ಸ್ಮಾರ್ಟ್ ಸಿಟಿ ಮೋದಿಗೆ ಬಿಡಿ, ನಾವು ಸ್ಮಾರ್ಟ್ ವಿಲೇಜ್ ಕಟ್ಟೋಣ!
ಹಳ್ಳಿಗಳ ಮೊದಲ ಸಮಸ್ಯೆ ಏನೆಂದು ನೀವು ಕೇಳಿದರೆ ಕೃಷಿಗೆ ಬೆಂಬಲವಿಲ್ಲದಿರೋದು ಅಂತ ಬಹುತೇಕರು ಹೇಳುತ್ತಾರೆ. ಆದರೆ ವಾಸ್ತವವಾಗಿ ಹಳ್ಳಿಗಳು ಎದುರಿಸಲಾಗದೇ ಸೋತಿರುವುದೇ ಆಂತರಿಕ ಜಗಳಗಳ ವಿಷಯದಲ್ಲಿ. ಮನೆ ಮನೆಗಳೂ ಕದನದಲ್ಲಿ ನಿರತವಾಗಿವೆ. ಮನೆಯ ನಾಲ್ಕೂ ಜನ ಅಣ್ಣತಮ್ಮಂದಿರು ಆಸ್ತಿಗಾಗಿ ಕಿತ್ತಾಡಿ ಕೋರ್ಟ್‌ನಲ್ಲಿ ಬಡಿದಾಡುತ್ತಾರೆ. ಸಿಗುವ ಹಿಡಿಯಷ್ಟು ಜಮೀನಿಗಾಗಿ ಎಲ್ಲವನ್ನೂ ಸುರಿದು ಕೈಸುಟ್ಟುಕೊಂಡು ಬೆಪ್ಪುಗಳಾಗಿ ನಿಲ್ಲುತ್ತಾರೆ. ಪಾಲಿಗೆ ಬಂದ ಅಲ್ಪ-ಸ್ವಲ್ಪ ಜಮೀನಿಗಾಗಿ ಟ್ರಾಕ್ಟರು, ಟಿಲ್ಲರುಗಳನ್ನು ಖರಿದಿ ಮಾಡಿ ಸಾಲ ತೀರಿಸಲಾಗದೇ ಒದ್ದಾಡುತ್ತಾರೆ.
ನರೇಂದ್ರ ಮೋದಿಯವರು ಸ್ಮಾರ್ಟ್ ಸಿಟಿಗಳ ಕುರಿತಂತೆ ಮಾತನಾಡುತ್ತಿದ್ದಾರೆ. ಅದಕ್ಕಾಗಿ ಆಯ್ಕೆಗೊಂಡ ಪ್ರತಿಯೊಂದು ನಗರಕ್ಕೂ ನೂರು ಕೋಟಿ ರೂಪಾಯಿಗಳನ್ನು ಇಡುಗಂಟಾಗಿಯೂ ಇಟ್ಟಾಗಿದೆ. ಆದರೆ ಈ ಒಂದು ಕಲ್ಪನೆಯೂ ಇಲ್ಲದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೀಸಲಿಟ್ಟ ಹಣವನ್ನು ಸಮರ್ಥವಾಗಿ ಬಳಸಲು ಸೋತು ಸುಣ್ಣವಾಗಿದ್ದಾರೆ. ಅವರಿಗೆ ಶಂಕು ಸ್ಥಾಪನೆಗಳಲ್ಲಿರುವಷ್ಟು ಆಸಕ್ತಿ ಕನಸುಗಳನ್ನು ಸಾಕಾರ ಮಾಡಿಕೊಳ್ಳುವಲ್ಲಿ ಖಂಡಿತ ಇಲ್ಲ. ಇಲ್ಲವಾದರೆ ಅಧಿಕಾರಾವಧಿ ನಾಲ್ಕೂವರೆ ವರ್ಷ ಮುಗಿದ ನಂತರ ಅವರು ‘ನನಗೂ ಒಂದು ಕನಸಿದೆ’ ಎಂದು ಖಂಡಿತ ಜಾಹೀರಾತು ಕೊಡುತ್ತಿರಲಿಲ್ಲ!
ಕರ್ನಾಟಕದ ವಿಕಾಸಕ್ಕೆ ಒಂದು ಕಾಯಕಲ್ಪ ತರಲು ಮುಖ್ಯಮಂತ್ರಿಗಳಿಗೆ ಖಂಡಿತ ಸಾಧ್ಯವಿತ್ತು. ಆದರೆ ಅವರು ಜಾತಿ-ಮತಗಳ ಓಲೈಕೆ ಮಾಡುತ್ತ, ಮತ ಬ್ಯಾಂಕಿನ ನಿರ್ಮಾಣದತ್ತ ಗಮನ ಹರಿಸಿ ನಾಡಿನ ಅಭಿವೃದ್ಧಿಯನ್ನು ಕೊನೆಯ ಸಾಲಿಗೆ ತಳ್ಳಿಬಿಟ್ಟರು. ಅವರಿಗೆ ಮೋದಿಯನ್ನು ವಿರೋಧಿಸಬೇಕೆಂದರೆ ಮೋದಿಯನ್ನು ಮೀರಿ ಬೆಳೆಯುವಷ್ಟು ಅಭಿವೃದ್ಧಿ ಮಾಡಬೇಕೆಂಬ ಸಹಜ ಸತ್ಯ ಅರ್ಥವಾಗಲಿಲ್ಲ. ಹಾಗೆ ಸುಮ್ಮನೆ ಯೋಚಿಸಿ ನೋಡಿ. ಮೋದಿ ಸ್ಮಾರ್ಟ್ ಸಿಟಿಯ ಮಾತನಾಡುತ್ತಿರುವಾಗ ಅವರನ್ನೆದುರಿಸಲು ಮುಖ್ಯಮಂತ್ರಿಗಳು ಸ್ಮಾರ್ಟ್ ವಿಲೇಜ್ನ ಕಲ್ಪನೆಯನ್ನು ತಂದು ಪ್ರತಿ ಜಿಲ್ಲೆಯಲ್ಲೂ ವರ್ಷಕ್ಕೆ ಐದು ಹಳ್ಳಿಗಳನ್ನಾದರೂ ಪ್ರಗತಿಯ ಪಥದಲ್ಲಿ ಓಡುವಂತೆ ಮಾಡಿದ್ದರೆ, ಈ ವೇಳೆಗೆ ನೂರಾರು ಹಳ್ಳಿಗಳು ಉತ್ತಮ ರಸ್ತೆ, ಶಾಲೆ, ಶೌಚಾಲಯ, ಕೃಷಿ ವ್ಯವಸ್ಥೆ, ಉದ್ಯಮಗಳನ್ನು ಹೊಂದಿ ಮೋದಿಯವರೂ ಹುಬ್ಬೇರಿಸುವಂತೆ ಮಾಡಿರುತ್ತಿದ್ದವು. ಮೋದಿಯನ್ನು ವಿರೋಧಿಸುವ ನೆಪದಲ್ಲಿ ನೀತಿ ಆಯೋಗದ ಸಭೆಗಳಿಗೆ ಹೋಗಲೊಪ್ಪದ ಸಿದ್ದರಾಮಯ್ಯನವರು ವಿಕಾಸದಲ್ಲಿ ಅವರ ಓಟವನ್ನು ಮೀರಿ ಹೋಗುವ ಸವಾಲು ಸ್ವೀಕರಿಸಲು ಮಾತ್ರ ಸಿದ್ಧವಾಗಲಿಲ್ಲ.
ಬಿಡಿ. ಈಗ ನಾವೇ ಈ ಕುರಿತಂತೆ ಆಲೋಚಿಸುವ ಕಾಲ ಬಂದೊದಗಿದೆ. ನಮ್ಮ ನಮ್ಮ ಹಳ್ಳಿಗಳನ್ನು ಸ್ಮಾರ್ಟ್ ವಿಲೇಜ್ ಮಾಡುವ ಹೊಣೆಗಾರಿಕೆಯನ್ನು ನಾವೇ ಹೊರಬೇಕಿದೆ. ಆಳುವವರನ್ನೇ ನಂಬಿ ಕೂತರೆ ನಾವು ಲಿಂಗಾಯತ-ವೀರಶೈವ ಎಂದೋ, ಬ್ರಾಹ್ಮಣ-ದಲಿತರೆಂದೋ, ಹಿಂದೂ-ಮುಸ್ಲೀಮರೆಂದೋ; ಕರ್ನಾಟಕ-ತಮಿಳುನಾಡು-ಗೋವಾಗಳೆಂದೋ, ಕಿತ್ತಾಡುತ್ತ ಉಳಿಯಬೇಕಾಗುತ್ತದೆಯೇ ಹೊರತು ವಿಕಾಸದ ಕಲ್ಪನೆಯನ್ನು ಕಟ್ಟಿಕೊಳ್ಳಲೂ ಖಂಡಿತ ಸಾಧ್ಯವಾಗಲಾರದು. ನಾವೀಗ ಸಜ್ಜಾಗಬೇಕಾಗಿದೆ. ನಮ್ಮ ನಮ್ಮ ಹಳ್ಳಿಗಳನ್ನು ಪ್ರಗತಿಯತ್ತ ಕೊಂಡೊಯ್ಯಲು ನಾವೇ ಮುಂಚೂಣಿಯಲ್ಲಿ ನಿಲ್ಲಬೇಕಿದೆ.
ಹಾಗೊಂದು ಸ್ಮಾರ್ಟ್ ವಿಲೇಜ್ನ್ನು ನಿರ್ಮಾಣ ಮಾಡಲು ಮೊದಲು ಆಗಬೇಕಿರುವುದೇ ಊರಿನ ತರುಣರು ಭೇದ ಮರೆತು ಒಟ್ಟಾಗಬೇಕಿರುವುದು. ಭೇದ ಮರೆಯುವುದೆಂದರೆ ಅಕ್ಷರಶಃ ಜಾತಿ-ಮತ-ಪಂಥಗಳನ್ನು ಬದಿಗಿಟ್ಟು ಒಂದು ಹಳ್ಳಿಯಾಗುವುದು. ಚುನಾವಣೆಯ ಹೊತ್ತಲ್ಲಿ ಯಾರಿಗಾದರೂ ಮತ ಹಾಕಿ ಆದರೆ ಆನಂತರ ಹಳ್ಳಿಯ ಒಳಿತಿಗಾಗಿ ಪಕ್ಷ ಭೇದ ಮರೆತು ಜೊತೆಗೂಡುವುದು. ಇಷ್ಟಕ್ಕೂ ನಾವು ಯಾವ ಪಕ್ಷಕ್ಕೋಸ್ಕರ, ಯಾವ ವ್ಯಕ್ತಿಗಳಿಗೋಸ್ಕರ ಕಿತ್ತಾಡುತ್ತಿರುತ್ತೇವೋ ಅವರು ಬೆಂಗಳೂರಿನಲ್ಲಿ ಒಂದೇ ಹೋಟೆಲ್ಲಿನ್ನಲಿ ಕುಳಿತು ಆನಂದದಿಂದ ಭೂರಿಭೋಜನ ಸವಿಯುತ್ತಿರುತಾರೆ! ನೆನಪಿಡಿ. ನಮ್ಮೂರಿನ ವಿಕಾಸಕ್ಕಿಂತ ನಮಗೆ ಯಾವ ವ್ಯಕ್ತಿ, ಯಾವ ಪಕ್ಷವೂ ದೊಡ್ಡದಲ್ಲ ಮತ್ತು ನಮ್ಮೂರು ವಿಕಾಸಗೊಂಡರೆ ಅದರೊಳಗೆ ನಮ್ಮ ಒಳಿತೂ ಅಡಗಿದೆ ಎನ್ನುವುದನ್ನು ಮರೆಯುವಂತಿಲ್ಲ. ಇಷ್ಟು ಮಾನಸಿಕ ಭೂಮಿಕೆ ಸಿದ್ಧವಾದರೆ ಸ್ಮಾರ್ಟ್ ವಿಲೇಜ್ಗೆ ನಾವೆಲ್ಲ ಮೊದಲ ಹೆಜ್ಜೆ ಇಟ್ಟಂತೆ.
ಹಳ್ಳಿಗಳ ಮೊದಲ ಸಮಸ್ಯೆ ಏನೆಂದು ನೀವು ಕೇಳಿದರೆ ಕೃಷಿಗೆ ಬೆಂಬಲವಿಲ್ಲದಿರೋದು ಅಂತ ಬಹುತೇಕರು ಹೇಳುತ್ತಾರೆ. ಆದರೆ ವಾಸ್ತವವಾಗಿ ಹಳ್ಳಿಗಳು ಎದುರಿಸಲಾಗದೇ ಸೋತಿರುವುದೇ ಆಂತರಿಕ ಜಗಳಗಳ ವಿಷಯದಲ್ಲಿ. ಮನೆ ಮನೆಗಳೂ ಕದನದಲ್ಲಿ ನಿರತವಾಗಿವೆ. ಮನೆಯ ನಾಲ್ಕೂ ಜನ ಅಣ್ಣತಮ್ಮಂದಿರು ಆಸ್ತಿಗಾಗಿ ಕಿತ್ತಾಡಿ ಕೋರ್ಟ್ ನಲ್ಲಿ ಬಡಿದಾಡುತ್ತಾರೆ. ಸಿಗುವ ಹಿಡಿಯಷ್ಟು ಜಮೀನಿಗಾಗಿ ಎಲ್ಲವನ್ನೂ ಸುರಿದು ಕೈಸುಟ್ಟುಕೊಂಡು ಬೆಪ್ಪುಗಳಾಗಿ ನಿಲ್ಲುತ್ತಾರೆ. ಪಾಲಿಗೆ ಬಂದ ಅಲ್ಪ-ಸ್ವಲ್ಪ ಜಮೀನಿಗಾಗಿ ಟ್ರಾಕ್ಟರು, ಟಿಲ್ಲರುಗಳನ್ನು ಖರಿದಿ ಮಾಡಿ ಸಾಲ ತೀರಿಸಲಾಗದೇ ಒದ್ದಾಡುತ್ತಾರೆ. ಆಗಲೇ ಅವರು ಎಲ್ಲ ಕೃಷಿ ನಿಯಮಗಳನ್ನು ಗಾಳಿಗೆ ತೂರಿ ಲಾಭ ತರುವ ಬೆಳೆಗಳತ್ತ ಮುಖಮಾಡಿ ನಿಲ್ಲೋದು. ಮೊದಲು ಹಳ್ಳಿಗಳನ್ನು ವ್ಯಾಜ್ಯ ಮುಕ್ತ ಮಾಡುವತ್ತ ನಾವೆಲ್ಲರೂ ಶ್ರಮಿಸಬೇಕಿದೆ. ನಮ್ಮ ಹಳ್ಳಿಗಳನ್ನು ಪೊಲೀಸರ ಸಂಪರ್ಕವಿಲ್ಲದ, ನ್ಯಾಯಾಲಯಗಳಿಂದ ದೂರವಿರುವ ವ್ಯವಸ್ಥೆಯಾಗಿ ಪರಿವರ್ತಿಸಬೇಕಾಗಿದೆ. ಊರ ಹಿರಿಯರು, ಗೌರವಾನ್ವಿತರು ಸೇರಿ ವ್ಯಾಜ್ಯಗಳನ್ನು ಬಗೆಹರಿಸುವ ಹಳ್ಳಿಯ ಅಭಿವೃದ್ಧಿಯ ರಥ ಸರಾಗವಾಗಿ ಓಡುವಂತಹ ಕಲ್ಪನೆಗಳಿಗೆ ತೆರೆದುಕೊಳ್ಳಬೇಕಿದೆ. ಇದಕ್ಕಾಗಿ ಅಗತ್ಯಬಿದ್ದರೆ ಹಿರಿಯ ವಕೀಲರ ಮತ್ತು ನಿವೃತ್ತ ನ್ಯಾಯಾಧೀಶರ ಸಹಕಾರವನ್ನು ಪಡೆದರೂ ಖಂಡಿತ ತಪ್ಪಿಲ್ಲ.
ಜಮೀನು ಚಿಕ್ಕದಾದಷ್ಟು ಅದಕ್ಕಾಗಿ ಮಾಡುವ ವೆಚ್ಚ ಹೊರೆಯಾಗುತ್ತದೆ. ಇದು ಬರಿಯ ಜಮೀನಿನ ಕಥೆಯಲ್ಲ, ಎಲ್ಲ ವಸ್ತುಗಳೂ ಹಾಗೇ. ವೆಚ್ಚ ಕಡಿಮೆ ಮಾಡಲು ಹೆಚ್ಚು ಭೂಮಿಯನ್ನು ಒಗ್ಗೂಡಿಸಬೇಕು. ಇದನ್ನು ಸಾಮೂಹಿಕ ಕೃಷಿ ಅಂತಾರೆ. ಇಡಿಯ ಊರು ನಾಲ್ಕಾರು ವಿಭಾಗಗಳಾಗಿ ತಮ್ಮನ್ನು ತಾವು ವಿಂಗಡಿಸಿಕೊಂಡು ವಿಸ್ತಾರವಾದ ಭೂಭಾಗವನ್ನು ಕೃಷಿ ಮಾಡಲು ಕೃಷಿಕರು ನಿಶ್ಚಯಿಸದರೆ ಮನೆಗೊಂದು ಟ್ರ್ಯಾಕ್ಟರ್ನ ಅವಶ್ಯಕತೆ ಬೀಳಲಾರದು. ಹಾಗೆಯೇ ಒಂದೇ ಬೆಳೆಯನ್ನು ಎಲ್ಲರೂ ಹಾಕಿ ನಷ್ಟ ಅನುಭವಿಸುವ ಸಮಸ್ಯೆಯೂ ಇರಲಾರದು. ಬುದ್ಧವಂತಿಕೆಯಿಂದ ಕೃಷಿ ಮಾಡುವ ಪದ್ಧತಿ ಇದೇ. ವ್ಯಾಪ್ತಿ ವಿಸ್ತಾರವಾಗಿರುವುದರಿಂದ ಬೆಳೆಯನ್ನು ಕಾಪಾಡಿಕೊಳ್ಳಲು, ಬಂದ ಉತ್ಪನ್ನವನ್ನು ರಕ್ಷಿಸಿಡಲು, ಹೆಚ್ಚು ಸಾಮಥ್ರ್ಯ ಸಿದ್ಧಿಸುತ್ತದೆ. ಜೊತೆಗೆ ಉತ್ಪನ್ನವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವಾಗಲೂ ಧಾವಂತಕ್ಕೆ ಬೀಳದೇ ಹೆಚ್ಚು ಚೌಕಶಿ ಮಾಡಲು ಅವಕಾಶಗಳು ತೆರೆದುಕೊಳ್ಳುತ್ತವೆ. ನೆನಪಿಡಿ. ಇಲ್ಲೆಲ್ಲೂ ಸರ್ಕಾರವಾಗಲಿ ನಾವು ಆರಿಸಿದ ನೇತಾರರಾಗಲಿ ನಮ್ಮ ಸಹಾಯಕ್ಕೆ ಬರುವ ಅಗತ್ಯ ಇಲ್ಲ. ಇದು ಹಳ್ಳಿಗರಾಗಿ ನಾವುಗಳೇ ಕೈಗೊಳ್ಳಬೇಕಾದ ಮೊದಲ ನಿರ್ಣಯ.
ಅಧಿಕಾರಿಗಳು ಮಾಡಬಹುದಾದ ಕೆಲಸ ಒಂದಷ್ಟಿದೆ. ರೈತರು ಅತ್ಯಾಧುನಿಕ ದುಬಾರಿ ಯಂತ್ರಗಳನ್ನು ವೈಯಕ್ತಿಕವಾಗಿ ಕೊಂಡು ಬಳಸಲಾರರು. ಹೀಗಾಗಿ ಪಂಚಾಯತ್ ಮಟ್ಟದಲ್ಲೋ ತಾಲೂಕಿನ ಹಂತದಲ್ಲೋ ರೈತರಿಗೆ ಬೇಕಾದ ಯಂತ್ರಗಳನ್ನು ಅಧಿಕಾರಿಗಳು ಹೊಂದಿಸಿಟ್ಟುಕೊಂಡು ಅದನ್ನು ರೈತರಿಗೆ ಬಾಡಿಗೆಗೆ ಕೊಡುವುದು ನಿಜಕ್ಕೂ ಲಾಭದಾಯಕ. ಗ್ರಂಥಾಲಯ ಆದಂತೆ ಯಂತ್ರಾಲಯ ಒಂದಾದರೆ ಎಷ್ಟು ಚೆಂದ ಅಲ್ಲವೇ. ಅಧಿಕಾರಿಗಳು ಜನರ ಸಹಕಾರದೊಂದಿಗೆ ಮಾಡಬಹುದಾದ ಮತ್ತೊಂದು ಬಹುಮುಖ್ಯ ಕೆಲಸ ಇದೆ. ಅದು ಹಳ್ಳಿಗಳನ್ನು ವಿದ್ಯುತ್ ವಿಚಾರದಲ್ಲಿ ಸ್ವಾವಲಂಬಿಯಾಗಿಸೋದು. ಆಯಾ ಕ್ಷೇತ್ರದಲ್ಲಿನ ಪ್ರಮುಖ ಬೆಳೆಗಳಿಗೆ ಹೊಂದಿಕೊಂಡಂತೆ ವಿದ್ಯುತ್ ಉತ್ಪಾದನೆಯ ಹೊಸ ಹೊಸ ಮಾರ್ಗಗಳನ್ನು ಆಲೋಚಿಸಬಹುದು. ಉದಾಹರಣೆಗೆ ಕಬ್ಬಿನ ರಸದಿಂದ ಪಡೆದ ಎಥೆನಾಲ್ನ ಬಳಕೆ, ಭತ್ತದ ಹುಲ್ಲಿನಿಂದ ಶಕ್ತಿ ಉತ್ಪಾದನೆ, ಸಾಗರದಲೆಗಳ ಬಳಕೆ, ಕೆಲವೆಡೆ ಸೋಲಾರ್ ಪಾರ್ಕ್ ಗಳ ನಿರ್ಮಾಣ ಹೀಗೆ ಭಿನ್ನ ಭಿನ್ನ ಮಾರ್ಗಗಳ ಮೂಲಕ ಶಕ್ತಿ ಉತ್ಪಾದನೆಯ ಸಂಶೋಧನೆ ನಡೆಸಿ ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ತೆರೆಯುವಲ್ಲಿ ಅಧಿಕಾರಿಗಳು ಶ್ರಮಿಸಬೇಕಿದೆ. ನಮ್ಮ ವ್ಯವಸ್ಥೆ ಸ್ಥಳೀಯ ಇಂಜಿನಿಯರಿಂಗ್ ಕಾಲೇಜಿನೊಂದಿಗೆ ಕೈ ಜೋಡಿಸಿಕೊಂಡು ಹೊಸ ಹೊಸ ಸಂಶೋಧನೆಗಳಿಗೆ ಮಾರ್ಗ ತೆರೆದುಕೊಟ್ಟರೆ ನಾವೊಂದು ಅದ್ಭುತವನ್ನೇ ಸಾಧಿಸಬಹುದು. ವರ್ಷದ ಕೊನೆಯಲ್ಲಿ ಅಕ್ಕ-ಪಕ್ಕದ ಕಾಲೇಜುಗಳಿಂದ ಪ್ರಾಜೆಕ್ಟುಗಳನ್ನು ಹೊತ್ತು ತಂದು ಪಾಸಾಗಲೆತ್ನಿಸುವ ವಿದ್ಯಾಥರ್ಿಗಳು ಸುತ್ತ-ಮುತ್ತಲಿನ ಹಳ್ಳಿಗಳಿಗೆ ಭೇಟಿಕೊಟ್ಟು ಅಲ್ಲಿನ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವ ಯೋಜನೆಗಳನ್ನು ಮಾಡಬೇಕೆಂದು ತಾಕೀತು ಮಾಡಿದರೆ ರೈತರ ಸಮಸ್ಯೆಗಳು ಅರ್ಧ ಪರಿಹಾರವಾದಂತೆ. ಹಾಗೆ ಒಂದೆರಡು ಸಮಸ್ಯೆಗಳನ್ನು ಯೋಚಿಸಿ. ಕೆಲವೊಮ್ಮೆ ಬೆಳೆದ ತರಕಾರಿಯನ್ನು ಎರಡು ದಿನ ಹೆಚ್ಚು ಕಾಪಾಡಿಕೊಂಡರೂ ಹೆಚ್ಚಿನ ಬೆಲೆ ದಕ್ಕುವ ಸಾಧ್ಯತೆಯಿದೆ. ಆದರೆ, ಕೇಂದ್ರೀಕೃತ ಶೀತಲ ಘಟಕಕ್ಕೆ ಬೆಳೆದ ಬೆಳೆಯನ್ನು ಕೊಂಡೊಯ್ದು ಅಲ್ಲಿ ಇಡುವುದು ಹೆಚ್ಚು ಕಡಿಮೆ ಅಸಾಧ್ಯವಾದ್ದೇ ಸರಿ. ಹಾಗೇನಾದರೂ ನಮ್ಮ ವಿದ್ಯಾರ್ಥಿಗಳು ಸ್ವಲ್ಪ ಸಂಶೋಧನೆ ನಡೆಸಿ ಸಂಚಾರಿ ಶೀತಲ ಘಟಕವನ್ನು ನಿಮರ್ಿಸಿಕೊಟ್ಟರೆ ರೈತನ ಮನೆ ಬಾಗಿಲಿನಲ್ಲೇ ಅದನ್ನು ನಿಲ್ಲಿಸಬಹುದಲ್ಲ! ರೈತನಿಗೆ ಬೆಳೆ ಹೇಗೆ ಬೆಳೆಯಬೇಕೆಂಬ ಜ್ಞಾನ ನಮ್ಮೆಲ್ಲರಿಗಿಂತಲೂ ಚೆನ್ನಾಗಿಯೇ ಇದೆ. ಆದರೆ, ಬೆಳೆದದ್ದನ್ನು ಹೇಗೆ ಮಾರಬೇಕೆಂಬುದರಲ್ಲಿ ಆತ ಸೋಲುತ್ತಾನೆ. ಟಿ ವಿ ಯಲ್ಲಿ ನೋಡಿ ಶೇರುಗಳನ್ನು ಮಾರುವ ಕೊಳ್ಳುವ ಕೆಲಸ ಮಾಡುವಂತೆಯೇ ರೈತರು ಕುಳಿತಲ್ಲಿಯೇ ಬೆಳೆದ ವಸ್ತುಗಳನ್ನು ಮಾರಾಟ ಮಾಡುವ ವ್ಯವಸ್ಥೆ ರೂಪಿಸಿಕೊಡಲು ಇನ್ಫಾಮರ್ೇಶನ್ ಸೈನ್ಸ್ನವಿದ್ಯಾರ್ಥಿಗಳು ಒಂದಷ್ಟು ಕೆಲಸ ಮಾಡಲಾಗದೇ! ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಜಿಲ್ಲೆಯಲ್ಲಿ ಅಥವಾ ತಾಲೂಕಿನಲ್ಲಿ ಎಷ್ಟು ಕೃಷಿ ಭೂಮಿಯಲ್ಲಿ ಯಾವ್ಯಾವ ಬೆಳೆಯನ್ನು ಬೆಳೆಯುತ್ತಿದ್ದಾರೆಂಬ ರಿಯಲ್ ಟೈಮ್ ಡಾಟಾ ಕೃಷಿಕನೊಬ್ಬನಿಗೆ ಕುಳಿತಲ್ಲೇ ಸಿಗುವಂತೆ ಮಾಡಲು ಸಾಧ್ಯವಾದರೆ ಆತ ಅದರ ಆಧಾರದ ಮೇಲೆ ತಾನೇನನ್ನು ಬೆಳೆಯಬೇಕೆಂದು ನಿರ್ಧರಿಸಲಾರನೇ? ಇವೆಲ್ಲವೂ ಸಾಮಾನ್ಯವಾದ ತಂತ್ರಜ್ಞಾನವನ್ನು ಬಳಸಿ ಮಾಡಬಹುದಾಗಿರುವ ಕೆಲಸಗಳು. ಸ್ವಲ್ಪ ಆಸ್ಥೆ ಮತ್ತು ಇಚ್ಛಾಶಕ್ತಿ ಬೇಕಷ್ಟೇ. ಹಾಗೆ ನೋಡಿದರೆ ಇಲ್ಲೆಲ್ಲಿಯೂ ಸಕರ್ಾರ ಹಸ್ತಕ್ಷೇಪ ಮಾಡಬೇಕಾದ ಅವಶ್ಯಕತೆಯೇ ಇಲ್ಲ. ಪ್ರಜ್ಞಾವಂತ ನಾಗರಿಕರು ಮತ್ತು ನಾಡಿನ ಬಗ್ಗೆ ಕಾಳಜಿಯುಳ್ಳವರು ಇವಿಷ್ಟನ್ನೂ ತಾವುಗಳೇ ಮಾಡಿಬಿಡಬಹುದು. ಸರ್ಕಾರ ಹೆಚ್ಚೆಂದರೆ ಇಂಟರ್ನೆಟ್ಟಿನ ಸೌಕರ್ಯ ಎಲ್ಲೆಡೆ ಸಿಗುವಂತೆ ಮಾಡಿದರೆ ಸಾಕು.
ಹಳ್ಳಿಯಲ್ಲಿನ ಕೃಷಿ ಅಭಿವೃದ್ಧಿಗೆ ನಮಗೆ ನಾವೇ ಹಾಕಿಕೊಳ್ಳಬೇಕಾದ ಒಂದಷ್ಟು ಚೌಕಟ್ಟಿದೆ. ಒಂದು ಹಳ್ಳಿ ಹಸಿರಿನಿಂದ ಸಮೃದ್ಧವಾಗಿರಬೇಕು ಮತ್ತು ನೀರು ಸಹಜವಾಗಿ ಸಿಗುವಂತಿರಬೇಕು. ಅದಕ್ಕೆ ಹಳ್ಳಿಗಿರಬೇಕಾದಂತಹ ಕೃಷಿ ಭೂಮಿ ಮತ್ತು ಹಸಿರು ವಾತಾವರಣದ ಅನುಪಾತವನ್ನು ಸದಾ ಕಾಯ್ದುಕೊಳ್ಳಬೇಕಾದ ಹೊಣೆಗಾರಿಕೆ ನಮ್ಮದ್ದೇ. ಪ್ರತಿ ಕೃಷಿ ಭೂಮಿಗೆ ಇಷ್ಟು ಮರಗಳಿರಬೇಕೆಂಬುದು ನಿಶ್ಚಯವಾದರೆ ಪ್ರತಿಯೊಬ್ಬ ರೈತನೂ ಅದಕ್ಕೆ ಸ್ಪಂದಿಸಲೇಬೇಕು ಅಥವಾ ಊರಿನವರೆಲ್ಲ ಸೇರಿ ಅಷ್ಟೇ ಪ್ರಮಾಣದ ದೇವರ ಕಾಡನ್ನು ಸಂಭಾಳಿಸಲೇಬೇಕು. ನೀರಿನ ವಿಚಾರದಲ್ಲೂ ಹಾಗೆ. ಊರಿಗಿಷ್ಟು ನೀರುಳಿಸುವ ಜಲಾಗಾರವಿರಬೇಕೆಂದು ನಿಶ್ಚಿತವಾದರೆ ಆ ಅನುಪಾತವನ್ನು ನಾವು ಕಾಯ್ದುಕೊಳ್ಳಲೇಬೇಕು. ಅದಕ್ಕಾಗಿ ಒಂದೋ ಊರಿನವರೆಲ್ಲಾ ಸೇರಿ ಕೆರೆಯನ್ನು ಸಂಭಾಳಿಸಿಕೊಳ್ಳಿ ಅಥವಾ ತಂತಮ್ಮ ಕೃಷಿಭೂಮಿಯಲ್ಲಿ ಕೃಷಿ ಹೊಂಡವನ್ನು ನಿರ್ಮಿಸಿಕೊಳ್ಳಬೇಕು. ನೀರು ನಮ್ಮದೇ ಕೃಷಿಭೂಮಿಯಲ್ಲಿದ್ದರೂ ಅದು ರಾಷ್ಟ್ರೀಯ ಸಂಪತ್ತೆಂಬುದನ್ನು ಮರೆಯುವಂತಿಲ್ಲ. ಕೃಷಿ ಹೊಂಡಗಳಲ್ಲಿ ನಾವು ಶೇಖರಿಸಿರುವ ಮಳೆಯ ನೀರಿನ ಮೇಲೆ ಮಾತ್ರ ನಮ್ಮ ಅಧಿಕಾರ. ಭೂಗರ್ಭವನ್ನು ಕೊರೆದು ತೆಗೆದಿರುವ ನೀರೂ ಕೂಡ ರಾಷ್ಟ್ರದ ಆಸ್ತಿ. ಒಂದೊಂದು ಹನಿಯನ್ನು ಬಳಸುವಾಗಲೂ ಅಪಾರವಾದ ಎಚ್ಚರಿಕೆ ಬೇಕು. ಯಾರೂ ಅನಗತ್ಯವಾಗಿ ನೀರನ್ನು ವ್ಯರ್ಥ ಮಾಡುವುದು ಕಾಣುತ್ತದೆಯೋ ಅಂಥವರಿಗೆ ದಂಡ ಹೇರುವ ಪದ್ಧತಿಯನ್ನು ಊರಿನವರೇ ನಿಶ್ಚಯಿಸಿದರೂ ತಪ್ಪಿಲ್ಲ.
ಸರ್ಕಾರಗಳು ಮಾಡಬೇಕಾದ ಒಂದೆರಡು ಕೆಲಸಗಳಿವೆ. ಮೊದಲನೆಯದು, ಹಳ್ಳಿಗಳಲ್ಲಿ ಕೃಷಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಸರ್ಕಾರ ವ್ಯವಸ್ಥೆಗಳನ್ನು ರೂಪಿಸಿಕೊಡಬೇಕು. ಬೆಂಗಳೂರಿನ ಸಾಫ್ಟ್ವೇರ್ ಉದ್ಯಮಿ ದೂರದ ಬಳ್ಳಾರಿಯ ಭತ್ತದ ಗದ್ದೆಗಳಲ್ಲೋ ಕರಾವಳಿಯ ತೆಂಗಿನ ತೋಟಗಳಲ್ಲೋ ಕೊಳ್ಳೇಗಾಲದ ಕಬ್ಬಿನ ಗದ್ದೆಗಳಲ್ಲೋ ತಾನು ಮೈಮರೆಯುವಂತಹ ವಾತಾವರಣವನ್ನು ರೂಪಿಸಿಕೊಡಬೇಕು. ಭಾರತದ ಪವಿತ್ರ ಮಣ್ಣಿನ ಅನುಭೂತಿಯನ್ನು ಜಗತ್ತಿನ ಮೂಲೆ ಮೂಲೆಯ ಜನ ಪಡೆಯುವಂತಹ ಪ್ರೇರಣೆಯನ್ನು ತುಂಬಬೇಕು.
ಅನೇಕ ಪಟ್ಟಣಗಳು ಪ್ರಕೃತಿಯನ್ನು ಸಾಧ್ಯವಾದಷ್ಟೂ ಶೋಷಣೆಗೈಯ್ಯುತ್ತಿವೆ. ಪ್ರತಿಕ್ಷಣವೂ ಉಸಿರುಗಟ್ಟುವಷ್ಟು ಕಾರ್ಬನ್ನನ್ನು ಪ್ರಕೃತಿಗೆ ಬಿಡುಗಡೆ ಮಾಡಿ ಬದುಕನ್ನು ದುರ್ಭರಗೊಳಿಸಿವೆ. ಪ್ರತಿಯೊಂದು ಪಟ್ಟಣವೂ ತಾನು ಬಿಡುಗಡೆ ಮಾಡುತ್ತಿರುವ ವಿಷಾನಿಲಕ್ಕೆ ಪ್ರತಿಯಾಗಿ ಅದನ್ನು ಸ್ಥಿರೀಕರಿಸಬಲ್ಲ ಹಳ್ಳಿಗಳಿಗೆ ಧನಸಹಾಯದ ಮೂಲಕ ಜೊತೆಯಾಗಿ ನಿಲ್ಲುವ ಕಾನೂನನ್ನು ತರಬೇಕಾಗಿದೆ. ಇದೊಂದು ಬಗೆಯಲ್ಲಿ ಆಂತರಿಕವಾದ ಕಾರ್ಬನ್ ಟ್ರೇಡಿಂಗ್. ಹಳ್ಳಿಗಳು ಹೆಚ್ಚು ಕಾಡು ಬೆಳೆಸಿದಷ್ಟೂ ಪಟ್ಟಣಿಗರು ತಮ್ಮ ತೆರಿಗೆಯ ಹಣದಲ್ಲಿ ಅವರಿಗೆ ಪಾಲುಕೊಡಬೇಕಾದ ವ್ಯವಸ್ಥೆ ಇದು. ಈ ಪ್ರಯೋಗಗಳಿಂದ ಮುಂದಿನ ನಾಲ್ಕೈದು ವರ್ಷಗಳಲ್ಲಿ ಕನರ್ಾಟಕವನ್ನು ಹಸಿರು ರಾಜ್ಯವನ್ನಾಗಿಸಿ ರೈತ ಎದುರಿಸುವ ಹಲವು ಸಮಸ್ಯೆಗಳಿಂದ ಆತನನ್ನು ಮುಕ್ತ ಗೊಳಿಸಬಹುದು. ಸ್ಮಾರ್ಟ್ ವಿಲೇಜ್ನ ಅತ್ಯಂತ ಶ್ರೇಷ್ಠ ಕನಸುಗಳಲ್ಲಿ ಇದೊಂದು. ಹಾಗಂತ ಇಲ್ಲಿಗೇ ಮುಗಿಯುವುದಿಲ್ಲ. ಹಳ್ಳಿಗಳು ಆದರ್ಶವಾಗಬೇಕೆಂದರೆ ಬರಿ ಕೃಷಿಯಲ್ಲ, ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಇವುಗಳು ಅಭಿವೃದ್ಧಿಯನ್ನು ಕಾಣಬೇಕು. ಅವೆಲ್ಲವುಗಳತ್ತ ನಮ್ಮ ಚಿತ್ತ ಹರಿಯಲು ನಾವು ಸಿದ್ಧರಾಗಬೇಕಿದೆ. ಅದಕ್ಕಾಗಿಯೇ ಕನಸು ಕಾಣೋದು, ಅದನ್ನು ನನಸು ಮಾಡಲೆಂದೇ ಹೆಣಗಾಡೋದು. ಬನ್ನಿ, ಹೊಸ ಕನರ್ಾಟಕವನ್ನು ನಿರ್ಮಾನಿಸೋಣ.
Leave A Reply