ಮುಂದುವರಿದ ಕಾಂಗ್ರೆಸ್ ಗೂಂಡಾಗಿರಿ, ಬಿಬಿಎಂಪಿ ಕಚೇರಿಗೆ ನುಗ್ಗಿ ಬೆಂಕಿ ಹಚ್ಚುವೆ ಎಂದ ಕೈ ನಾಯಕ
ಬೆಂಗಳೂರು: ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಯುವಕನೊಬ್ಬನಿಗೆ ಮನಬಂದಂತೆ ಥಳಿಸಿ ಜೈಲುಪಾಲಾಗಿರುವ ಸುದ್ದಿ ಜನರ ಮನಸ್ಸಿನಲ್ಲಿ ಅಚ್ಚಹಸಿರಾಗಿರುವ ಬೆನ್ನಲ್ಲೇ ಮತ್ತೊಬ್ಬ ಕಾಂಗ್ರೆಸ್ ಮುಖಂಡ ಗೂಂಡಾಗಿರಿ ನಡೆಸಿದ್ದಾರೆ.
ಶಾಸಕ ಭೈರತಿ ಬಸವರಾಜು ಅವರ ಆಪ್ತ, ಕಾಂಗ್ರೆಸ್ ಮುಖಂಡ ನಾರಾಯಣ ಸ್ವಾಮಿ ಹೊರಮಾವಿನಲ್ಲಿರುವ ಬಿಬಿಎಂಪಿ ಕಚೇರಿಗೇ ನುಗ್ಗಿ ಧಮ್ಕಿ ಹಾಕಿದ್ದಲ್ಲದೇ, ಪೆಟ್ರೋಲ್ ಸುರಿದು ಕಚೇರಿಗೇ ಬೆಂಕಿ ಹಚ್ಚಲು ಮುಂದಾಗಿದ್ದಾರೆ. ಬಳಿಕ ಸದಸ್ಯರು ಅವರನ್ನು ಸಮಾಧಾನಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಅಷ್ಟೇ ಅಲ್ಲ, ಕೂಡಲೇ ಖಾತೆ ಹಂಚಿಕೆ ಮಾಡಿಕೊಡದಿದ್ದರೆ ಇಡೀ ಕಚೇರಿಗೆ ಬೆಂಕಿ ಹಚ್ಚಿಯೇ ತೀರುತ್ತೇನೆ ಎಂದು ಕೂಗಾಡಿದ್ದಲ್ಲದೆ, ಅಲ್ಲಿದ್ದ ಅಧಿಕಾರಿಗಳಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ಅರಣ್ಯ ಸಚಿವ ರಮಾನಾಥ ರೈ ಪುತ್ರ ಅನುಮತಿಯಿಲ್ಲದೆ ಕಾಡೊಂದಕ್ಕೆ ನುಗ್ಗಿ, ಗೆಳೆಯರೊಂದಿಗೆ ಮದ್ಯಪಾನ ಮಾಡಿ ವಿವಾದ ಸೃಷ್ಟಿಸಿದ್ದರು. ಮೂರು ದಿನಗಳ ಹಿಂದಷ್ಟೇ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ಹ್ಯಾರಿಸ್ ವಿದ್ವತ್ ಎಂಬುವವರ ಮೇಲೆ ಹಲ್ಲೆ ಮಾಡಿದ್ದು, ಈಗ ಪೊಲೀಸರ ವಶದಲ್ಲಿದ್ದಾರೆ.
ಇದರ ಬೆನ್ನಲ್ಲೇ ಕಾಂಗ್ರೆಸ್ಸಿನ ಮತ್ತೊಬ್ಬ ಮುಖಂಡ ಬಿಬಿಎಂಪಿ ಕಚೇರಿಯಲ್ಲೇ ಗಲಾಟೆ ಮಾಡಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುತ್ತೇನೆ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೊದಲು ತಮ್ಮ ಪಕ್ಷದಲ್ಲಿರುವ ಗೂಂಡಾಗಳಂತೆ ವರ್ತಿಸುವವರನ್ನು ಹತ್ತಿಕ್ಕಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಚಿತ್ರಕೃಪೆ: ಸುವರ್ಣ ನ್ಯೂಸ್
Leave A Reply