ಎಲ್ಲವೂ ಇದೆ! ಕೊರತೆ ಇರುವುದು ಸಮರ್ಥ ನಾಯಕನದ್ದೇ!!
ಭಾರತದಲ್ಲಿ ಅಮೇರಿಕಾ, ಚೀನಾಗಳು ಎಸೆಯುವ ಬಿಸ್ಕತ್ತಿಗೆ ಬಾಯ್ಬಿಟ್ಟು ಕುಳಿತ ಬುದ್ಧಿಜೀವಿ ವರ್ಗ ರಾಷ್ಟ್ರೀಯತೆಯಿಂದ ಬಲುದೂರ ಸೌಧವೊಂದನ್ನು ನಿರ್ಮಿಸಿ ಭಾರತವನ್ನು ಒಡೆದು ಹಾಕುವ ಸಂಚನ್ನು ರೂಪಿಸಿಕೊಂಡಿದೆ. ಇದು ಇಂದು ನಿನ್ನೆಯ ಸಂಚೆಂದು ಭಾವಿಸಬೇಡಿ. ಸ್ವಾತಂತ್ರ್ಯ ಪೂರ್ವದಿಂದಲೂ ಬ್ರಿಟೀಷರ ವೈಭವೋಪೇತ ಬದುಕನ್ನು ತಮ್ಮದಾಗಿಸಿಕೊಳ್ಳುವ ಹಂಬಲದಿಂದ ಅವರ ಬೂಟು ನೆಕ್ಕುವ ಒಂದು ವರ್ಗ ಇದ್ದೇ ಇತ್ತು. ಮುಂದೆ ಅವರುಗಳಲ್ಲಿ ಅನೇಕರು ಅಧಿಕಾರವನ್ನು ತಮ್ಮ ತೆಕ್ಕೆಗೆ ಹಾಕಿಕೊಂಡರು. ಅಧಿಕಾರವನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಲು ಮತ್ತು ತಮ್ಮ ಮಕ್ಕಳು-ಮೊಮ್ಮಕ್ಕಳಿಗೆ ವರ್ಗಾಯಿಸಲು ರಾಷ್ಟ್ರದ ಅಸ್ಮಿತೆಯನ್ನು ಧ್ವಂಸಗೊಳಿಸಲೂ ಹೇಸಲಿಲ್ಲ.
ಸ್ವಾಮಿ ರಂಗನಾಥಾನಂದ ಜೀ ರಾಮಕೃಷ್ಣ ಮಠ ಮಿಶನ್ಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದವರು. ಲೌಕಿಕ ಶಿಕ್ಷಣ ಅತ್ಯಂತ ಕಡಿಮೆ ಇದ್ದರೂ ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಾರ ಹೆಸರು ಗಳಿಸಿದವರು. ಇಂದಿರಾ ಗಾಂಧಿಯಿರಲಿ, ಅಡ್ವಾಣಿಯವರೇ ಇರಲಿ ಪಕ್ಷಬೇಧರಹಿತವಾಗಿ ಎಲ್ಲರೂ ಅವರಿಂದ ಮಾರ್ಗದರ್ಶನ ಪಡೆಯಲು ಕಾತರಿಸುತ್ತಿದ್ದವರೇ. ಇವರುಗಳ ಮೂಲಕ ರಾಷ್ಟ್ರ ನಿರ್ಮಾಣದ ಅನೇಕ ನಿರ್ಧಾರಗಳಲ್ಲಿ ಅವರು ನೇರ ಪಾತ್ರ ವಹಿಸುತ್ತಿದ್ದುದು ಆನಂತರ ಬೆಳಕಿಗೆ ಬಂದಿತ್ತು. ಸ್ವಾಮೀಜಿ ರಾಜಕಾರಣಿ ಮತ್ತು ಅಧಿಕಾರಗಳನ್ನು ಉದ್ದೇಶಿಸಿ ಮಾಡಿದ ಭಾಷಣವೊಂದರ ಸಂಗ್ರಹಿತ ಕೃತಿ ‘ಡೆಮಾಕ್ರಟಿಕ್ ಅಡ್ಮಿನಿಸ್ಟ್ರೇಷನ್ ಇನ್ ದ ಲೈಟ್ ಆಫ್ ವೇದಾಂತ’ದಲ್ಲಿ ಅವರೆನ್ನುತ್ತಾರೆ, ‘ಸ್ವಾತಂತ್ರ್ಯ ಬಂದು ಇಷ್ಟೊಂದು ವರ್ಷವಾದರೂ ಭಾರತೀಯರಿಗಿನ್ನೂ ನಾವು ಭಾರತಕ್ಕೆ ಸೇರಿದವರೆಂಬ ಭಾವ ಬರಲೇ ಇಲ್ಲ. ನಾವು ಭಾರತದಲ್ಲಿದ್ದೇವೆ ಎಂದಷ್ಟೇ ಅವರು ಭಾವಿಸುತ್ತಾರೆ’ ಹೌದು. ಬ್ರಿಟೀಷರು ಭಾರತ ಬಿಟ್ಟು ಹೋಗುವಾಗ ಯಾವ ಮನಸ್ಥಿತಿಯಲ್ಲಿದ್ದರೋ ಅದೇ ಮನಸ್ಥಿತಿ ಈಗಲೂ ನಮ್ಮದ್ದು. ಹೊರಗಿನವನು ಎಂಬ ನಮ್ಮ ಭಾವ ದೂರವಾಗುವವರೆಗೂ ನಾವು ಈ ರಾಷ್ಟ್ರವನ್ನು ಬಲಾಢ್ಯವಾಗಿ ಕಟ್ಟುವುದು ಬಲು ಕಷ್ಟ. ಸುಮ್ಮನೆ ಒರೆಗೆ ಹಚ್ಚಿ ನೋಡಿ. ಪ್ರತಿಯೊಬ್ಬ ಭ್ರಷ್ಟಾಚಾರಿಯೂ ಲೂಟಿ ಮಾಡುವುದು ಭಾರತೀಯರದ್ದೇ ಹಣ ತಾನೇ? ರಾಷ್ಟ್ರದ ಬೊಕ್ಕಸಕ್ಕೆ ಸೇರಬೇಕಾದ ಹಣವನ್ನು ತನ್ನ ತಿಜೋರಿಗೋ, ವಿದೇಶದ ಬ್ಯಾಂಕುಗಳಿಗೋ ತುಂಬಿಸುವ ವ್ಯಕ್ತಿಯನ್ನು ಭಾರತೀಯನೆಂದು ಭಾವಿಸುವುದಾದರೂ ಹೇಗೆ? ತನ್ನ ಮಗನ ದುಡಿಮೆಯನ್ನು ಅವನಿಗೆ ಗೊತ್ತಾಗದಂತೆ ಕದಿಯುವ ಕಳ್ಳನಂತೆ ಇದು.
1942ರಲ್ಲಿ ಎರಡನೇ ಮಹಾಯುದ್ಧದ ಕೊನೆಯ ಹಂತದಲ್ಲಿ ಜಪಾನಿನ ಹಿರೋಷಿಮಾ, ನಾಗಾಸಾಕಿಗಳ ಮೇಲೆ ಅಮೇರಿಕಾ ಮೇಲೆ ಬಾಂಬು ಮಳೆಗರೆಯಿತಲ್ಲ ಅವತ್ತು ಜಪಾನು ಹೆಚ್ಚು ಕಡಿಮೆ ನಾಶವಾಗಿಬಿಟ್ಟಿತ್ತು. ಅಂದಾಜು ಮುವ್ವತ್ತು ಲಕ್ಷ ಜನ ಎರಡನೇ ಮಹಾಯುದ್ಧಕ್ಕೆ ಆಹುತಿಯಾಗಿಬಿಟ್ಟಿದ್ದರು. ಕಾಲುಭಾಗದಷ್ಟು ರಾಷ್ಟ್ರೀಯ ಸಂಪತ್ತು ನಾಶಗೊಂಡಿತ್ತು. ಉತ್ಪಾದನೆ ಶೇಕಡಾ ಹತ್ತಕ್ಕೆ ಬಂದು ನಿಂತಿತ್ತು. ಹಣದುಬ್ಬರ ಹೇಗಾಗಿತ್ತೆಂದರೆ ಜನರ ಕೊಳ್ಳುವ ಸಾಮಥ್ರ್ಯ ಪೂರ್ತಿ ಕುಂದಿ ಹೋಗಿತ್ತು. ಒಂದರ್ಥದಲ್ಲಿ ಹಿರೋಷಿಮಾ, ನಾಗಾಸಾಕಿಗಳ ಮೇಲೆ ಬಾಂಬು ದಾಳಿಯಾಗಿದ್ದು ಜಪಾನಿನ ಜನತೆಗೇ ನಿಟ್ಟುಸಿರು ಬಿಡುವಂತಾಗಿರಬೇಕು. ಆ ಕಾರಣಕ್ಕೆ ಯುದ್ಧವಾದರೂ ನಿಂತಿತಲ್ಲ. ಜಪಾನು ಬೇಷರತ್ತಾಗಿ ಶರಣಾಯ್ತು. ಆದರೆ ಈಗ ಅದಕ್ಕೆ ತಮ್ಮನ್ನು ಮತ್ತೆ ನಿರ್ಮಿಸಿಕೊಳ್ಳುವ ತುತರ್ು ಮತ್ತು ದರ್ದ್ ಎರಡೂ ಇತ್ತು. ಏಕೆಂದರೆ ಅಲ್ಲಿನವರಾರೂ ಹೊರಗಿನವರಾಗಿರಲಿಲ್ಲ. ಜಪಾನಿಗರೇ ಆಗಿದ್ದರು. ಮೊತ್ತ ಮೊದಲಿಗೆ ಅವರು ಮಾಡಿದ ಕೆಲಸ ಪ್ರಜಾಪ್ರಭುತ್ವಕ್ಕೆ ಹೆಚ್ಚಿನ ಒತ್ತು ನೀಡಿದ್ದು. ಕೆಲವರ ಕೈಗಳಲ್ಲಿ ಕೇಂದ್ರಿತವಾಗಿದ್ದ ಅಧಿಕಾರವನ್ನು ಮುಲಾಜಿಲ್ಲದೇ ತೆಗೆದು ಬಿಸಾಡಿದರು. ಇದು ಸಾಮಾನ್ಯ ಜನತೆಯಿಂದ ಆರಂಭಿಸಿ ನಾಯಕರವರೆಗೂ ವಿಸ್ತಾರಗೊಂಡಿತು. ಕೃಷಿ ಸುಧಾರಣೆಯ ನೆಪದಲ್ಲಿ ಒಬ್ಬರ ಬಳಿ ಕೇಂದ್ರಿತವಾಗಿದ್ದ ಜಮೀನನ್ನು ಸರ್ಕಾರವೇ ಖರೀದಿಸಿ ಅದನ್ನು ಅತಿ ಕಡಿಮೆ ಬೆಲೆಗೆ ಅಗತ್ಯವಿದ್ದವರಿಗೆ ಮಾರಿತು. ಇದರಿಂದ ಕಡಿಮೆ ಪ್ರಮಾಣದ ಭೂಮಿಯನ್ನು ಹೊಂದಿರುವ ರೈತರ ಸಂಖ್ಯೆ ಅಧಿಕವಾಯ್ತು. ಪ್ರತಿಯೊಬ್ಬರೂ ಶ್ರದ್ಧೆಯಿಂದ ತಂತಮ್ಮ ಭೂಮಿಯಲ್ಲಿ ಸೇವೆಗೈಯ್ಯುತ್ತ ರಾಷ್ಟ್ರದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದರು. ಅತ್ತ ಕೈಗಾರಿಕೆಯನ್ನು ಅಭಿವೃದ್ಧಿಪಡಿಸುವ ದೃಷ್ಟಿಕೋನವನ್ನು ಗೆದ್ದ ರಾಷ್ಟ್ರಗಳಿಂದ ಕಂಡುಕೊಳ್ಳಲಾಯ್ತು. ಯುದ್ಧಕಾಲದ ಕೈಗಾರಿಕಾ ಕ್ರಾಂತಿಗೆ ಸಾಕ್ಷಿಯಾಗಿ ನಿಂತಿದ್ದ ಟೊಯೋಟಾ, ಇಸುಝು, ನಿಸಾನ್, ಮಿತ್ಸುಬಿಷಿಗಳೆಲ್ಲವೂ ಯುದ್ಧಕ್ಕೆ ಬೇಕಾದ ವಾಹನಗಳನ್ನುನಿರ್ಮಿಸುವಲ್ಲಿಯೇ ವ್ಯಸ್ತವಾಗಿದ್ದವು. ಇನ್ನುಮುಂದೆ ಜಾಗತಿಕವಾಗಿ ಜನಸಾಮಾನ್ಯರು ಬಳಸಬಹುದಾದ ವಾಹನಗಳನ್ನು ನಿರ್ಮಿಸುವ ಸವಾಲನ್ನು ನೀಡಲಾಯಿತು. ಮೆಶಿನ್ ಗನ್ ತಯಾರು ಮಾಡುತ್ತಿದ್ದ ಕಾರ್ಖಾನೆಗಳಲ್ಲಿ ಹೊಲಿಗೆ ಯಂತ್ರಗಳ ನಿರ್ಮಾಣ ಆರಂಭಗೊಂಡರೆ, ಶಸ್ತ್ರಾಸ್ತ್ರಗಳಿಗೆ ಆಪ್ಟಿಕಲ್ ಯಂತ್ರಗಳನ್ನು ನಿರ್ಮಿಸುತ್ತಿದ್ದ ಕಾರ್ಖಾನೆಗಳು ದೂರದರ್ಶಕ ಯಂತ್ರ, ಕ್ಯಾಮೆರಾಗಳ ನಿರ್ಮಾಣಕ್ಕೆ ನಿಂತವು. ವಿದೇಶಕ್ಕೆ ರಫ್ತು ಮಾಡಬಹುದಾದ ವಸ್ತುಗಳ ನಿರ್ಮಿಸುವ ತಂತ್ರಜ್ಞಾನದತ್ತ ಹೆಚ್ಚು ಗಮನ ಹರಿಸಲಾಯ್ತು. ಒಟ್ಟಾರೆ ಮುಂದಿನ ಐದು ವರ್ಷಗಳಲ್ಲಿ ಉತ್ಪಾದನೆಯನ್ನು ಯುದ್ಧಪೂರ್ವದ ಶೇಕಡಾ 31 ರಷ್ಟಕ್ಕೆ ಏರಿಸಲಾಯ್ತು. ಮುಂದಿನ ಎರಡೇ ವರ್ಷಗಳಲ್ಲಿ ಇದು ಶೇಕಡಾ ಎಂಭತ್ತನ್ನು ಮುಟ್ಟಿತು. ಎಲ್ಲಕ್ಕೂ ಮಿಗಿಲಾಗಿ ಶಿಕ್ಷಣದಲ್ಲಿ ಮಹತ್ವದ ಬದಲಾವಣೆ ತಂದು ರಾಷ್ಟ್ರೀಯತೆಯನ್ನು ಹೆಚ್ಚು ಹೆಚ್ಚು ತುಂಬಲಾಯ್ತು, ಸಹಜವಾಗಿಯೇ ಜನರಲ್ಲಿದ್ದ ದ್ವೇಷದ ಮನೋಭಾವವನ್ನು ಕಡಿಮೆ ಮಾಡಲಾಯ್ತು. ಈ ಹೆಜ್ಜೆ ಅದೆಂತಹ ಕ್ರಾಂತಿಕಾರಿಯೆಂದು ಸಾಬೀತಾಯ್ತೆಂದರೆ ಒಂದೇ ಪೀಳಿಗೆಯೊಳಗೆ ಜಪಾನಿನ ಚಹರೆ ಬದಲಾಯ್ತು. ತಮ್ಮ ದೇಶವನ್ನು ಆಂತರಿಕವಾಗಿ ಬಲಗೊಳಿಸುವ ತರುಣ ಪೀಳಿಗೆ ಸೃಷ್ಟಿಯಾಯ್ತು. ಒಂದೇ ಪೀಳಿಗೆ ಅವಧಿಯಲ್ಲಿ ಜಪಾನಿನ ಕೈಗಾರಿಕೆಗಳು ಜಾಗತಿಕ ಮಟ್ಟದಲ್ಲಿ ಉತ್ಕೃಷ್ಟತೆಗಾಗಿ ಹೆಸರು ಮಾಡಿದರೆ ಅದರ ಆರ್ಥಿಕ ಪ್ರಗತಿ ಎಲ್ಲರೂ ಹುಬ್ಬೇರಿಸುವಂತಾಯ್ತು. ನಮಗೆ ಸ್ವಾತಂತ್ರ್ಯ ಬಂದಾಗ ಕೂಸಿನಂತಿದ್ದ ಜಪಾನ್ ಜಗತ್ತಿಗೇ ಪಾಠ ಮಾಡುವ ರಾಷ್ಟ್ರವಾಗಿ ನಿಂತ ಈ ಹಾದಿ ಬಲು ರೋಚಕ.
ಅತ್ತ ಸಿಂಗಾಪೂರದ ಕಥೆಯೂ ಹೊರತಲ್ಲ. 1965ರಲ್ಲಿ ವಿದೇಶೀ ಆಳ್ವಿಕೆಯಿಂದ ಮುಕ್ತಗೊಂಡ ಸಿಂಗಾಪೂರ ಬೆಳೆದಿರುವ ಪರಿ ನೋಡಿದರೆ ಎಂಥವನಿಗೂ ಅಚ್ಚರಿಯಾಗಬೇಕು. ಅವರೂ ಮೂರು ಹಂತದ ಯೋಜನೆಗಳ ಮೂಲಕ ಜನ ಜೀವನದ ಮಟ್ಟವನ್ನು ಏರಿಸಿದ್ದರು. ಮೊದಲನೆಯದು ಅತಿ ಕಡಿಮೆ ವೆಚ್ಚದಲ್ಲಿ ಮನೆ ಕಟ್ಟುವ ಮೂಲಕ ಪ್ರಜೆಗಳೆಲ್ಲರಿಗೂ ಸಮಾನತೆಯ ಸ್ಥಾನವನ್ನು ನೀಡಲಾಯ್ತು. ಆಮೇಲೆ ಕೈಗಾರಿಕೀಕರಣಕ್ಕೆ ಒತ್ತು ನೀಡಲಾಯ್ತು. ಕುಡಿಯಲು ನೀರನ್ನು ಪಕ್ಕದ ರಾಷ್ಟ್ರದಿಂದ ಆಮದು ಮಾಡಕೊಳ್ಳಬೇಕಾದ ಪರಿಸ್ಥಿತಿಯಲ್ಲಿದ್ದ ಸಿಂಗಾಪೂರ ಬೆಳೆದು ನಿಂತ ರೀತಿ ಎಂಥವನನ್ನೂ ಬೆಚ್ಚಿಬೀಳೀಸಬಲ್ಲದ್ದು. ಇಂದು ಅದರ ಆದಾಯದ ಬಹುಪಾಲು ಪ್ರವಾಸೋದ್ಯಮದ ಕಾರಣದಿಂದ ಬರುವಂಥದ್ದು. ಸಮುದ್ರದ ನೀರನ್ನೇ ಶುದ್ಧ ನೀರಾಗಿ ಪರಿವರ್ತಿಸಿ, ಸಮುದ್ರದ ಮೇಲೇ ನಿರ್ಮಿಸಿದ ನಗರವೊಂದರಲ್ಲಿ ಕೃತಕ ಜಲಪಾತ ಸೃಷ್ಟಿಸಿ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತಾ, ಕೋಟ್ಯಂತರ ರೂಪಾಯಿಗಳ ಆದಾಯ ಮಾಡಿಕೊಳ್ಳುತ್ತದೆ. ನಾವಾದರೋ ಪ್ರಾಕೃತಿಕ ಜಲಪಾತಗಳನ್ನೇ ಹೊಂದಿದ್ದರೂ ಅದನ್ನು ಜಗತ್ತಿನೆದುರು ತೆರೆದಿಡುವಲ್ಲಿ ಸೋತು ಹೋಗಿದ್ದೇವೆ. ಬಿಡಿ, ನಮ್ಮ ಸೋಲಿನ ಪ್ರಶ್ನೆ ಆಮೇಲೆ ಮಾಡೋಣ. ಸಿಂಗಾಪೂರದ ಗೆಲುವಿನ ಹಿಂದಿನ ರಹಸ್ಯ ಹುಡುಕಾಡೋಣ. ಬ್ರಿಟೀಷ್ ಸೈನ್ಯ ಸಿಂಗಾಪೂರದಿಂದ ಕಾಲ್ಕಿತ್ತು ಇನ್ನುಮೇಲೆ ನಿಮ್ಮ ರಕ್ಷಣೆ ನೀವೇ ಮಾಡಿಕೊಳ್ಳಿರೆನ್ನುವವರೆಗೆ ಸಿಂಗಾಪೂರ ತನ್ನದೇ ಆದ ಸೈನ್ಯದ ಕುರಿತಂತೆ ಗಂಭೀರವಾಗಿ ಯೋಚಿಸಿರಲಿಲ್ಲ. ಆನಂತರ ತನ್ನ ದೇಶದ ತರುಣರಿಗೆ ಸೈನ್ಯದ ಸೇವೆಯನ್ನು ಕಡ್ಡಾಯ ಮಾಡಿತು. ಅಲ್ಲಿ ಮೆಟ್ರಿಕ್ಯುಲೇಶನ್ ವೇಳೆಗೇ ತಂದೆ ತಾಯಿಯರಿಗೆ ಮಗನ ಕಡ್ಡಾಯ ಸೈನ್ಯ ಶಿಕ್ಷಣದ ಕುರಿತಂತೆ ಮಾಹಿತಿ ನೀಡಿ ಅದಕ್ಕೆ ತಯಾರಾಗಿರುವಂತೆ ಸೂಚಿಸಿಬಿಡುತ್ತಾರೆ. ಪ್ರಧಾನಿಯ ಮಗನಾದರೂ ಅದರಿಂದ ನುಣುಚಿಕೊಳ್ಳುವಂತೆ ಇಲ್ಲ. ನಮ್ಮಲ್ಲಾದರೋ ನಾವಿನ್ನೂ ರಾಷ್ಟ್ರಗೀತೆಗೆ ನಿಂತುಕೊಳ್ಳುವುದು ಕಡ್ಡಾಯವಾಗಬೇಕೆ ಬೇಡವೇ ಎನ್ನುವುದರ ಬಗ್ಗೆ ಚರ್ಚಿಸುತ್ತಿದ್ದೇವೆ. ಸೈನಿಕರು ಸೈನ್ಯಕ್ಕೆ ಸೇರುವುದು ಸಿಗುವ ಸಂಬಳಕ್ಕಾಗಿ ಎನ್ನುವ ಮೂರ್ಖರನ್ನು ಮಾಧ್ಯಮ ಸಲಹೆಗಾರರನ್ನಾಗಿ ನೇಮಿಸಿ ದೊಡ್ಡ ಮೊತ್ತದ ಸಂಬಳ ಕೊಟ್ಟು ಸಲಹುತ್ತೇವೆ. ಒಳ್ಳೆಯ ಸಂಬಳ ಕೊಟ್ಟರೆ ಯಾರ ಬೂಟು ಬೇಕಾದರೂ ನೆಕ್ಕಬಲ್ಲರಿವರು ಎಂದುಬಿಟ್ಟರೆ ಇವರ ಮುಖಗಳೆಲ್ಲ ಕೆಂಪಗಾಗಿಬಿಡುತ್ತವೆ! ಆರಂಭದಲ್ಲಿ ಸ್ವಾಮಿ ರಂಗನಾಥಾನಂದಜಿಯವರ ಮಾತುಗಳನ್ನು ಉಲ್ಲೇಖಿಸಿದೆನಲ್ಲ ಅದು ಇಂಥವರ ಕುರಿತಾದಂಥದ್ದೇ!
ರಾಷ್ಟ್ರದ ನಿರ್ಮಾಣದ ಮೊದಲ ಹೆಜ್ಜೆಯೇ ರಾಷ್ಟ್ರದೊಂದಿಗೆ ತನ್ನತನದ ಭಾವನೆಯನ್ನು ಬಲಗೊಳಿಸುವುದು. ನಾವು ವಿಶ್ವಮಾನವರಾಗಬೇಕೆಂಬುದರಲ್ಲಿ ಎರಡು ಮಾತೇ ಇಲ್ಲ. ಆದರೆ ತನ್ನ ರಾಷ್ಟ್ರಕ್ಕೇ ಆಗದವನು ವಿಶ್ವಕ್ಕಾದರು ಹೇಗೆ ಬೇಕಾದಾನು? ಸ್ವಾಮಿ ವಿವೇಕಾನಂದರೂ ವಿಶ್ವಭ್ರಾತೃತ್ವದ ಭಾವನೆಯನ್ನು ಬಲವಾಗಿ ಪ್ರತಿಪಾದಿಸಿದವರೇ. ಆದರೆ ಅವರ ದೇಶಭಕ್ತಿ ಪ್ರತಿಯೊಂದು ಮಾತುಗಳಲ್ಲಿ ಚಿಮ್ಮುತ್ತಿತ್ತು. ಪ್ರಖರ ರಾಷ್ಟ್ರೀಯತೆಯ ಚಿಂತನೆಯೊಂದೇ ಭಾರತದೊಳಗಿನ ಎಲ್ಲ ಸಮಸ್ಯೆಗಳನ್ನೂ ಮಂತ್ರದಂಡದಂತೆ ದೂರಮಾಡಬಲ್ಲದು. ಹಿಂದುತ್ವದ ಮೂಲ ಸತ್ತ್ವವನ್ನು ಅರಿತು ನಡೆದರೆ ಹೇಗೆ ನಮ್ಮೊಳಗಿನ ಜಾತಿ ಭೇದ ದೂರವಾಗುವುದೋ ಹಾಗೆಯೇ ರಾಷ್ಟ್ರೀಯತೆಯ ಮಂತ್ರವನ್ನು ಜಪಿಸುತ್ತ ಹೆಜ್ಜೆ ಹಾಕಿದರೆ ನಮ್ಮ ಎಲ್ಲ ಸಮಸ್ಯೆಗಳೂ ಕ್ಷಣಾರ್ಧದಲ್ಲಿ ಗುಣವಾಗಿಬಿಡುವುದು. ಜಪಾನ್ ಮತ್ತು ಸಿಂಗಾಪೂರಗಳಲ್ಲಿ ಕಂಡು ಬಂದ ಅಚ್ಚರಿಯ ಬೆಳವಣಿಗೆಯ ಹಿಂದಿರುವ ಶಕ್ತಿ ಅದೇ. ಆದರೆ ಭಾರತದಲ್ಲಿ ಅಮೇರಿಕಾ, ಚೀನಾಗಳು ಎಸೆಯುವ ಬಿಸ್ಕತ್ತಿಗೆ ಬಾಯ್ಬಿಟ್ಟು ಕುಳಿತ ಬುದ್ಧಿಜೀವಿ ವರ್ಗ ರಾಷ್ಟ್ರೀಯತೆಯಿಂದ ಬಲುದೂರ ಸೌಧವೊಂದನ್ನು ನಿರ್ಮಿಸಿ ಭಾರತವನ್ನು ಒಡೆದು ಹಾಕುವ ಸಂಚನ್ನು ರೂಪಿಸಿಕೊಂಡಿದೆ. ಇದು ಇಂದು ನಿನ್ನೆಯ ಸಂಚೆಂದು ಭಾವಿಸಬೇಡಿ. ಸ್ವಾತಂತ್ರ್ಯ ಪೂರ್ವದಿಂದಲೂ ಬ್ರಿಟೀಷರ ವೈಭವೋಪೇತ ಬದುಕನ್ನು ತಮ್ಮದಾಗಿಸಿಕೊಳ್ಳುವ ಹಂಬಲದಿಂದ ಅವರ ಬೂಟು ನೆಕ್ಕುವ ಒಂದು ವರ್ಗ ಇದ್ದೇ ಇತ್ತು. ಮುಂದೆ ಅವರುಗಳಲ್ಲಿ ಅನೇಕರು ಅಧಿಕಾರವನ್ನು ತಮ್ಮ ತೆಕ್ಕೆಗೆ ಹಾಕಿಕೊಂಡರು. ಅಧಿಕಾರವನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಲು ಮತ್ತು ತಮ್ಮ ಮಕ್ಕಳು-ಮೊಮ್ಮಕ್ಕಳಿಗೆ ವರ್ಗಾಯಿಸಲು ರಾಷ್ಟ್ರದ ಅಸ್ಮಿತೆಯನ್ನು ಧ್ವಂಸಗೊಳಿಸಲೂ ಹೇಸಲಿಲ್ಲ. ಬ್ರಿಟೀಷರು ಹಚ್ಚಿ ಹಾಕಿ ಹೋದ ಹಿಂದೂ-ಮುಸ್ಲೀಂ ಜಗಳಗಳು ಸ್ವಾತಂತ್ರ್ಯಾನಂತರ ಹೆಚ್ಚಾಗಿದ್ದು, ಹಿಂದುಗಳೊಳಗಿನ ಜಾತಿ ಕಲಹಗಳೂ ಮಿತಿಮೀರಿದ್ದು; ಭಾಷೆ-ವೇಷಗಳ ನೆಪದಲ್ಲಿ ಗಡಿ ಕದನಗಳು ರಾಜ್ಯರಾಜ್ಯಗಳ ನಡುವೆ ಬೆಂಕಿ ಉರಿಸಿದ್ದೆಲ್ಲವೂ ಈ ಜನರ ಕೊಡುಗೆಯೇ. ಕರ್ನಾಟಕದ ವೀರಶೈವ-ಲಿಂಗಾಯತ ವಾದವಿವಾದಗಳೂ ಇದರದ್ದೇ ಮುಂದುವರಿದ ಭಾಗ ಅಷ್ಟೇ.
ನಮ್ಮ ಶಿಕ್ಷಣ ರಾಷ್ಟ್ರೀಯತೆಯ ಪಠ್ಯವನ್ನು ಬೋಧಿಸಿದ್ದರೆ ಇಂದು ಈ ಸ್ಥಿತಿ ಖಂಡಿತ ನಮಗಿರುತ್ತಿರಲಿಲ್ಲ. ಅದರ ಕೊರತೆಯಿಂದಾಗಿಯೇ ಪ್ರತಿಷ್ಠಿತ ಜೆಎನ್ಯುದಂತಹ ಶಿಕ್ಷಣ ಸಂಸ್ಥೆಗಳಲ್ಲಿ ಪಾಕ್-ಚೀನಾ ಪರವಾದ ಆಜಾದಿಯ ಘೋಷಣೆಗಳು ಮೊಳಗಿ ರಾಷ್ಟ್ರ ನಲುಗಿದ್ದು. ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕ ಮಹತ್ವದ ಕನಸೊಂದನ್ನು ಕಟ್ಟಲೇಬೇಕಿದೆ. ಇಲ್ಲವಾದರೆ ಪ್ರತ್ಯೇಕತಾವಾದಿಗಳ ಕೂಗು ಇಲ್ಲಿಯೂ ಜೋರಾಗಿ ಕರ್ನಾಟಕಕ್ಕೊಂದು ಪ್ರತ್ಯೇಕ ಧ್ವಜ ಕೇಳಿದಂತೆ, ಪ್ರತ್ಯೇಕ ರಾಷ್ಟ್ರ ಕೇಳಿದರೂ ಅಚ್ಚರಿಯಿಲ್ಲ. ನಮ್ಮ ಪ್ರಾಥಮಿಕ ಶಾಲೆಯ ಶಿಕ್ಷಣ ಪುಸ್ತಕಗಳಲ್ಲಿ ಬರೆದಿರುವುದನ್ನು ಓದಿಸುವುದಕ್ಕಿಂತ ಸಂಸ್ಕಾರಗಳನ್ನು ಹುಟ್ಟುಹಾಕುವಲ್ಲಿ ಪೂರಕವಾಗಿರಬೇಕು. ಮುಂದುವರಿದ ರಾಷ್ಟ್ರಗಳಲ್ಲಿ ಮೊದಲ ಐದು ವರ್ಷದ ಶಿಕ್ಷಣದಲ್ಲೆಲ್ಲೂ ಶಾಲೆಗೆ ಮಕ್ಕಳು ಪುಸ್ತಕ ಒಯ್ಯುವುದೇ ಇಲ್ಲ. ಅವರಿಗೆ ಆಟ ಆಡುವುದೇ ಕೆಲಸ. ಆಟದ ಮೂಲಕವೇ ಸಮಾಜದೊಂದಿಗೆ ಬದುಕುವ ಪಾಠ ಕಲಿಸಲಾಗುತ್ತದೆ. ಅಲ್ಲವೇ ಮತ್ತೆ? ಮಕ್ಕಳನ್ನು ದುಡಿಯಲು ಬಳಸಿಕೊಂಡರೆ ಬಾಲ ಕಾರ್ಮಿಕರೆನ್ನುವ ಸರ್ಕಾರಗಳು ಶಾಲೆಗಳಲ್ಲಿ ಅದೇ ಮಕ್ಕಳಿಗೆ ಬರವಣಿಗೆಯ ಹೆಸರಲ್ಲಿ ಮಾಡುವ ಶೋಷಣೆಯನ್ನು ಏನೆನ್ನಬೇಕು ಹೇಳಿ? ಈ ಹಂತದಲ್ಲಿ ಮಕ್ಕಳಿಗೆ ರಸ್ತೆಯಲ್ಲಿ ಲೇನ್ ಶಿಸ್ತು ಪಾಲಿಸುವುದನ್ನು ಕಲಿಸಬೇಕು. ಇದೇ ಹಂತದಲ್ಲಿ ಎಲ್ಲೆಂದರಲ್ಲಿ ಉಗುಳದಿರುವ, ಸ್ವಚ್ಛ ಭಾರತದ ಪರಿಕಲ್ಪನೆಯನ್ನು ವಿವರಿಸಬೇಕು. ಈ ಹೊತ್ತಿನಲ್ಲಿಯೇ ಅನಗತ್ಯವಾಗಿ ನೀರು-ವಿದ್ಯುತ್ ಪೋಲು ಮಾಡದಿರುವ ಶಿಕ್ಷಣ ನೀಡಿ ಅದಕ್ಕಾಗಿ ಮನೆಗಳಲ್ಲಿ ಅವರನ್ನೇ ಪೊಲೀಸರನ್ನಾಗಿ ಮಾಡಬೇಕು. ಈ ಕಾಲಘಟ್ಟದಲ್ಲಿ ಕಲಿಸಿಕೊಟ್ಟ ಈ ಪಾಠ ಅಂತರ್ಮನಸ್ಸಿಗೇ ಮುಟ್ಟುವುದರಿಂದ ಅದು ಸದಾಕಾಲ ಎಚ್ಚರಿಸುತ್ತಲೇ ಇರುವ ಮಾನಸಿಕ ಆಜ್ಞೆಯಾಗಿ ಮಾರ್ಪಟ್ಟುಬಿಡುತ್ತದೆ. ಒಂದೇ ಪೀಳಿಗೆ ಕಳೆಯುವ ವೇಳೆಗೆ ಬದಲಾವಣೆಯ ಪರ್ವ ನೋಡಲು ಸಾಧ್ಯವಾಗುತ್ತದೆ.
ನಮ್ಮ ಶಿಕ್ಷಣದ ದೋಷ ಇರುವುದೇ ವಿದ್ಯಾರ್ಥಿಗಳನ್ನು ಪುಸ್ತಕದ ಹುಳುವಾಗಿಸುವಲ್ಲಿ. ಪುಸ್ತಕದಲ್ಲಿರುವುದನ್ನು ಹೃದ್ಗತ ಮಾಡಿಕೊಂಡರೆ ಉಪಯೋಗವಿಲ್ಲ. ಅದನ್ನು ಬದುಕಿಗೆ ಅಳವಡಿಸುವ ಜಾಣ್ಮೆಯನ್ನು ಅವನಿಗೆ ತಿಳಿಹೇಳಬೇಕು. ಹೆಚ್ಚಿನ ಅಂಕ ಪಡೆದು ವಿದೇಶಕ್ಕೆ ಓಡಿಹೋಗುವ ಧಾವಂತದಲ್ಲಿರುವವನಿಗೆ, ಹೊಸ ಆವಿಷ್ಕಾರಗಳತ್ತ ಮನಸೆಳೆಯುವಂತೆ ಮಾಡಿ ಅದನ್ನು ತಾಯ್ನೆಲದ ಉಪಯೋಗಕ್ಕೆ ದೊರೆಯುವಂತೆ ಮಾಡುವ ಶಿಕ್ಷಣ ನೀಡಬೇಕು. ನೆನಪಿಡಿ ಸಾಫ್ಟ್ವೇರ್ ಉದ್ದಿಮೆ ಅದೆಷ್ಟು ಬೆಳೆದರೂ ನಮ್ಮ ಹಸಿವನ್ನು ಇಂಗಿಸಬಲ್ಲುದೇ ಹೊರತು ರಾಷ್ಟ್ರದ ಘನತೆಯನ್ನು ಎತ್ತರಕ್ಕೇರಿಸುವ ಕೆಲಸ ಆಗಲಾರದು. ಸಂಶೋಧನಾ ಕ್ಷೇತ್ರದಲ್ಲಿ ನಾವು ಬಲವಾದ ಹೆಜ್ಜೆಯನ್ನು ಊರಿದಷ್ಟೂ ಭಾರತದ ಧ್ವಜ ಜಾಗತಿಕ ಮಟ್ಟದಲ್ಲಿ ಪಟಪಟನೆ ಹಾರಾಡುವುದು ನಿಶ್ಚಿತ. ಶಿಕ್ಷಣ ಇದಕ್ಕೆ ಪ್ರೇರಣೆಯಾಗಬೇಕು. ಇಲ್ಲವಾದರೆ ಓದಿನ ಅವಧಿ ಮುಗಿದರೂ ವಿಶ್ವವಿದ್ಯಾಲಯಗಳನ್ನು ಬಿಟ್ಟು ಹೋಗದ ಕನಯ್ಯಾನಂತಹವರ ಆಗರವಾಗಿಬಿಡುತ್ತದೆ ಭಾರತ. ಕರ್ನಾಟಕವೂ ಇದಕ್ಕೆ ಹೊರತಲ್ಲ. ನವ ಕರ್ನಾಟಕ ನಿರ್ಮಿಸುವ ಮನೋಗತ ನಿಜಕ್ಕೂ ಇದ್ದರೆ ರಾಷ್ಟ್ರದ ಹಿತಾಸಕ್ತಿಗೆ ಧಕ್ಕೆ ತರುವಂತಹ ಬರಗೂರು ರಾಮಚಂದ್ರಪ್ಪನಂಥವರ ನೇತೃತ್ವದ ಪುಸ್ತಕಗಳನ್ನು ಖಂಡಿತ ಮಕ್ಕಳ ಕೈಗಿಡುವ ಅಗತ್ಯ ನಮಗಿರಲಿಲ್ಲ.
ನೆನಪಿಡಿ. ಕರ್ನಾಟಕದಲ್ಲಿ ಬೌದ್ಧಿಕ ಸಾಮಥ್ರ್ಯಕ್ಕೆ ಕೊರತೆಯಿಲ್ಲ, ದುಡಿಯವ ಕೈಗಳಿಗೂ ಕಡಿಮೆಯೇನಿಲ್ಲ. ಇರುವುದು ಸಮರ್ಥ ನಾಯಕನದ್ದೇ ಕೊರತೆ. ಈ ಬಾರಿ ಅದನ್ನು ಜನತೆ ಸರಿದೂಗಿಸಬೇಕಿದೆ ಅಷ್ಟೇ. ಅಂದಹಾಗೆ ಚುನಾವಣೆ ಬಲು ಹತ್ತಿರ ಬಂತು!
Leave A Reply