ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಕೃತಿಯಂತೆ ನಿರ್ಮಾಣವಾಗಲಿದೆಯೇ ರೈಲು ನಿಲ್ದಾಣ?
ಲಖನೌ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕುರಿತು ಸ್ಪಷ್ಟ ನಿಲುವು ತಾಳದೆ ಇರುವ, ಇನ್ನೂ ಚರ್ಚೆ, ಸಮಸ್ಯೆ, ವಿವಾದ ಬಗೆಹರಿಯದುದರ ಮಧ್ಯೆಯೇ ಅಯೋಧ್ಯೆಯಲ್ಲಿ ರಾಮಮಂದಿರದ ಪ್ರತಿಕೃತಿಯಂತೆಯೇ ರೈಲು ನಿಲ್ದಾಣ ನಿರ್ಮಾಣವಾಗಲಿದೆ ಎಂಬ ಆಶಾಭಾವನೆಯೊಂದು ಮೂಡಿದೆ.
ಹೌದು, ಅಯೋಧ್ಯೆಯಲ್ಲಿ ರೈಲು ನಿಲ್ದಾಣದ ಮರು ನಿರ್ಮಾಣ ಕಾಮಗಾರಿಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಮನೋಜ್ ಸಿನ್ಹಾ ಅಡಿಪಾಯ ಹಾಕಿದ್ದು, ರಾಮಮಂದಿರವನ್ನೇ ಹೋಲುವ ರೀತಿಯಲ್ಲಿ ರೈಲು ನಿಲ್ದಾಣ ನಿರ್ಮಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಅಷ್ಟೇ ಅಲ್ಲ, ರಾಮಮಂದಿರ ಹೋಲುವ ರೈಲು ನಿಲ್ದಾಣ ಕಾಮಗಾರಿ ಮುಗಿದ ಕೂಡಲೇ ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಪ್ರಸ್ತುತ ರೈಲು ನಿಲ್ದಾಣದ ಮರು ನಿರ್ಮಾಣದ ಕುರಿತು ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗಲೇ ಚರ್ಚಿಸಲಾಗಿತ್ತು. ಆದರೆ ಈಗ ಅಡಿಪಾಯ ಹಾಕಲಾಗುತ್ತಿದೆ ಎಂದು ವಿವರಿಸಿದ್ದಾರೆ.
2022ಕ್ಕೆ ರೈಲು ನಿಲ್ದಾಣದ ಮರುನಿರ್ಮಾಣ ಕಾಮಗಾರಿ ಮುಗಿಯಲಿದೆ ಎಂದು ಅಂದಾಜಿಸಲಾಗಿದೆ. ದೇಶದ ಎಲ್ಲ ಪ್ರಮುಖ ನಗರಗಳಿಂದ ಅಯೋಧ್ಯೆಗೆ ಆಗಮಿಸಲು ರೈಲಿನ ವ್ಯವಸ್ಥೆ ಕಲ್ಪಿಸುವ ಮಹತ್ವಾಕಾಂಕ್ಷೆಯನ್ನು ಸರ್ಕಾರ ಹೊಂದಿದೆ ಎಂದು ತಿಳಿಸಿದ್ದಾರೆ.
ಒಟ್ಟಾರೆ 200 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು, ರೈಲು ನಿಲ್ದಾಣದ ಪುನರ್ ನಿರ್ಮಾಣಕ್ಕೆ 80 ಕೋಟಿ ರೂ, ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಅಯೋಧ್ಯೆಗೆ ಬರುವ ರಾಮನ ಭಕ್ತರಿಗೆ ಇದು ರಾಮಜನ್ಮಭೂಮಿಯ ಅನುಭವ ನೀಡಲಿ ಎಂಬ ದೃಷ್ಟಿಯಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಸಿನ್ಹಾ ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕುರಿತು ಹಿಂದೂಗಳು ಹಾಗೂ ಮುಸ್ಲಿಂ ಮುಖಂಡರ ನಡುವೆ ಚರ್ಚೆಗಳಾಗುತ್ತಿದ್ದು, ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಇದೆಲ್ಲದರ ನಡುವೆ ರಾಮಮಂದಿರವನ್ನೇ ಹೋಲುವ ರೈಲು ನಿಲ್ದಾಣದ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದರೆ ರಾಮನ ಭಕ್ತರಿಗೆ ಸಂತಸವಾಗುವುದರಲ್ಲಿ ಎರಡು ಮಾತಿಲ್ಲ.
Leave A Reply