ಮಾಜಿ ಶಾಸಕ, ಮಾಜಿ ಸಂಸದರೇ ಪಿಂಚಣಿ ತ್ಯಾಗ ಮಾಡಿ!!
ಪ್ರಧಾನಿ ನರೇಂದ್ರ ಮೋದಿ ಹೇಳಿದ ಒಂದು ಮಾತು ನಿಮಗೆ ನೆನಪಿರಬಹುದು. ಗ್ಯಾಸ್ ಸಬ್ಸಿಡಿಯನ್ನು ಜನ ತ್ಯಾಗ ಮಾಡಿದರೆ ಆ ಹಣದಿಂದ ಗ್ಯಾಸ್ ಇಲ್ಲದವರಿಗೆ ಗ್ಯಾಸ್ ಕೊಡಬಹುದು. ಮೋದಿಯವರ ಕರೆಯನ್ನು ಮನ್ನಿಸಿ ಲಕ್ಷಾಂತರ ಭಾರತೀಯರು ಗ್ಯಾಸ್ ಸಬ್ಸಿಡಿ ಬಿಟ್ಟುಕೊಟ್ಟರು. ಅದು ಮೋದಿಯವರಿಗೆ ಕೊಟ್ಟ ಗೌರವ ಎಂದೇ ಹೇಳಬಹುದು. ಈಗ ಮೋದಿಯವರು ಮತ್ತೊಂದು ಕರೆ ಕೊಡಬೇಕಾಗಿದೆ. ದಯವಿಟ್ಟು ಮಾಜಿ ಶಾಸಕರು, ಮಾಜಿ ಸಂಸದರು ತಾವು ಪಡೆದುಕೊಳ್ಳುತ್ತಿರುವ ಪಿಂಚಣಿಯನ್ನು ತ್ಯಾಗ ಮಾಡಲು ಮೋದಿ ಹೇಳಲಿ ಎನ್ನುವುದೇ ನನ್ನ ಆಶಯ.
ಅಗತ್ಯ ಇದ್ದವರಿಗೆ ಪಿಂಚಣಿ ಇಲ್ಲ, ಬೇಡವಾದವರಿಗೆ ಇದೆ…
ನಮ್ಮ ದೇಶದಲ್ಲಿ ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಪಿಂಚಣಿ ಸಿಗುವುದಿಲ್ಲ. ಸರಕಾರಿ ಉದ್ಯೋಗದಲ್ಲಿ ಇರುವವರಿಗೆ ಅವರವರ ಹುದ್ದೆಗೆ ಅನುಗುಣವಾಗಿ ಪಿಂಚಣಿ ಸಿಗುತ್ತದೆ. ಕೆಲವು ಸರಕಾರಿ ಇಲಾಖೆಗಳು ಹೇಗಿರುತ್ತವೆ ಎಂದರೆ ಅವರಿಗೆ ಪಿಂಚಣಿ ಕೊಡುವ ಅವಶ್ಯಕತೆ ಇರುವುದಿಲ್ಲ. ಅವರೇ ಬೇಕಾದರೆ ಸರಕಾರಕ್ಕೆ ತಾವು ದುಡಿದ ಲಂಚದಲ್ಲಿ ಐವತ್ತು ಶೇಕಡಾ ಕೊಟ್ಟರೆ ವಿಧಾನಸೌಧದ ಒಂದು ತಿಂಗಳ ಖರ್ಚು ಹೋಗಬಹುದು. ಅದು ಬೇರೆ ವಿಷಯ. ಆದರೆ ಜನರಲ್ ಆಗಿ ಹೇಳುವುದಾದರೆ ಸರಕಾರಿ ನೌಕರರಿಗೆ ಪಿಂಚಣಿ ಕೊಡುವುದರಲ್ಲಿ ಯಾರ ಆಕ್ಷೇಪವೂ ಇರುವುದಿಲ್ಲ. ಆದರೆ ಪ್ರಶ್ನೆ ಇರುವುದು ಮಾಜಿ ಸಂಸದರಿಗೆ, ಮಾಜಿ ಶಾಸಕರಿಗೆ ಯಾಕೆ ಪಿಂಚಣಿ ಕೊಡುವುದು. ಮೊದಲನೇಯದಾಗಿ ಒಂದು ಸರಕಾರಿ ಉದ್ಯೋಗ ಸಿಗಬೇಕಾದರೆ ಒಬ್ಬ ವ್ಯಕ್ತಿ ಸಾಕಷ್ಟು ವಿದ್ಯಾಭ್ಯಾಸ ಮಾಡಿರಬೇಕು. ಅವನಿಗೆ ಅಷ್ಟು ಕಲಿಯಬೇಕಾದರೆ ತುಂಬಾ ವರ್ಷ ಬೇಕು ಮತ್ತು ಹಣ ಬೇಕು. ಕಠಿಣ ಪರಿಶ್ರಮದ ಮೂಲಕ ಆತನಿಗೆ ಉದ್ಯೋಗ ಸಿಕ್ಕಿರುತ್ತದೆ. ಎರಡನೇಯದಾಗಿ ಉದ್ಯೋಗದಲ್ಲಿ ಅವನಿಗೆ ಅಥವಾ ಅವಳಿಗೆ ನಿರ್ಧಿಷ್ಟ ಹೊತ್ತು ಕೆಲಸ ಮಾಡಬೇಕಾಗುತ್ತದೆ. ಅನೇಕ ಬಾರಿ ತಾವು ಕೆಲಸ ಮಾಡುತ್ತಾ ಆರೋಗ್ಯದ ಕಡೆ ಗಮನ ಕೊಡದೇ ಕಾಯಿಲೆಗಳಿಗೆ ತುತ್ತಾದವರು ಇದ್ದಾರೆ. ಅರ್ಹರನ್ನು ಆಯ್ಕೆ ಮಾಡಿ ಉದ್ಯೋಗ ಕೊಡುವುದರಿಂದ ಅವರು ನಿವೃತ್ತಿ ಆದ ಮೇಲೆ ಅವರಿಗೆ ಪಿಂಚಣಿ ಕೊಟ್ಟು ಅವರ ಬಾಳ ಮುಸ್ಸಂಜೆ ಆರಾಮದಾಯಕವಾಗಿ ಇರುವಂತೆ ನೋಡಿಕೊಳ್ಳುವುದು ಸರಕಾರದ ಅಗತ್ಯ. ಆದರೆ ಶಾಸಕರಾಗುವವರು, ಸಂಸದರಾಗುವವರಿಗೆ ಈಗ ಹಿಂದಿನ ಹಾಗೆ ಅಲ್ಲ. ಬಹಳ ವರ್ಷಗಳ ಹಿಂದೆ ಶಾಸಕ ಅಥವಾ ಸಂಸದರಾಗಲು ಸ್ಪರ್ಧೆ ಇರಲೇ ಇಲ್ಲ. ಒತ್ತಾಯ ಮಾಡಿ, ಕೈ ಕಾಲು ಹಿಡಿದು ಚುನಾವಣೆಗೆ ನಿಲ್ಲಿಸುವಂತಹ ಪರಿಸ್ಥಿತಿ ಅಂದಿನ ರಾಜಕೀಯ ಪಕ್ಷಗಳಿಗೆ ಇತ್ತು. ಎಷ್ಟೋ ಬಾರಿ ಒತ್ತಾಯ ಮಾಡಿ ಮನವೊಲಿಸಿ ನಿಲ್ಲಿಸಲು ವಾರಗಟ್ಟಲೆ ಹಿಡಿಯುತ್ತಿತ್ತು. ಭಾರತೀಯ ಜನತಾ ಪಾರ್ಟಿಯಲ್ಲಿ ಮತ್ತು ಅದರ ಮೊದಲಿನ ಜನಸಂಘದಲ್ಲಂತೂ ಅಭ್ಯರ್ಥಿಗಳನ್ನು ದುರ್ಬಿನ್ ಹಾಕಿ ಹುಡುಕಬೇಕಾಗುತ್ತಿತ್ತು. ಆಗ ಶಾಸಕ ಅಥವಾ ಸಂಸದ ಸ್ಥಾನ ಎಂದರೆ ಅಪ್ಪಟ ಜನಸೇವೆಯಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಹುಡುಕುವುದು ಬಿಡಿ, ಯಾರು ಅಭ್ಯರ್ಥಿಯಾಗುತ್ತೀರಿ ಎಂದು ಅಮಿತ್ ಶಾ ಕೇಳಿದರೆ ಸಾಕು, ಒಂದು ಉದ್ದನೆಯ ಸಾಲು ದೆಹಲಿ ಕೇಂದ್ರ ಬಿಜೆಪಿ ಕಚೇರಿಯ ಹೊರಗೆ ನಿಂತು ಬಿಡುತ್ತದೆ. ಪ್ರತಿಯೊಂದು ವಿಧಾನಸಭಾ ಅಥವಾ ಲೋಕಸಭಾ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ನಾವು ಸ್ಪರ್ಧಿಸುತ್ತೇವೆ ಎನ್ನುವವರ ದೊಡ್ಡ ಲಿಸ್ಟ್ ಮುಂದಿನ ಚುನಾವಣೆಗೆ ಈಗಲೇ ಸಿದ್ಧವಾಗಿರುತ್ತದೆ. ಕೆಲವರು ಯಾವುದೋ ಅಲೆಯಲ್ಲಿ ಗೆದ್ದು ಶಾಸಕ, ಸಂಸದರಾಗುತ್ತಾರೆ. ಕೆಲವರು ಯಾರ್ಯಾರದ್ದೋ ಕೃಪೆಯಿಂದ ಗೆದ್ದು ಬರುತ್ತಾರೆ. ಒಮ್ಮೆ ಗೆದ್ದರೆ ಸಾಕು, ಅವರ ಸಂಬಳ, ಭತ್ಯೆ, ವಾಹನಕ್ಕೆ ಇಂಧನ, ಸಹಾಯಕರಿಗೆ ಸಂಬಳ, ವಿಮಾನ, ರೈಲು ಫ್ರೀ ಟಿಕೆಟ್, ಕಚೇರಿ ಖರ್ಚಿಗೆ ಹಣ ಎಲ್ಲವನ್ನು ತನ್ನಿಂದ ತಾನೆ ಬರುತ್ತದೆ. ಅಷ್ಟಕ್ಕೂ ಇವರು ಮಾಡುವುದು ಏನು?
ಬೇಕಾದರೆ ಆಯಾ ಪಕ್ಷಗಳೇ ಪಿಂಚಣಿ ಕೊಡಲಿ…
ಲೋಕಸಭೆ, ರಾಜ್ಯಸಭೆ, ವಿಧಾನ ಸಭೆ, ವಿಧಾನಪರಿಷತ್ ನಲ್ಲಿ ಘೋಷಣೆ ಕೂಗುವುದು ಮತ್ತು ಸಭಾತ್ಯಾಗ. ಇಷ್ಟು ಮಾಡಿದವರಿಗೆ ಸಂಬಳದೊಂದಿಗೆ ಇಷ್ಟು ಸೌಲಭ್ಯ. ನಮ್ಮ ಲೋಕಸಭೆ ಮತ್ತು ರಾಜ್ಯಸಭೆಯ ಒಟ್ಟು ಸದಸ್ಯರನ್ನು ಸೇರಿಸಿದರೆ ಸುಮಾರು 790 ಜನ ಆಗಬಹುದು. ಅದರಲ್ಲಿ 440 ಕೋಟ್ಯಾಧಿಪತಿಗಳು ಎನ್ನುವ ಮಾಹಿತಿ ಇದೆ. ಬೇಕಾದರೆ ನಿಮ್ಮ ನಿಮ್ಮ ಲೋಕಸಭೆ ಅಥವಾ ವಿಧಾನ ಸಭೆ, ವಿಧಾನ ಪರಿಷತ್ ಗೆ ಆಯ್ಕೆಯಾಗಿರುವ ಸಂಸದ, ಶಾಸಕರನ್ನು ಗಮನಿಸಿ. ಅವರನ್ನೇನೂ ನೀವು ಕಾಲು ತೊಳೆದು, ತಲೆ ಮೇಲೆ ಅಕ್ಷತೆ ಹಾಕಿ ಚುನಾವಣೆಗೆ ನಿಲ್ಲಿ ಎಂದು ಹೇಳಿಲ್ಲ. ಅವರಾಗಿಯೇ ನಿಮ್ಮ ಮನೆಬಾಗಿಲಿಗೆ ಬಂದು ಮತ ಬೇಡಿದವರು. ಗೆದ್ದ ಬಳಿಕ ವೇದಿಕೆಗಳಲ್ಲಿ ಕುಳಿತು ಫೋಸ್ ಕೊಟ್ಟವರು. ಹತ್ತರಲ್ಲಿ ಎಂಟು ಜನ ವಿವಾದ, ಹಗರಣ ಮಾಡಿದರೇ ವಿನ: ಅವರಿಂದ ಏನು ಉಪಕಾರವಾಗಿರಬಹುದು. ಒಂದು ವೇಳೆ ರೋಡ್ ಮಾಡಿದೆ, ತೋಡು ಮಾಡಿದೆ ಎಂದರೂ ಅದು ಅವರ ಹಣದಿಂದ ಬಂದದ್ದಲ್ಲ, ಅದು ಸರಕಾರಿ ಯಂತ್ರದ ಮೂಲಕ ಕಾಲಕಾಲಕ್ಕೆ ನಡೆಯುವ ಪ್ರಕ್ರಿಯೆ. ಇವರು ಕ್ಷೇತ್ರದಲ್ಲಿ ಇಡೀ ದಿನ ಓಡಾಡಿದರೂ ಮುಂದಿನ ಚುನಾವಣೆಯಲ್ಲಿ ತಾನು ಅಥವಾ ತನ್ನ ಪಕ್ಷ ಗೆಲ್ಲಲಿ ಎಂದು ಓಡಾಡುತ್ತಿರುವರೇ ವಿನ: ಯಾರ ಉದ್ಧಾರಕ್ಕೂ ಅಲ್ಲ. ಹೆಚ್ಚೆಂದರೆ ನಮ್ಮ ಮನೆಯ ಗೃಹಪ್ರವೇಶ, ಮದುವೆ, ಮುಂಜಿ, ಕೋಲ, ನೇಮ, ತಿಥಿಗೆ ಅವರು ಬಂದಿರುವುದೇ ಅವರು ನಮಗೆ ಮಾಡಿದ ಉಪಕಾರ ಎಂದು ನಾವು ಅಂದುಕೊಂಡಿದ್ದೇವೆ. ಹಾಗಿರುವಾಗ ಅವರಿಗೆ ಯಾಕೆ ಪಿಂಚಣಿ ಕೊಟ್ಟು ನಾವು ನಮ್ಮ ತೆರಿಗೆಯ ಹಣವನ್ನು ಪೋಲು ಮಾಡುವುದು.
ಬೇಕಾದರೆ ನಮ್ಮ ಕರಾವಳಿಯ ಶಾಸಕರನ್ನೇ ತೆಗೆದುಕೊಳ್ಳೋಣ, ಎಷ್ಟು ಕೋಟ್ಯಾಧಿಪತಿಗಳಿದ್ದಾರೆ ಎಂದು ಗೊತ್ತಾಗುತ್ತೆ. ಯುಟಿ ಖಾದರ್, ಜೆ ಆರ್.ಲೋಬೋ, ಮೊಯ್ದೀನ್ ಬಾವ, ಕೃಷ್ಣ ಜೆ ಪಾಲೇಮಾರ್, ರಮಾನಾಥ ರೈ, ಪ್ರಮೋದ್ ಮಧ್ವರಾಜ್, ವಿನಯ ಕುಮಾರ್ ಸೊರಕೆ ಬೇಕಾದರೆ ರಾಜ್ಯದಲ್ಲಿಯೇ ನಮ್ಮ ಅತಿರಥ ಮಹಾರಥ ನಾಯಕರುಗಳಾದ ರೆಡ್ಡಿ ಬ್ರದರ್ಸ್, ಶ್ರೀರಾಮುಲು, ಡಿಕೆಶಿವಕುಮಾರ್, ಆರ್ ವಿ ದೇಶಪಾಂಡೆ, ಸಿದ್ಧರಾಮಯ್ಯ, ಈಶ್ವರಪ್ಪ, ಯಡಿಯೂರಪ್ಪ, ಶೋಭಾ ಹೀಗೆ ಬರೆಯುತ್ತಾ ಹೋದರೆ ಕೈ ನೋಯಬಹುದು, ಅಷ್ಟು ರಾಜಕಾರಣಿಗಳು ಇದ್ದಾರೆ, ಇವರಿಗೆಲ್ಲ ಪಿಂಚಣಿಯ ಅಗತ್ಯ ಇದೆ ಎಂದು ಅನಿಸುತ್ತದೆಯಾ?. ಯಾವುದಾದರೂ ಕೋಟ್ಯಾಧಿಪತಿ ಶಾಸಕನ ಹೆಸರು ಬರೆಯುವಾಗ ಬಿಟ್ಟು ಹೋದರೆ ಬೇಸರ ಮಾಡಬೇಡಿ!!
Leave A Reply