ಸಿದ್ದರಾಮಯ್ಯನವರೇ ನೀವು ರಾಜ್ಯದ ಸಿಎಂ, ನಾಲಗೆ ಹಿಡಿತದಲ್ಲಿರಲಿ, ಬುದ್ಧಿ ಸ್ಥಿಮಿತದಲ್ಲಿರಲಿ!
ರಾಜ್ಯದಲ್ಲಿ 21 ಬಿಜೆಪಿ, ಆರೆಸ್ಸೆಸ್ ಕಾರ್ಯಕರ್ತರ ಕೊಲೆಯಾಗಿದೆ. ಹಿಂದೂ ಸಂಘಟನೆಗಳ ಕಾರ್ಯಕರ್ತರು ಭಯದಲ್ಲೇ ಓಡಾಡುವಂತಾಗಿದೆ. ಮಂಗಳೂರಿನಲ್ಲಿ ಮೂರು ದಿನಗಳ ಹಿಂದಷ್ಟೇ ಹಿಂದೂ ಕಾರ್ಯಕರ್ತರೊಬ್ಬರ ಹತ್ಯೆಗೆ ಸಂಚು ರೂಪಿಸಲಾಗಿದ್ದು ಸಹ ಬಹಿರಂಗವಾಗಿದೆ. ಕರಾವಳಿ ಭಾಗದಲ್ಲಂತೂ ಕಾನೂನು ಸುವ್ಯವಸ್ಥೆ ಹದಗೆಟ್ಟು ಹಳ್ಳ ಹಿಡಿದಿದೆ.
ಇಷ್ಟಾದರೂ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರದ ದುಡ್ಡಲ್ಲಿ ಸಮಾವೇಶ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುತ್ತೇನೆ ಎನ್ನುತ್ತಿದ್ದಾರೆಯೇ ಹೊರತು ಅದನ್ನು ವಾಸ್ತವದಲ್ಲಿ ಜಾರಿಗೆ ತರುತ್ತಿಲ್ಲ.
ರಾಜ್ಯದ ಹಿತ ಬಿಟ್ಟು ಇಷ್ಟೆಲ್ಲ ಮಾಡುತ್ತಿದ್ದರೂ ಆರೋಪ ಮಾಡುವುದು ಮಾತ್ರ ಬಿಜೆಪಿ, ಆರೆಸ್ಸೆಸ್ ಹಾಗೂ ಹಿಂದೂ ಸಂಘಟನೆಗಳು. ಬುಧವಾರ ಚಾಮರಾಜನಗರದಲ್ಲಿ ನಡೆದ ನವ ಕರ್ನಾಟಕ ನಿರ್ಮಾಣ ಯಾತ್ರೆಗೆ ತೆರಳುವ ಮುನ್ನ ನಾಗವಳ್ಳಿ ಹೆಲಿಪ್ಯಾಡ್ ನಲ್ಲಿ ಮಾತನಾಡಿದ ಅವರು, “ಬಿಜೆಪಿ, ಆರೆಸ್ಸೆಸ್ ಹಾಗೂ ಬಜರಂಗದಳದವರೇ ಭಯೋತ್ಪಾದಕರು” ಎಂದಿದ್ದಾರೆ.
ಇದುವರೆಗೂ ರಾಜ್ಯದಲ್ಲಿ ನಡೆದ ಹತ್ಯೆಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಎಂದು ಪರೋಕ್ಷವಾಗಿ ಹಿಂದೂ ಸಂಘಟನೆಗಳ ಮೇಲೆಯೇ ಆರೋಪ ಮಾಡುತ್ತಿದ್ದ ಸಿದ್ದರಾಮಯ್ಯನವರು, ಈಗ ನೇರವಾಗಿ ಬಿಜೆಪಿ, ಆರೆಸ್ಸೆಸ್ ಹಾಗೂ ಹಿಂದೂ ಸಂಘಟನೆಗಳನ್ನೇ ಹೊಣೆಯಾಗಿಸಿದ್ದಾರೆ.
ಅಷ್ಟಕ್ಕೂ, ಮುಖ್ಯಮಂತ್ರಿಯವರೇ ಭಯೋತ್ಪಾದಕರು ಎಂದರೆ ಯಾರು? ಬಿಜೆಪಿ, ಆರೆಸ್ಸೆಸ್ ನವರು ಭಯೋತ್ಪಾದಕರು ಎನ್ನಲು ನಿಮ್ಮ ಬಳಿ ಸಾಕ್ಷ್ಯಗಳಿವೆಯೇ? ಆರೆಸ್ಸೆಸ್ ನವರು ಭಯೋತ್ಪಾದಕರಾಗಿದ್ದರೆ ನೆಹರೂ ಅವರೇ ಏಕೆ ಆರೆಸ್ಸೆಸ್ ಕಾರ್ಯಕರ್ತರನ್ನು ಸನ್ಮಾನಿಸುತ್ತಿದ್ದರು? ಅದ್ಹೇಗೆ ನೀವು ಆಧಾರವಿಲ್ಲದೆ ಸಂಘಟನೆ ಕಾರ್ಯಕರ್ತರನ್ನು ಭಯೋತ್ಪಾದಕರು ಎನ್ನಲು ನಿಮಗೆ ಹೇಗಾದರೂ ಮನಸ್ಸು ಬರುತ್ತದೆ?
ನೀವು ರಾಜ್ಯದ ಮುಖ್ಯಮಂತ್ರಿ ಸ್ವಾಮಿ, ಘನತೆಗೆ ತಕ್ಕ ಮಾತನಾಡಿ.. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಅದನ್ನು ಸರಿಪಡಿಸಲು ಅಪರಾಧಿಗಳು ಯಾರೇ ಆಗಿದ್ದರೂ, ಅವರನ್ನು ಬಂಧಿಸಿ, ಶಿಕ್ಷಿಸಿ. ಅದು ಬಿಟ್ಟು ಚುನಾವಣೆ ಹಿತದೃಷ್ಟಿಯಿಂದ ಬಾಯಿಗೆ ಬಂದ ಹಾಗೆ ಮಾತನಾಡಿದರೆ ಹೇಗೆ ಸ್ವಾಮಿ?
ಬಿಜೆಪಿಯವರನ್ನೂ ಭಯೋತ್ಪಾದಕರು ಎಂದಿದ್ದೀರಲ್ಲಾ ಏನೆನ್ನಬೇಕು ನಿಮಗೆ? ಬಿಜೆಪಿಯವರು ಭಯೋತ್ಪಾದಕರಾಗಿದ್ದರೆ, ನರೇಂದ್ರ ಮೋದಿ ಅವರನ್ನು ಜನ ಪ್ರಧಾನಿಯನ್ನಾಗಿ ಆಯ್ಕೆ ಮಾಡುತ್ತಿದ್ದರೆ? ದೇಶದ 19 ರಾಜ್ಯಗಳಲ್ಲಿ ಜನ ಅಭೂತಪೂರ್ವವಾಗಿ ಬಿಜೆಪಿಯನ್ನೇ ಏಕೆ ಬೆಂಬಲಿಸುತ್ತಿದ್ದರು? ನಿಮ್ಮ ಪ್ರಕಾರ ಬಿಜೆಪಿಗೆ ಮತ ಹಾಕಿ ಗೆಲ್ಲಿಸಿದ, ಬಿಜೆಪಿ ಪರ ನಿಂತ ಜನರೂ ಭಯೋತ್ಪಾದಕರೇ? ಏನು ಸ್ವಾಮಿ ನಿಮ್ಮ ಮಾತಿನ ಅರ್ಥ?
ಹಾಗೆ ನೋಡಿದರೆ ದಕ್ಷಿಣ ಭಾರತದಲ್ಲಿ ಭಯೋತ್ಪಾದನೆಗೆ ಪಿಎಫ್ಐ ಹಾಗೂ ಎಸ್ ಡಿಪಿಐ ಸಂಘಟನೆಗಳು ಬೆಂಬಲ ನೀಡುತ್ತಿವೆ ಎಂಬ ಪ್ರಬಲ ಆರೋಪಗಳಿವೆ? ಆದರೆ ಬಿಜೆಪಿ, ಆರೆಸ್ಸೆಸ್ ವಿರುದ್ಧ ಯಾವ ಆರೋಪಗಳಿವೆ? ಹಿಂದೂ ಸಂಘಟನೆಗಳು ಏನು ಮಾಡಿವೆ? 21 ಹಿಂದೂಗಳನ್ನು ಕೊಂದವರು ಯಾರು? ಇದೇ ಪಿಎಫ್ ಐ ವಿರುದ್ಧದ 175 ಪ್ರಕರಣಗಳನ್ನು ಹಿಂಪಡೆಯಲು ನಿಮ್ಮ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದಿದ್ದಾಗಲೇ ನೀವು ಯಾರ ಪರ ಎಂಬುದು ಗೊತ್ತಾಗಿದೆ ಬಿಡಿ? ಚುನಾವಣೆ ಹೊಸ್ತಿಲಲ್ಲಿ ಪ್ರಚಾರಕ್ಕಾಗಿ ಹೀಗೆ ಮಾತನಾಡುತ್ತಿದ್ದೀರೋ ಅಥವಾ ಸೋಲಿನ ಭಯ ನಿಮ್ಮನ್ನು ಕಾಡುತ್ತಿದೆಯೋ ಗೊತ್ತಿಲ್ಲ? ಆದರೆ ನಿಮ್ಮ ಘನತೆಗೆ ತಕ್ಕನಾಗಿ ಮಾತನಾಡಿ, ಬುದ್ಧಿ ಸ್ಥಿಮಿತದಲ್ಲಿರಲಿ.
Leave A Reply