರವೇಶ ನೀಡಬೇಕು, ಜಾತಿಗೊಂದು ಸ್ಮಶಾನ ಮಾಡದೇ, ಇಡೀ ಗ್ರಾಮದ ಸಮಸ್ತ ಹಿಂದೂಗಳಿಗೆ ಒಂದೇ ಸ್ಮಶಾನ ಆರಂಭಿಸಬೇಕು ಎಂಬ ಮಹತ್ತರ ನಿರ್ಣಯವನ್ನು ಮಂಡಿಸುವ ಮೂಲಕ ಧರ್ಮ ಸಂಸದ್ ಹೊಸ ಮುನ್ನುಡಿಯನ್ನು, ಇತಿಹಾಸವನ್ನು ಬರೆಯಿತು.
Leave A Reply